ಸುಕ್ರಿ ಅಜ್ಜಿ ನೋವಲ್ಲಿದ್ದಾರೆ – ಹೌದು, ನನ್ನ ಹಾಡುಗಳು, ಸೀರೆ, ವಿಭಿನ್ನ ಆಭರಣಗಳು ನನ್ನೊಂದಿಗೇ ಮರೆಯಾಗುತ್ತವೇನೋ ಎಂಬ ನೋವು ಅವರದ್ದು. ಕಳೆದ 8 ದಶಕಗಳಿಂದ ತಾನು ಗಣ್ಯರಿಂದ ಪಡೆದುಕೊಂಡ ಶ್ಲಾಘನೆ, ಪ್ರಶಸ್ತಿ, ಪುರಸ್ಕಾರಗಳನ್ನು ಮೆಲುಕು ಹಾಕುತ್ತಲೇ ಇರುವ ಅವರ ಮುಖದ ಸುಕ್ಕುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜಾನಪದ ಸಂಸ್ಕೃತಿಯ ಅಪಾರ ಭಂಡಾರವನ್ನು ತನ್ನೊಳಗೆ ಇಟ್ಟುಕೊಂಡಿರುವ ಅವರದ್ದು ಸಾರ್ಥಕ ಜೀವನ. ಆದರೆ ಅವರೊಳಗಿನ ಅಮೂಲ್ಯ ಜಾನಪದ ಭಂಡಾರವನ್ನು ಉಳಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಬಡಿಗೆರಿ ಗ್ರಾಮದ ಹಾಲಕ್ಕಿ ಜನಾಂಗದವರಲ್ಲಿ ಸುಕ್ರಿ ಎಂಬ ಹೆಸರು ಸರ್ವೇ ಸಾಮಾನ್ಯ. ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳಿಗೆ ಇಲ್ಲಿ ಸುಕ್ರಿ ಎಂದು ಹೆಸರಿಡುತ್ತಾರೆ, ಹುಡುಗರಿಗೆ ಸುಕ್ರ ಎಂದು ಹೆಸರಿಡುತ್ತಾರೆ. ಆದರೆ ಪದ್ಮಶ್ರೀ ಸುಕ್ರಿ ಎಂದರೇ ಅದು ಎಲ್ಲರಿಗೂ ಚಿರಪರಿಚಿತರು. ಮಣ್ಣಿನ ರಸ್ತೆ ಮೂಲಕ ಹಾದು ಹೋದರೆ ಸಿಗುವ ಅವರ ಮನೆ ತುಂಬಾ ಪ್ರಶಸ್ತಿ, ಫಲಕಗಳೇ ತುಂಬಿ ಹೋಗಿವೆ. ಮನೆಗೆಲಸ ಮಾಡುತ್ತಾ ಬ್ಯೂಸಿಯಾಗಿರುವ ಸುಕ್ರಿಯವರನ್ನು ನೋಡಿದಾಗ ಅವರು ಲೆಕ್ಕವಿಡಲು ಸಾಧ್ಯವಾಗದಷ್ಟು ಪ್ರಶಸ್ತಿಗಳನ್ನು ಗಳಿಸಿರುವ ಸಾಧಕಿ ಎಂಬುದನ್ನು ನಂಬಲು ಸಾಧ್ಯವಾಗದು. ವಿಧೇಯತೆ, ವಿನಮ್ರತೆ ಮತ್ತು ಸರಳತೆ ಅವರ ಜೀವನ ವಿಧಾನಗಳು.
ಅಂಕೋಲಾದಲ್ಲಿನ ತನ್ನ ಪುಟ್ಟ ಗ್ರಾಮವನ್ನು ಪ್ರಸಿದ್ಧ ಗ್ರಾಮವನ್ನಾಗಿಸಿದ ಕೀರ್ತಿ ಅವರದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದರೂ ಮನೆಯಲ್ಲಿ ಒಲೆ ಉರಿಸಲು ಕಟ್ಟಿಗೆ ಸಂಗ್ರಹಿಸುವುದು ಅವರ ನಿತ್ಯದ ಗೋಳು. ಕಳೆದ 85 ವರ್ಷಗಳಿಂದ ಸಾವಿರಾರು ಪ್ರಶಸ್ತಿಗಳು ಬಂದರೂ ಅವರ ಜೀವನದಲ್ಲಿ ಮಾತ್ರ ಯಾವ ಬದಲಾವಣೆಗಳೂ ಆಗಿಲ್ಲ. ಪ್ರತಿ ಋತುವಿಗೂ ಅವರಲ್ಲಿ ಒಂದು ಹಾಡಿದೆ, ಆದರೆ ಎಲ್ಲಾ ಹಾಡುಗಳೂ ಉತ್ತಮ ಕಾರಣಕ್ಕೆ ಹುಟ್ಟಿಕೊಂಡವುಗಳಲ್ಲ.
‘ಹುಟ್ಟಿನಿಂದ ಸಾವಿನವರೆಗೆ, ಹಬ್ಬಗಳಿಂದ ಬಾವಿಯ ನೀರು ಸೇದುವವರೆಗೂ, ಬೀಜ ಬಿತ್ತನೆಯವರೆಗೂ ನಮ್ಮ ಬಳಿ ಹಾಡಿದೆ’ ಎನ್ನುತ್ತಾರೆ ಸುಕ್ರಿ ಅಜ್ಜಿ. ಹಾಲಕ್ಕಿ ಒಕ್ಕಲಿಗ ಸಮುದಾಯದ ‘ಕೋಗಿಲೆ’ ಎಂದೇ ಕರೆಯಲ್ಪಡುವ ಇವರು, ಸಾವಿರ ಹಾಡುಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡುತ್ತಾರೆ. ವಿವಿಧ ಸನ್ನಿವೇಶಗಳಲ್ಲಿ ತಾವೇ ಹಾಡನ್ನು ರಚನೆ ಮಾಡುತ್ತಾರೆ. ಸಾಮಾಜಿಕ ಸಂದೇಶ, ಹೋರಾಟದ ಕಿಚ್ಚು ಹಚ್ಚುವ ಹಾಡುಗಳನ್ನೂ ಅವರು ರಚನೆ ಮಾಡುತ್ತಾರೆ. ಮಹಿಳಾ ಸುರಕ್ಷತೆಯಿಂದ ಹಿಡಿದು ಮದ್ಯವ್ಯಸನ ವಿರೋಧಿ ಹಾಡುಗಳೂ ಅವರ ಬಳಿ ಇವೆ. ಅವರೊಂಥರಾ ಹಾಡುಗಳ ಬ್ಯಾಂಕ್ ಇದ್ದಂತೆ.
ಸುಕ್ರಿ ಅಜ್ಜಿ ಹಾಡುಗಳನ್ನು ತಮ್ಮ ಅಮ್ಮನಿಂದ ಬಳುವಳಿಯಾಗಿ ಪಡೆದುಕೊಂಡಿದ್ದಾರೆ. ಹಲವಾರು ಮಂದಿ ಬಂದು ಅವರ ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದಾರೆ, ಸಾಂಪ್ರದಾಯಿಕ ಹಾಡುಗಳನ್ನು ಹಲವಾರು ಮಹಿಳೆಯರ ಗುಂಪುಗಳಿಗೆ ಅವರು ಕಲಿಸಿಕೊಟ್ಟಿದ್ದಾರೆ. ಹಾಡುವುದನ್ನು ಹೊರತುಪಡಿಸಿ ಅವರು ಪಗಡೆ ಕುಣಿಯುವುದು, ತಾರ್ಲೆ ಕುಣಿಯುವುದನ್ನೂ ಮಾಡುತ್ತಾರೆ. ಮಳೆ ಇಲ್ಲದೆ ನೆಲ ಬರಡಾದಾಗ ಈ ಕುಣಿತವನ್ನು ಮಾಡಿ ಮಳೆರಾಯನನ್ನು ಓಲೈಸುವುದಾಗಿ ಅವರು ಹೇಳುತ್ತಾರೆ.
ಎಳೆಯ ವಯಸ್ಸಿನಲ್ಲೇ ಹಿರಿಯ ವ್ಯಕ್ತಿಯೊಂದಿಗೆ ಅವರ ಮದುವೆಯಾಗಿತ್ತು, ತನ್ನಿಬ್ಬರು ಮಕ್ಕಳನ್ನು ಅವರು ಕಳೆದುಕೊಂಡಿದ್ದಾರೆ, ಆಕೆ ದತ್ತು ಪಡೆದುಕೊಂಡಿದ್ದ ಸಹೋದರನ ಪುತ್ರ ಕೂಡ ಕುಡಿತಕ್ಕೆ ದಾಸನಾಗಿ ಇಹಲೋಕ ತ್ಯಜಿಸಿದ್ದಾನೆ. ಆದರೆ ಆಕೆಯೊಂದಿಗೆ ಸಂವಾದ ನಡೆಸುವಾಗ ಅದ್ಯಾವುದೂ ಆಕೆಯ ಜೀವನ ಪಯಣದಲ್ಲಿ ಬರುವುದಿಲ್ಲ. ಆಕೆಯ ಕಳವಳ ಇರುವುದು, ಆಕೆಯ ಮೊಮ್ಮಕ್ಕಳು ತನ್ನಂತಹ ಉಡುಪನ್ನು ಧರಿಸುವುದಿಲ್ಲ ಎಂಬ ಬಗ್ಗೆ, ಅವರಿಗೆ ನಮ್ಮ ಸಂಪ್ರದಾಯವನ್ನು ಮುಂದುವರೆಸಲು ಇಷ್ಟವಿಲ್ಲ ಎಂಬ ಬಗೆಗೆ, ಈ ಎಲ್ಲವೂ ನನ್ನೊಂದಿಗೆಯೇ ಮುಕ್ತಾಯವಾಗುತ್ತದೆ ಎಂಬ ಬಗೆಗೆ. ಬುಡಕಟ್ಟು ಹಾಡುಗಳ ಏಕೈಕ ಮತ್ತು ಕೊನೆಯ ಧ್ವನಿ ಎಂದು ಸುಕ್ರಿ ಅಜ್ಜಿಯನ್ನು ಕರೆಯಲಾಗುತ್ತದೆ. ಆಕೆ ಆಕೆಯದ್ದೇ ಹಾದಿಯಲ್ಲಿ ಒರ್ವ ಸಾಮಾಜಿಕ ಹೋರಾಟಗಾರ್ತಿ. ಬಾಲ್ಯದಲ್ಲಿ ಶಿಕ್ಷಣ ಆಕೆಗೆ ಸಿಗಲಿಲ್ಲ. ಆದರೆ ಆಕೆಗೆ ಶಿಕ್ಷಣದ ಮಹತ್ವ ಗೊತ್ತಿದೆ. ಅದಕ್ಕಾಗಿ ಆಕೆ ಅಭಿಯಾನವನ್ನೂ ಆರಂಭಿಸಿದ್ದಾಳೆ. ನಾನು ಶಾಲೆಗೆ ಹೋಗಿಲ್ಲ, ಆದರೆ ಶಾಲೆಯ ಉದ್ಘಾಟನೆಗೆ ಕರೆದರೆ ಸಂತೋಷದಿಂದಲೇ ಹೋಗುತ್ತೇನೆ ಎನ್ನುತ್ತಾ ಅವರು ನಗುತ್ತಾರೆ. ಶಾಲೆಗಳ ಹಲವಾರು ಸಮಾರಂಭಗಳಿಗೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಭಾಷಣಗಳನ್ನು ಮಾಡಿದ್ದಾರೆ. ಮದ್ಯವ್ಯಸನ ವಿರೋಧ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿಯೂ ಅವರಿಂದು ಗುರುತಿಸಿಕೊಂಡಿದ್ದಾರೆ.
ಮರಗಳ ಸಂರಕ್ಷಣೆ, ಕೊಂಕಣ ರೈಲ್ವೇ, ಬುಡಕಟ್ಟು ಜನಾಂಗ, ಬುಡಕಟ್ಟು ಔಷಧೀಯ ವಿಧಾನ, ಮಹಿಳಾ ಹಕ್ಕು ಹೀಗೆ ಪ್ರತಿ ವಿಷಯಗಳ ಪ್ರಶ್ನೆಗೂ ಅವರ ಬಳಿ ಉತ್ತರವಿದೆ. ಆಕೆಯ ಸರಳತೆ ಆಕೆಯ ಸೌಂದರ್ಯವನ್ನು ಹೆಚ್ಚಿಸಿದೆ. ಶಾಲಾ ಕಾಲೇಜುಗಳಿಗೆ ಹೋಗಿ ಸಂವಾದದಲ್ಲಿ ಭಾಗವಹಿಸುವ ವೇಳೆಯೂ ವಿದ್ಯಾರ್ಥಿಗಳು ಇದನ್ನೇ ಅವರಿಗೆ ಹೇಳುತ್ತಾರಂತೆ. ಆಕೆ ಸರಳ ಸುಂದರಿ ಎಂದು.
ಜಾನಪದ ವಿದ್ಯಾರ್ಥಿಗಳು, ಸಂಶೋಧಕರು, ಬರಹಗಾರರು ಅವರ ಬಳಿ ಬಂದು ಅವರ ಜಾನಪದ ಭಂಡಾರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ, ಅವುಗಳನ್ನು ಹಾಡಿಸಿ ರೆಕಾರ್ಡ್ ಮಾಡಿಕೊಂಡು ಹೋಗುತ್ತಾರೆ, ಸಾಕ್ಷ್ಯಚಿತ್ರಗಳನ್ನು ಮಾಡುತ್ತಾರೆ. ಆದರೆ ತನ್ನದೇ ಜನಾಂಗದ ಮಕ್ಕಳು ತನ್ನ ಹಾಡುಗಳನ್ನು ಹಾಡುವುದಿಲ್ಲ ಎಂಬ ಬೇಸರ ಅವರಿಗಿದೆ. ಹಾಲಕ್ಕಿ ಜನಾಂಗದವರಿಗೆ ವಿಭಿನ್ನ ಗುರುತಿಸುವಿಕೆ ನೀಡುವ ಆಭರಣ, ಸೀರೆಗಳನ್ನು ಯಾರೂ ಉಡುವುದಿಲ್ಲ ಎಂದು ಅವರು ಬೇಸರಪಟ್ಟುಕೊಳ್ಳುತ್ತಾರೆ.
ನನ್ನ ಜನಾಂಗದವರಿಗೆ ಏನೂ ಮಾಡದಿದ್ದರೆ ಅವರು ನನಗೆ ಯಾವ ಪ್ರಶಸ್ತಿಯನ್ನು ನೀಡಿದರೂ ಅದು ವ್ಯರ್ಥ. ಮೋದಿಜೀ ಅವರ ಬಳಿಯೂ ನಾನು ನಮಗೆ ಎಸ್/ಎಸ್ಟಿ ಸ್ಥಾನಮಾನ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದು ಸುಕ್ರಿ ಅಜ್ಜಿ ಹೇಳುತ್ತಾರೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡ ಕ್ಷಣವನ್ನು ಅವರು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.
ಯಾವುದೇ ವಿಶ್ವವಿದ್ಯಾಲಯದ ಪದವಿಯಿಂದ ಸಿಗುವ ಮಾನ್ಯತೆ, ಘನತೆ, ಗೌರವಕ್ಕಿಂತಲೂ ಹೆಚ್ಚಿನ ಗೌರವವನ್ನು ಅವರು ಪಡೆದುಕೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳ ರಾಶಿ ಅವರ ಬಳಿಯಿದೆ. ಅತ್ಯಂತ ಸರಳವಾಗಿ ಬದುಕುವ ಮೂಲಕ ಎಲ್ಲರ ಜೀವನಕ್ಕೂ ಅವರ ಪ್ರೇರಣೆ ಎನಿಸಿದ್ದಾರೆ. ನಮ್ಮದನ್ನು ನಾವು ನಿಧಾನಕ್ಕೆ ಬಿಟ್ಟುಕೊಡುತ್ತಾ ಬಂದರೆ, ಮುಂದೊಂದು ದಿನ ನಾವೇ ಮಾಯವಾಗಿ ಬಿಡುತ್ತೇವೆ ಎಂಬ ಅವರ ಕಟು ಸಂದೇಶವನ್ನು ಎಲ್ಲರೂ ಮನನ ಮಾಡಿಕೊಳ್ಳಲೇಬೇಕು.
Source : swarajyamag
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.