ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್ ನೆಲಕ್ಕೆ ನುಗ್ಗಿ ಉಗ್ರನೆಲೆಗಳ ಮೇಲೆ ವಾಯು ದಾಳಿ ನಡೆಸಿತ್ತು. ಹಾಗೆ ಪಾಕ್ ಗಡಿಯೊಳಗಿನ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರ ಮೇಲೆ ನಡೆದ ವಾಯು ದಾಳಿ ನಿಜವೇ ಆಗಿದ್ದರೆ ಅದರ ಸಾಕ್ಷ್ಯವನ್ನು ಕೇಂದ್ರ ಸರಕಾರ ನಮಗೆ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಒತ್ತಾಯಿಸಿದ್ದಾರೆ.
ಕೇವಲ ದಿಗ್ವಿಜಯ್ ಸಿಂಗ್ ಅವರಷ್ಟೇ ಅಲ್ಲ, ಮಮತಾ ಬ್ಯಾನರ್ಜಿ ಸೇರಿದಂತೆ ಭಾರತೀಯ ಸೈನ್ಯವನ್ನು ನಂಬದ ಇನ್ನೂ ಹಲವಾರು ನಾಯಕರು, ಮುತ್ಸದ್ದಿಗಳು ಇದೇ ರೀತಿ ಸಾಕ್ಷ್ಯವನ್ನು ಕೇಳಿದ್ದಾರೆ. ಕೆಲವರಂತೂ ಭಾರತೀಯ ವಾಯುಪಡೆ ನಡೆಸಿದ ಆ ದಾಳಿಯಲ್ಲಿ ಯಾವೊಬ್ಬ ಭಯೋತ್ಪಾದಕನೂ ಸತ್ತಿಲ್ಲ, ಮಾಧ್ಯಮಗಳಲ್ಲಿ 250 ರಿಂದ 300 ಜನ ಭಯೋತ್ಪಾದಕರನ್ನು ಸಾಯಿಸಲಾಗಿದೆ ಎನ್ನುವ ಸುಳ್ಳು ವರದಿ ಮಾಡಲಾಗುತ್ತಿದೆ, ನಿಜವಾಗಿಯೂ ಭಯೋತ್ಪಾದಕರನ್ನು ಸಾಯಿಸಲಾಗಿದ್ದರೆ ನಮಗೆ ಅದರ ಲೆಕ್ಕ ಕೊಡಿ ಎಂದು ಕೇಳುತ್ತಿದ್ದಾರೆ!
ಭಾರತದಲ್ಲಿದ್ದುಕೊಂಡೇ ಪರೋಕ್ಷವಾಗಿ ಪಾಕಿಸ್ಥಾನವನ್ನು ಬೆಂಬಲಿಸುವ ದೊಡ್ಡ ಸಮೂಹವೇ ಇರುವುದು ಬಹಿರಂಗ ಸತ್ಯವೇ ಆಗಿರುವುದರಿಂದ ಹಾಗೆ ಕೇಳುತ್ತಿರುವವರ ಆತಂಕ ಎಲ್ಲರಿಗೂ ಅರ್ಥವಾಗುವಂಥದ್ದೇ. ಆದರೆ ಅವರಿಗೆ ಲೆಕ್ಕ ಕೊಡಲು ಇಲ್ಲೊಂದಷ್ಟು ಸಮಸ್ಯೆಗಳಿವೆ.
ಅದಕ್ಕೂ ಮೊದಲಿಗೆ ಸತ್ತ ಭಯೋತ್ಪಾದಕರ ನಿಖರ ಸಂಖ್ಯೆ ಮುನ್ನೂರು ಅಥವಾ ಮುನ್ನೂರೈವತ್ತು ಎಂದು ಸೇನೆಯಾಗಲೀ ಅಥವಾ ಸರ್ಕಾರವಾಗಲೀ ಸ್ಪಷ್ಟೀಕರಿಸಿಲ್ಲ ಎನ್ನುವ ವಿಚಾರವನ್ನೇ ಮುಂದಿಟ್ಟುಕೊಂಡು ಅಲ್ಲಿ ಯಾವ ಭಯೋತ್ಪಾದಕನನ್ನೂ ಸಾಯಿಸಿಯೇ ಇಲ್ಲ ಎಂದು ಬಿಂಬಿಸುತ್ತಿರುವವರಿಗೆ ಒಂದು ಸ್ಪಷ್ಟನೆ;
ಸತ್ತ ಭಯೋತ್ಪಾದಕ ಸಂಖ್ಯೆ ಎಷ್ಟೆಂದು ಸೇನೆಯು ಸ್ಪಷ್ಟೀಕರಿಸಿಲ್ಲ ಎಂದರೆ ಯಾರನ್ನೂ ಕೊಂದಿಲ್ಲ ಎಂದಲ್ಲ. ಬದಲಿಗೆ ಸತ್ತವರ ಸಂಖ್ಯೆ ಇನ್ನೂರೋ, ಮುನ್ನೂರೋ, ನಾನೂರೋ, ಆರುನೂರೋ ಎನ್ನುವ ಬಗ್ಗೆ ಇದುವರೆಗೂ ಆ ಕಡೆಯಿಂದ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದರ್ಥ. ಅವರಿಂದಲೇ ಸ್ಪಷ್ಟವಾಗದ ಹೊರತು ಆ ಸಂಖ್ಯೆಯನ್ನು ಹೇಳಲಾಗದು ಎಂದರ್ಥ. ಏಕೆಂದರೆ ಸೇನೆಯಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಅತ್ಯಂತ ಸ್ಪಷ್ಟ ಮಾಹಿತಿಗಳನ್ನು ಮಾತ್ರ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ.
ಈಗಾಗಲೇ ಬಾಂಬ್ ದಾಳಿಯ ನಂತರ ಸುಮಾರು ಮೂವತ್ತೈದು ಭಯೋತ್ಪಾದಕರ ಹೆಣಗಳನ್ನು ಆ ಸ್ಥಳದಿಂದ ಒಯ್ಯಲಾದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೌಲಾನಾ ಉಮರ್ ಎನ್ನುವವನೇ ಸ್ವತಃ ಬಲಾಕೋಟ್ ಉಗ್ರ ಶಿಬಿರಗಳನ್ನು ಭಾರತೀಯ ವಾಯುಪಡೆ ಧ್ವಂಸ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿರುವ ಆಡಿಯೋ ಕೂಡಾ ಹೊರಬಂದಿದೆ. ಆದರೆ ಭಾರತದೊಳಗೆ ಇರುವ ನೀವು ಮಾತ್ರ ಭಾರತೀಯ ಸೇನೆಯನ್ನು ನಂಬುತ್ತಿಲ್ಲ.
ಸುಮಾರು ಸಾವಿರ ಕೆಜಿ ಬಾಂಬ್ ಬಿದ್ದು ಅರ್ಧ ಕಿಲೋಮೀಟರ್ ಸುತ್ತಳತೆಯ ಭೂಮಿ ಸುಟ್ಟು ಬೂದಿಯಾದ ಮೇಲೂ ಸುಮಾರು ಮೂವತ್ತೈದು ದೇಹಗಳು ಇಡಿಯಾಗಿ ಸಿಕ್ಕಿವೆ ಎಂದರೆ ಸ್ವಲ್ಪ ಆಲೋಚನಾ ಶಕ್ತಿಯುಳ್ಳವರಾಗಿದ್ದರೆ ಒಟ್ಟು ಸಾವಿನ ಸಂಖ್ಯೆ ಎಷ್ಟೆನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ನೆಲಮಟ್ಟದಿಂದ ಸಿಡಿದ ಮುನ್ನೂರೈವತ್ತು ಕೆಜಿಯ ಕಚ್ಚಾ ಬಾಂಬ್ ಎಷ್ಟು ಅನಾಹುತ ಮಾಡಬಲ್ಲದು ಎನ್ನುವುದನ್ನು ನೋಡಿದವರೆಲ್ಲರಿಗೂ ಇನ್ನು ಸೈನ್ಯಕ್ಕೆಂದೇ ತಯಾರಿಸಲ್ಪಟ್ಟ, ಆಕಾಶದಿಂದ ಬೀಳುವ ಸುಮಾರು ಸಾವಿರ ಕೆಜಿ ಬಾಂಬ್ ಇನ್ನೆಷ್ಟು ಅನಾಹುತ ಮಾಡಬಹುದೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಆ ಭಯೋತ್ಪಾದಕ ನೆಲೆಯಲ್ಲಿ ಸಾಮಾನ್ಯವಾಗಿ ಎಷ್ಟು ಜನ ಇರುತ್ತಾರೆ, ಅಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ, ಯಾವ ಸಮಯದಲ್ಲಿ ದಾಳಿ ನಡೆಸಿದರೆ ಹೆಚ್ಚು ಹಾನಿಗೊಳಿಸಬಹುದು ಎನ್ನುವ ಎಲ್ಲಾ ಮಾಹಿತಿಗಳನ್ನೂ ನಿರಂತರವಾಗಿ ಸಂಗ್ರಹಿಸಿ ಕರಾರುವಕ್ಕಾಗಿ ದಾಳಿ ಮಾಡಿದ್ದರೂ ಅಲ್ಲಿ ಸತ್ತು ಹೋದ ಭಯೋತ್ಪಾದಕರ ಸಂಖ್ಯೆ ಎಷ್ಟು ಎಂದು ಕೇಳುತ್ತಿದ್ದೀರಿ.
ನಿಮ್ಮವರ ಬಗ್ಗೆ ನಿಮ್ಮ ಕಳಕಳಿ ನಮಗೆ ಅರ್ಥವಾಗುವಂಥದ್ದೇ. ಆದರೆ ನೀವು ಆ ಬಗ್ಗೆ ಕೇಳಬೇಕಿರುವುದು ಈ ದೇಶವನ್ನಲ್ಲ, ಪಾಕಿಸ್ಥಾನವನ್ನು. ನೀವು ಕೇಳುವ ಪ್ರಕಾರವೇ ಮಾಡುವುದಾದರೆ ಕೇವಲ ಇಪ್ಪತ್ತು ಇಪ್ಪತ್ತೈದು ನಿಮಿಷಗಳಲ್ಲಿ ಬಾಂಬ್ ದಾಳಿ ನಡೆಸಿ ವಾಪಸ್ಸಾಗಿದ್ದ ಸೇನಾ ವಿಮಾನವನ್ನು ಅಲ್ಲೇ ಇಳಿಸಿ, ಪಾಕಿಸ್ಥಾನೀ ಸೇನೆಯವರನ್ನೂ ಅಲ್ಲಿಗೆ ಕರೆದು, ಛಿದ್ರ ಛಿದ್ರವಾಗಿರುವ ದೇಹಗಳನ್ನು ಒಂದುಗೂಡಿಸಿ, ಅವರ ಗುರುತು ಪತ್ತೆ ಹಚ್ಚಿ, ಲೆಕ್ಕ ಹಾಕಿ, ಪಾಕಿಸ್ಥಾನಕ್ಕೂ ಲೆಕ್ಕ ಕೊಟ್ಟು, ಸಂಪೂರ್ಣ ಲೆಕ್ಕ ಸರಿಯಿದೆ ಎಂದು ಅವರಿಂದ ಸಹಿ ಹಾಕಿಸಿಕೊಂಡು, ಆ ಸಹಿ ಹಾಕಿಸಿಕೊಂಡು ಬಂದ ಪ್ರಮಾಣ ಪತ್ರವನ್ನು ನಿಮಗೆ ತೋರಿಸಬೇಕಿತ್ತು! ಹೇಳಿ, ಇದಲ್ಲದೇ ನಿಮ್ಮನ್ನು ಸಮಾಧಾನಪಡಿಸಲು ಇನ್ನೇನು ಮಾರ್ಗವಿತ್ತು?
ಆದರೆ ಹಾಗೆ ಮಾಡುವುದು ಸಾಧ್ಯವಿತ್ತೇ ಅಥವಾ ನಿಮ್ಮ ಮೆಚ್ಚಿನ ಪಾಕಿಸ್ಥಾನ ಸರ್ಕಾರ (ಹೌದು, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಅನಿವಾರ್ಯವಾಗಿ ಬಿಟ್ಟು ಕಳಿಸಿದ ವಿಚಾರದಲ್ಲಿ ನೀವು ಪಾಕಿಸ್ಥಾನವನ್ನು ಮತ್ತು ಅಲ್ಲಿನ ಪ್ರಧಾನಿಗಳನ್ನು ಅದೆಷ್ಟು ಹೊಗಳಿದ್ದಿರಿ ಎನ್ನುವುದೇ ನಿಮ್ಮ ಮೆಚ್ಚಿನ ಪಾಕಿಸ್ಥಾನ ಎನ್ನುವುದಕ್ಕೆ ಸಾಕ್ಷಿ) ಆ ಸಾವುಗಳ ಲೆಕ್ಕ ಕೊಡಬೇಕೇ ಎನ್ನುವುದನ್ನೀಗ ನೀವೇ ಹೇಳಿ. ಅದು ಹೇಗೆ ಕೊಡುತ್ತಾರೆ? ತಮ್ಮ ಸೈನಿಕರನ್ನೇ ತಮ್ಮ ಸೈನಿಕರಲ್ಲ ಎನ್ನುವ ಆ ದೇಶದಿಂದ ಅಂತಹಾ ನಿಯತ್ತು ನಿರೀಕ್ಷಿಸಲು ಸಾಧ್ಯವೇ?
ಅಂದ ಹಾಗೇ ಪಾಕಿಸ್ಥಾನ ಬೆಂಬಲಿತ ಉಗ್ರರು ಭಾರತದ ಗಡಿಯೊಳಗಿನ ನುಸುಳಿ ಪುಲ್ವಾಮಾದಲ್ಲಿ ನಡೆಸಿದ ದಾಳಿಯಲ್ಲಿ ಎಷ್ಟು ಯೋಧರು ಮೃತಪಟ್ಟರು ಎನ್ನುವ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಕೇಂದ್ರ ಸರ್ಕಾರ ಹಾಗೂ ಸೇನೆ ಬಹಿರಂಗಗೊಳಿಸಿದೆ. ಹಾಗಾದರೆ ಭಾರತೀಯ ಯೋಧರು ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಬಾಲಾಕೋಟ್ನಲ್ಲಿ ದಾಳಿ ನಡೆಸಿ ಅಲ್ಲಿದ್ದ ಉಗ್ರರ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆಗೈದಾಗ ಎಷ್ಟು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕಾಗಿರುವುದು ಭಾರತ ಸರ್ಕಾರವೋ ಅಥವಾ ನಿಮ್ಮ ಮೆಚ್ಚಿನ ಪಾಕಿಸ್ಥಾನ ಸರ್ಕಾರವೋ? ಸ್ವಲ್ಪ ಯೋಚಿಸಿ ಹೇಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.