ಈಶಾನ್ಯ ಭಾರತದ ಉಗ್ರಗಾಮಿಗಳು ಮಯನ್ಮಾರ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಭಾರತ ಆ ದೇಶಕ್ಕೆ ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಮಯನ್ಮಾರ್ ಪುರಸ್ಕರಿಸಿ ಈಶಾನ್ಯದ ಬಂಡುಕೋರರಿಗೆ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಇದು ನರೇಂದ್ರ ಮೋದಿ ಸರಕಾರದ ಪ್ರಮುಖ ರಾಜತಾಂತ್ರಿಕ ವಿಜಯವೆಂದೇ ಹೇಳಬೇಕು. ಮಯನ್ಮಾರ್ ಆರ್ಮಿ (ಮಯನ್ಮಾರ್ ಸೇನೆಯನ್ನು ’ಟಟ್ಮಾಡವ್’ ಎಂದು ಕರೆಯಲಾಗುತ್ತದೆ) ಕಳೆದ ತಿಂಗಳು ಸಾಗಾಂಗ್ ಪ್ರದೇಶದ ತಾ ಗ ನಲ್ಲಿದ್ದ ನಾಗಾ ದಂಗೆಕೋರರ ಪ್ರಧಾನ ಕಛೇರಿಯನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೇ, ಎಲ್ಲಾ ಮಯನ್ಮಾರೇತರ ಉಗ್ರರು ತನ್ನ ನೆಲವನ್ನು ಬಿಟ್ಟು ಹೊರಹೋಗಬೇಕು ಎಂದು ಕಟ್ಟಾಜ್ಞೆ ಹೊರಡಿಸಿದೆ.
ಕೋಲ್ಕತ್ತಾದಲ್ಲಿನ ಭಾರತೀಯ ಸೇನೆಯ ಪೂರ್ವ ಕಮಾಂಡ್ ಪ್ರಧಾನ ಕಚೇರಿಯಲ್ಲಿರುವ ಹಿರಿಯ ಅಧಿಕಾರಿಗಳ ಪ್ರಕಾರ, ಮಯನ್ಮಾರ್ ಸೇನೆಯವರು ಜನವರಿ 29ರಂದು ತಾ ಗ ದಲ್ಲಿದ್ದ ನ್ಯಾಶನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್(ಎನ್ಎಸ್ಸಿಎನ್)ನ ನಿಷೇಧಿತ ಖಪ್ಲಾಂಗ್ ಬಣದ ಕಛೇರಿಯನ್ನು ಪ್ರವೇಶಿಸಿದ್ದಾರೆ. ಹ್ಕಮತಿ ಜಿಲ್ಲೆಯ (ಸೈನ್ಯದ ವಾಯುವ್ಯ ಆಜ್ಞೆಯ ಅಡಿಯಲ್ಲಿ) ಯುದ್ಧತಾಂತ್ರಿಕ ಕಮಾಂಡರ್ ನೇತೃತ್ವದಲ್ಲಿ 400 ಕ್ಕಿಂತಲೂ ಹೆಚ್ಚು ಸೈನಿಕರು, ನಾಗಾ ದಂಗೆಕೋರ ಸಂಘಟನೆ ಎನ್ಎಸ್ಸಿಎನ್-ಕೆ ಪ್ರಧಾನ ಕಾರ್ಯಾಲಯವನ್ನು ಪ್ರವೇಶಿಸಿ, ಅಲ್ಲಿದ್ದ ಬಂಡುಕೋರರನ್ನು ಹೊರಹಾಕಿದ್ದಾರೆ. ಈಗ ಆ ಕಛೇರಿಯಲ್ಲಿ ಕೆಲವೇ ಕೆಲವು ನಿಶ್ಶಸ್ತ್ರ ಬಂಡುಕೋರ ಸಿಬ್ಬಂದಿ ಮಾತ್ರ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಬಿಡುಗಡೆಯಾದ ಕಮಾಂಡರ್ ಇನ್ ಚೀಫ್ ಮಾತುಕತೆಯ ಪ್ರಕಟನೆಯ ಪ್ರಕಾರ, ಮಣಿಪುರ ಮತ್ತು ಅಸ್ಸಾಂ ದಂಗೆಕೋರರ ಮೂರು ಔಟ್ಪೋಸ್ಟ್ಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಎರಡು ತರಬೇತಿ ಶಿಬಿರಗಳನ್ನು ಧ್ವಂಸ ಮಾಡಲಾಗಿದೆ. ಮಯನ್ಮಾರ್ರೇತರರು ತಕ್ಷಣವೇ ತಮ್ಮ ನೆಲವನ್ನು ಬಿಟ್ಟು ಹೋಗಬೇಕು ಎಂದು ಕರೆಯನ್ನು ನೀಡಲಾಗಿದೆ. ಮಾಯನ್ಮಾರ್ನ್ನು ಬಿಟ್ಟು ಹೋಗಬೇಕು, ಒಂದು ವೇಳೆ ನಮ್ಮ ದೇಶದಲ್ಲಿ ಉಳಿದುಕೊಂಡರೆ ಅವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುತ್ತೇವೆ ಎಂದು ಮಯನ್ಮಾರ್ ಸೇನೆ ಎಚ್ಚರಿಕೆ ನೀಡಿದೆ.
ಪರೇಶ್ ಬರುವಾ ನೇತೃತ್ವದ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ಇಂಡಿಪೆಂಡೆಂಟ್), ಮಣಿಪುರದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ), ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್ಎಲ್ಎಫ್), ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (ಪ್ರಿಕ್ಯಾಕ್) ಮುಂತಾದ ಸಂಘಟನೆಗಳು ಮಯನ್ಮಾರ್ನ ನಾಗ್ಯಾಲ್ಯಾಂಡ್, ಮಣಿಪುರ, ಮಿಜೋರಾಂಗಳಿಗೆ ತಾಗಿಕೊಂಡಿರುವ ಪ್ರದೇಶಗಳಲ್ಲಿ ಆಶ್ರಯವನ್ನು ಪಡೆದುಕೊಂಡು, ತರಬೇತಿ ಸೌಲಭ್ಯಗಳನ್ನು ದಂಗೆಕೋರರಿಗೆ ನೀಡಲು ಆರಂಭಿಸಿದ್ದವು.
ನ್ಯಾಶನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಎನ್ಎಸ್ಎನ್ (ಕೆ) ಅನ್ನು ಮಯನ್ಮಾರ್ ತಮ್ಮ ದೇಶದ ದಂಗೆಕೋರ ಸಂಘಟನೆಯೆಂದೇ ಪರಿಗಣಿಸುತ್ತದೆ. ಯಾಕೆಂದರೆ ಇದರಲ್ಲಿನ ಬಹುತೇಕರು ಮಯನ್ಮಾರಿಗಳೇ ಆಗಿದ್ದಾರೆ. ಮಯನ್ಮಾರ್ನ ಜನಾಂಗೀಯ ನಾಗಾ ಬುಡಕಟ್ಟು ನಾಯಕ ಖಪ್ಲಾಂಗ್ ಎಂಬಾತ ಈ ಸಂಘಟನೆಯನ್ನು ರಚಿಸಿದ್ದಾನೆ. ಎನ್ಎಸ್ಎನ್ (ಕೆ)ನ ಉದ್ದೇಶ ಮತ್ತು ಇತರ ಎನ್ಎಸ್ಸಿಎನ್ ಬಣಗಳಾದ ಇಂಡಿಯನ್ ನಾಗಾಸ್ – ಎನ್ಎಸ್ಸಿಎನ್ (ಐಎಂ) ಸಂಘಟನೆಗಳ ಉದ್ದೇಶ ಒಂದೇ, ಅದು ಭಾರತ ಮತ್ತು ಮಯನ್ಮಾರ್ನ ನಾಗಾಗಳಿರುವ ಪ್ರದೇಶವನ್ನು ಏಕೀಕರಣಗೊಳಿಸುವುದು. ಎನ್ಎಸ್ಸಿಎನ್ (ಕೆ) 2001 ರಿಂದ ಮಯನ್ಮಾರ್ ಸೇನೆಯೊಂದಿಗೆ ಅನೌಪಚಾರಿಕ ಕದನ ವಿರಾಮದಲ್ಲಿದೆ. 2012ರ ಎಪ್ರಿಲ್ನಲ್ಲಿ ಮಯನ್ಮಾರ್ನ ಹಕಮಿಯಲ್ಲಿ ಈ ಕದನ ವಿರಾಮ ಒಪ್ಪಂದವನ್ನು ರೂಪಿಸಲಾಯಿತು.
ಎನ್ಎಸ್ಸಿಎನ್ (ಕೆ) ಕೂಡ ಭಾರತ ಸರ್ಕಾರದೊಂದಿಗೆ ಕದನ ವಿರಾಮದ ಒಪ್ಪಂದಕ್ಕೆ ಪ್ರವೇಶಿಸಿತ್ತು, ಆದರೆ ಏಕಪಕ್ಷೀಯವಾಗಿ ಅದನ್ನು 2015 ರಲ್ಲಿ ವಜಾಗೊಳಿಸಿತು ಮತ್ತು ತನ್ನ ಕಾರ್ಯಕರ್ತರನ್ನು ಮಯನ್ಮಾರ್ಗೆ ವರ್ಗಾಯಿಸಿತು. ಅಂದಿನಿಂದ, ದೊಡ್ಡ ಪ್ರಮಾಣದ ಹಣವನ್ನು ಪಡೆದುಕೊಂಡು ಈ ಸಂಘಟನೆ, ಈಶಾನ್ಯ ಭಾರತದ ಇತರ ಸಂಘಟನೆಗಳಿಗೆ ತರಬೇತಿ, ಆಶ್ರಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತದೆ. ಉಲ್ಫಾ ಮತ್ತು ಮಣಿಪುರಿ ಸಂಘಟನೆಗಳ ಮುಖಂಡರು ಎನ್ಎಸ್ಸಿಎನ್ (ಕೆ)ಗೆ ಹಣ ಪಾವತಿಸಿ, ಅದರ ಮುಖೇನ ತಮ್ಮ ಕಾರ್ಯಕರ್ತರನ್ನು ಮಯನ್ಮಾರ್ನಿಂದ ಭಾರತಕ್ಕೆ ಮಾದಕ ದ್ರವ್ಯಗಳನ್ನು ಸಾಗಾಣೆ ಮಾಡಲು ಮಧ್ಯವರ್ತಿಗಳನ್ನಾಗಿ ಬಳಸುತ್ತಾರೆ. ಎನ್ಎಸ್ಸಿಎನ್ (ಕೆ)ಯು ವಾಯುವ್ಯ ಮಯನ್ಮಾರ್ನಲ್ಲಿ ಅಕ್ರಮ ಡ್ರಗ್ಸ್ ಸಾಗಾಣೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ.
ಉಲ್ಫಾ (ಐ), ಮಣಿಪುರಿ ಸಂಘಟನೆಗಳು ಮತ್ತು ಎನ್ಎಸ್ಸಿಎನ್ (ಕೆ) ಸೇರಿದಂತೆ ಈಶಾನ್ಯದ ಒಂಬತ್ತು ಬಂಡಾಯ ಸಂಘಟನೆಗಳು ಒಟ್ಟಾಗಿ ‘ಯುನೈಡೆಟ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ವೆಸ್ಟ್ ಸೌತ್ ಈಸ್ಟ್ ಏಷ್ಯಾ’ನ್ನು ರಚಿಸಿದವು ಮತ್ತು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದವು. 2018 ರ ಜುಲೈನಲ್ಲಿ ಇವುಗಳು ನಡೆಸಿದ ದಾಳಿಗೆ 18 ಭಾರತೀಯ ಯೋಧರು ಹುತಾತ್ಮರಾದರು. ದಾಳಿಯ ನಂತರ, ಭಾರತೀಯ ಸೈನಿಕರು ಮಯನ್ಮಾರ್ ಗಡಿಯನ್ನು ನುಗ್ಗಿ ಈ ಬಂಡುಕೋರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದರು. ಅವರ ಮೂರು ಶಿಬಿರಗಳನ್ನು ನಾಶಪಡಿಸಿದರು ಮತ್ತು ಅನೇಕ ಸಂಖ್ಯೆಯ ಬಂಡುಕೋರರನ್ನು ಹತ್ಯೆ ಮಾಡಿದರು.
ಈಶಾನ್ಯ ಭಾರತದ ನಾಯಕರು ಮತ್ತು ಬಂಡಾಯ ಸಂಘಟನೆಗಳಿಗೆ ಆಶ್ರಯವನ್ನು ನೀಡುವ ಮೂಲಕ, 2012 ರ ಕದನ ವಿರಾಮದ ಒಪ್ಪಂದವನ್ನು ಎನ್ಎಸ್ಸಿಎನ್ (ಕೆ) ಉಲ್ಲಂಘಿಸುತ್ತಿದೆ ಎಂದು ಟಟ್ಮಾಡವ್ ಆರೋಪಿಸಿದೆ. ಕೆಲವು ವರದಿಗಳ ಪ್ರಕಾರ, ಆರು ಎನ್ಎಸ್ಸಿಎನ್ (ಕೆ) ಸಶಸ್ತ್ರ ಕಾರ್ಯಕರ್ತರು ಮತ್ತು ಎರಡು ಉಲ್ಫಾ (ಐ) ಮತ್ತು ಪಿಎಲ್ಎ ಬಂಡುಕೋರರನ್ನು ಮಯನ್ಮಾರ್ ಸೇನೆ ಬಂಧಿಸಿದೆ. ಈ ಬಂಡುಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ನವದೆಹಲಿಯಿಂದ ಒತ್ತಡ ಬಂದ ನಂತರ ಮಯನ್ಮಾರ್ ಸೈನ್ಯ ಈ ಕ್ರಮವನ್ನು ಜರುಗಿಸಿದೆ. ಉಲ್ಫಾ (ಐ) ಮುಖ್ಯಸ್ಥ ಪರೇಶ್ ಬರುವಾ ಅವರು, ಭಾರತದ ಒತ್ತಡಕ್ಕೆ ಮಯನ್ಮಾರ್ ಸೋಲುತ್ತಿದೆ ಎಂದು ಆರೋಪಿಸಿದ್ದಾನೆ ಕೂಡ.
ಮಯನ್ಮಾರ್ನಲ್ಲಿ ಶಿಬಿರಗಳನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಉಲ್ಫಾ (ಐ) ಮತ್ತು ಮಣಿಪುರಿ ದಂಗೆಕೋರ ಗುಂಪುಗಳು ಮಾಡಿದ ಮನವಿಯನ್ನು ಮಯನ್ಮಾರ್ ತಿರಸ್ಕರಿಸಿದೆ. ಮಯನ್ಮಾರ್ನ ಮಿಲಿಟರಿ ಅಧಿಕಾರಿಗಳು, ಆ ದೇಶದಿಂದ ಹೊರಹೋಗುವಂತೆ ಬಂಡುಕೋರರಿಗೆ ತಿಳಿಸಿದ್ದಾರೆ ಮತ್ತು ಹಾಗೆ ಮಾಡಲು ಮಾರ್ಚ್ ಮಧ್ಯದವರೆಗೆ ಅವರಿಗೆ ಸಮಯವನ್ನೂ ನೀಡಿದ್ದಾರೆ. ಕೇಂದ್ರೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಈಶಾನ್ಯ ಭಾರತ-ಮೂಲದ ಬಂಡುಕೋರ ಸಂಘಟನೆಗಳಿಗೆ ಸೇರಿದ ಸುಮಾರು 2,000 ಸಶಸ್ತ್ರ ಬಂಡುಕೋರರು ಇಲ್ಲಿದ್ದಾರೆ, ಉಲ್ಫಾ (ಐ) ನ 150 ಮತ್ತು ಮಯನ್ಮಾರ್ನಲ್ಲಿನ ರಾಷ್ಟ್ರೀಯ ಡೆಮೋಕ್ರಾಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ಡಿಎಫ್ಬಿ) 100 ಬಂಡುಕೋರರು ಇಲ್ಲಿದ್ದಾರೆ ಎನ್ನಲಾಗಿದೆ.
ಭಾರತಕ್ಕೆ ಈ ದಂಗೆಕೋರರು ಹಿಂದಿರುಗುವ ನಿರೀಕ್ಷೆಯಿದೆ, ಇದಕ್ಕಾಗಿ ಭಾರತೀಯ ಸೇನೆಯು ಇಂಡೋ-ಮಯನ್ಮಾರ್ ಗಡಿಯುದ್ದಕ್ಕೂ ಕಣ್ಗಾವಲನ್ನು ಇರಿಸಿದೆ. ಎನ್ಎಸ್ಸಿಎನ್ (ಕೆ) ಕೇಡರ್ಗಳ ಮೇಲೆ ಕಾವಲು ಇಡಲು ಮತ್ತು ಪ್ರದೇಶದಿಂದ ಇತರ ಬಂಡಾಯದ ಸಂಘಟನೆಗಳನ್ನು ಹೊರಹಾಕಲು ಟಾಟ್ಮಾಡವ್ಗಳಿಗೆ ತಾ ಗಾ ಪ್ರದೇಶದಲ್ಲಿ ಶಾಶ್ವತ ನೆಲೆಯನ್ನು ಕಲ್ಪಿಸಿಕೊಡಲಾಗಿದೆ. ಭಾರತವು ಟಟ್ಮಾಡವ್ಗಳಿಗೆ ಅರಣ್ಯ ಯುದ್ಧ, ಬಂಡುಕೋರ ವಿರೋಧಿ ಸಮರ ಇತ್ಯಾದಿ ಯುದ್ಧ ತರಬೇತಿಯನ್ನು ನೀಡಿದೆ. ಶಸ್ತ್ರಾಸ್ತ್ರ, ಸಾಮಾಗ್ರಿ ಮತ್ತು ಇತರ ಮಿಲಿಟರಿ ಯಂತ್ರಾಂಶಗಳನ್ನು ಒದಗಿಸಿದೆ. ಆ ದೇಶದಲ್ಲಿ ಆಶ್ರಯ ಪಡೆದ ಈಶಾನ್ಯ ಭಾರತದ ದಂಗೆಕೋರರನ್ನು ಎದುರಿಸಲು ಟಟ್ಮಾಡವ್ನ್ನು ಸಜ್ಜುಗೊಳಿಸುವ ಉದ್ದೇಶದಿಂದ ಭಾರತ ಈ ಕ್ರಮವನ್ನು ತೆಗೆದುಕೊಂಡಿದೆ.
ಈಶಾನ್ಯ ಉಗ್ರಗಾಮಿ ಸಂಘಟನೆಗಳ ದಂಗೆಕೋರರನ್ನು ಸದೆಬಡಿಯಲು ಮತ್ತು ಅವರಿಗೆ ಎಲ್ಲಾ ರೀತಿಯ ಸರಬರಾಜುಗಳು ನಿಲ್ಲುವಂತೆ ಮಾಡಲು ಇದೇ ಮೊದಲ ಬಾರಿಗೆ, ಟಟ್ಮಾಡವ್ಗಳು ಭಾರತದೊಂದಿಗಿನ ಗಡಿಯುದ್ದಕ್ಕೂ ತಟಸ್ಥ ಗಸ್ತುಗಳನ್ನು ಪ್ರಾರಂಭಿಸಿವೆ. ಅನೇಕ ಬಂಡುಕೋರರು ದಟ್ಟ ಅಡವಿಯನ್ನು ದಾಟಿಕೊಂಡು ನಿಧಾನವಾಗಿ ಅಂತರರಾಷ್ಟ್ರೀಯ ಗಡಿಯ ಕಡೆಗೆ ಚಲಿಸುತ್ತಿದ್ದಾರೆ ಎಂದು ಭಾರತೀಯ ಸೇನೆಯ ಗುಪ್ತಚರ ತಿಳಿಸಿದೆ.
“ಅವರು ಭಾರತಕ್ಕೆ ಬರಲು ತೀವ್ರ ಆಶಯವನ್ನು ಹೊಂದಿದ್ದಾರೆ, ಆದರೆ ಅವರು ಬಳಸುತ್ತಿರುವ ಕಾಡಿನ ಎಲ್ಲಾ ಮಾರ್ಗಗಳನ್ನು ಬ್ಲಾಕ್ ಮಾಡಲಾಗಿರುವ ಕಾರಣ ಅವರಿಗೆ ಅದು ಸಾಧ್ಯವಾಗುತ್ತಿಲ್ಲ” ಎಂದು ಉನ್ನತ ಸೇನಾಧಿಕಾರಿ ಹೇಳಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿ ವಾಸಿಸುವ ಹಳ್ಳಿಗರ ಮುಕ್ತ ಚಲನವಲನಗಳು ಕೂಡ ಎರಡೂ ದೇಶಗಳ ಕಡೆಯಿಂದ ನಿರ್ಬಂಧಿಸಲ್ಪಟ್ಟಿದೆ.
ಭಾರತ-ಮ್ಯಾನ್ಮಾರ್ ಗಡಿಯುದ್ದಕ್ಕೂ ನಿಯೋಜನೆಗೊಂಡಿರುವ ಭಾರತೀಯ ಭದ್ರತಾ ಪಡೆಗಳಿಗೆ ಇದು ‘ಕಾದು ನೋಡುವ’ ಆಟವಲ್ಲ. “ಮಯನ್ಮಾರ್ ಸೈನ್ಯವು ಬಂಡುಕೋರರ ಮೇಲೆ ಒತ್ತಡವನ್ನು ತರುತ್ತಿದೆ ಮತ್ತು ಹತಾಶ ಬಂಡುಕೋರರು ನಮ್ಮ ಕಡೆಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಮೊದಲು ಅವರನ್ನು ತಡೆಯಬೇಕಾದ ಅನಿವಾರ್ಯತೆ ಭಾರತೀಯ ಸೇನೆಯದ್ದು. ನಾವು ಅವರಿಗೆ ಕಾಯುತ್ತಿದ್ದೇವೆ ಎಂದು ಸೇನಾಧಿಕಾರಿ ಹೇಳಿದ್ದಾರೆ. ಒಂದು ವೇಳೆ ಅವರಿಗೆ ಭಾರತದೊಳಗೆ ನುಸುಳುವುದು ಸಾಧ್ಯವಾದರೆ, ಈಶಾನ್ಯ ಭಾರತದಲ್ಲಿನ ಬಂಡಾಯದ ಅವಶೇಷಗಳು ಮತ್ತೆ ಎದ್ದು ಬರುವ ಆತಂಕವಿದೆ. ಅವರನ್ನು ತಡೆದು ಅಲ್ಲೇ ಹತ್ತಿಕ್ಕಿದರೆ ಈಶಾನ್ಯ ಬಂಡಾಯ ಸಂಪೂರ್ಣ ನಾಶವಾಗಿ ಹೋಗುತ್ತದೆ, ಇದು ನರೇಂದ್ರ ಮೋದಿ ಸರಕಾರಕ್ಕೆ ಪ್ರಮುಖ ವಿಜಯವನ್ನೂ ತಂದುಕೊಡುತ್ತದೆ.
ಈಶಾನ್ಯ ಭಾಗದಲ್ಲಿ ಬಂಡಾಯ ಸಂಪೂರ್ಣವಾಗಿ ಉಪಶಮನವಾದರೆ, ಈಶಾನ್ಯ ಭಾರತ ಮತ್ತು ಪೂರ್ವ ಏಷ್ಯಾ, ಚೀನಾ ನಡುವಿನ ಸಂವಹನ ಮತ್ತು ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸುವ ಸಲುವಾಗಿ ಮೋದಿ ಸರಕಾರ ತಂದ ‘ಆ್ಯಕ್ಟ್ ಈಸ್ಟ್’ಗೆ ಭಾರೀ ಉತ್ತೇಜನ ದೊರೆಯಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
source: swarajya
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.