ಭಾರತಕ್ಕೆ ಸ್ವಾತಂತ್ರ್ಯ ಬಂದ ಆರು ತಿಂಗಳ ಅವಧಿಯಲ್ಲಿ ಆಧುನಿಕ ಇತಿಹಾಸದ ಎರಡು ಅತ್ಯಂತ ಭೀಕರ ದುರಂತಗಳು ನಡೆದು ಹೋದವು. 1947ರ ಆಗಸ್ಟ್ 14ರ ಕಾಳರಾತ್ರಿ ನಡೆದ ದೇಶದ ವಿಭಜನೆ ಮತ್ತು 1948ರ ಜನವರಿ 30ರಂದು ನಡೆದ ಗಾಂಧಿ ಹತ್ಯೆ ಹಾಗೂ ಆ ನಂತರದ ಘಟನೆಗಳೇ ಆ ದುರಂತಗಳು. ಯಾವುದೇ ದೇಶದ ಜನತೆ ಸದಾ ನೆನಪಿಡಬೇಕಾದ, ಅದರಿಂದ ಪಾಠ ಕಲಿತು ತನ್ನ ವರ್ತಮಾನ ಹಾಗೂ ಭವಿಷ್ಯಗಳಲ್ಲಿ ಆ ರೀತಿಯ ದುರಂತಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾದ ಘಟನೆಗಳು ಅವು. ಆದರೆ, ಆ ಘಟನೆಗಳು ಸಂಭವಿಸಿ ಒಂದು ಶತಮಾನ ಕಳೆಯುವುದಕ್ಕೂ ಮೊದಲೇ ಆ ಘಟನೆಗಳನ್ನು ದೇಶದ ಜನರು ಸಂಪೂರ್ಣವಾಗಿ ಮರೆಯುವಂತೆ ಮಾಡಿರುವುದು ಆ ಎರಡಕ್ಕಿಂತ ದೊಡ್ಡ ದುರಂತವೆಂದೇ ಹೇಳಬೇಕು.
1947ರ ಆಗಸ್ಟ್ 14ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಬಂದಿತು ಎನ್ನುವುದನ್ನು ಎಲ್ಲರೂ ತಿಳಿದಿದ್ದಾರೆ. ಒಂದು ಸಾವಿರ ವರ್ಷಗಳ ಹೋರಾಟದ ನಂತರ ಭಾರತವು ತನ್ನ ಮೇಲಿದ್ದ ದಾಸ್ಯದ ನೊಗವನ್ನು ಕಿತ್ತೊಗೆದು ಸ್ವಾತಂತ್ರ್ಯವನ್ನು ಪಡೆದಿತ್ತು. ಆದರೆ, ಅದೇ ಕ್ಷಣದಲ್ಲಿ ದೇಶದಲ್ಲಿದ್ದ ಕೋಟ್ಯಂತರ ಜನರು ತಮ್ಮದೇ ಸ್ವಂತ ತಾಯ್ನಾಡಲ್ಲಿ ನೆಲೆಯಿಲ್ಲದವರಾಗಿಬಿಟ್ಟಿದ್ದರು. ಅದೇ ಕ್ಷಣದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರಗಳು ನಡೆದಿದ್ದವು. ಅಂದಿನಿಂದ ಪ್ರಾರಂಭವಾಗಿ ಮುಂದಿನ ಐವತ್ತು ದಿನಗಳಲ್ಲಿ ಲಕ್ಷಾಂತರ ದೇಶವಾಸಿಗಳ ದಾರುಣ ಹತ್ಯೆ ನಡೆದಿತ್ತು. ಇದಾವುದೂ ಇಂದಿನ ಪೀಳಿಗೆಗೆ ತಿಳಿದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಅಹಿಂಸೆಯಿಂದ. ಅತ್ಯಂತ ಶಾಂತ ರೀತಿಯಲ್ಲಿ ದೇಶ ಸ್ವಾತಂತ್ರ್ಯ ಪಡೆಯಿತು ಎಂದು ಹೆಚ್ಚಿನ ಜನ ಭಾವಿಸಿಬಿಟ್ಟಿದ್ದಾರೆ!
1942ರ ಕ್ವಿಟ್ ಇಂಡಿಯಾ ಚಳುವಳಿ ವಿಫಲವಾದ ನಂತರ ಮತ್ತಾವುದೇ ಚಳುವಳಿಯನ್ನು ಕಾಂಗ್ರೆಸ್ ಹೂಡಲಿಲ್ಲ. ಹಾಗಿದ್ದಾಗ್ಯೂ 1947ರಲ್ಲಿ ಬ್ರಿಟಿಷರು ದೇಶ ಬಿಟ್ಟೋಡುವಂತಾಯಿತು. ಆ ಐದು ವರ್ಷಗಳ ಅವಧಿಯಲ್ಲಿ ನಡೆದದ್ದೇನು, ಅದರ ಪಾತ್ರಧಾರಿಗಳಾರು, ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆಯೇನು, ಇತ್ಯಾದಿ ಪ್ರಶ್ನೆಗಳಿಗೆ ಇಂದಿನವರ ಬಳಿ ಉತ್ತರವಿಲ್ಲ. 1946ರಲ್ಲಿ ನಡೆದ ಐ.ಎನ್.ಎ ಸೈನಿಕರ ವಿಚಾರಣೆ ಹಾಗೂ ಶಿಕ್ಷೆಗಳು, ಅದಕ್ಕೆ ಪ್ರತಿಕ್ರಿಯೆಯಾಗಿ ನಡೆದ ನೌಕಾ ಬಂಡಾಯ, ಅದರ ಪರಿಣಾಮವಾಗಿ ಬೆದರಿದ ಬ್ರಿಟಿಷರು ಆತುರದಲ್ಲಿ ಅಧಿಕಾರವನ್ನು ಹಸ್ತಾಂತರಿಸಿ ಸ್ವದೇಶಕ್ಕೆ ಓಟಕಿತ್ತಿದ್ದನ್ನು ಇತಿಹಾಸದ ಪುಸ್ತಕಗಳಿಂದ ಸಂಪೂರ್ಣವಾಗಿ ಮುಚ್ಚಿಡಲಾಗಿದೆ. ಅದೇ ರೀತಿ, ಗಾಂಧಿ ಹತ್ಯೆಯ ಸಂದರ್ಭದಲ್ಲಿ ದೇಶದ ಪರಿಸ್ಥಿತಿ, ಗಾಂಧಿ ಹತ್ಯೆಯ ತನಿಖಾ ವರದಿಗಳು, ಗಾಂಧಿ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ಸಿನವರು ತೋರಿದ ಧ್ವೇಷ ಹಾಗೂ ಆ ಪ್ರಕೋಪದಲ್ಲಿ ದೇಶಾದ್ಯಂತ ನಡೆಸಿದ ಹಿಂಸಾಚಾರದ ಕೃತ್ಯಗಳು, ಇತ್ಯಾದಿ ವಿಷಯಗಳು ಇತಿಹಾಸದ ಪಠ್ಯಗಳನ್ನು ಸೇರದಂತೆ ಮತ್ತು ಇಂದಿನವರಿಗೆ ತಿಳಿಯದಂತೆ ಮಾಡಲಾಗಿದೆ.
ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ, ಅಂದು ಜವಹರಲಾಲ್ ನೆಹರೂ ಅವರು ಹರಿಯಬಿಟ್ಟ ಸುಳ್ಳು, ಒಂದೇ ಸುಳ್ಳನ್ನು ಸಾವಿರ ಸಲ ಹೇಳಿದರೆ ಸತ್ಯವಾಗುತ್ತದೆ ಎಂದು ನಂಬಿಕೊಂಡಿರುವ ಹಾಗೂ ಇಂದಿಗೂ ಆಗಾಗ ಕನವರಿಸುವಕಾಂಗ್ರೆಸ್ಸಿಗರು ಮತ್ತು ಅದನ್ನೇ ಸಾರ್ವಜನಿಕ ಸಭೆಯಲ್ಲಿ ಉಚ್ಚರಿಸಿ ಮಾನನಷ್ಟ ಮೊಕ್ಕದಮೆಯ ಕಾನೂನು ಕ್ರಮದಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿಯೆದುರಿಸುತ್ತಿರುವ ಹಾಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ – ಇವರೆಲ್ಲರೂ ಗಾಂಧೀಜಿಯವರನ್ನು ಕೊಂದದ್ದು ಆರೆಸ್ಸೆಸ್ಸಿನವರು ಎಂದು ಜನರನ್ನು ನಂಬಿಸಲು ಶತಾಯಗತಾಯ ಪ್ರಯತ್ನಿಸಿದ್ದಾರೆ, ಪ್ರಯತ್ನಿಸುತ್ತಿದ್ದಾರೆ. ಆದರೆ, ಸೂರ್ಯನ ಪ್ರಖರತೆಯನ್ನು ಮೋಡಗಳು ಶಾಶ್ವತವಾಗಿ ಮುಚ್ಚಿಡುವುದು ಹೇಗೆ ಅಸಾಧ್ಯವೋ, ಸತ್ಯವನ್ನು ಮುಚ್ಚಿಡುವುದೇ ಅಷ್ಟೇ ಅಸಾಧ್ಯ.
ಇತಿಹಾಸದ ಈ ಅತ್ಯಂತ ಪ್ರಮುಖ ಘಟನೆಗಳನ್ನು ಮುಂದಿನ ಪೀಳಿಗೆಗಳಿಗೆ ತಿಳಿಯದಂತೆ ಮುಚ್ಚಿಡಲು ಕಾರಣವೇನು? ಈ ಘಟನೆಗಳು ಕಾಂಗ್ರೆಸ್ಸಿನ ಮುಖಕ್ಕೆ ಮಸಿ ಬಳಿಯುವಂತಹ ಘಟನೆಗಳು. ದೇಶದ ಜನರನ್ನು ಕಾಂಗ್ರೆಸ್ಸಿಗರು ಯಾವ ರೀತಿ ದಾರಿ ತಪ್ಪಿಸಿದರು ಮತ್ತು ಅವರು ಯಾವ ರೀತಿ ವಿಫಲರಾದರು ಎಂಬುದು ಸ್ವಾತಂತ್ರ್ಯ ಗಳಿಕೆಯ ಸಂದರ್ಭದಲ್ಲಿ ಹಾಗೂ ವಿಭಜನೆಯ ನಂತರದ ಘಟನಾವಳಿಗಳಿಂದ ನಿಚ್ಚಳವಾಗುತ್ತದೆ. ಇನ್ನು ಗಾಂಧಿ ಹತ್ಯೆಯ ನಂತರ ನಡೆದ ಘಟನೆಗಳನ್ನು ತಿಳಿದರೆ ಕಾಂಗ್ರೆಸ್ಸಿಗರು ಮಹಾತ್ಮಾ ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಎಷ್ಟು ಬದ್ಧರಾಗಿದ್ದರು, ಯಾವ ರೀತಿ ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದರು ಮತ್ತು ಅಧಿಕಾರಕ್ಕಂಟಿಕೊಳ್ಳಲು ಯಾವ ಮಟ್ಟದಲ್ಲಿ ಧ್ವೇಷ ಸಾಧಿಸಿದರು ಎಂಬುದು ಅರ್ಥವಾಗುತ್ತದೆ. ಇದಾವುದೂ ಸಾಮಾನ್ಯ ಜನರಿಗೆ ತಿಳಿಯುವುದು ಕಾಂಗ್ರೆಸ್ಸಿನ ನಾಯಕತ್ವಕ್ಕೆ ಇಷ್ಟವಿರಲಿಲ್ಲ. ಅದೇನಾದರೂ ತಿಳಿದಿದ್ದಲ್ಲಿ ಅವರ “ಅಹಿಂಸೆಯಿಂದ ಸ್ವಾತಂತ್ರ್ಯ”, “ಸ್ವಾತಂತ್ರ್ಯ ಗಳಿಸಿದ್ದು ಕಾಂಗ್ರೆಸ್ ಮಾತ್ರ”, ಇತ್ಯಾದಿ ಘೋಷಣೆಗಳ ಪೊಳ್ಳು ಜನರಿಗೆ ತಿಳಿದು ಹೋಗುತ್ತಿತ್ತು ಮತ್ತು ಇದರಿಂದ ಅವರ “ಜನಪ್ರಿಯತೆ” ನಷ್ಟವಾಗಿ ಬೇರಾರೋ ಅಧಿಕಾರ ಅನುಭವಿಸುವಂತಾಗುತ್ತಿತ್ತು. ಈ ರೀತಿ “ಉನ್ನತ ವಿಚಾರ” ಹಾಗೂ “ದೂರದರ್ಶಿ ದೃಷ್ಟಿ’ ಇಟ್ಟುಕೊಂಡಿದ್ದ ಕಾಂಗ್ರೆಸ್ ನಾಯಕತ್ವ, ಈ ವಿಚಾರಗಳು ಜನರಿಗೆ ತಲುಪದಂತೆ ಬಹಳ ಮುತುವರ್ಜಿ ವಹಿಸಿದವು.
1948ರ ಸಂಜೆ 5:12 ಗಂಟೆಗೆ ದೆಹಲಿಯ ಬಿರ್ಲಾ ಭವನದ ಪ್ರಾರ್ಥನಾ ಸಭೆಗೆ ಬರುತ್ತಿದ್ದ ಮಹಾತ್ಮಾ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಗುಂಡಿಟ್ಟು ಕೊಂದ. ವ್ಯಕ್ತಿಯೊಬ್ಬರನ್ನು ಕೊಲ್ಲುವುದು, ಅದರಲ್ಲೂ ದೇಶದ ಸ್ವಾತಂತ್ರ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ, ದೇಶೋದ್ಧಾರಕ್ಕಾಗಿ ಸದಾ ಕೆಲಸ ಮಾಡುತ್ತಿದ್ದ, ಸಂತನ ರೀತಿಯ ಜೀವನ ನಡೆಸುತ್ತಿದ್ದ, ವಯೋ ವೃದ್ಧರೂ ಆಗಿದ್ದ ಮಹಾಪುರುಷನ ಕೊಲೆ ಅತ್ಯಂತ ಹೇಯ ಕೆಲಸವಾಗಿತ್ತು. ಆಗ ತಾನೇ ವಿಭಜನೆಯ ದುರಂತದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದ ದೇಶದ ಜನತೆಯ ಮೇಲೆ ಮಹಾತ್ಮಾ ಗಾಂಧಿಯವರ ಕೊಲೆಯ ಅನಿರೀಕ್ಷಿತ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ದೇಶದ ಜನತೆಗೆ ಇದು ಅನಿರೀಕ್ಷಿತವಾಗಿದ್ದರೂ, ಸರಕಾರಕ್ಕೇನೂ ಇದು ತೀರ ಅನಿರೀಕ್ಷಿತ ಎಂದು ಹೇಳಲಾಗುವುದಿಲ್ಲ. ಈ ಹಿಂದೆ ಕೆಲವು ಬಾರಿ ಕೊಲೆಯ ಪ್ರಯತ್ನಗಳು ನಡೆದಿದ್ದ ಅಥವಾ ಕೊಲೆಗೆ ತಯಾರಿ ನಡೆದಿದ್ದ ಸಂಗತಿಯ ಗುಪ್ತಚರ ವರದಿಗಳು ಸರ್ಕಾರದ ಬಳಿಯಿತ್ತು. ವಿಭಜನೆಯಿಂದ ಕೊಲೆಯಾಗಿದ್ದ ಲಕ್ಷಾಂತರ ಜನ ಮತ್ತು ನಿರ್ವಾಸಿತರಾಗಿದ್ದ ಕೋಟ್ಯಂತರ ಜನ, ನಿತ್ಯ ಕೇಳಿ ಬರುತ್ತಿದ್ದ ಮಾನಿನಿಯರ ಮಾನಾಪಹರಣ, ಇತ್ಯಾದಿ ಸುದ್ದಿಗಳು ದೇಶದಲ್ಲೆಲ್ಲಾ ಆಕ್ರೋಶವುಂಟು ಮಾಡಿತ್ತು. ಪಾಕಿಸ್ತಾನದ ಭಾಗಗಳಿಂದ ಎಲ್ಲವನ್ನೂ ಕಳೆದುಕೊಂಡು ದೇಶದೊಳಗೆ ನುಗ್ಗುತ್ತಿದ್ದ ಜನರೆಲ್ಲಾ ಗಾಂಧೀಜಿಯವರಿಗೆ, ಕಾಂಗ್ರೆಸ್ಸಿನ ಇತರ ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದುದು ರಹಸ್ಯವಾಗೇನೂ ಇರಲಿಲ್ಲ. ಅದರ ಜೊತೆಗೆ, ಹೊಸದಾಗಿ ಹುಟ್ಟಿದ್ದ ಪಾಕಿಸ್ತಾನವು ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಯುದ್ಧ ಪ್ರಾರಂಭಿಸಿದ್ದು, ಭಾರತದ ಎಲ್ಲ ರಾಜಕೀಯ ನಾಯಕರನ್ನು ಕೊಲೆ ಮಾಡಿ ಕೆಂಪುಕೋಟೆಯ ಮೇಲೆ ಹಸಿರು ಧ್ವಜವನ್ನು ಹಾರಿಸುವ ಹುನ್ನಾರ ನಡೆಸಿದ್ದಾಗಲೇ, ಗಾಂಧೀಜಿಯವರು ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಧನಸಹಾಯ ನೀಡಬೇಕೆಂದು ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ನೆಹರೂ ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರು ಮತ್ತು ದೇಶಭಕ್ತ ಜನತೆಯನ್ನು ಚಿಂತೆಗೀಡು ಮಾಡಿತ್ತು. ಇಂತಹ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಗರಿಷ್ಠ ರಕ್ಷಣೆ ನೀಡಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯವಾಗಿತ್ತು. ಗಾಂಧೀಜಿಯವರೇನೋ ತನಗೆ ರಕ್ಷಣೆ ಬೇಡ, ತನಗೆ ಬದುಕಲು ಇಷ್ಟವಿಲ್ಲ, ಇತ್ಯಾದಿಗಳನ್ನು ಹೇಳುತ್ತಿದ್ದರೂ, ಸರ್ಕಾರ ಅವರ ರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಮಹಾತ್ಮಾ ಗಾಂಧಿಯಂತಹ ಸಂತನಿಗೆ ಅಗತ್ಯವಿದ್ದಷ್ಟು ರಕ್ಷಣೆ ನೀಡದೆ, ಅವರ ಹಂತಕನಿಗೆ ಸುಲಭವಾಗಿ ಅವರು ಬಲಿಯಾಗುವಂತೆ ಮಾಡಿದ್ದು ಸರ್ಕಾರವೇ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಆದರೆ, ಗಾಂಧಿ ಹತ್ಯೆಯ ಆರೋಪವನ್ನು ಕಟ್ಟಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುತ್ತಿಗೆಗೆ! ಯಾವುದೇ ರೀತಿಯ ತನಿಖೆಯನ್ನೂ ನಡೆಸದೆ ಆರೆಸ್ಸೆಸ್ ಈ ಕೃತ್ಯವನ್ನು ನಡೆಸಿದೆ ಎಂದು ನೆಹರೂ ಸರ್ಕಾರ ನಿರ್ಧರಿಸಿಬಿಟ್ಟದ್ದು ಭಾರತದ ನ್ಯಾಯ ವ್ಯವಸ್ಥೆಗೆ ಬಳಿದ ಒಂದು ದೊಡ್ಡ ಕಳಂಕವೇ.ನಾಥೂರಾಂ ಗೋಡ್ಸೆ ಆರೆಸ್ಸೆಸ್ ಸದಸ್ಯನಾಗಿದ್ದ ಎನ್ನುವುದು ಸತ್ಯವೇ ಆದರೂ, ಆತ ಕಾಂಗ್ರೆಸ್ ಸದಸ್ಯನಾಗಿದ್ದ ಎನ್ನುವುದೂ ಅಷ್ಟೇ ಸತ್ಯ. 1920ರ ಅಸಹಕಾರ ಆಂದೋಳನದ ವೇಳೆಯಲ್ಲಿ ಗೋಡ್ಸೆ ಗಾಂಧಿಯವರ ವಿಚಾರದಿಂದ ಆಕರ್ಷಿತನಾಗಿದ್ದ. ಆತ ಕಾಂಗ್ರೆಸ್ಸಿನ ಸಭೆಗಳಲ್ಲಿ ಭಾಗವಹಿಸುತ್ತಿದ್ದ. ಆದರೆ, ಸಮಯ ಕಳೆದಂತೆ, ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ಇಳಿಜಾರಿನಲ್ಲಿ ಕಾಲಿಟ್ಟಿದೆ, ಇದರಿಂದ ದೇಶಕ್ಕೆ ಅಪಾಯವಾಗುತ್ತದೆ ಎಂದು ಮನಗಂಡು ಕಾಂಗ್ರೆಸ್ಸನ್ನು ತ್ಯಜಿಸಿದ. 1930ರ ಸುಮಾರಿನಲ್ಲಿ ಗೋಡ್ಸೆ ಆರೆಸ್ಸೆಸ್ಗೆಆಕರ್ಷಿತನಾದ. ಆದರೆ, ಕೇವಲ ಸಂಘಟನೆಯ ವಿಚಾರವನ್ನಷ್ಟೇ ಮಾತನಾಡುತ್ತಿದ್ದ ಆರೆಸ್ಸೆಸ್ನ ವಿಚಾರ ಗೋಡ್ಸೆಗೆ ಸಪ್ಪೆ ಎನಿಸಿತು. ಆತ 1932ರಲ್ಲಿ ಆರೆಸ್ಸೆಸ್ ತ್ಯಜಿಸಿದ. ಅಷ್ಟೇ ಅಲ್ಲ, ಆತ ಆರೆಸ್ಸೆಸ್ ಅನ್ನು ಅತ್ಯಂತ ತೀಕ್ಷ್ಣ ಶಬ್ದಗಳಲ್ಲಿ ಖಂಡಿಸುತ್ತಿದ್ದ. ಅಲ್ಲಿಗೆ ಆರೆಸ್ಸೆಸ್ ಮತ್ತು ಗೋಡ್ಸೆ ನಡುವಣ ಸಂಬಂಧ ಮುಗಿಯಿತು. ಗೋಡ್ಸೆ ಕಾರಣದಿಂದಾಗಿ ಆರೆಸ್ಸೆಸ್ ಗಾಂಧಿ ಹತ್ಯೆ ಮಾಡಿದಂತಾಗಿದ್ದರೆ, ಕಾಂಗ್ರೆಸ್ ಕೂಡಾ ಅದರಲ್ಲಿ ಅಷ್ಟೇ ಭಾಗಿ. 1984ರ ಇಂದಿರಾ ಗಾಂಧಿ ಹತ್ಯೆಯ ನಂತರದಲ್ಲಿ ನಡೆದ ಗಲಭೆಗಳಲ್ಲಿ ಅಂದಿನ ಕಾಂಗ್ರೆಸ್ ನಾಯಕರಾಗಿದ್ದ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ನೇರ ಆರೋಪಿಗಳು ಎಂದು ನ್ಯಾಯಾಲಯ ಶಿಕ್ಷೆ ವಿಧಿಸಿದ್ದರ ಪರಿಣಾಮವಾಗಿ, 1984ರ ಸಿಖ್ ನರಮೇಧಕ್ಕೆ ಅಖಿಲ ಭಾರತೀಯ ಕಾಂಗ್ರೆಸ್ ಕಾರಣ, ಅದನ್ನು ನಿಷೇಧಿಸಿ ಎನ್ನೋಣವೇ?
ಗಾಂಧೀಜಿಯವರ ಅಮಾನುಷ ಹತ್ಯೆಯಾದ ಸಮಯದಲ್ಲಿ ಆರೆಸ್ಸೆಸ್ ಸರಸಂಘಚಾಲಕ ಗುರೂಜಿ ಗೋಳವಲ್ಕರ್ ಅವರು ಮದರಾಸಿನಲ್ಲಿದ್ದರು. ನಗರದ ಗಣ್ಯ ನಾಗರಿಕರ ಜೊತೆಯಲ್ಲಿ ಚಹಾಕೂಟದಲ್ಲಿ ಅವರು ಭಾಗಿಯಾಗಿದ್ದ ಸಮಯವದು. ಗಾಂಧೀಜಿಯವರ ಕೊಲೆಯ ಸುದ್ದಿ ತಿಳಿದ ಕೂಡಲೇ ಅವರು ಕೈಯ್ಯಲ್ಲಿದ್ದ ಚಹಾ ಕಪ್ ಕೆಳಗಿಳಿಸಿ ಸ್ವಲ್ಪ ಸಮಯ ಮೌನವಾಗಿಬಿಟ್ಟರು. ಚಹಾಕೂಟದ ವಾತಾವರಣ ಗಂಭೀರಗೊಂಡಿತು. ಅಲ್ಲಿಂದಲ್ಲೇ ಗಾಂಧೀಜಿಯವರ ಹತ್ಯೆಯನ್ನು ಖಂಡಿಸಿ, ಜತೆಯಲ್ಲಿ ತಮ್ಮ ಮನದ ತೀವ್ರ ಸಂತಾಪವನ್ನು ವ್ಯಕ್ತಪಡಿಸಿ ದೇವದಾಸ ಗಾಂಧಿ, ಪ್ರಧಾನಿ ನೆಹರು ಮತ್ತು ಸರ್ದಾರ್ ಪಟೇಲರಿಗೆ ತಂತಿ ಸಂದೇಶ ಕಳುಹಿಸಿದರು. ಮತ್ತು ಪತ್ರಿಕೆಗಳಿಗೂ ಅದೇ ಹೇಳಿಕೆಯ ಪ್ರತಿಗಳನ್ನು ಕಳುಹಿಸಿಕೊಟ್ಟರು. ಅಂದು ರಾತ್ರಿ ಆಂಧ್ರಕ್ಕೆ ಪ್ರವಾಸ ಹೊರಡಬೇಕಿತ್ತು. ತಮ್ಮ ಆಂಧ್ರ ಪ್ರವಾಸವನ್ನು ರದ್ದುಗೊಳಿಸಿ ಅಂದು ರಾತ್ರಿಯೇ ನಾಗಪುರಕ್ಕೆ ತಲುಪಿದರು. ಆರೆಸ್ಸೆಸ್ಸಿನ ಎಲ್ಲ ಪ್ರಾಂತಸ್ತರದ ಪ್ರಮುಖರು ಸಹ ತಂತಮ್ಮ ಪ್ರಾಂತಗಳಲ್ಲಿ ಗಾಂಧೀಜಿಯವರ ಹತ್ಯೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆಗಳನ್ನು ನೀಡಿದರು. ಗಾಂಧೀಜಿಯವರಿಗೆ ಗೌರವಪೂರ್ವಕವಾಗಿ ಆರೆಸ್ಸೆಸ್ಸಿನ ನಿತ್ಯಶಾಖೆಗಳಲ್ಲಿ ಶೋಕಾಚರಣೆ ನಡೆಸಿ, ಗುರೂಜಿ ಗೋಳವಲ್ಕರ್ ಅವರ ಆದೇಶಕ್ಕನುಗುಣವಾಗಿ ಮುಂದಿನ ಹದಿಮೂರು ದಿನಗಳ ಕಾಲ ಶಾಖೆಗಳ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು. ಪಂಜಾಬಿನ ಪ್ರಾಂತ ಸಂಘಚಾಲಕ ಲಾಲಾ ಹಂಸರಾಜ ಗುಪ್ತ, ದಿಲ್ಲಿ ನಗರ ಸಂಘಚಾಲಕ ಹರಿಶ್ಚಂದ್ರ ಗುಪ್ತ ಮತ್ತು ದಿಲ್ಲಿ ಪ್ರಾಂತ ಪ್ರಚಾರಕ ವಸಂತರಾವ್ ಓಕ್ ಅವರು ಗಾಂಧೀಜಿಯವರ ಮೃತ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಬಿರ್ಲಾ ಭವನಕ್ಕೆ ಧಾವಿಸಿದರು. ಮರುದಿನ ಗಾಂಧೀಜಿಯವರ ಅಂತಿಮ ಯಾತ್ರೆಯಲ್ಲೂ ಸಾವಿರಾರು ಸ್ವಯಂಸೇವಕರು ಭಾಗಿಗಳಾದರು. ಮರುದಿನ ಜನವರಿ 31ರಂದು ನಾಗಪುರದಲ್ಲಿ ಎಲ್ಲರಿಗಿಂತ ಮೊದಲು ಶೋಕಸಭೆ ಏರ್ಪಡಿಸಿ ಶ್ರದ್ಧಾಂಜಲಿ ಸಮರ್ಪಿಸಿದವರು ಸಂಘದ ಸ್ವಯಂಸೇವಕರೇ. ಅಂದು ದೇಶಾದ್ಯಂತ ನಡೆದ ಸಾವಿರಾರು ಶೋಕಸಭೆಗಳಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು ಪಾಲ್ಗೊಂಡು ಗಾಂಧೀಜಿಯವರ ಸ್ಮೃತಿಗೆ ಶ್ರದ್ಧಾಸುಮನಗಳನ್ನು ಅರ್ಪಿಸಿದರು. ಕೆಲವು ಸ್ಥಳಗಳಲ್ಲಿ ಸಂಘದ ಪ್ರಮುಖರೇ ಶೋಕಸಭೆಯಲ್ಲಿ ಮುಖ್ಯಭಾಷಣ ಮಾಡಿದರು. ದೇಶಾದ್ಯಂತ ಎಲ್ಲ ಸಂಘದ ಶಾಖೆಗಳಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಆದರೆ, ಆರೆಸ್ಸೆಸ್ಸಿನ ಪ್ರಮುಖರು ಕನಸಿನಲ್ಲಿಯೂ ನಿರೀಕ್ಷಿಸಿರದಿದ್ದ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯಿತು. ಗಾಂಧೀಜಿಯವರ ಹತ್ಯೆಗಾಗಿ ಪಿತೂರಿ ನಡೆಸಿದ ಆರೋಪವನ್ನು ಸ್ವತಃ ಪ್ರಧಾನಿ ಜವಹರಲಾಲ್ ನೆಹರೂ ಅವರೇ ಸಂಘದ ಮೇಲೆ ಹೊರಿಸಿಬಿಟ್ಟರು. ಇದರ ಪರಿಣಾಮವಾಗಿ ದೇಶಾದ್ಯಂತ ಕಾಂಗ್ರೆಸ್ ನಾಯಕರು ಮತ್ತು ಇತರ ಸಂಘವಿರೋಧಿ ಶಕ್ತಿಗಳೂ ಸಂಘವನ್ನು ಕೊಲೆಪಾತಕಿಯಾಗಿ ಬಣ್ಣಿಸಲು ಆರಂಭಿಸಿದವು. “ಕೊಲೆಗೆ ಕೊಲೆಯೇ ಪ್ರತ್ಯುತ್ತರ” ಎಂಬ ಉದ್ರೇಕಕಾರಕ ಘೋಷಣೆಗಳು ‘ಅಹಿಂಸಾವಾದಿ’ಗಳ ಬಾಯಿಂದ ಹೊರಬಿದ್ದವು. “ಗಾಂಧೀಜಿಯವರ ಹತ್ಯೆಯ ಸುದ್ದಿ ಕೇಳಿ ಸಂಘದ ಸ್ವಯಂಸೇವಕರು ಮಿಠಾಯಿ ಹಂಚಿ ಆನಂದಿಸಿದರು” ಎಂಬ ವದಂತಿ ಸುದ್ದಿಯನ್ನು ತೇಲಿಬಿಡಲಾಗಿತ್ತು. ಇಂದಿಗೂ ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ಸಿನವರ ಪಾತ್ರದ ಕುರಿತಾಗಿ ಕಾಂಗ್ರೆಸ್ಸಿಗರು ಉದಾಹರಿಸುವುದು ಇದನ್ನೇ. ಇದರ ಹಿಂದಿನ ಸತ್ಯಾಸತ್ಯತೆಯನ್ನು ಅರಿಯುವುದು ಅತ್ಯಗತ್ಯ. 1948ರ ಜನವರಿ 30ರಂದು ಗೋರಖಪುರ ಜಿಲ್ಲೆಯ ಬ್ರಹ್ಮಪುರ ಕ್ಷೇತ್ರದ ರಾಮಚಂದ್ರ ಜಯಸ್ವಾಲ್ ಎಂಬವರ ಮನೆಯಲ್ಲಿ ಅವರ ಪುತ್ರೋತ್ಸವದ ನಿಮಿತ್ತ ಮಿತ್ರ ಭೋಜನ ಏರ್ಪಡಿಸಲಾಗಿತ್ತು. ಅವರು ಆರೆಸ್ಸೆಸ್ಸಿನ ಕಾರ್ಯಕರ್ತವಾಗಿದ್ದರು. ಭೋಜನ ನಡೆದು ಮಿಠಾಯಿ ಹಂಚಿದ್ದು ಅಂದಿನ ಮಧ್ಯಾಹ್ನದ ಊಟದ ಸಮಯದಲ್ಲಿ. ಕಾರ್ಯಕ್ರಮ ಮುಗಿದ ನಂತರ ಅವರೆಲ್ಲಾ ನೇರವಾಗಿ ಶಾಖೆಗೆ ಹೋದರು. ಗಾಂಧೀಜಿಯವರ ಹತ್ಯೆಯ ದಾರುಣ ಸುದ್ದಿ ತಿಳಿದದ್ದು ಅವರು ಶಾಖೆಗೆ ಹೋದ ನಂತರವೇ. ಜಯಸ್ವಾಲ್ ಅವರ ಮನೆಯ ಕಾರ್ಯಕ್ರಮವನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್, ಸಮಾಜವಾದಿ ಮತ್ತು ಕಮ್ಯುನಿಸ್ಟರು ಸಂಘದವರು ಗಾಂಧೀಜಿಯವರ ಹತ್ಯೆಯ ನಿಮಿತ್ತ ಖುಷಿಯಿಂದ ಹಬ್ಬ ಆಚರಿಸಿ ಸಂಭ್ರಮಿಸಿದರು ಎಂದು ಪುಕಾರು ಹಬ್ಬಿಸಿದರು. ಅದೇ ಗಾಳಿಸುದ್ದಿಯಾಗಿ ಕಾಂಗ್ರೆಸ್ಸಿನವರ ಧ್ವೇಷದ ದಳ್ಳುರಿಗೆ ಇಂದನವಾಯಿತು. ಫೆಬ್ರವರಿ 1ರಂದು ವಿಧಿ ಕ್ರ.302 ಮತ್ತು 120ರ ಅಡಿಯಲ್ಲಿ ಗುರೂಜಿ ಗೋಳವಲ್ಕರ್ ಮತ್ತು ಇತರ ಕೆಲವು ಸಹಕಾರಿಗಳನ್ನು ಬಂಧಿಸಲಾಯಿತು. ಫೆಬ್ರವರಿ 4ರಂದು ಸಂಘವನ್ನು ನಿಷೇಧಿಸಲಾಯಿತು. ದೇಶಾದ್ಯಂತ ಸಂಘದ ಸ್ವಯಂಸೇವಕರನ್ನು ಬಂಧಿಸುವ ಕ್ರಮವಂತೂ ಮೊದಲೇ ಆರಂಭಗೊಂಡಿತ್ತು.
ಗಾಂಧೀಜಿಯವರ ಹತ್ಯೆಯಾದ ಕೆಲವೇ ದಿನಗಳೊಳಗೆ ಅದಕ್ಕಾಗಿ ಸಂಚು ಹೂಡಿದ ಎಲ್ಲ ಆರೋಪಿಗಳೂ ಸೆರೆಸಿಕ್ಕರು. ಹಂತಕ ನಾಥೂರಾಂ ಗೋಡ್ಸೆ ಸ್ವತಃ ಪಿಸ್ತೂಲ್ ಸಹಿತ ಪೊಲೀಸರಿಗೆ ಶರಣಾಗಿದ್ದ. ಸಂಚಿನಲ್ಲಿ ಆತನೊಡನೆ ಸಹಭಾಗಿಯಾಗಿದ್ದ ಮದನಲಾಲ್ ಪಾಹ್ವಾ ಹತ್ಯೆಗಿಂತ ಹತ್ತು ದಿನಗಳ ಮೊದಲೇ ಜನವರಿ 20ರಂದೇ ಬಂಧಿತನಾಗಿದ್ದ. ಆತನಿಗೆ ಮುಂಬಯಿಯ ಕಾಂಗ್ರೆಸ್ ನಾಯಕ ಡಾ||ಜೆ.ಸಿ.ಜೈನ್ ಅವರೊಡನೆ ನಿಕಟ ಸಂಬಂಧವಿತ್ತು. ಅವರೊಡನೆ ಮೊದಲೇ ಆತ ತನ್ನ ಸಂಚಿನ ವಿವರಗಳನ್ನು ನೀಡಿದ್ದ. ಈ ಸಂಗತಿಯೂ ವಿಚಾರಣೆಯ ವೇಳೆ ಹೊರಬಿತ್ತು. ತಪಾಸಣೆ ಆರಂಭಿಸಿದ ಕೆಲವೇ ದಿನಗಳಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೋಚರಿಸಿದ ಸಂಗತಿಯೆಂದರೆ, ಈ ಸಂಚಿನಲ್ಲಿ ಒಳಗೊಂಡಿರುವವರು ಕೇವಲ ಕೆಲವೇ ವ್ಯಕ್ತಿಗಳು ಮಾತ್ರ ಎಂಬುದು. ಎಲ್ಲ ಮುಖಗಳ ತಪಾಸಣೆಯ ನಂತರ ಸಂಚಿನಲ್ಲಿ ಆರೆಸ್ಸೆಸ್ಸಿನದಾಗಲೀ, ಗುರೂಜಿ ಗೋಳವಲ್ಕರ್ ಅವರದಾಗಲೀ ಯಾವ ಪಾತ್ರವೂ ಇಲ್ಲ ಎನ್ನುವುದು ಅಸಂದಿಗ್ದವಾಗಿ ನಿರೂಪಿತವಾಯಿತು. ಫೆಬ್ರವರಿ 6ರಂದು ಗುರೂಜಿ ಗೋಳವಲ್ಕರ್ ಅವರ ಮೇಲಿನ ಹತ್ಯೆಯ ಅಪಾದನೆಯನ್ನು ಸರ್ಕಾರ ಹಿಂಪಡೆಯಬೇಕಾಯಿತು. ಆದರೆ, ನೆಹರೂ ಅವರಿಗೆ ಸಮಾಧಾನವಾಗಲಿಲ್ಲ. ಅವರು ಕುಪಿತರಾಗಿ ಸರ್ದಾರ್ ಪಟೇಲರಿಗೆ ಪತ್ರ ಬರೆದರು. ಮುಂದೆ ನ್ಯಾಯಮೂರ್ತಿ ಶ್ರೀ ಆತ್ಮಚರಣ ಅವರ ನೇತೃತ್ವದಲ್ಲಿ ವಿಶೇಷ ನ್ಯಾಯಾಲಯವನ್ನು ರಚಿಸಿ ವಿಚಾರಣೆ ನಡೆಸಲಾಯಿತು. 1948ರ ಮೇ 4ರಂದು ವಿಚಾರಣೆ ಆರಂಭಿಸಿದ ವಿಶೇಷ ನ್ಯಾಯಾಲಯ 1949ರ ಜನವರಿ 10ರಂದು ತೀರ್ಪು ನೀಡಿತು. ಒಟ್ಟು 149 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಈ ತೀರ್ಪಿನಲ್ಲಿ ಸಾವರಕರ್ ಅವರನ್ನು ತಪ್ಪಿತಸ್ಥರಲ್ಲವೆಂದು ಘೋಷಿಸಿ ಬಿಡುಗಡೆ ಮಾಡಲಾಯಿತು ಮತ್ತು ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆಯವರಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ನ್ಯಾಯಾಲಯದಲ್ಲಿ ವಾದದ ಸಂದರ್ಭದಲ್ಲಿ ಸರಕಾರಿ ವಕೀಲರು ಆರೆಸ್ಸೆಸ್ ಅನ್ನು ತಪ್ಪಿತಸ್ಥ ಎಂದು ನಿರೂಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಗೋಡ್ಸೆಗೂ ಸಂಘಕ್ಕೂ ಸಂಬಂಧ ಕಲ್ಪಿಸಲು ಆತನ ಬದುಕನ್ನೇ ಜಾಲಾಡಿ ಮಾಹಿತಿ ಸಂಗ್ರಹಿಸಿದ್ದರು. ಆದರೆ, ವಿಚಾರಣೆಯ ವೇಳೆ ನಿರೂಪಿತವಾಗಿದ್ದೆಂದರೆ, ಗೋಡ್ಸೆ ಆರೆಸ್ಸೆಸ್ ವಿರೋಧಿಯಾಗಿದ್ದ, ಆತನ “ಹಿಂದುರಾಷ್ಟ್ರ” ಪತ್ರಿಕೆಯಲ್ಲಿ ಆರೆಸ್ಸೆಸ್ ಅನ್ನು ಖಂಡಿಸಿ ಅನೇಕ ಲೇಖನಗಳನ್ನು ಬರೆದಿದ್ದ. ಹೀಗಾಗಿ, ಒಟ್ಟಿನಲ್ಲಿ ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಇಲ್ಲ ಎನ್ನುವುದು ನಿಚ್ಚಳವಾಯಿತು. ಆದರೆ, ನ್ಯಾಯಮೂರ್ತಿ ಆತ್ಮಚರಣರ ತೀರ್ಮಾನವನ್ನು ವಿರೋಧಿಸಿ ಸರಕಾರವು ಪಂಜಾಬು ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತು. ಸರಕಾರ ಸಲ್ಲಿಸಿದ ಮೇಲ್ಮನವಿ ಸರ್ವಶ್ರೀ ಭಂಡಾರಿ, ಅಚ್ಛೂರಾಮ ಮತ್ತು ಜಿ.ಡಿ.ಖೋಸ್ಲಾ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗಾಗಿ ಬಂತು. ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿದಂತೆಯೇ ಉಚ್ಚ ನ್ಯಾಯಾಲಯವೂ ಗಾಂಧೀಜಿಯವರ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರವೇನೂ ಇರಲಿಲ್ಲ ಮತ್ತು ಒಳಸಂಚು ದೇಶವ್ಯಾಪಿಯಾಗಿರದೆ ಬೆರಳೆಣಿಕೆಯಷ್ಟು ವ್ಯಕ್ತಿಗಳಷ್ಟೇ ರಚಿಸಿದ್ದುದು ಎಂದು ಸ್ಪಷ್ಟ ಶಬ್ದಗಳಲ್ಲಿ ತನ್ನ ತೀರ್ಪು ನೀಡಿತ್ತು. ಆದರೆ, ಇವೆರಡು ತೀರ್ಪಿನಿಂದಲೂ ಸಮಾಧಾನಗೊಳ್ಳದ ಆಳರಸರು 1966ರಲ್ಲಿ ಮತ್ತೊಮ್ಮೆ ಹೊಸದಾಗಿ ನ್ಯಾಯಾಂಗ ವಿಚಾರಣೆ ನಡೆಸಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಶ್ರೀ ಟಿ.ಎಲ್.ಕಪೂರ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಈ ವಿಚಾರಣೆಯ ಉದ್ದೇಶವೂ ಗಾಂಧಿ ಹತ್ಯೆಯನ್ನು ಸಂಘದ ಹಣೆಗೆ ಕಟ್ಟುವುದೇ ಆಗಿತ್ತು. ಹಿಂದೆ ಮಾಡಿದ್ದಂತೆ ಇಲ್ಲೂ ಸಹ ಸಂಘಕ್ಕೂ ಗೋಡ್ಸೆಗೂ ಸಂಬಂಧ ಕಲ್ಪಿಸಲು, ಸಂಘವೇ ಸಂಚು ನಡೆಸಿದ್ದೆಂದು ನಿರೂಪಿಸಲು ದೊಡ್ಡ ಪ್ರಯತ್ನವನ್ನೇ ಮಾಡಲಾಯಿತು. ಕಪೂರ್ ಆಯೋಗವು 101 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ, 407 ಲಿಖಿತ ಮಾಹಿತಿಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ, 1969ರಲ್ಲಿ ತನ್ನ ವರದಿಯನ್ನು ಪ್ರಕಟಿಸಿತು. ಅದರಲ್ಲಿ ಸ್ಪಷ್ಟವಾಗಿ ತಿಳಿಸಿರುವುದೇನೆಂದರೆ, “ಇಂತಹ ನೀಚ ಕೆಲಸದಲ್ಲಿ ಭಾಗಿಯಾಗಿರುವುದಾಗಿ ಸಂಘದ ಕಡೆಗೆ ಬೊಟ್ಟು ಮಾಡಲು ಸಹಾ ಆಗುವುದಿಲ್ಲ” ಎಂಬುದಾಗಿ. ಇಷ್ಟೆಲ್ಲಾ ವಿಚಾರಣೆಗಳ ನಂತರವೂ ಗಾಂಧಿ ಹತ್ಯೆಗೆ ಆರೆಸ್ಸೆಸ್ ಕಾರಣ ಎಂದು ಕಾಂಗ್ರೆಸ್ಸಿಗರು ಆರೋಪಿಸುವುದು, ಅವರಿಗೆ ನಮ್ಮ ದೇಶದ ಸಂವಿಧಾನ ಮತ್ತು ನ್ಯಾಯಾಲಯಗಳ ಬಗ್ಗೆ ಇರುವ ಅಪನಂಬಿಕೆ ಮತ್ತು ಅಗೌರವವನ್ನು ಎತ್ತಿ ತೋರಿಸುತ್ತದೆ.
ಹಾಗಿದ್ದರೆ ಗಾಂಧಿ ಹತ್ಯೆಯನ್ನು ಸಂಘದ ಹಣೆಗೆ ಕಟ್ಟಲು ಕಾರಣವೇನು? ಬಹಳ ಹಿಂದಿನಿಂದಲೂ ಸಮಾಜವಾದಿ ವಿಚಾರದಿಂದ ಪ್ರಭಾವಿತರಾಗಿದ್ದ ನೆಹರೂ ಅವರಿಗೆ ಸಂಘದ ಮೇಲೆ ಧ್ವೇಷವಿತ್ತು. 1936ರಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿ. ಮಹಾರಾಷ್ಟ್ರದ ಫೈಜಪುರದಲ್ಲಿ ನಡೆದ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಸ್ವತಃ ನೆಹರೂ ಅವರೇ ಧ್ವಜಾರೋಹಣ ಮಾಡಬೇಕಿತ್ತು. ಆದರೆ, ಧ್ವಜದ ದಾರವು ನಡುವಿನಲ್ಲಿ ಗಂಟು ಹಾಕಿಕೊಂಡಿತು. ಎಲ್ಲರಿಗೂ ಕಸಿವಿಸಿಯಾಯಿತು, ಏನು ಮಾಡಬೇಕೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಜನರ ನಡುವಿನಿಂದ ಬಂದ್ ಕಿಶೋರನೊಬ್ಬ ಸರಸರ ಕಂಬದ ಮೇಲೇರಿ ಗಂಟು ಬಿಡಿಸಿದ, ಧ್ವಜ ಮೇಲೇರಿತು. ನೆಹರೂ ಅವರು ಅವನನ್ನು ಹೊಗಳಿ ಸಾರ್ವಜನಿಕವಾಗಿ ಸನ್ಮಾನಿಸುವುದಾಗಿ ಘೋಷಿಸಿದರು. ಆದರೆ, ಕಿಶನಸಿಂಹ ಪರದೇಶಿ ಎಂಬ ಹೆಸರಿನ ಆ ಕಿಶೋರ ಆರೆಸ್ಸೆಸ್ ಸ್ವಯಂಸೇವಕ ಎಂಬ ವಿಷಯ ಗೊತ್ತಾದ ಕೂಡಲೇ, ಸನ್ಮಾನ ಸಮಾರಂಭವನ್ನು ರದ್ದುಪಡಿಸುವಂತೆ ನೆಹರೂ ಆಜ್ಞಾಪಿಸಿದರು! ಕಾಂಗ್ರೆಸ್ ಒಳಗೆ ನುಸುಳಿಕೊಂಡಿದ್ದ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ನೆಹರೂ ಅವರ ಕಿವಿಯೂದಿ ಅವರನ್ನು ಸಂಘವಿರೋಧಿಗಳನ್ನಾಗಿಸಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಗಡಿ ಪ್ರಾಂತಗಳಲ್ಲಿ ನಿರಾಶ್ರಿತ ಶಿಬಿರಗಳನ್ನು ನಡೆಸಿ, ಸ್ವಂತದ ಪ್ರಾಣವನ್ನೂ ಲೆಕ್ಕಿಸದೆ ಹಿಂದುಗಳ ರಕ್ಷಣೆಗೆ ನಿಂತು ಕೆಲಸ ಮಾಡಿದ್ದು ದೇಶವಾಸಿಗಳ ಗಮನ ಸೆಳೆದಿತ್ತು. ಪರಿಣಾಮವಾಗಿ ಆರೆಸ್ಸೆಸ್ ಜನಪ್ರಿಯವಾಗಿ, ನಿತ್ಯಶಾಖೆಗಳಲ್ಲಿ ಪ್ರವಾಹೋಪಾದಿಯಲ್ಲಿ ಯುವಕರು ಸೇರಲಾರಂಭಿಸಿದರು. ಇದು ಕೂಡಾ ಕಾಂಗ್ರೆಸ್ಸಿಗರ ಮತ್ತು ನೆಹರೂ ಅವರ ಕಣ್ಣು ಚುಚ್ಚಿತು. ಇವರ ಜನಪ್ರಿಯತೆ ಇದೇ ರೀತಿ ಮುಂದುವರೆದಲ್ಲಿ ಒಂದಲ್ಲಾ ಒಂದು ದಿನ ತಾನು ಅಧಿಕಾರ ಕಳೆದುಕೊಳ್ಳಬೇಕಾದೀತು ಎಂದು ಅವರಿಗೆ ಅನ್ನಿಸತೊಡಗಿತ್ತು. ಅದೇ ಸಮಯದಲ್ಲಿ ಕಾಂಗ್ರೆಸ್ಸಿನ ಜನಪ್ರಿಯತೆ ರಸಾತಳಕ್ಕಿಳಿದಿತ್ತು. ವಿಭಜನೆಯಿಂದ ದೇಶದಲ್ಲಿ ಉಂಟಾಗಿದ್ದ ಅರಾಜಕತೆ, ಕೊಲೆ, ರಕ್ತಪಾತ, ಅತ್ಯಾಚಾರ, ಅಪಹರಣಗಳಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಜನರಿಗೆ ಅನ್ನಿಸತೊಡಗಿತ್ತು. ಗಾಂಧಿ ಮತ್ತು ನೆಹರೂ ಅವರಿಗೆ ಜನರು ಹಿಡಿಶಾಪ ಹಾಕುತ್ತಿದ್ದುದು ಸಾಮಾನ್ಯವಾಗಿತ್ತು. ಇದರಿಂದಲೂ ನೆಹರೂ ಅವರು ಬೆದರಿದ್ದರು. ಸಂಘವನ್ನು ನಾಶ ಮಾಡದಿದ್ದರೆ ತನ್ನ ಅಧಿಕಾರಕ್ಕೆ ಸಂಚಕಾರ ನಿಶ್ಚಿತ ಎಂದು ಅವರಿಗೆ ಮನದಟ್ಟಾಗಿತ್ತು. ಗಾಂಧೀಜಿಯವರ ಕೊಲೆಗೆ ಬಹು ಮುಂಚಿನಿಂದಲೂ ಸಂಘದ ಮೇಲೆ ನೆಹರೂ ಅವರು ಧ್ವೇಷ ಕಾರುತ್ತಿದ್ದುದು, ಸಂಘವನ್ನು ಮೂಲೋತ್ಪಾಟನೆ ಮಾಡುವುದಾಗಿ ಘೋಷಿಸುವುದು, ಸಂಘವನ್ನು ನಿಷೇಧಿಸುವುದಾಗಿ ಹೆದರಿಸುವುದು ನಡೆದೇಯಿತ್ತು. ನೆಹರೂ ಅವರ ಈ ಹೇಳಿಕೆಗಳನ್ನು ಸರ್ದಾರ್ ಪಟೇಲರು ಖಂಡಿಸುತ್ತಿದ್ದರು. ಇದರಿಂದಾಗಿ ನೆಹರೂ ಅವರು ಪಟೇಲರನ್ನೂ ಧ್ವೇಷಿಸಲಾರಂಭಿಸಿದ್ದರು. 1948ರ ಜನವರಿ 17ರಂದು ನಡೆದ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಸಂಘವಿರೋಧಿ ಠರಾವನ್ನು ಸ್ವೀಕರಿಸಿ, ಸಂಘದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ಪ್ರಾಂತೀಯ ಸರಕಾರಗಳಿಗೆ ಆದೇಶ ನೀಡಲಾಗಿತ್ತು. ಸಂಯುಕ್ತ ಪ್ರಾಂತದ ಕಾಂಗ್ರೆಸ್ ಸಮಿತಿಯಂತೂ ಸಂಘದ ಕಾರ್ಯಕ್ರಮದಲ್ಲಿ ಸಹಭಾಗಿಯಾದ ‘ಅಪರಾಧ’ಕ್ಕಾಗಿ ಹತ್ತಾರು ಮಂದಿ ಕಾಂಗ್ರೆಸ್ ವ್ಯಕ್ತಿಗಳನ್ನೇ ಪಕ್ಷದಿಂದ ಕಿತ್ತೊಗೆಯಿತು. ಕೇಂದ್ರ ಸರಕಾರವು ತನ್ನ ನೌಕರರು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ನಿಷೇಧ ವಿಧಿಸಿತು. ನೆಹರೂ ಅವರು ಇಷ್ಟೆಲ್ಲಾ ಧ್ವೇಷ ಸಾಧಿಸುತ್ತಿದ್ದರೂ, ಸಾಮಾನ್ಯ ಜನ ಸಂಘದ ಜತೆಗಿದ್ದರು. ಅನೇಕ ಕಾಂಗ್ರೆಸ್ ನಾಯಕರೇ ಸಂಘದ ಪರವಹಿಸುತ್ತಿದ್ದರು. ವರ್ಧಾ ಮತ್ತು ಇನ್ನೂ ಕೆಲವು ಕಡೆಗಳಲ್ಲಿನ ಕಾಂಗ್ರೆಸ್ ನಾಯಕರು ಸಂಘವು ನೆಹರೂ ಸರಕಾರವನ್ನು ಉರುಳಿಸುವ ಸನ್ನಾಹದಲ್ಲಿ ತೊಡಗಿದೆ ಎಂಬ ಆರೋಪ ಹೊರಿಸುತ್ತಿದ್ದಲ್ಲಿ, ಅವರ ಬಾಯಿ ಮುಚ್ಚಿಸುತ್ತಿದ್ದವರು ಮಧ್ಯಪ್ರದೇಶದ ಗೃಹಮಂತ್ರಿಯಾಗಿದ್ದ ಪಂ.ದ್ವಾರಿಕಾ ಪ್ರಸಾದ್ ಮಿಶ್ರಾ ಅವರು. ಗಾಂಧಿ ಹತ್ಯೆಗಿಂತ ಮುಂಚೆಯೇ ಅನೇಕ ಸಂಘವಿರೋಧಿ ಗುಂಪುಗಳು ಒಂದಾಗಿದ್ದವು. ಆದರೆ, ಒಂದು ಕಡೆ ಸ್ವಯಂಸೇವಕರ ಸಂಯಮ ಮತ್ತು ಅನುಶಾಸನಪಾಲನೆಯ ಕಟ್ಟುನಿಟ್ಟಿನ ನಿರ್ಧಾರ, ಇನ್ನೊಂದು ಕಡೆ ಸರ್ದಾರ್ ಪಟೇಲ್, ಪಂ.ದ್ವಾರಿಕಾ ಪ್ರಸಾದ್ ಮಿಶ್ರಾ, ಶ್ರೀ ಬಾಳಾ ಸಾಹೇಬ ಖೇರ್ರಂತಹ ಹಿರಿಯ ಕಾಂಗ್ರೆಸ್ ನಾಯಕರ ಸಂಘದ ಕುರಿತ ಸಕಾರಾತ್ಮಕ ಧೋರಣೆ, ಮತ್ತು ಜನಸಾಮಾನ್ಯರ ಅಪಾರ ಸಹಾನುಭೂತಿ, ಇವೆಲ್ಲವುಗಳಿಂದಾಗಿ ಗಾಂಧೀಜಿ ಹತ್ಯೆಯ ಪೂರ್ವದಲ್ಲಿ ಅವರ ಬೇಳೆ ಬೇಯಲಿಲ್ಲ. ಆದರೆ, ಗಾಂಧೀಜಿ ಹತ್ಯೆ ಸಂಘ ವಿರೋಧಿಗಳೆಲ್ಲರಿಗೆ ವರವಾಗಿ ಪರಿಣಮಿಸಿತು. ಗಾಂಧಿ ಹತ್ಯೆಯನ್ನೇ ನೆಪವಾಗಿಸಿಕೊಂಡು ನೆಹರೂ ಆದಿಯಾಗಿ ಎಲ್ಲ ಸಂಘವಿರೋದಿಗಳೂ ಸಂಘವನ್ನು ನಿರ್ನಾಮ ಮಾಡಲು ನಿರ್ಧರಿಸಿಬಿಟ್ಟರು!
ಕಾಂಗ್ರೆಸ್ಸಿನವರು ನಡೆಸಿದ ರಾಕ್ಷಸೀ ಕೃತ್ಯಗಳ ವಿವರಗಳು ಲೇಖನವೊಂದರಲ್ಲಿ ಹಿಡಿದಿಡಲಾಗದ ಸಂಗತಿ. ಕೆಲವು ಉದಾಹರಣೆಗಳನ್ನಷ್ಟೇ ಇಲ್ಲಿ ನೀಡಬಹುದು. ಕಾಂಗ್ರೆಸ್ ನಾಯಕರು ಸಭೆಗಳನ್ನು ನಡೆಸಿ ಕಪೋಲಕಲ್ಪಿತ ಆರೋಪಗಳನ್ನು ಸಂಘದ ಮೇಲೆ ಹೇರಿ ಜನರನ್ನು ಉದ್ರೇಕಿತಗೊಳಿಸುತ್ತಿದ್ದರು. ಸರಕಾರಿ ಒಡೆತನದ ಮಾಧ್ಯಮವಾದ ಆಕಾಶವಾಣಿ ದೇಶಕ್ಕೆಲ್ಲ ಬೆಂಕಿ ಹಚ್ಚುವ ಕೆಲಸದಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ನಾಗಪುರದ ಕಾಂಗ್ರೆಸ್ ನಾಯಕರು ಮಧ್ಯಪ್ರದೇಶ ಪ್ರಾಂತದಲ್ಲೆಲ್ಲಾ ಪ್ರವಾಸ ಮಾಡಿ ಜನರಿಗೆ ಈ ರೀತಿ ಕರೆ ನೀಡಿದರು: “ಗಾಂಧೀಜಿ ಹಂತಕರಾದ ಸಂಘದ ಸ್ವಯಂಸೇವಕರನ್ನು ಸಿಕ್ಕಸಿಕ್ಕಲ್ಲಿ ಗುರುತಿಸಿ ಪೂರಾ ಮುಗಿಸಿಬಿಡಿ. ಬಾಲಕರಿರಲಿ, ವೃದ್ಧರಿರಲಿ, ಮಹಿಳೆಯರೇ ಇರಲಿ, ಯಾರ ಬಗ್ಗೆಯೂ ಕನಿಕರ ಬೇಡ, ಸರಕಾರ ನಿಮ್ಮ ಬೆಂಬಲಕ್ಕಿದೆ”! “ಗೋಡ್ಸೆ ಒಬ್ಬ ಬ್ರಾಹ್ಮಣ; ಬ್ರಾಹ್ಮಣ ಒಬ್ಬ ಕಟುಕ; ಗೋಡ್ಸೆ ಸಂಘದ ಪ್ರಚಾರಕ; ಈ ಜಾತೀಯವಾದಿಗಳನ್ನೆಲ್ಲ ಮುಗಿಸಲು ಕಾಂಗ್ರೆಸ್ ಸರಕಾರ ಆದೇಶವಿತ್ತಿದೆ” ಇತ್ಯಾದಿ ಘೋಷಣೆಸಹಿತ ಮಹಾರಾಷ್ಟ್ರದಾದ್ಯಂತ ಕಾಂಗ್ರೆಸ್ಸಿಗರು ಆರೆಸ್ಸೆಸ್ ಮತ್ತು ಬ್ರಾಹ್ಮಣರ ವಿರುದ್ದ ಧ್ವಂಸಕೇಳಿ ನಡೆಸಿದರು. ಇದರಿಂದಾಗಿ ಸರ್ವತ್ರ ಕೊಲೆ, ಅಗ್ನಿಕಾಂಡ, ಲೂಟಿ ಇತ್ಯಾದಿ ಲಂಗುಲಗಾಮಿಲ್ಲದೆ ನಡೆಯಿತು. ಅನೇಕ ಕಡೆಗಳಲ್ಲಿ ಆರೆಸ್ಸೆಸ್ ಪ್ರಚಾರಕರ ಸಜೀವ ದಹನ ನಡೆಸುವ ಪ್ರಯತ್ನವೂ ನಡೆಯಿತು. ದೇಶಾದ್ಯಂತ ಎಲ್ಲೆಡೆ ಆರೆಸ್ಸೆಸ್ ಕಾರ್ಯಾಲಯಗಳ ಮೇಲೆ ಆಕ್ರಮಣಗಳು ನಡೆದವು. ಕೆಲವೊಂದು ಕಾರ್ಯಾಲಯಗಳಿಗೆ ಬೆಂಕಿ ಹಚ್ಚಲಾಯಿತು. ನಾಗಪುರದ ರೇಶಿಂಭಾಗ್ನಲ್ಲಿರುವ ಡಾಕ್ಟರ್ ಹೆಡಗೇವಾರ್ ಸಮಾಧಿ ಮತ್ತಿ ಅಲ್ಲಿನ ತುಲಸಿ ವೃಂದಾವನವನ್ನು ಧ್ವಂಸಗೊಳಿಸಿದರು. ದೇಶಾದ್ಯಂತ ಹಿಂಸಾಚಾರದ ತಾಂಡವವೇ ಆರಂಭವಾಯಿತು. ಅಹಮದಾಬಾದ್ನಲ್ಲಿ ಮದಾಂಧ ಕಾಂಗ್ರೆಸ್ಸಿಗರ ಗುಂಪು ಆರ್ಯಸಮಾಜ ಮಂದಿರಕ್ಕೆ ಬೆಂಕಿ, ವೇದ ಹಾಗೂ ಸತ್ಯಾರ್ಥ ಪ್ರಕಾಶ ಗ್ರಂಥಗಳನ್ನು ಬೆಂಕಿಗಾಹುತಿ ಮಾಡಿ, ಮಹರ್ಷಿ ದಯಾನಂದರ ಚಿತ್ರಗಳನ್ನೂ ಸುಟ್ಟು ಹಾಕಿತು. ಕೊಲ್ಲಾಫುರದ ಅಜರಾ ಎಂಬ ಒಂದು ತಾಲ್ಲೂಕಿನಲ್ಲೇ 80 ಗ್ರಾಮಗಳಲ್ಲಿನ ಬ್ರಾಹ್ಮಣ ಮತ್ತು ಇನ್ನಿತರ ಆರೆಸ್ಸೆಸ್ ಕಾರ್ಯಕರ್ತರ 121 ಪರಿವಾರಗಳನ್ನು ಮೊದಲು ಲೂಟಿ ಮಾಡಿ, ನಂತರ ಅವರ ಮನೆಗಳನ್ನು ಸುಟ್ಟು ಎಲ್ಲರನ್ನೂ ಬೀದಿಪಾಲು ಮಾಡಲಾಯಿತು. ಉಡತರೆ ಎಂಬಲ್ಲಿ, ಶ್ರೀ ಕುಲಕರ್ಣಿ ಎಂಬವರ ಮನೆಯನ್ನು ಸುಡುವುದರೊಂದಿಗೆ ಅವರ ವಯೋವೃದ್ಧ ಅಜ್ಜಿಯನ್ನೂ ಈ ನೀಚರು ಜೀವಂತ ಸುಟ್ಟುಬಿಟ್ಟರು! ಕಹಪರೆ ಎಂಬಲ್ಲಿನ ಮೂರು ಗೋಡ್ಸೆ ಪರಿವಾರದ ಎಲ್ಲರನ್ನೂ ಬೆಂಕಿಗೆ ನೂಕಲಾಯಿತು. ಅವರು ಪರಿಪರಿಯಾಗಿ ಬೇಡಿಕೊಂಡರೂ, ಗೋಗರೆದರೂ ಈ ರಕ್ಕಸರು ಕನಿಕರಿಸಲಿಲ್ಲ. ಈ ಪರಿವಾರದವರು ಮಾಡಿದ್ದ ಒಂದೇ ತಪ್ಪು, ಅವರ ಹೆಸರಿನಲ್ಲಿ ಗೋಡ್ಸೆ ಅಡ್ಡಹೆಸರು ಸೇರಿದ್ದು. ಫಲಟಣ ಎಂಬಲ್ಲಿ ವಯೋವೃದ್ಧ ಸಂಘಚಾಲಕರ ಎಲುಬು ಮುರಿಯುವಷ್ಟು ಹೊಡೆದರು. ಅಕಲೂಜ್ನಲ್ಲಿ ಸಂಘದ ಹಿತೈಷಿ ಶ್ರೀ ನರವಣೆಯವರನ್ನು ಹಣ್ಣುಗಾಯಿ ನೀರುಗಾಯಿ ಆಗುವಷ್ಟು ಹೊಡೆದು ಹತ್ಯೆಗೈದರು. ನಾಸಿಕ್ನಲ್ಲಿ ಪ್ರಭಾಕರ ಜೋಶಿ ಎನ್ನುವವರ ಮನೆ ಮೇಲೆ ಧಾಳಿ ಎಸಗಿದ ಕಾಂಗ್ರೆಸ್ಸಿಗರು ಕುಟುಂಬದ ಸದಸ್ಯರನ್ನು ಥಳಿಸಿ ಮನೆಯ ಸಾಮಾನುಗಳನ್ನು ಲೂಟಿ ಮಾಡಿದರು. ತುಂಬು ಗರ್ಭಿಣಿಯಾಗಿದ್ದ ಜೋಶಿ ಅವರ ಪತ್ನಿಯವರ ಮೇಲೂ ಹಲ್ಲೆಗೈದರು ಈ ನರ ರಾಕ್ಷಸರು. ಮಹಾರಾಷ್ಟ್ರದಲ್ಲಿ 25ಕ್ಕಿಂತ ಹೆಚ್ಚು ಜನರನ್ನು ಜೀವಂತ ದಹಿಸಲಾಗಿತ್ತು ಅಥವಾ ಕ್ರೂರವಾಗಿ ಕೊಲ್ಲಲಾಗಿತ್ತು. ಸಹಸ್ರಾರು ಶಾಂತಿಪ್ರಿಯ ನಾಗರಿಕರು ಮನೆಮಠ ಕಳೆದುಕೊಂಡು ನಿರ್ವಾಸಿತರಾಗಿದ್ದರು. ಅಂದಿನ ಬೆಲೆಯಲ್ಲಿ ಸುಮಾರು 20 ಕೋಟಿಯಷ್ಟು ಆಸ್ತಿಪಾಸ್ತಿ ನಷ್ಟವಾಗಿತ್ತು.
ನಾಥೂರಾಂ ಗೋಡ್ಸೆ ಮಹಾತ್ಮಾ ಗಾಂಧಿಯವರ ದೇಹವನ್ನಷ್ಟೇ ಕೊಲ್ಲಲು ಸಮರ್ಥನಾಗಿದ್ದ. ಆದರೆ, ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಕೊಳ್ಳಿಯಿಟ್ಟವರು ಗಾಂಧಿ ಅನುಯಾಯಿಗಳೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಕಾಂಗ್ರೆಸ್ಸಿಗರು. ಗಾಂಧೀಜಿಯವರು ಸತ್ಯಕ್ಕೆ ಅತ್ಯಂತ ನಿಷ್ಠರಾಗಿದ್ದರು, ಎಂದೂ ಅಸತ್ಯ ನುಡಿಯುತ್ತಿರಲಿಲ್ಲ. ಆದರೆ, ಅವರ ಅನುಯಾಯಿಗಳು ಆರೆಸ್ಸೆಸ್ ಗಾಂಧಿ ಕೊಂದಿತೆಂದು ಸುಳ್ಳು ಹೇಳಿಕೊಂಡು, ದೇಶಾದ್ಯಂತ ಕಗ್ಗೊಲೆ, ಲೂಟಿ ನಡೆಸಿದರು; ನ್ಯಾಯಾಲಯಗಳು ವಿಚಾರಣೆ ನಡೆಸಿ, ಆರೆಸ್ಸೆಸ್ಸಿಗೂ ಗಾಂಧಿ ಕೊಲೆಗೂ ಸಂಬಂಧವಿಲ್ಲ ಎಂದು ಹೇಳಿದರೂ, ಈ ಕಾಂಗ್ರೆಸ್ಸಿಗರಿಗೆ ಕೇಳಿಸುವುದಿಲ್ಲ. ಗಾಂಧೀಜಿಯವರ ಎಲ್ಲ ತತ್ವಗಳನ್ನೂ ಇವರು ಗಾಳಿಗೆ ತೂರಿರುವರು. ಕೇವಲ ಚುನಾವಣೆಗಳಲ್ಲಿ ಮತ ಗಳಿಸಲಿಕ್ಕಾಗಿ ತಾವು ಗಾಂಧಿ ಅನುಯಾಯಿಗಳೆಂದು ಅವರ ಚಿತ್ರಪಟ ಹಾಕಿಕೊಳ್ಳುವರು ಇವರು. ವಿಪರ್ಯಾಸವೆಂದರೆ, ಇವರು ಯಾರನ್ನು ಗಾಂಧಿ ಹಂತಕರೆಂದು ಕರೆಯುವರೋ ಆ ಆರೆಸ್ಸೆಸ್ಸಿನವರು ಗಾಂಧಿ ತತ್ವಗಳನ್ನು ಉಳಿಸಿದರು. ಕಾಂಗ್ರೆಸ್ಸಿಗರು ಆರೆಸ್ಸೆಸ್ ಮೇಲೆ ಇಷ್ಟೆಲ್ಲಾ ಆಕ್ರಮಣಗಳನ್ನು ನಡೆಸಿದರೂ, ಕೊಲೆಗಳನ್ನು ನಡೆಸಿದರೂ, ಆರೆಸ್ಸೆಸ್ ಸ್ವಯಂಸೇವಕರು ಪ್ರತ್ಯಾಕ್ರಮಣ ನಡೆಸಲಿಲ್ಲ. ಅವರು ಶಾಂತ ರೀತಿಯಿಂದ ಎಲ್ಲವನ್ನೂ ಅನುಭವಿಸಿದರು. ಸಂಕಟದ ಸಮಯದಲ್ಲಿಯೂ ಅವರು ಅಹಿಂಸೆಯ ಪರಮ ಆದರ್ಶವನ್ನು ಮೆರೆದು ಗಾಂಧೀಜಿಯವರ ತತ್ವಗಳನ್ನು ಜೀವನದಲ್ಲಿ ನಡೆದು ತೋರಿಸಿದರು.
ಲೇಖಕರು : ನರೇಂದ್ರ ಕುಮಾರ್ ಎಸ್. ಎಸ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.