ಭಾರತದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪಸರಿಸಿದ ಯೋಗಕ್ಕೀಗ ಯೋಗ ಯೋಗ. ಸ್ವತಃ ವಿಶ್ವಸಂಸ್ಥೆಯೇ ಯೋಗಕ್ಕೆಂದು ಒಂದು ದಿನವನ್ನು ಮೀಸಲಿಟ್ಟಿದೆ. ಈ ಮೂಲಕ ಭಾರತದ ಪುರಾತನ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡಿದೆ. ಇದಕ್ಕೆ ಭಾರತೀಯರಾದ ನಾವೆಲ್ಲರು ಹೆಮ್ಮೆ ಪಡಲೇ ಬೇಕು.
ನಮ್ಮ ಋಷಿಮುನಿಗಳ ತಪಸ್ಸು, ಇಚ್ಛಾಶಕ್ತಿಯಿಂದ ರೂಪುಗೊಂಡ ಯೋಗ ವಿಶ್ವಕ್ಕೆ ಭಾರತ ನೀಡಿದ ಅತ್ಯಮೂಲ್ಯ ಕೊಡುಗೆ. ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ಯೋಗ ವಹಿಸುತ್ತದೆ. ದಿನನಿತ್ಯದ ಜಂಜಾಟದಲ್ಲಿ ಸದಾ ಒತ್ತಡದಿಂದ ಬದುಕುವ ನಮಗೆ ಜೀವನೋತ್ಸಾಹ ತುಂಬುವ, ನವಚೈತನ್ಯ ನೀಡುವ ಶಕ್ತಿ, ಸಾಮರ್ಥ್ಯ ಯೋಗಕ್ಕಿದೆ.
ಯೋಗ ಕೇವಲ ಶಾರೀರಿಕ ಕಸರತ್ತು ಮಾತ್ರವಲ್ಲ, ಅದೊಂದು ಸಂಯಮದ, ಸಹಜ ಜೀವನ. ಶರೀರ, ಬುದ್ಧಿ, ಮನಸ್ಸು ಮತ್ತು ಆತ್ಮಗಳ ಸುಂದರ ಸಂಯೋಜನೆಯಿಂದ ನೆಮ್ಮದಿಯ ಸ್ವಸ್ಥಜೀವನ ನಡೆಸುವ ಜೀವನ ಪದ್ಧತಿ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಇವು ಯೋಗವಿದ್ಯೆಯ 8 ಹಂತಗಳು. ಈ ವಿದ್ಯೆಯನ್ನು ಕಲಿತರೆ ಅಮಿತ ಉತ್ಸಾಹದ ಜೀವನ ನಮ್ಮದಾಗುವುದರಲ್ಲಿ ಅನುಮಾನವಿಲ್ಲ.
’ಯೋಗಃ ಚಿತ್ತವೃತ್ತಿ ನಿರೋಧಃ’ ಎಂಬ ಮಾತಿದೆ. ಅಂದರೆ ಮನಸ್ಸಿನ ಚಂಚಲತೆಯನ್ನು ದೂರಗೊಳಿಸಿ ಏಕಾಗ್ರತೆಯನ್ನು ಸಾಧಿಸಲು ಯೋಗ ಸಹಕಾರಿ ಎಂಬುದು ಇದರ ಅರ್ಥ. ಮನಸ್ಸಿನ ಉದ್ವಿಗ್ನತೆಯನ್ನು ನಿವಾರಿಸಿ ಶಾಂತಗೊಳಿಸಲು ಯೋಗದಿಂದ ಸಾಧ್ಯ. ಬದುಕಿನ ಏರಿಳಿತಗಳಿಂದ ಧೃತಿಗೆಡದೆ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಜೀವನೋತ್ಸಾಹವನ್ನು ಹೆಚ್ಚಿಸುವ ಕಲೆಯೇ ಯೋಗ. ಜೀವನದಲ್ಲಿ ಯಶಸ್ಸಿಗೆ ದೇಹದ ದೃಢತೆ, ಆರೋಗ್ಯದೊಂದಿಗೆ ಮನಸ್ಸು, ಬುದ್ಧಿಗಳ ಕ್ಷಮತೆ, ಏಕಾಗ್ರತೆ, ಸ್ಮರಣಶಕ್ತಿ ಪ್ರಮುಖ ಪಾತ್ರವಹಿಸುತ್ತವೆ. ಯೋಗಾಭ್ಯಾಸದಿಂದ ಇದನ್ನು ಸಾಧಿಸಲು ಸಾಧ್ಯ.
ಯೋಗ ದಿನಾಚರಣೆಯ ಮೂಲಕ ನಮಗೆ ಭಾರತ ಮತ್ತು ಅದರ ಮೌಲ್ಯಗಳ ಶ್ರೇಷ್ಠತೆಯನ್ನು ವಿಶ್ವಕ್ಕೆ ಮನಗಾಣಿಸುವ ಸದವಕಾಶ ಲಭಿಸಿದೆ. ನಾವೂ ಆರೋಗ್ಯವಂತರಾಗಿ, ಇತರರನ್ನೂ ಆರೋಗ್ಯವಂತರನ್ನಾಗಿಸಲು ದೊರೆತ ಭಾಗ್ಯ ಇದಾಗಿದೆ. ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ದಿನನಿತ್ಯದ ಜೀವನದಲ್ಲಿ ನಾವು ಸ್ವಲ್ಪ ಸಮಯವನ್ನು ಯೋಗಾಭ್ಯಾಸಕ್ಕೆ ಮೀಸಲಿಡುವುದು ಅತ್ಯವಶ್ಯಕವಾಗಿದೆ, ನಮ್ಮ ಆಚಾರ-ವಿಚಾರಗಳನ್ನು, ಆಹಾರ-ವಿಹಾರಗಳನ್ನು, ನಡೆ-ನುಡಿಗಳನ್ನು ಯೋಗ ವಿದ್ಯೆಗೆ ಅನುಗುಣವಾಗಿ ರೂಪಿಸಬೇಕು. ಈ ಮೂಲಕ ಭಾರತೀಯ ಪುರಾತನ ಕಲೆಯ ಮಹತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯ ಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.