“ಮಹತ್ಕಾರ್ಯ ಸಾಧನೆಗೆ ಅಪಾರ ತಾಳ್ಮೆ, ಕಡುದಿಟ್ಟತನ ಹಾಗು ತೀವ್ರ ಪ್ರಯತ್ನ ಇರಬೇಕು.” ಎಂಬ ಸ್ವಾಮಿ ವಿವೇಕಾನಂದರ ಸಂದೇಶದ ಮೂಲಕ ಇಂದಿನ ಈ ಸಾಧಕಿಯ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತೇನೆ.
ಸ್ಪಷ್ಟ ಗುರಿ ನಿರ್ಧರಿಸಿ, ಅದರತ್ತ ನಿತ್ಯ ಲಕ್ಷ್ಯ ವಹಿಸಿದರೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ; ಕಷ್ಟಗಳು ಬಂದಾಗ ಕೊರಗಬೇಡಿ, ಸಮಸ್ಯೆಗಳನ್ನು ಅವಕಾಶವಾಗಿ ಬದಲಿಸಿಕೊಳ್ಳಿ. ಅದೆಲ್ಲ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದಾಗ ಇಡೀ ಪ್ರೇಕ್ಷಕ ಸಮೂಹ ತನಗೆ ತಾನೇ ಕೈಜೋಡಿಸಿತು.
ಆಕೆ ಹೆಣ್ಣಾದರೂ ಅವಳ ಕನಸು ಮಾತ್ರ ಮಹತ್ತರವಾದದ್ದಾಗಿತ್ತು. ತನ್ನ ಅಸಹಾಯಕತೆಯನ್ನು ನೆನೆದು ಆಗಾಗ ದುಃಖಕ್ಕೆ ಒಳಗಾಗುತ್ತಿದ್ದಳು. ಆದರೂ ತನ್ನ ಗುರಿಯನ್ನು ಮರೆತಿರಲಿಲ್ಲ. ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಅನ್ನುವುದೊಂದೇ ಅವಳ ಛಲ. ಆ ಛಲದೊಂದಿಗೆ ಒಂದು ನಿರ್ದಿಷ್ಟ ಗುರಿಯ ಕನಸು ಅವಳದ್ದು. ಈಗ ಅವಳನ್ನು ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕೊಂಡಾಡುತ್ತಿದೆ.
ಹೌದು, ಆ ಛಲಗಾರ್ತಿ ಹೆಸರು ಅರುಣಿಮಾ ಸಿನ್ಹಾ. ಇವರು ವಿಶ್ವದ ಅತಿದೊಡ್ಡ ಹಿಮಪರ್ವತ, ಮೌಂಟ್ ಎವೆರೆಸ್ಟ್ ಏರಿದ ಪ್ರಪಂಚದ ಹಾಗೂ ಭಾರತದ ಮೊದಲ ಮಹಿಳೆ. ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಧೀರನಾರಿಯ ಲೈಫ್ ಸ್ಟೋರಿ ಇಲ್ಲಿದೆ.
ಅರುಣಿಮಾ ಸಿನ್ಹಾ, ಉತ್ತರ ಪ್ರದೇಶ, ಲಕ್ನೋ ಸಮೀಪದ ಅಂಬೇಡ್ಕರ್ ನಗರ ಎನ್ನುವ ಸಣ್ಣ ಪಟ್ಟಣದಲ್ಲಿ 1988 ಜುಲೈ 20ರಂದು ಜನಿಸಿದರು. ಇವರು 3ನೇ ವಯಸ್ಸಿನಲ್ಲಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡರು. ತಂದೆ ಭಾರತೀಯ ಸೇನೆಯಲ್ಲಿ ಇಂಜಿನಿಯರ್ ಆಗಿದ್ದರು. ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿ.
ಚಿಕ್ಕ ವಯಸ್ಸಿನಿಂದಲೂ ಆಟದಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲ್ನಲ್ಲಿ ತನ್ನದೇ ಆದ ಪ್ರತಿಭೆಯನ್ನು ಹೊಂದಿದ್ದರು. ಅವರ ಆಟದ ಚತುರತೆಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾರ್ತಿಯಾಗಿ ಮಿಂಚಿದರು. ತನ್ನ ಕ್ರೀಡಾ ಆಸಕ್ತಿಯನ್ನು ಸಿಎಸ್ಐಎಫ್ನಲ್ಲಿ ಅನ್ವಯಿಸಲು ನಿರ್ಧರಿಸಿದರು.
ಈ ನಡುವೆ ದೆಹಲಿಯಿಂದ ಒಂದು ಕರೆ ಪತ್ರ ಬಂದಿತ್ತು. ಆ ಕರೆ ಪತ್ರ ಮೇಲ್ನೋಟಕ್ಕೆ ಆಕೆಗೊಂದು ಅದೃಷ್ಟವಾಗಿದ್ದುದಾಗಿದ್ದರೂ ಆಕೆಯ ಬದುಕಿನ ತಿರುವು ಮಾತ್ರ ದುಃಖಕರವಾಗಿತ್ತು.
ಉತ್ತರಪ್ರದೇಶದ ಅಂಬೇಡ್ಕರ್ ನಗರದ ಅರುಣಿಮಾ ಸಿನ್ಹಾ ಪ್ರಬಲ ಇಚ್ಛಾಶಕ್ತಿಗೆ ಇತ್ತೀಚಿನ ಮಾದರಿಯಾಗಿದ್ದಾಳೆ. ಸಿ.ಐ.ಎಸ್.ಎಫ್ ಪರೀಕ್ಷೆಗೆ ಹೋಗುವ ಸಲುವಾಗಿ ಲಕ್ನೌನಿಂದ ದೆಹಲಿಗೆ ಹೋಗುವ ಪದ್ಮಾವತಿ ಎಕ್ಸ್ಪ್ರೆಸ್ ರೈಲಿಗೆ 11.4.2011 ರಲ್ಲಿ ಹತ್ತಿ ಕುಳಿತಾಗ ಆಕೆಯ ವಯಸ್ಸು 23 ವರ್ಷಗಳು. ಮಾರ್ಗಮಧ್ಯದಲ್ಲಿ ಕಳ್ಳರು ಆಕೆಯ ಚೀಲ ಮತ್ತು ಸರವನ್ನು ಕಿತ್ತುಕೊಳ್ಳಲು ಬಂದಾಗ ಪ್ರತಿಭಟಿಸಿದ್ದ ಅವಳನ್ನು ಚಲಿಸುತ್ತಿದ್ದ ರೈಲಿನಿಂದ ಅವರು ಹೊರಗೆ ಎಸೆದುಬಿಟ್ಟಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬರುತ್ತಿದ್ದ ರೈಲಿಗೆ ಸಿಕ್ಕಿ ಅವಳ ಕಾಲು ಜರ್ಜರಿತವಾಗಿತ್ತು. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವಳನ್ನು ಆ ಸ್ಥಿತಿಯಲ್ಲಿ ಕಂಡಿದ್ದವರಿಗೆ ಅವಳು ಬದುಕುವ ಬಗ್ಗೆ ಸಂದೇಹವಿತ್ತು. ಜೀವ ಉಳಿಸಲು ಆಸ್ಪತ್ರೆಯಲ್ಲಿ ಆಕೆಯ ಕಾಲನ್ನು ಮೊಳಕಾಲಿನಿಂದ ಕೆಳಕ್ಕೆ ಕತ್ತರಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಆಕೆಗೆ ಇದರಿಂದ ಆಘಾತವಾಗಿತ್ತು. ಆಕೆಗೆ ಕೇಂದ್ರ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕ ನೆರವು ದೊರೆಯಿತು. ಖಾಸಗಿ ಕಂಪೆನಿಯೊಂದು ಆಕೆಗೆ ಉಚಿತವಾಗಿ ಕೃತಕ ಕಾಲು ಅಳವಡಿಸಲು ನೆರವಾಯಿತು. ಅಲಹಾಬಾದ್ ಉಚ್ಛನ್ಯಾಯಾಲಯ ರೈಲ್ವೆಯವರು ಆಕೆಗೆ ರೂ. 5 ಲಕ್ಷ ಪರಿಹಾರಧನ ನೀಡಬೇಕೆಂದು ಆದೇಶಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಕೆ ಎವರೆಸ್ಟ್ ಶಿಖರವನ್ನು ಏರುವ ಕನಸು ಕಂಡದ್ದು.
ಕ್ಯಾನ್ಸರ್ ಗೆದ್ದು ಬಂದಿದ್ದ ಕ್ರಿಕೆಟಿಗ ಯುವರಾಜಸಿಂಗ್ನಿಂದ ಆಕೆ ‘ಏನನ್ನಾದರೂ ಸಾಧಿಸಬೇಕೆಂದು’ ಪ್ರೇರಿತಳಾಗಿದ್ದಳು. ಮೌಂಟನಿಯರಿಂಗ್ ಕೋರ್ಸಿಗೆ ಸೇರಿದ ಅಕೆ ಅದರ ಪ್ರಾಥಮಿಕ ವಿಷಯಗಳಲ್ಲಿ ಅಗ್ರಗಣ್ಯತೆ ಗಳಿಸಿದಳು. ವಡೋದರದ ಸ್ವಾಮಿ ರಾಮಕೃಷ್ಣ ಮಿಶನ್ನಿನ ಸಹಾಯದಿಂದ ಕೃತಕ ಕಾಲಿನಿಂದ ಎವರೆಸ್ಟ್ ಏರುವ ಆಸೆಗೆ ಬೆಂಬಲ ಸಿಕ್ಕಿತು. ಎವರೆಸ್ಟ್ ಏರಿದ ಪ್ರಥಮ ಮಹಿಳೆ ಬಚೇಂದ್ರಿಪಾಲಳಿಂದ ಅಗತ್ಯದ ತರಬೇತಿ ಪಡೆದಳು. ಪೂರ್ವಭಾವಿಯಾಗಿ 6150 ಮೀಟರ್ ಎತ್ತರದ ಐಲೆಂಡ್ ಶಿಖರವನ್ನು 2012 ರಲ್ಲಿ ಯಶಸ್ವಿಯಾಗಿ ಏರಿದ್ದಳು. 1.4.2013 ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013 ರಂದು ತಲುಪಿಯೇಬಿಟ್ಟಳು! ಶಿಖರವೇರಿದ ಆಕೆ ಒಂದು ಸಂದೇಶವನ್ನು ಬರೆದು ಬಟ್ಟೆಯಲ್ಲಿ ಸುತ್ತಿ ಹಿಮದಲ್ಲಿ ಹೂತಿಟ್ಟಳು. ಆಕೆಯೇ ಹೇಳಿದಂತೆ ಅದು, “ಶಂಕರ ಭಗವಾನ್ ಮತ್ತು ಜೀವನದುದ್ದಕ್ಕೂ ತನಗೆ ಚೈತನ್ಯದಾಯೆನಿಸಿದ್ದ ಸ್ವಾಮಿ ವಿವೇಕಾನಂದರಿಗೆ ಕೃತಜ್ಞತೆಯಾಗಿತ್ತು”. ಕೈಕಾಲುಗಳು ಗಟ್ಟಿಯಾಗಿರುವವರಿಗೇ ಕಷ್ಟವೆನಿಸುವ ಆ ಕೆಲಸ ಆಕೆಗೆ ಸಾಧ್ಯವಾಗಿಸಿದ್ದು ಆಕೆಯ ಇಚ್ಛಾಶಕ್ತಿ! ನಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಬಗ್ಗೆಯೇ ನಮಗೆ ನಂಬಿಕೆ ಮತ್ತು ವಿಶ್ವಾಸಗಳಿರಬೇಕು.
ಮೌನ್ಟ್ ಎವರೆಸ್ಟ್ ಹತ್ತಿ ಹೆಣ್ಣೊಬ್ಬಳು ಮನ್ನಸ್ಸು ಮಾಡಿದರೆ ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂದು ತೋರಿಸಿಕೊಟ್ಟ ಪ್ರೀತಿಯ ಅರುಣಿಮಾ ಸಿನ್ಹಾ ಮತ್ತೊಂದು ಸಾಧನೆಯ ಮೂಲಕ ವಿಶ್ವದಲ್ಲಿಯೇ ಭಾರತದ ಹೆಸರನ್ನು ಅತೀ ಎತ್ತರಕ್ಕೆ ಏರಿಸಿದ್ದಾರೆ.
ಅರುಣಿಮಾ ಸಿನ್ಹಾ ಎಂಬ ವಿಕಲಚೇತನ ಮಹಿಳೆ ಅಂಟಾರ್ಟಿಕಾದ ಅತೀ ಎತ್ತರದ ಶಿಖರ ಮೌಂಟ್ ವಿನ್ಸನ್ ಅನ್ನು ಏರಿರುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ವಿಕಲಚೇತನ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಭಾರತದ ಧ್ವಜವನ್ನು ಎತ್ತರದ ಶಿಖರಗಳ ಮೇಲೆ ಹಾರಿಸುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ.
ಎಕ್ಸಲೆಂಟ್..! ಯಶಸ್ಸಿನ ಹೊಸ ಮಾಪನವನ್ನು ಸೃಷ್ಟಿಸಿದ ಅರುಣಿಮಾ ಸಿನ್ಹಾ ಅವರಿಗೆ ಅಭಿನಂದನೆಗಳು….” ಎಂದು ಪ್ರಧಾನಿ ನರೇಂದ್ರ ಮೋದಿಯವರು ಆಕೆಯನ್ನು ಬಾಯ್ತುಂಬ ಹೊಗಳಿದ್ದಾರೆ.
ಹಾ! ಯಾವುದಾದರೂ ಸಾಧನೆ ಮಾಡಬೇಕು ಎಂಬ ಗುರಿ ಕಣ್ಮುಂದಿದ್ದರೆ, ಅದನ್ನು ಮಾಡಿಯೇ ತೀರುವೆ ಎಂಬ ಅಪಾರ ನಂಬಿಕೆ ನಮ್ಮಲ್ಲಿ ತುಂಬಿದ್ದಲ್ಲಿ ಮನೋಬಲ ದೇಹಬಲ ಆತ್ಮಬಲ ಗಟ್ಟಿಯಾದರೆ ಆ ಗುರಿಯನ್ನು ಸಾಧಿಸಿಯೇ ತೋರುತ್ತೇವೆ ಎಂಬುದಕ್ಕೆ ಅರುಣಿಮಾ ಸಿನ್ಹಾ ದಿಟ್ಟ ಉದಾಹರಣೆ. ಆಕೆಯ ಪರಿಶ್ರಮ ಆಕೆಯ ಈ ಸಾಧನಾ ಮಾರ್ಗ ಅನೇಕರಿಗೆ ಪ್ರೇರಣೆಯಾಗಲಿ. ಆಕೆ ಇನ್ನಷ್ಟು ಸಾಧನೆಯನ್ನು ಮಾಡಿ ಭಾರತೀಯ ನಾರಿಯರ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.