ಹೆರಾಲ್ಡ್ ಹೌಸ್ನ ಸಂಪೂರ್ಣ ಇತಿಹಾಸ ತಿಳಿದರೆ ಭ್ರಷ್ಟಾಚಾರವನ್ನು ಹೀಗೂ ಮಾಡಬಹುದೇ ಎಂದು ನೀವು ಅಚ್ಚರಿಪಡುವುದು ಖಂಡಿತ. ಹಾಗಾದರೆ ಇನ್ನೇಕೆ ತಡ? ಇನ್ನೇನು ಬಾಗಿಲು ಮುಚ್ಚಲಿರುವ ಹೆರಾಲ್ಡ್ ಹೌಸ್ ಇತಿಹಾಸವನ್ನೊಮ್ಮೆ ಮೆಲುಕು ಹಾಕುವ ಮೂಲಕ ಅದು ದೇಶಕ್ಕೆ ಕಲಿಸಿದ ಭ್ರಷ್ಟಾಚಾರದ ಪಾಠಗಳನ್ನು ಒಂದೊಂದಾಗಿ ನೋಡಿ ಬರೋಣ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ನ ಕಚೇರಿಯನ್ನು ಎರಡು ವಾರಗೊಳಗಾಗಿ ಖಾಲಿ ಮಾಡಿ ಆ ಕಟ್ಟಡವನ್ನು ಕೇಂದ್ರ ಸರ್ಕಾರದ ವಶಕ್ಕೆ ಒಪ್ಪಿಸುವಂತೆ ದೆಹಲಿಯ ಹೈಕೋರ್ಟ್ ಆದೇಶ ನೀಡಿದೆ. ಅಲ್ಲಿಗೆ ಭ್ರಷ್ಟಾಚಾರದ ಪಾಠಶಾಲೆಯೆಂದೇ ಕುಖ್ಯಾತವಾಗಿದ್ದ ‘ಹೆರಾಲ್ಡ್ ಹೌಸ್’ ಎನ್ನುವ ಕಟ್ಟಡದ ಬಾಗಿಲಿಗೆ ಬೀಗ ಬೀಳುವುದು ಬಹುತೇಕ ಖಚಿತವಾದಂತಾಗಿದೆ. ಅ.30ರಂದು ಕೇಂದ್ರ ಸರ್ಕಾರ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ನ ಕಚೇರಿ ಕಟ್ಟಡವನ್ನು ಖಾಲಿಗೊಳಿಸುವಂತೆ ನೋಟಿಸ್ ನೀಡಲಾಗಿತ್ತಾದರೂ ಎಜೆಎಲ್ ಆ ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕಾಂಗ್ರೆಸ್ ಪಕ್ಷದ ಮುಖವಾಣಿ ‘ನ್ಯಾಷನಲ್ ಹೆರಾಲ್ಡ್’ ಮತ್ತು ‘ನವಜೀವನ್’ ಪತ್ರಿಕಾ ಕಚೇರಿಗಳಿವೆ ಎಂದು ತೋರಿಸಿಕೊಂಡು ಬರಲಾಗುತ್ತಿದ್ದ ‘ಹೆರಾಲ್ಡ್ ಹೌಸ್’ ಕಟ್ಟಡವನ್ನು ಖಾಲಿ ಮಾಡಲೇಬೇಕಾದ ಅನಿವಾರ್ಯತೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಎದುರಾಗಿದೆ. ಆ ಮೂಲಕ ಈ ದೇಶದಲ್ಲಿರುವ ಭ್ರಷ್ಟಾಚಾರದ ಅತ್ಯಂತ ಪ್ರತಿಷ್ಠಿತ ಪಾಠಶಾಲೆಯೊಂದರ ಬಾಗಿಲು ಶಾಶ್ವತವಾಗಿ ಮುಚ್ಚಿದಂತಾಗಲಿದೆ.
ಹಾಗಾದರೆ ಈಗ ಖಾಲಿ ಮಾಡಬೇಕಾಗಿ ಬಂದಿರುವ ‘ಹೆರಾಲ್ಡ್ ಹೌಸ್’ ಗೂ ಮತ್ತು ಭ್ರಷ್ಟಾಚಾರಕ್ಕೂ ಏನು ಸಂಬಂಧ ಎನ್ನುವ ಬಗ್ಗೆ ಕುತೂಹಲವಿರುವುದಂತೂ ಖಂಡಿತ. ಕೇವಲ ಭ್ರಷ್ಟಾಚಾರವಲ್ಲ, ಹೆರಾಲ್ಡ್ ಹೌಸ್ನ ಸಂಪೂರ್ಣ ಇತಿಹಾಸವನ್ನೊಮ್ಮೆ ತಿಳಿದರೆ ಭ್ರಷ್ಟಾಚಾರವನ್ನು ಹೇಗೆಲ್ಲಾ ಮಾಡಬಹುದೆನ್ನುವ ಸಂಪೂರ್ಣ ತಿಳುವಳಿಕೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಗಳಿಸಿಕೊಳ್ಳಬಹುದಾಗಿದೆ. ಅಷ್ಟೊಂದು ರೋಚಕ ಇತಿಹಾಸ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಮತ್ತದರ ಹೆರಾಲ್ಡ್ ಹೌಸ್ಗಿದೆ. ಹಾಗಾದರೆ ಇನ್ನೇಕೆ ತಡ? ಹೆರಾಲ್ಡ್ ಹೌಸ್ ಇತಿಹಾಸವನ್ನೊಮ್ಮೆ ಮೆಲುಕು ಹಾಕುವ ಮೂಲಕ ಅದು ಕಲಿಸಿದ ಭ್ರಷ್ಟಾಚಾರದ ಪಾಠಗಳನ್ನು ಒಂದೊಂದಾಗಿ ನೋಡಿ ಬರೋಣ.
ಪಾಠ ಒಂದು: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಎನ್ನುವ ಮಾಧ್ಯಮ ಸಂಸ್ಥೆಯನ್ನು ಸಾವಿರಾರು ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರ ಸಹಭಾಗಿತ್ವದೊಂದಿಗೆ ನೆಹರೂರವರು ಆರಂಭಿಸಿದರು. ಆಗ ಆ ಸಂಸ್ಥೆಯು ಕೇವಲ ಅವರೊಬ್ಬರದ್ದೇ ಮಾಲೀಕತ್ವದ್ದಾಗಿರಲಿಲ್ಲ. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಅದರ ಷೇರುದಾರರಾಗಿದ್ದರು. ಆದರೆ ನಂತರದಲ್ಲಿ 1946-50ರ ತನಕ ನೆಹರು ಅವರ ಅಳಿಯ ಫಿರೋಜ್ ಗಾಂಧಿ ಅವರನ್ನು ಅದರ ಎಂ.ಡಿ.ಯನ್ನಾಗಿ ನೇಮಕ ಮಾಡಲಾಯಿತು. ನಂತರದ ದಿನಗಳಲ್ಲಿ ನೆಹರೂ ಮನೆತನದವರು ಎಜೆಎಲ್ನ ಸಂಪೂರ್ಣ ಮಾಲೀಕರೇ ಎನ್ನುವಂತೆ ಗುರುತಿಸಿಕೊಂಡರು. ಹೀಗೆ ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ಕಟ್ಟಲಾದ ಸಂಸ್ಥೆಯೊಂದನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಜಾಣತನವನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ಮೊದಲ ಪಾಠ ಎಂದುಕೊಳ್ಳಬಹುದಾಗಿದೆ.
ಪಾಠ ಎರಡು: 1968ರಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಮಾಲೀಕತ್ವದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಲಖನೌ ಆವೃತ್ತಿ ಹೊಂದಿತ್ತು. ಬಹುತೇಕ ಇದೇ ಅವಧಿಯಲ್ಲಿ ಲಖನೌನಿಂದ ದೆಹಲಿಯ ‘ಹೆರಾಲ್ಡ್ ಹೌಸ್’ಗೆ ಪತ್ರಿಕಾ ಕಚೇರಿ ಸ್ಥಳಾಂತರಗೊಂಡಿತ್ತು. ರಾಷ್ಟ್ರ ರಾಜಧಾನಿ ದೆಹಲಿಯ ಪ್ರಮುಖ ರಸ್ತೆಯಲ್ಲಿರುವ ಬೃಹತ್ ಕಟ್ಟಡವನ್ನು ಪತ್ರಿಕೆಯ ಕೆಲಸಗಳಿಗೆಂದು ಅತ್ಯಂತ ರಿಯಾಯಿತಿ ದರದಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಸಂಸ್ಥೆಗೆ ದೀರ್ಘಾವಧಿಯ ಭೋಗ್ಯಕ್ಕೆ ನೀಡಲಾಯಿತು. ಆ ಸಮಯದಲ್ಲಿ ನೆಹರೂ ಅವರ ಮಗಳು ಹಾಗೂ ಅದೇ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಸಂಸ್ಥೆಯ ಮಾಜಿ ಎಂಡಿ ಫಿರೋಜ್ ಗಾಂಧಿ ಅವರ ಪತ್ನಿ ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಿಯಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ. ಹೀಗೆ ತಮ್ಮ ಕುಟುಂಬದ ಮಾಲೀಕತ್ವದ ಸಂಸ್ಥೆಯೊಂದಕ್ಕೆ ತಮ್ಮದೇ ಅಧಿಕಾರಾವಧಿಯಲ್ಲಿ ದೇಶದ ರಾಜಧಾನಿಯಲ್ಲೊಂದು ಬೃಹತ್ ಕಟ್ಟಡವನ್ನು ಅತ್ಯಂತ ಕಡಿಮೆ ದರಕ್ಕೆ, ಅತ್ಯಂತ ಧೀರ್ಘ ಅವಧಿಗೆ ಭೋಗ್ಯಕ್ಕೆ ಪಡೆದ ಜಾಣತನವನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ಎರಡನೆಯ ಪಾಠ ಎಂದುಕೊಳ್ಳಬಹುದಾಗಿದೆ.
ಪಾಠ ಮೂರು: 2010 ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮುಂತಾದವರು ಸೇರಿ ಕೇವಲ ಐದು ಲಕ್ಷದ ಮೂಲಧನದೊಂದಿಗೆ ‘ಯಂಗ್ ಇಂಡಿಯನ್’ ಎನ್ನುವ ಕಂಪನಿಯೊಂದನ್ನು ಹುಟ್ಟುಹಾಕಿದರು. ಆ ಕಂಪನಿಯ ಕಚೇರಿಯನ್ನು ಕೂಡಾ ಹೆರಾಲ್ಡ್ ಹೌಸ್ನಲ್ಲಿಯೇ ನೋಂದಾಯಿಸಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೇ ಆ ಕಂಪನಿಯ ಶೇ.76ರಷ್ಟು ಷೇರುಗಳ ಒಡೆತನ ಹೊಂದಿದ್ದಾರೆ. ಉಳಿದ ಶೇ.24 ಷೇರುಗಳು ಕೂಡಾ ಅವರ ಕುಟುಂಬದ ಅತ್ಯಾಪ್ತರೇ ಆದ ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್ ಮುಂತಾದವರ ಹೆಸರಿನಲ್ಲಿದೆ. ನಂತರ ಎಜೆಎಲ್ನ ಶೇ 99ರಷ್ಟು ಷೇರುಗಳನ್ನು ‘ಯಂಗ್ ಇಂಡಿಯನ್’ ಕಂಪನಿ ಪಡೆದುಕೊಂಡಿತು. ಎಜೆಎಲ್ನ ಷೇರುಗಳನ್ನು ಖರೀದಿಸಿದ ಕಾರಣ ಅದರ ಎಲ್ಲಾ ಆಸ್ತಿಗಳೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನೇತೃತ್ವದ ಯಂಗ್ ಇಂಡಿಯನ್ ಕಂಪನಿಗೆ ರಹಸ್ಯವಾಗಿ ವರ್ಗವಾದಂತಾಯಿತು. ಹೀಗೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಪಾಲುದಾರಿಕೆಯೊಂದಿಗೆ ಪ್ರಾರಂಭವಾದ ಸಂಸ್ಥೆಯೊಂದನ್ನು, ತಮ್ಮದೇ ಕಂಪನಿಯೊಂದನ್ನು ಹುಟ್ಟುಹಾಕಿ,ಅದರ ಮೂಲಕ ಆ ಹಳೆಯ ಕಂಪನಿಯ ಷೇರುಗಳನ್ನು ಖರೀದಿಸಿ, ದೇಶದಾದ್ಯಂತ ನೂರಾರು ಕೋಟಿಗಳ ಆಸ್ತಿ ಹೊಂದಿರುವ ಆ ಸಂಸ್ಥೆಯನ್ನು ಸಂಪೂರ್ಣವಾಗಿ ತಮ್ಮ ಕೈ ವಶ ಮಾಡಿಕೊಂಡ ಜಾಣತನವನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ಮೂರನೆಯ ಪಾಠ ಎಂದುಕೊಳ್ಳಬಹುದಾಗಿದೆ.
ಪಾಠ ನಾಲ್ಕು: ಆ ಕಡಿಮೆ ದರದಲ್ಲಿ ದೇಶದ ಅತ್ಯಂತ ಪ್ರಮುಖ ಸ್ಥಳದಲ್ಲಿದ್ದ ಆ ಕಟ್ಟಡವನ್ನು ಪತ್ರಿಕಾಲಯದ ಹೆಸರಿನಲ್ಲಿ ಅತ್ಯಂತ ಕಡಿಮೆ ದರಕ್ಕೆ ಭೋಗ್ಯಕ್ಕೆ ಪಡೆದ ಸಂಸ್ಥೆ ಆ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿತ್ತು. ಗಾಂಧಿ ಕುಟುಂಬವು ತಮ್ಮದೇ ಸರ್ಕಾರದ ಅವಧಿಯಲ್ಲಿ ತಮ್ಮ ಪ್ರಭಾವ ಬಳಸಿ ಆ ಕಟ್ಟಡದ ಎರಡು ಮಹಡಿಗಳನ್ನು ಭಾರೀ ಮೊತ್ತದ ಬಾಡಿಗೆ ನಿಗದಿಪಡಿಸಿ, ಅಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ತೆರೆಯುವಂತೆ ನೋಡಿಕೊಂಡಿತು. ಅಂದು ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರೇ ಆ ಕೇಂದ್ರವನ್ನು ಉದ್ಘಾಟಿಸಿದ್ದರು. ಸರ್ಕಾರದಿಂದ ಸಂದಾಯವಾಗುತ್ತಿದ್ದ ಆ ಬೃಹತ್ ಬಾಡಿಗೆ ಮೊತ್ತವು ತಮ್ಮದೇ ಮಾಲೀಕತ್ವದ ಯಂಗ್ ಇಂಡಿಯನ್ ಕಂಪನಿಗೆ ಸಂದಾಯವಾಗುವಂತೆ ನೋಡಿಕೊಳ್ಳಲಾಯಿತು. ತಮ್ಮದೇ ಮಾಲೀಕತ್ವದ ಕಂಪನಿಯೊಂದರ ಕಚೇರಿಗಾಗಿ, ಹಿಂದಿನ ತಮ್ಮದೇ ಸರ್ಕಾರದ ಅವಧಿಯಲ್ಲಿ ಭೋಗ್ಯಕ್ಕೆ ಪಡೆದಿದ್ದ ಕಟ್ಟಡದಲ್ಲಿ ಸರ್ಕಾರದ ಇಲಾಖೆಯೇ ಬಾಡಿಗೆಗೆ ಬರುವಂತೆ ಮಾಡಿಕೊಂಡು, ಆ ಬಾಡಿಗೆ ಹಣವನ್ನು ತಮ್ಮದೇ ಮಾಲೀಕತ್ವದ ಇನ್ನೊಂದು ಕಂಪನಿಗೆ ವರ್ಗಾಯಿಸಿಕೊಳ್ಳುವ ಜಾಣತನವನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ನಾಲ್ಕನೆಯ ಪಾಠ ಎಂದುಕೊಳ್ಳಬಹುದಾಗಿದೆ.
ಪಾಠ ಐದು: ಪತ್ರಿಕಾಲಯಕ್ಕೆಂದೇ ಧೀರ್ಘಾವಧಿಗೆ ಭೋಗ್ಯಕ್ಕೆ ಪಡೆದಿದ್ದ ಆ ಕಟ್ಟಡದಲ್ಲಿ ದಶಕದಿಂದಲೂ ಪತ್ರಿಕಾ ಚಟುವಟಿಕೆಗಳು ನಡೆಯುತ್ತಲೇ ಇಲ್ಲ. ಬಹಳ ವರ್ಷಗಳ ಹಿಂದೆಯೇ ಪತ್ರಿಕೆಗಳ ಪ್ರಕಟಣೆ ಕೂಡಾ ಸಂಪೂರ್ಣವಾಗಿ ನಿಂತುಹೋಗಿತ್ತು. ಆ ಕಟ್ಟಡವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾ ಬರಲಾಗಿತ್ತು. ಎರಡು ವರ್ಷಗಳ ಹಿಂದೆ ಪತ್ರಿಕೆಯ ಪ್ರಕಟಣೆ ಆರಂಭಿಸಲಾಗಿದೆ ಎಂದು ಕಂಪನಿ ಹೇಳುತ್ತಿದ್ದರೂ, ಅದರ ಪ್ರಸಾರ ಸಂಖ್ಯೆಯ ವಿವರವನ್ನು ನ್ಯಾಯಾಲಯಕ್ಕೆ ಅದು ಸಲ್ಲಿಸಿಯೇ ಇರಲಿಲ್ಲ. ಆದರೆ ಆರೋಪದಿಂದ ಪಾರಾಗುವ ಉದ್ದೇಶದಿಂದಲೇ ಪತ್ರಿಕೆಯ ವೆಬ್ಸೈಟ್ ಆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತೋರಿಸಲಾಯಿತು. ಅರೆ! ಇದೀಗ ನೀವು ಈ ಬರಹವನ್ನು ಓದುತ್ತಿರುವುದು ಕೂಡಾ ಒಂದು ವೆಬ್ಸೈಟ್ನಲ್ಲಿಯೇ. ಹಾಗಾದರೆ ನಮ್ಮ ವೆಬ್ಸೈಟ್ ನಿರ್ವಹಿಸಲು ದೆಹಲಿಯ ಪ್ರಮುಖ ರಸ್ತೆಯಲ್ಲಿ ನೂರಾರು ಕೋಟಿ ಬೆಲೆ ಬಾಳುವ ಬಹುಮಹಡಿ ಕಟ್ಟಡದ ಅವಶ್ಯಕತೆಯಿದೆಯೇ? ಹೀಗೆ ಒಂದು ವೆಬ್ಸೈಟ್ ತೋರಿಸಿ ನೂರಾರು ಕೋಟಿ ಬೆಲೆ ಬಾಳುವ ಕಟ್ಟಡವನ್ನು ತಮ್ಮ ಆಸ್ತಿಯನ್ನಾಗಿ ಉಳಿಸಿಕೊಳ್ಳಲು ನೋಡಿದ ಬುದ್ಧಿವಂತಿಕೆಯನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ಐದನೆಯ ಪಾಠ ಎಂದುಕೊಳ್ಳಬಹುದಾಗಿದೆ.
ಪಾಠ ಆರು: ಕೇವಲ ಐದು ಲಕ್ಷ ಮೂಲ ಬಂಡವಾಳ ಹೊಂದಿದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ‘ಯಂಗ್ ಇಂಡಿಯನ್’ ಕಂಪನಿ ಎಜೆಎಲ್ ಕಂಪನಿಯನ್ನು ಖರೀದಿಸಲು ಹೇಗೆ ಸಾಧ್ಯವಾಯಿತು ಎನ್ನುವುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಸಿಗುವ ಉತ್ತರ ಇನ್ನಷ್ಟು ರೋಚಕವಾದದ್ದು. ಹಾಗೆ ಎಜೆಎಲ್ ಖರೀದಿಸಲು ‘ಯಂಗ್ ಇಂಡಿಯನ್’ ಕಂಪನಿಗೆ ಬಡ್ಡಿರಹಿತವಾಗಿ 90 ಕೋಟಿ ರೂ. ಸಾಲ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಆಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ. ‘ಯಂಗ್ ಇಂಡಿಯನ್’ ಕಂಪನಿಯ ನಿರ್ದೇಶಕಿ ಕೂಡಾ ಅವರೇ! ಅಂದಿನ ಎಐಸಿಸಿಯ ಖಜಾಂಚಿ ಶ್ರೀ ಮೋತಿಲಾಲ್ ವೋರಾ. ‘ಯಂಗ್ ಇಂಡಿಯನ್’ ಕಂಪನಿಯ ಷೇರುದಾರರಲ್ಲೊಬ್ಬರು ಕೂಡಾ ಅದೇ ಮೋತಿಲಾಲ್ ವೋರಾ! ಹೀಗೆ ಜನರಿಂದ ಪಕ್ಷದ ನಿಧಿಗೆಂದು ಸಂಗ್ರಹಿಸಿದ ಕೋಟ್ಯಂತರ ರೂಪಾಯಿಗಳನ್ನು ತಮ್ಮದೇ ಮಾಲೀಕತ್ವದ ಕಂಪನಿಯೊಂದಕ್ಕೆ ವರ್ಗಾಯಿಸಿಕೊಂಡು, ಆ ಕಂಪನಿಯ ಮೂಲಕ ಇನ್ನೊಂದು ಕಂಪನಿಯ ಷೇರುಗಳನ್ನು ಖರೀದಿಸಿ, ಸುಮಾರು 1600 ಕೋಟಿ ಬೆಲೆಬಾಳಬಹುದೆನ್ನಲಾದ ಆಸ್ತಿಯನ್ನು ತಮ್ಮದನ್ನಾಗಿಸಿಕೊಂಡ ಜಾಣತನವನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ಆರನೆಯ ಪಾಠ ಎಂದುಕೊಳ್ಳಬಹುದಾಗಿದೆ.
ಪಾಠ ಏಳು: ರಾಜಕೀಯ ಪಕ್ಷವು ವಾಣಿಜ್ಯ ಉದ್ದೇಶಕ್ಕೆ ಸಾಲ ನೀಡುವಂತಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಜಾರಿ ನಿರ್ದೇಶನಾಲಯದಿಂದ ಪ್ರಕರಣದ ತನಿಖೆ ಕೂಡಾ ಆರಂಭವಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಕೋರ್ಟ್ ಕಟಕಟೆ ಏರಬೇಕಾಗಿ ಬಂದಾಗ, ಕಾಂಗ್ರೆಸ್ ನಾಯಕರೆಲ್ಲ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದರು. ಇದರ ಹಿಂದೆ ಕೇಂದ್ರದ ಕೈವಾಡ ಇದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೇ ಸಂಸತ್ತಿನ ಉಭಯ ಸದನದಲ್ಲಿ ಕೋಲಾಹಲ ಸೃಷ್ಟಿಸಿ ಕಲಾಪ ನಡೆಯದಂತೆ ತಡೆಯೊಡ್ಡಿದ್ದರು. ಹೀಗೆ ತಮ್ಮ ಅವ್ಯವಹಾರ ಬಯಲಿಗೆ ಬರುವ ಸಂದರ್ಭ ಬಂದಾಗ ಅತ್ಯಂತ ಒಗ್ಗಟ್ಟಿನಿಂದ ಲೋಕಸಭೆ, ರಾಜ್ಯಸಭೆಗಳ ಕಲಾಪಗಳನ್ನೇ ನಡೆಸಲಾಗದಂತೆ ತಡೆಯೊಡ್ಡಿ ಗೊಂದಲ ಸೃಷ್ಟಿಸುವ ಜಾಣತನವನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ಏಳನೆಯ ಪಾಠ ಎಂದುಕೊಳ್ಳಬಹುದಾಗಿದೆ.
ಪಾಠ ಎಂಟು: ರಿಜಿಸ್ಟ್ರಾರ್ ಆಫ್ ಕಂಪೆನೀಸ್ ಗೆ ‘ಯಂಗ್ ಇಂಡಿಯನ್’ ಕಂಪನಿ ಸಲ್ಲಿಸಿದ ದಾಖಲೆಗಳ ಪ್ರಕಾರ, ಕಂಪನಿಯ ಷೇರುದಾರರ ಸಭೆ ಸೋನಿಯಾ ಗಾಂಧಿಯವರ ಸರ್ಕಾರಿ ನಿವಾಸ 10 ಜನಪಥ್ನಲ್ಲಿ ನಡೆದಿತ್ತು ಎನ್ನಲಾಗಿದೆ. ಸರ್ಕಾರಿ ಬಂಗಲೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬಾರದೆಂಬ ಕಾನೂನು ಈ ದೇಶದಲ್ಲಿದೆ. ಆದಾಗಿಯೂ ಇಂತಹದ್ದೊಂದು ಬೃಹತ್ ಅವ್ಯವಹಾರಕ್ಕೆ ಸರ್ಕಾರೀ ಬಂಗಲೆಯನ್ನೇ ಬಳಸಿಕೊಳ್ಳಲಾಗಿದೆ. ಏಕೆಂದರೆ ಸರ್ಕಾರ, ಪಕ್ಷ ಯಂಗ್ ಇಂಡಿಯನ್ ಕಂಪನಿ, ಅಸೋಸಿಯೇಟೆಡ್ ಜರ್ನಲ್, ಹೆರಾಲ್ಡ್ ಹೌಸ್… ಹೀಗೆ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡೇ ಇದ್ದವಾಗಿದ್ದವು. ಅಲ್ಲಿ ಎಲ್ಲವೂ ಏಕಪಾತ್ರಾಭಿನಯ. ಹೀಗೆ ಏಕ ಪಾತ್ರಾಭಿನಯದ ಮೂಲಕ ತಮ್ಮ ಎಲ್ಲ ಅವ್ಯವಹಾರಗಳಿಗೆ ಸರ್ಕಾರದ ಅಂಗಗಳನ್ನು ಬಳಸಿಕೊಳ್ಳುವ ಜಾಣತನವನ್ನು ಹೆರಾಲ್ಡ್ ಹೌಸ್ ಪಾಠಶಾಲೆಯು ನಮಗೆ ಕಲಿಸಿದ ಭ್ರಷ್ಟಾಚಾರದ ಎಂಟನೆಯ ಪಾಠ ಎಂದುಕೊಳ್ಳಬಹುದಾಗಿದೆ.
ಈ ಪಾಠಗಳು ಕೇವಲ ಕೆಲವೇ ಕೆಲವಷ್ಟೇ. ಈ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿದ್ದೇ ಆದರೆ ಇಂತಹಾ ನೂರಾರು ಭ್ರಷ್ಟಾಚಾರದ ಪಾಠಗಳನ್ನು ನಾವು ಕಲಿಯಬಹುದಾಗಿದೆ. ಆದರೆ ಒಬ್ಬ ಸಾಮಾನ್ಯ ಭಾರತೀಯನಿಗೆ ಇದಿಷ್ಟು ಪಾಠಗಳೇ ಹತ್ತು ಸಾರಿ ಓದಿದರೂ ಅರ್ಥವಾಗದಷ್ಟು ಸಂಕೀರ್ಣವಾಗಿರುವುದರಿಂದ ಉಳಿದ ಪಾಠಗಳನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ. ಆದರೆ ಅದಕ್ಕೂ ಮುಂಚೆ ಇಷ್ಟೆಲ್ಲಾ ತಂತ್ರ ಕುತಂತ್ರಗಳನ್ನು ನಡೆಸಲು ಕಾರಣವಾಗಿರುವ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ಆಸ್ತಿ ಪಾಸ್ತಿಗಳ ಬಗ್ಗೆ ಮಾಧ್ಯಮಗಳಲ್ಲಿ ಸಿಕ್ಕ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ.
ಹಾಗಾದರೆ ಬನ್ನಿ, ಇಲ್ಲದ ಪತ್ರಿಕೆಯ ಹೆಸರಿನಲ್ಲಿರುವ ಕೆಲವು ಪ್ರಮುಖ ಆಸ್ತಿ ಪಾಸ್ತಿಗಳ ವಿವರಗಳನ್ನೊಮ್ಮೆ ನೋಡೋಣ.
1) ದೆಹಲಿಯಲ್ಲಿ ಸುಮಾರು ಒಂದು ಲಕ್ಷ ಚದರ ಅಡಿಯಲ್ಲಿ ಐದು ಮಹಡಿ ಕಟ್ಟಡ. ಮೌಲ್ಯ ಸುಮಾರು 300 ಕೋಟಿ.
2) ಮುಂಬಯಿಯಲ್ಲಿ ಸುಮಾರು 34000 ಚದರಡಿಯ ಜಾಗದಲ್ಲಿ ಕಟ್ಟಡ ನಿರ್ಮಾಣ. ಮೌಲ್ಯ ಸುಮಾರು 250 ಕೋಟಿ.
3) ಭೋಪಾಲ್ನಲ್ಲಿ ಸರ್ಕಾರದ ಅನುಮತಿ ಪಡೆಯದೇ ಮಾರಾಟ ಮಾಡಿದ ವಿವಾದಿತ ಪ್ಲಾಟ್. ಮೌಲ್ಯ ಸುಮಾರು 150 ಕೋಟಿ.
4) ಪಂಚಕುಲದಲ್ಲಿ 36167 ಚದರಡಿಯ ಪ್ಲಾಟ್. ಮೌಲ್ಯ ಸುಮಾರು 22 ಕೋಟಿ.
5) ಪಾಟ್ನಾದಲ್ಲಿ 0.6 ಎಕರೆ ಸರ್ಕಾರೀ ಭೂಮಿ ಗುತ್ತಿಗೆ. ಮೌಲ್ಯ ಸುಮಾರು 12 ಕೋಟಿ.
6) ಇಂದೋರ್ನಲ್ಲಿ 21780 ಚದರಡಿಯ ಪ್ಲಾಟ್. ಮೌಲ್ಯ ಸುಮಾರು 11 ಕೋಟಿ.
ಮಾಹಿತಿ ಮೂಲ : ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ವಿಜಯವಾಣಿ, ವಿಜಯ ಕರ್ನಾಟಕ ಮತ್ತು ವಿಕಿಪೀಡಿಯಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.