ನವರಸ ಫಿಲಂಸ್ ಸಂಸ್ಥೆಯಿಂದ 1986 ರಲ್ಲಿ ಉಮೇಶ್ ಕುಲಕರ್ಣಿ ಯವರು ಚಿತ್ರಕಥೆಯನ್ನು ಬರೆದು, ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತುತ್ತಾರೆ. ಸಿ.ಅಶ್ವತ್ಥ್ ರವರ ಸಂಗೀತವಿರುತ್ತದೆ. ಎಂ.ಎನ್.ವ್ಯಾಸರಾವ್ ಹಾಗೂ ದೊಡ್ಡರಂಗೇಗೌಡ ರವರ ಸಾಹಿತ್ಯವಿದೆ. ಎ.ಎಸ್.ಮೂರ್ತಿ ಯವರ ಸಂಭಾಷಣೆ ಇದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಮೇಶ್ ಭಟ್, ಅರವಿಂದ್, ಅಭಿನಯ, ಹೊನ್ನಯ್ಯ, ವಜ್ರಪ್ಪ, ಅಂಜಿನಪ್ಪ ಹಾಗೂ ಮಹಿಮಾ ಪಟೇಲ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಅತ್ತ್ಯುತ್ತಮ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ. ಸಿನಿಮಾದ ಕತೆ ತುಂಬಾ ಸರಳವಾದರೂ, ಕಥೆಯಲ್ಲಿನ ಅಂಶಗಳು ಯಾವುದು ಸುಲಭದ ಮಾತಲ್ಲ. ಯಾವುದೇ ಹಳ್ಳಿಯಾಗಲೀ, ಗ್ರಾಮ ಪಂಚಾಯಿತಿಗಳಾಗಲೀ, ತಾಲ್ಲೂಕು ಆಗಲೀ, ಜಿಲ್ಲೆಯಾಗಲೀ, ಸಂಘ ಸಂಸ್ಥೆಗಳ ಚುನಾವಣೆಯಾಗಲೀ, ರಾಜ್ಯ ಮಟ್ಟದ ಅಥವಾ ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳಲ್ಲಾಗಲೀ ಈ ರಾಜಕೀಯ ತನ್ನ ಹೊಲಸುತನದಿಂದ ನಾರುತ್ತಲೇ ಇದೆ. ಅಂತಾ ರಾಜಕೀಯದ ನಡುವೆ, ಅಧಿಕಾರ ಬಳಸಿಕೊಂಡು ಊರಿನ ಜನರಿಗೆ ಒಂದಷ್ಟು ಒಳ್ಳೆಯದನ್ನು ಬಯಸುವ ದಾಸಯ್ಯನ ಪಾತ್ರದಲ್ಲಿ ಅರವಿಂದ್ ಅದ್ಬುತ ನಟನೆ ಮಾಡಿದ್ದಾರೆ. ಆತನ ಹೆಂಡತಿಯಾಗಿ, ಹಳ್ಳಿಯ ಮುಗುದೆಯಾಗಿ ಪಾತ್ರಕ್ಕೆ ಜೀವ ನೀಡಿದ್ದಾರೆ ಅಭಿನಯ. ಗೌಡರ ಗತ್ತು, ದೌಲತ್ತು, ಗಾಂಭೀರ್ಯ, ದರ್ಪ ಈ ಎಲ್ಲವನ್ನೂ ಮುಡಿಗೇರಿಸಿಕೊಂಡು ವಜ್ರಪ್ಪ ಹಾಗೂ ಅಂಜಿನಪ್ಪ ಉತ್ತಮವಾಗಿ ನಟಿಸಿದ್ದಾರೆ. ರಮೇಶ್ ಭಟ್ ಪಾತ್ರ ಕೆಲವೇ ನಿಮಿಷಗಳಷ್ಟೇ ಇದ್ದರೂ, ಕಥೆಗೊಂದು ತಿರುವು ನೀಡುತ್ತದೆ. ಕಥೆಯಲ್ಲಿ ರಸವತ್ತಾದ ಹಾಸ್ಯದೊಂದಿಗೆ ಸಮಾಜದ ರಾಜಕೀಯದ ವಿಡಂಬನೆ ಮಾಡಿದ್ದಾರೆ ಉಮೇಶ್ ಕುಲಕರ್ಣಿಯವರು. ಜಾತಿ ಪದ್ದತಿ, ಸ್ತ್ರೀ ಸಮಾನತೆ, ಸ್ತ್ರೀ ಹಕ್ಕು, ಈ ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ ನಿರ್ದೇಶಕರು. ದಾಸಯ್ಯ ಊದುವ “ಶಂಖನಾದ”, ಮಹಾಭಾರತದ ಯುದ್ದದಲ್ಲಿ ಧರ್ಮರಕ್ಷಣೆಗಾಗಿ ಶ್ರೀಕೃಷ್ಣ “ಪಾಂಚಜನ್ಯ” ಊದಿದಂತೆ ಅನಿಸುತ್ತದೆ. ಈ ಸಿನಿಮಾ ಅರವಿಂದ್ ರವರಿಗೆ ತುಂಬಾ ಒಳ್ಳೆಯ ಹೆಸರು ತಂದು ಕೊಟ್ಟಿತು ಎಂದರೆ ತಪ್ಪಾಗಲಾರದು. “ಶಂಖನಾದ ಅರವಿಂದ್” ಅಂತಲೇ ಮನೆಮಾತಾಗಿದ್ದರು. ತುಂಬಾ ಒಳ್ಳೆಯ ಸಿನಿಮಾ. ಒಮ್ಮೆಯಾದರೂ ನೋಡಲೇಬೇಕಾದ ಸಿನಿಮಾ.
ಕಥೆ:
ಯಾವುದೋ ಸರಕಾರಿ ಕೆಲಸಕ್ಕಾಗಿ ಜಾತಿ ಸರ್ಟಿಫಿಕೇಟ್ ಅವಶ್ಯಕತೆ ಇರುತ್ತದೆ. ಆಗ ಆತ (ರಮೇಶ್ ಭಟ್) ಗ್ರಾಮ ಪಂಚಾಯಿತಿ ಚೇರ್ಮನ್ ರವರಿಂದ ಜಾತಿ ಸರ್ಟಿಫಿಕೇಟ್ ಪಡೆಯಲು ತನ್ನ ಪೂರ್ವಿಕರು ಎಂದೋ ಬಿಟ್ಟು ಬಂದ ಊರಿಗೆ ಹೋಗುತ್ತಾನೆ. ಆ ಊರಿನಲ್ಲಿ ಭಿಕ್ಷೆ ಬೇಡುವ ದಾಸಯ್ಯನೇ (ಅರವಿಂದ್) ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂಬ ಸಂಗತಿ ತಿಳಿದು ಆಶ್ಚರ್ಯ ಚಕಿತನಾಗುತ್ತಾನೆ. ತಾನು ಇದ್ದ ಯಾರದೋ ಮನೆ ಬಾಗಿಲಿಗೆ, ದಾಸಯ್ಯ, ಜಾತಿ ಸರ್ಟಿಫಿಕೇಟ್ ಬರೆದುಕೊಟ್ಟು ಮೊಹರು ಹಾಕಿ ಕೊಡುತ್ತಾನೆ. ಸರಕಾರಿ ಕಚೇರಿಯಲ್ಲಿ ಇಷ್ಟು ಸುಲಭವಾಗಿ ಕೆಲಸವಾಯಿತು ಎಂಬುದನ್ನು ಅರಗಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ. ದಾಸಯ್ಯನ ಕುರಿತು ಇನ್ನೂ ಹೆಚ್ಚಿನ ವಿಷಯ ತಿಳಿಯುವ ಸಲುವಾಗಿ ಆತನ ಮನೆಗೆ ಹೋಗುತ್ತಾನೆ. ಅಲ್ಲಿನ ಮುರುಕುಲು ಗುಡಿಸಲು, ಹರಿದ ಸೀರೆಯನ್ನುಟ್ಟ ಹೆಂಡತಿ ಪುಕ್ಕಲು ಸ್ವಭಾವದ ದಾಸಯ್ಯನ ಕಂಡು ಆತನಿಗೆ ಒಂಥರಾ ಅನಿಸುತ್ತದೆ. ಅದೇನೋ ಗ್ರಹಚಾರಕ್ಕೆ ಆತ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತಾಗ, ಎರಡೂ ಪಕ್ಷಗಳ ಸಮಬಲದ ನಡುವೆ ಆತ ಗೆದ್ದು ಬಿಡುತ್ತಾನೆ. ಆ ಗೆಲುವೇ ಆತನ ಸಂಕಷ್ಟಕ್ಕೆ ಮೂಲ. ಊರಿನ ಗೌಡರ ಎರಡೂ ಪಕ್ಷಗಳು ತಲಾ ಐದು ಸ್ಥಾನ ಗಳಿಸಿತ್ತು ಅಷ್ಟೇ. ಬಹುಮತಕ್ಕಾಗಿ 6 ಸ್ಥಾನವಾಗಬೇಕಿತ್ತು. ದಾಸಯ್ಯ ಯಾರಿಗೆ ಸಪೋರ್ಟ್ ಮಾಡುತ್ತಾನೆಯೋ ಅವರೇ ಊರಿನ ಚೇರ್ಮನ್ ಆಗಬೇಕಾಗಿತ್ತು. ಊರಿನಲ್ಲಿ ಭಿಕ್ಷೆ ಬೇಡಿ ಬದುಕುವ ದಾಸಯ್ಯನ ಮೇಲೆ ದರ್ಪ ತೋರಲಷ್ಟೇ ಗೌಡರ ಮಸಲತ್ತು ಹೊರತು, ಆತನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಮೊದಮೊದಲು ಇಷ್ಟವಿರುವುದಿಲ್ಲ. ಆಗ ವಿಧಿಯಿಲ್ಲದೇ, ಜಿಲ್ಲೆಯ ಜಿಲ್ಲಾಧಿಕಾರಿಗಳು ದಾಸಯ್ಯನನ್ನೇ ಪಂಚಾಯಿತಿ ಚೇರ್ಮನ್ ಎಂದು ಘೋಷಿಸುತ್ತಾರೆ. ಆದರೆ ಪಂಚಾಯಿತಿ ಗೌಡರ ಸುಪರ್ದಿಯಲ್ಲಿರುತ್ತದೆ. ದಾಸಯ್ಯನ ಪಂಚಾಯಿತಿ ಚೇರ್ಮನ್ ಖುರ್ಚಿಯಲ್ಲಿ ಕೂರುವ ಬದಲು, ಠಸ್ಸೆ ಹಿಡಿದು ಊರೂರು ಅಲೆದು, ಊರಿನ ಜನರ ಕೆಲಸವನ್ನೇ ಮನೆಬಾಗಿಲಿಗೆ ಬಂದು ಮಾಡಿಕೊಡುತ್ತಾನೆ.
ಅವನಿಗೋ ಯಾವ ಲಾಭಾಪೇಕ್ಷೇಯೂ ಇಲ್ಲ. ಖುರ್ಚಿಯಾಸೇಯೂ ಇಲ್ಲ. ಜಾತಿ ಸರ್ಟಿಫಿಕೇಟ್ ಗಾಗಿ ಬಂದವನು ಉಪವಾಸ ಸತ್ಯಾಗ್ರಹ ಮಾಡಿ, ಗೌಡರ ಉಪಟಳವನ್ನು ಇಡೀ ರಾಜ್ಯಕ್ಕೆ ಪ್ರಚಾರ ಮಾಡುವಂತೆ ಪ್ರಚೋದಿಸುತ್ತಾನೆ. ಆಗ ದಾಸಯ್ಯ ಉಪವಾಸ ಕುಳಿತು, ಗೌಡರನ್ನು ಒಂದು ಮಾಡಿ, ಊರಿನ ಸೇವೆ ಮಾಡಲು ಸಹಕರಿಸುವಂತೆ ಪತ್ರಕರ್ತರು ಹಾಗೂ ಅಧಿಕಾರಿಗಳ ಮುಂದೆ ಗೌಡರಿಂದ ಪ್ರಮಾಣ ಮಾಡಿಸಿಕೊಳ್ಳುತ್ತಾನೆ. ಆದರೆ ಅಲ್ಲಿ ಮಾತಿಗೆ ಕಟ್ಟುಬಿದ್ದವರಂತೆ ಇದ್ದ, ಗೌಡರಿಬ್ಬರೂ, ಮತ್ತೆ ಒಳಗೊಳಗೆ ದಾಸಯ್ಯನ ವಿರುದ್ಧ ಕತ್ತಿ ಮಸೆಯುತ್ತಿರುತ್ತಾರೆ. ಜಿಲ್ಲಾಧಿಕಾರಿಗಳ ಸಲಹೆಯಂತೆ ದಾಸಯ್ಯ ಊರಬಸವಿಯಾದ ಬಸಕ್ಕಳನ್ನು (ಮಹಿಮಾ ಪಟೇಲ್) ಚುನಾವಣೆಗೆ ನಿಲ್ಲಿಸಿ, ಆಕೆಯನ್ನು ಪಂಚಾಯಿತಿ ಅಧ್ಯಕ್ಷೆಯನ್ನಾಗಿ ಮಾಡಲು ಹಾಗೂ ತಾನೂ ಉಪಾಧ್ಯಕ್ಷನಾಗಿರಲು ಚುನಾವಣೆಗೆ ಎಲ್ಲ ಥರಹದಲ್ಲೂ ಸಿದ್ದನಾಗುತ್ತಾನೆ. ಆಕೆಯೂ ಪಂಚಾಯಿತಿ ಚೇರ್ಮನ್ ಆಗಿ, ಊರಿನ ಜನರ ಸೇವೆ ಮಾಡುವ ಕನಸು ಕಾಣುತ್ತಾಳೆ, ಆಕೆಯ ಕನಸು ನನಸಾಗುತ್ತದೆಯೇ ಎಂಬ ಪ್ರಶ್ನೆಯೊಂದಿಗೆ ಸಿನಿಮಾ ಮುಗಿಯುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಯಾವುದೇ ಪದವಿಯಾಗಲೀ ಶಾಶ್ವತವಲ್ಲ, ಜನಸೇವೆಯೂ ನಿಸ್ವಾರ್ಥಸೇವಾಯಾಗಿರಬೇಕು. ಅದು ಏಕೆ ಎಂಬುದರ ಕುರಿತು ತಿಳಿಯಲು.
2. ಬಡವನಾದರೂ ಸರಿ, ಒಳ್ಳೆಯ ಮನಸು ಇದ್ದರೆ, ಸಮಾಜ ಸೇವೆ ಮಾಡಬಹುದು. ಅದು ಹೇಗೆ ಎಂಬುದರ ಕುರಿತು ತಿಳಿಯಲು.
3. ರಾಜಕೀಯವಾಗಿ ಬೆಳೆಯುತ್ತಿರುವವರು, ರಾಜಕೀಯದಲ್ಲಿ ಆಸಕ್ತಿ ಇರುವವರು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.