ತೌಡುಗೋಳಿ: ವನಮಹೋತ್ಸವ ಆಚರಣೆ ಕಾಟಾಚಾರಕ್ಕೆ ಮಾತ್ರ ಆಗಬಾರದು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಅಗಲೀಕರಣ ಮಾಡುವಾಗ ಮರ ಕಡಿಯುವುದು ವನ ಮಹೋತ್ಸವ ಅಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಅಯ್ಯಪ್ಪ ಸ್ವಾಮಿ ಮಂದಿರಗಳ ಜೀರ್ಣೋದ್ಧಾರ ಸಮಿತಿಯ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಅವರು ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಅಯ್ಯಪ್ಪ ಸ್ವಾಮಿ ಮಂದಿರಗಳ ವತಿಯಿಂದ ಭಾನುವಾರದಂದು ನಡೆದ ಸಾರ್ವಜನಿಕ ಸಸಿ ವಿತರಣೆ, ವನಮಹೋತ್ಸವ ಹಾಗೂ ಜೀರ್ಣೋದ್ಧಾರ ಸಭೆಯಲ್ಲಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗಿಂತ ವಾಹನಗಳ ಸಂಖ್ಯೆ ಜಾಸ್ತಿಯಾಗ ತೊಡಗಿದೆ. ಅವುಗಳು ಹೊರ ಚೆಲ್ಲುವ ಅಂಗಾರಕ ಆಮ್ಲ ಮನುಷ್ಯನ ಆರೋಗ್ಯವನ್ನು ಕೆಡಿಸುತ್ತದೆ. ಮರಗಳು ಅಂಗಾರಕ ಆಮ್ಲವನ್ನು ಸೇವಿಸಿ ಮನುಷ್ಯನ ಉಸಿರಾಟಕ್ಕೆ ಆಮ್ಲಜನಕವನ್ನು ನೀಡುತ್ತದೆ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕೋಸ್ಕರ ಮರಗಳನ್ನು ನಾಶಗೊಳಿಸಿ ಬದುಕುತ್ತಿದ್ದಾನೆ ಎಂದು ಅವರು ಹೇಳಿದರು.
ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಮಾತನಾಡಿದ ಅವರು ಊರಿನ ದೇವಸ್ಥಾನ ಅಭಿವೃದ್ಧಿಯಾದರೆ ಅಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಅದರೊಂದಿಗೆ ಉನ್ನತಿ ಕಾಣುತ್ತಾನೆ. ಹಲವು ಹನಿಗಳು ಒಟ್ಟು ಸೇರಿ ಮಳೆಯಾದಂತೆ ನೂರು ಮಂದಿ ಭಕ್ತರು ಸೇರಿದರೆ ಒಂದು ದೇವಸ್ಥಾನ ನಿರ್ಮಿಸಬಹುದು. ಕ್ಷೇತ್ರದ ಜೀರ್ಣೋದ್ಧಾರಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಪುನರೂರು ವಿನಂತಿಸಿದರು.
ಮುಖ್ಯ ಅತಿಥಿಯಾಗಿದ್ದ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಕೆಲವು ವರ್ಷಗಳ ಹಿಂದೆ ನಾವು ಕೃಷಿಯ ಮಧ್ಯೆ ಬದುಕುತ್ತಿದ್ದೆವು. ಈಗ ಕಟ್ಟಡಗಳ ಮಧ್ಯೆ ಬದುಕುವ ಅನಿವಾರ್ಯತೆ ಬಂದಿದೆ. ಮರಮಟ್ಟುಗಳು ಕಡಿಮೆಯಾಗಿ ಕಾಂಕ್ರೀಟು ಕಾಡುಗಳು ಅಧಿಕವಾಗಿದೆ. ನಮ್ಮ ಹಿರಿಯರು ಬೆಳಗ್ಗಿನಿಂದ ಸಂಜೆಯ ವರೆಗೆ ಗದ್ದೆಗಳಲ್ಲಿ ಮಳೆ, ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಮಗೆ ಎರಡು ನಿಮಿಷ ಬಿಸಿಲಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇದು ಮರಮಟ್ಟುಗಳ ವಿರಳತೆಯೇ ಕಾರಣ ಎಂದು ಹೇಳಿದರು.
ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಚೇರ್ಮೆನ್ ಹಾಗೂ ತೌಡುಗೋಳಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಮಾತನಾಡಿ ಧಾರ್ಮಿಕ ಕ್ಷೇತ್ರದಲ್ಲಿ ವನಮಹೋತ್ವವದಂತಹ ಜಾಗೃತಿ ಕಾರ್ಯಕ್ರಮ ನಡೆಸುವುದು ನಿಜಕ್ಕೂ ಅರ್ಥಪೂರ್ಣವಾದುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ವಠಾರದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ನರಿಂಗಾನ ಹಾಗೂ ವರ್ಕಾಡಿ ಗ್ರಾಮದ ನೂರಕ್ಕೂ ಅಧಿಕ ಕೃಷಿಕರಿಗೆ ಒಂದು ಸಾವಿರ ಸಸಿಗಳನ್ನು ವಿತರಿಸಲಾಯಿತು.
ಅತಿಥಿಗಳಾಗಿ ತೌಡುಗೋಳಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಭಟ್ ಲಾಡ, ಉಪಾಧ್ಯಕ್ಷರಾದ ದೇವಪ್ಪ ಶೆಟ್ಟಿ ಚಾವಡಿಬೈಲು, ಗೌರವ ಸಲಹೆಗಾರರಾದ ಶಂಕರ ಭಟ್ ದೋಸೆಮನೆ, ಮಂಜೇಶ್ವರ ಬ್ಲಾಕ್ ಮೆಂಬರ್ ಮೂಸ ಕುಂಞ, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ನಿಕೋಲಸ್ ಮೊಂತೇರೋ, ಕ್ಷೇತ್ರದ ಸಂಸ್ಥಾಪಕ ಹಾಗೂ ಗುರು ಗೋವಿಂದ ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಶಿವಪ್ರಸಾದ್ ತೌಡುಗೋಳಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.