
ಬೆಂಗಳೂರು: ನವೆಂಬರ್ 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ, ವಂದೇ ಮಾತರಂನ ಸಂಭ್ರಮ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮತ್ತು ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಂಚಾಲಕಿ ಶ್ರೀಮತಿ ಮಾಳವಿಕ ಅವಿನಾಶ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7ರಂದು ರಾಜ್ಯ ಕಾರ್ಯಾಲಯದಲ್ಲಿ 150ಕ್ಕೂ ಹೆಚ್ಚು ಜನರು ಅಂದರೆ ಸುಮಾರು 300-400 ಜನರು ಸೇರಿ ಒಟ್ಟಾಗಿ ವಂದೇ ಮಾತರಂ ಸಾಮೂಹಿಕ ಗಾಯನ ಮಾಡಲಿದ್ದೇವೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು. ದೇಶಾದ್ಯಂತ ಎಲ್ಲ ಬಿಜೆಪಿ ಕಾರ್ಯಾಲಯಗಳಲ್ಲಿ ಸಾಮೂಹಿಕ ಗಾಯನ ನಡೆಯಲಿದೆ; ಪ್ರಧಾನಿಯವರೂ ಈ ಗಾಯನದಲ್ಲಿ ಸ್ವತಃ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪಕ್ಷವು 150 ಜಿಲ್ಲೆಗಳಲ್ಲಿ ಆಚರಣೆಗೆ ನಿರ್ಧರಿಸಿದ್ದು, ಕರ್ನಾಟಕದ ಬೆಂಗಳೂರು, ಮೈಸೂರು, ಚಿತ್ರದುರ್ಗ, ಬಾಗಲಕೋಟೆ, ಗದಗ, ಕಲಬುರ್ಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಂದೇ ಮಾತರಂ ಸಾಮೂಹಿಕ ಗಾಯನ ಇರುತ್ತದೆ ಎಂದು ವಿವರಿಸಿದರು.
1875ರಲ್ಲಿ ಶ್ರೀ ಬಂಕಿಂಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ಗೀತೆ ರಚಿಸಿದ್ದಾರೆ. ಈ ಗೀತೆಗೆ ಇದೀಗ 150ರ ಸಂಭ್ರಮ. ಕೇಂದ್ರದ ಎನ್ಡಿಎ ಸರಕಾರವು ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ವಂದೇ ಮಾತರಂ ಆಚರಣೆಗೆ ಸೂಚಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಮೂಲಮಂತ್ರ ಇದಾಗಿತ್ತು ಎಂದು ವಿವರಿಸಿದರು.
ಈ ಗೀತೆ ಹಾಡುವ ಮೂಲಕ ಆಚರಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ನವೆಂಬರ್ 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ, ವಂದೇ ಮಾತರಂನ ಸಂಭ್ರಮ ನಡೆಯಲಿದೆ. 1896ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟಾಗೋರ್ ಅವರು ಈ ಹಾಡು ಜನಮನದಲ್ಲಿ ಇನ್ನೂ ಹೆಚ್ಚು ನಿಲ್ಲುವ ಹಾಗೆ ಹಾಡಿ ಅದಕ್ಕೆ ಹೆಚ್ಚಿನ ಪ್ರಚಾರ ದೊರಕಿತ್ತು ಎಂದು ಹೇಳಿದರು.
20ನೇ ಶತಮಾನದ ಪ್ರಾರಂಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಘೋಷವಾಕ್ಯವಾಗಿ ಈ ಗೀತೆಯನ್ನು ಬಳಸಲಾಗಿತ್ತು. ಬ್ರಿಟಿಷರ ವಿರೋಧ, ಚಳವಳಿಗಳಲ್ಲಿ ವಂದೇ ಮಾತರಂ ಘೋಷಣೆ ಕೂಗುತ್ತಿದ್ದರು ಎಂದು ನೆನಪಿಸಿದರು. 1923ರ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯ ಕೆಲವು ಸಾಲುಗಳಿಗೆ ಪ್ರತಿರೋಧ ಬಂದಿತ್ತು ಎಂದು ತಿಳಿಸಿದರು. ಡಾ.ಮೌಲಾನಾ ಆಜಾದ್ ಅವರು ಪ್ರತಿರೋಧ ತೋರಿದ್ದರು. ಪೂರ್ಣ ಗೀತೆಯಲ್ಲಿ ‘ತ್ವಂ ಹೀ ದುರ್ಗ ದಶಪ್ರಹರಣ ಧಾರಿಣಿ’ ಎಂಬ ಸಾಲಿನಿಂದ ಅಲ್ಪಸಂಖ್ಯಾತರಿಗೆ ಬೇಸರವಾಗುತ್ತದೆ ಎಂಬ ಚರ್ಚೆ ನಡೆದು ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಅನ್ನು ಕೈಬಿಟ್ಟಿತ್ತು ಎಂದರು.
1950ರಲ್ಲಿ ಡಾ.ರಾಜೇಂದ್ರ ಪ್ರಸಾದ್ ಅವರು ಸಂಯುಕ್ತ ಅಸೆಂಬ್ಲಿಯಲ್ಲಿ ಜನಗಣಮನಕ್ಕೆ ಎಷ್ಟು ಗೌರವ ನೀಡಲಾಗುತ್ತದೋ ಅದೇರೀತಿ ರಾಷ್ಟ್ರದ ಹಾಡು ವಂದೇ ಮಾತರಂಗೆ ಗೌರವ ಸಲ್ಲಬೇಕೆಂದು ತಿಳಿಸಿದ್ದರು.
2019ರಲ್ಲಿ ಮಧ್ಯ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ವಂದೇ ಮಾತರಂ ಅನ್ನು ಸಚಿವಾಲಯದಲ್ಲಿ ಹಾಡಬಾರದೆಂದು ನಿಷೇಧÀ ಹೇರಿತ್ತು ಎಂದರು. ಇದು ಕಾಂಗ್ರೆಸ್ ರಾಜಕೀಯ; ನಮಗೆ ವಂದೇ ಮಾತರಂ ಅತ್ಯಂತ ಪೂಜನೀಯ ಎಂದು ಹೇಳಿದರು.
ಕೊಲೆ, ಮಹಿಳಾ ದೌರ್ಜನ್ಯ ಹೆಚ್ಚಳ: ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಸತತ ಕೊಲೆ ಮತ್ತಿತರ ದೌರ್ಜನ್ಯ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನು ಪ್ರಶ್ನಿಸುವ ಅನಿವಾರ್ಯತೆಯೂ ಇದೆ ಎಂದು ಅವರು ನುಡಿದರು. ಬೆಂಗಳೂರಿನಲ್ಲಿ ಅಕ್ಟೋಬರ್ 27ಕ್ಕೆ ಮಹಿಳೆ ಮೇಲೆ ಪೊಲೀಸರಿಂದಲೇ ದಾಳಿ ನಡೆದುದು ದುರದೃಷ್ಟಕರ, ಬಳಿಕ ಆಟೋದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಅಕ್ಟೋಬರ್ 17ರಂದು ಬ್ರೆಝಿಲ್ನ ಮಾಡೆಲ್ ಮೇಲೆ ದೌರ್ಜನ್ಯ ನಡೆದಿದೆ. ಮನೆಯಲ್ಲಿ ನುಗ್ಗಿ ದರೋಡೆ ಮಾಡಿ, ದೌರ್ಜನ್ಯ- ಕೊಲೆ, ಎಂಜಿನಿಯರರಿಂಗ್ ಕಾಲೇಜಿನ ಹುಡುಗಿ ಮೇಲೆ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಮಂಜುಳ, ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಹ-ಸಂಚಾಲಕಿ ಶ್ರೀಮತಿ ಶ್ಯಾಮಲ ಕುಂದರ್ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



