ಕರ್ನಾಟಕದ ಈಗಿನ ಮುಖ್ಯಮಂತ್ರಿಗಳು ಹಿಂದೆ ಆಡಳಿತ ನಡೆಸಿದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭದಲ್ಲಿ “ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನೂ ನಿಲ್ಲಿಸದೇ ಮುಂದುವರಿಸುತ್ತೇವೆ” ಎನ್ನುವ ಮಾತನ್ನಾಡಿದ್ದ ನೆನಪು. ಆದರೆ ಅವರು ನಿಲ್ಲಿಸದೇ ಮುಂದುವರಿಸುವ ಕಾರ್ಯಕ್ರಮಗಳಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಂಡು ಬಹುಸಂಖ್ಯಾತರ ಬಾಯಿ ಮುಚ್ಚಿಸುವುದೂ ಒಂದು ಎನ್ನುವುದು ಮಾತ್ರ ತಿಳಿದಿರಲಿಲ್ಲ.
ಆದರೆ ಅದು ನಿಜವೆನ್ನುವುದು ಇದೀಗ ಸಾಬೀತಾಗಿದೆ. ಹಿಂದಿನ ಸರ್ಕಾರ ಬಹುಸಂಖ್ಯಾತ ರಾಷ್ಟ್ರೀಯವಾದಿಗಳನ್ನೇ ನೇರ ಗುರಿಯಾಗಿರಿಸಿಕೊಂಡು ಅವರಿಗೆ ಸಾಕಷ್ಟು ತೊಂದರೆಗಳನ್ನು ನೀಡುತ್ತಾ ಬಂದಿತ್ತು. ಅಷ್ಟೇ ಅಲ್ಲದೆ ತನ್ನ ಕೃಪಾ ಪೋಷಣೆಯಲ್ಲೇ ಸಾಕಷ್ಟು ಬುದ್ಧಿಜೀವಿಗಳನ್ನು ಬೆಳೆಸಿ ಅವರುಗಳನ್ನು ಹಿಂದೂ ದೇವರುಗಳನ್ನು, ಗೌರವಾನ್ವಿತರನ್ನು, ರಾಷ್ಟ್ರೀಯವಾದಿ ನಾಯಕರುಗಳನ್ನು ಹೀನಾಯವಾಗಿ,ಅತ್ಯಂತ ತುಚ್ಛವಾಗಿ ನಿಂದಿಸಲು ಬಳಸಿಕೊಂಡಿತ್ತು. ಅಷ್ಟೇ ಅಲ್ಲದೆ ಅವರ ಮೇಲೆ ಎಷ್ಟೇ ದೂರುಗಳು ದಾಖಲಾದರೂ ಅವರನ್ನು ಬಂಧಿಸದಂತೆ,ಅವರಿಗೆ ಶಿಕ್ಷೆಯಾಗದಂತೆ ಶತಾಯಗತಾಯ ನೋಡಿಕೊಂಡಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಂದೂ ದೇವರುಗಳನ್ನು ನಿಂದಿಸಿ ಸಮಾಜದ ಶಾಂತಿ ಕಾದಾಡುವುದನ್ನೇ ಕಾಯಕ ಮಾಡಿಕೊಂಡವರನ್ನು ಉದ್ದೇಶಪೂರ್ವಕವಾಗಿಯೇ ಸರ್ಕಾರೀ ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸುತ್ತಾ ಬಂದಿತ್ತು. ಬಹುಶಃ ಇದೀಗ ಮುಖ್ಯಮಂತ್ರಿಗಳು ಮೈತ್ರಿ ಸಂದರ್ಭದಲ್ಲಿ ಮಾತುಕೊಟ್ಟಂತೆ ಅದೇ ಕೆಲಸವನ್ನು ತಾವೂ ಕೂಡಾ ನಿಲ್ಲಿಸದೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮೈತ್ರಿ ಉಳಿಸಿಕೊಳ್ಳಲು ಅದು ಅವರಿಗೆ ಅನಿವಾರ್ಯವಾಗಿದ್ದರೂ ಇರಬಹುದು.
ಸಂತೋಷ್ ತಮ್ಮಯ್ಯ ಎನ್ನುವ ಕೊಡಗಿನ ಪತ್ರಕರ್ತರೊಬ್ಬರನ್ನು ಟಿಪ್ಪು ಜಯಂತಿಯ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರೆನ್ನುವ ಕಾರಣಕ್ಕೆ ರಾತ್ರೋ ರಾತ್ರಿ ಬಂಧಿಸಲಾಗಿದೆ. ಇಷ್ಟು ವರ್ಷಗಳು ಇಲ್ಲದಿದ್ದ ಟಿಪ್ಪು ಜಯಂತಿ ಎನ್ನುವ ಸರ್ಕಾರೀ ಕಾರ್ಯಕ್ರಮವನ್ನು ಹಿಂದಿನ ಸರ್ಕಾರ ಪ್ರಾರಂಭಿಸಿತ್ತು. ಇಂದಿನ ಪೀಳಿಗೆಗೆ ಪರಿಚಯಿಸುವುದೇ ಒಬ್ಬ ವ್ಯಕ್ತಿಯ ಜನ್ಮ ದಿನವನ್ನು ಆಚರಿಸಲು ಇರುವ ಮುಖ್ಯ ಕಾರಣವಲ್ಲವೇ? ಆದರೆ ಟಿಪ್ಪು ಜಯಂತಿ ಕಾರ್ಯಕ್ರಮ ಮಾತ್ರ ಅವರನ್ನು ಹೊಗಳಲೆಂದೇ ಆಯೋಜಿಸಲ್ಪಟ್ಟ ಕಾರ್ಯಕ್ರಮ ಎಂದು ಅನಧಿಕೃತವಾಗಿ ಘೋಷಿಸಲ್ಪಟ್ಟಂತಿದೆ. ಏಕೆಂದರೆ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅವರನ್ನು ಹೊಗಳುವುದನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಅವಕಾಶವೇ ಇಲ್ಲ. ಹಾಗೊಂದು ವೇಳೆ ಅವರ ಇತರ ಕೃತ್ಯಗಳ ಕುರಿತು ಯಾರೇ ಮಾತನಾಡಿದರೂ ಸರ್ಕಾರ ತನಗಿರುವ ಸಂಪೂರ್ಣ ಅಧಿಕಾರವನ್ನು ಬಳಸಿಕೊಂಡು ಅವರನ್ನು ಹತ್ತಿಕ್ಕುತ್ತಿದೆ. ಪ್ರಜೆಗಳಿಂದ,ಪ್ರಜೆಗಳಿಗಾಗಿ,ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವದಲ್ಲಿ ಟಿಪ್ಪು ಸುಲ್ತಾನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜೆಗಳ ಅಭಿಪ್ರಾಯಗಳಿಗೆ ಮಾತ್ರ ಯಾವುದೇ ಸ್ಥಾನವೂ ಇಲ್ಲ. ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ನೀಡಲಾಗಿದೆ ಎಂದು ಭಾವಿಸಿ ಸತ್ಯ ಹೇಳಲು ಹೊರಟರೆ ಆ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಸಂವಿಧಾನ ಕೊಡಮಾಡಿದ ಸ್ವಾತಂತ್ರ್ಯವೊಂದು ಸರ್ವಾಧಿಕಾರಿಗಳ ಕಾಲ ಕಸವನ್ನಾಗಿಸಿ ಗುಡಿಸಿ ಮೂಲೆಗೆ ಎಸೆಯಲಾಗುತ್ತಿದೆ.
ವಿಚಿತ್ರವೆಂದರೆ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರು ಚರ್ಚೆಯೊಂದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಧರ್ಮ ನಿಂದನೆಯೆಂದು ಪರಿಗಣಿಸಿ, ಕೇಸು ದಾಖಲಿಸಿಕೊಂಡು ತರಾತುರಿಯಲ್ಲಿ ಬಂಧಿಸಿ ಕರೆದೊಯ್ದ ಅದೇ ಕಾನೂನು ಹಿಂದೂ ದೇವ ದೇವತೆಯರ ವಿರುದ್ಧ ಸದಾ ನಾಲಿಗೆ ಹರಿಯಬಿಡುವ ಬುದ್ಧಿಜೀವಿಗಳಿಗೆ ಇಪ್ಪತ್ನಾಲ್ಕು ಗಂಟೆಗಳ ರಕ್ಷಣೆ ಒದಗಿಸುತ್ತದೆ. ಭಗವದ್ ಗೀತೆಯನ್ನು ಸುಡುವವರಿಗೆ ಸಂಪೂರ್ಣ ಸ್ವಾತಂತ್ರ್ಯ ಕಲ್ಪಿಸಿಕೊಡುತ್ತದೆ. ಪ್ರಧಾನಿಯ ಕೊಲೆ ಸಂಚಿನ ಆರೋಪಿಗಳ ಪರ, ಭಯೋತ್ಪಾದಕರ ಪರ ಹೋರಾಡುವ ಹೋರಾಟಗಾರರಿಗೆ ಸ್ಥಳಾವಕಾಶ ಮತ್ತು ರಕ್ಷಣೆಯನ್ನೊದಗಿಸುತ್ತದೆ!
ಇದನ್ನೆಲ್ಲಾ ಗಮನಿಸಿದರೆ ಪ್ರಜಾ ಪ್ರಭುತ್ವದಲ್ಲಿ ಎಲ್ಲವೂ ಸರಿಯಿಲ್ಲ, ಸಂವಿಧಾನ ನೀಡಿದ ಸ್ವಾತಂತ್ರ್ಯದಲ್ಲಿ ಎಲ್ಲರಿಗೂ ಸಮಾನ ನ್ಯಾಯವಿಲ್ಲ ಎನ್ನುವುದನ್ನು ಹೊರತುಪಡಿಸಿ ಹೇಳಲು ಹೇಳಲು ಸಾಧ್ಯ? “ತನಗಿಷ್ಟವಿಲ್ಲದ ಸತ್ಯಗಳನ್ನು ಯಾರೇ ಹೇಳಿದರೂ ಅವರನ್ನು ಚಿವುಟಿಹಾಕುತ್ತೇವೆ” ಎನ್ನುವ ಸ್ಪಷ್ಟ ಸಂದೇಶ ನೀಡುವ ಮೂಲಕ ಯುವ ಪೀಳಿಗೆಯು ಸತ್ಯದ ಕಡೆಗೆ ಮುಖ ಮಾಡದಂತೆ ತಡೆದು ತಾನು ಸುಳ್ಳು ಇತಿಹಾಸಗಳ ಮೂಲಕ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದ ಷಡ್ಯಂತ್ರಗಳನ್ನು ಪೋಷಿಸಿಕೊಳ್ಳುವುದೇ ಸರ್ಕಾರದ ಈ ನಡೆಯ ಹಿಂದಿನ ನಿಜವಾದ ಉದ್ದೇಶವಿದ್ದಂತಿದೆ ಎನ್ನಿಸದಿರದೇ?
ಹೀಗೆ ಟಿಪ್ಪು ಸುಲ್ತಾನ್ ವಿಚಾರದಲ್ಲಿ ಈಗಲೇ ಪ್ರಜಾಪ್ರಭುತ್ವ, ಸಂವಿಧಾನಗಳೆಲ್ಲವನ್ನೂ ಹೇಗೆ ಬದಿಗೆ ಸರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುವುದನ್ನು ಗಮನಿಸಿದಾಗ “ಪ್ರಜಾಪ್ರಭುತ್ವದ ಈ ಅವಧಿಯಲ್ಲೇ ಹೀಗಿರಬೇಕಾದರೆ ಸರ್ವಾಧಿಕಾರಿಯಾಗಿದ್ದ ಟಿಪ್ಪುವಿನ ಕಾಲದಲ್ಲಿ ನಮ್ಮ ಜನರ ಸ್ಥಿತಿ ಹೇಗಿದ್ದಿರಬಹುದು, ಅವರು ಅಂದು ಎಂತೆಂತಹಾ ಹಿಂಸೆಗಳಿಗೆ ತುತ್ತಾಗಿರಬಹುದು” ಎಂದು ಕಲ್ಪಿಸಿಕೊಂಡರೆ ಹಾಗೆ ಕಲ್ಪಿಸಿಕೊಂಡವರನ್ನೂ ಬಂಧಿಸಲಾಗುತ್ತದೆಯೇ..? ಯಾಕಿಲ್ಲ? ನಾವಿನ್ನೂ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಕನಸುಗಳಿಗೂ ಕೋಳ ತೊಡಿಸುವ ಕಾಲ ಹೆಚ್ಚು ದೂರವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.