ದೇವರನಾಡಿನಲ್ಲಿ ಸುಪ್ತವಾಗಿ ಹಬ್ಬುತ್ತಿರುವ ಮತಾಂತರಕ್ಕೆ ದೊಡ್ಡ ಮಟ್ಟದಲ್ಲಿ ತಡೆಯಾಗಿರುವುದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯದ ಪ್ರಭಾವ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಶಬರಿಮಲೆ ದೇವಾಲಯಕ್ಕೆ ಹೋಗುವವರು ಅನುಸರಿಸಬೇಕಾದ ನಿಯಮಗಳು, ಪಾಲಿಸಬೇಕಾದ ವ್ರತದ ಕಾಠಿಣ್ಯವನ್ನು ನೋಡುವಾಗ, ಅವುಗಳನ್ನು ಅನುಷ್ಠಾನ ಮಾಡುವವರಿಗೆ ಅದೆಂತಹ ಭಕ್ತಿ, ಶ್ರದ್ಧೆ ಇರಬಹುದು ಎಂಬ ಅರಿವಾಗುತ್ತದೆ. ಈ 41 ದಿನಗಳ ವ್ರತವನ್ನು ಆಚರಿಸಿದ ಅಯ್ಯಪ್ಪ ಸ್ವಾಮಿಯ ಅದೆಷ್ಟೋ ಲಕ್ಷಾಂತರ ಭಕ್ತರ ಜೀವನದಲ್ಲಿ ಹೊಸತಾದ ಪರಿವರ್ತನೆ ಬಂದಿರುವುದನ್ನು ತಳ್ಳಿಹಾಕಲು ಸಾಧ್ಯವೇ? ಆ ಮೂಲಕ ಅದೆಷ್ಟೋ ಕುಟುಂಬಗಳಲ್ಲಿ ಕಳೆದು ಹೋಗಿದ್ದ ಸಂತೋಷ ನೆಮ್ಮದಿ ಮರಳಿ ಬರುವ ಮೂಲಕ ಹೊಸ ಜೀವನ ಆರಂಭವಾಗಿರುವುದನ್ನು ಅಲ್ಲಗೆಳೆಯಲು ಸಾಧ್ಯವೆ? ಇಂತಹ ಪರಿವರ್ತನೆ ಕಂಡ ಕುಟುಂಬಗಳು ಮತಾಂತರ ಎಂಬ ಪಿಡುಗಿಗೆ ಎಂದಿಗೂ ಬಲಿಯಾಗಲಾರದು ಮತ್ತು ತನ್ನ ಸುತ್ತಮುತ್ತಲ ಪರಿಸರದಲ್ಲೂ ಮತಾಂತರದಂತಹ ಘಟನೆಗಳು ನಡೆಯಲು ಯಾವುದೇ ರೀತಿಯ ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ಕ್ರಿಶ್ಚಿಯನ್ ಮಿಷಿನರಿಗಳಿಗೆ ಭಾರಿ ಹೊಡೆತ ಬಿದ್ದಿದೆ.ಹಲವು ದಶಕಗಳಿಂದ ಈ ಕಮ್ಯುನಿಸ್ಟರು, ಕ್ರಿಶ್ಚಿಯನ್ ಮಿಶಿನರಿಗಳು ಅಯ್ಯಪ್ಪ ಸ್ವಾಮಿ ದೇವಾಲಯದ ಮೇಲೆ ಮತ್ತು ಭಕ್ತರ ಶ್ರದ್ಧೆಯ ಮೇಲೆ ದಾಳಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ ಎನ್ನುವುದನ್ನು ಹಲವಾರು ಆಸ್ತಿಕರು ಗಮನಿಸುತ್ತಲೇ ಬಂದಿದ್ದಾರೆ.
ಆದರೆ ಇತ್ತಿಚೆಗೆ ಕೇರಳದ ಹಿಂದೂಗಳು ಹಿಂದೆಂದೂ ಕಂಡಿರದ ರೀತಿಯಲ್ಲಿ ಒಂದಾಗಿದ್ದಾರೆ. ಲಕ್ಷಾಂತರ ಹಿಂದೂ ಮಹಿಳೆಯರು ಒಟ್ಟಾಗಿ ಬೀದಿಗಿಳಿದ್ದಾರೆ. ಯಾಕೆಂದರೆ ಹಿಂದೂಗಳ ಅತಿದೊಡ್ಡ ಎನ್ನಬಹುದಾದ ಶ್ರದ್ಧಾಕೇಂದ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆದಿದೆ. ಸ್ವತಃ ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ನಿಂತು ಈ ಕೆಲಸ ಮಾಡಿಸುತ್ತಿದೆ ಎನ್ನುವ ಅನುಮಾನವಿದೆ. ಹೇಗಾದರೂ ಮಾಡಿ ಹಿಂದೂಗಳಲ್ಲಿ ಸ್ವಾಮಿ ಅಯ್ಯಪ್ಪನ ಕುರಿತು ಶ್ರದ್ಧೆಯನ್ನು ಕಡಿಮೆ ಮಾಡಬೇಕು, ಅಲ್ಲಿನ ಆಚರಣೆಗಳಿಗೆ ಧಕ್ಕೆ ಉಂಟುಮಾಡಬೇಕು, ಭಕ್ತರಲ್ಲಿ ಗೊಂದಲ ಮೂಡಿಸಬೇಕು ಎಂದು ಯೋಚಿಸಿದ ಅವರು ಎಲ್ಲ ಹಿಂದೂ ವಿರೋಧಿಗಳನ್ನು ಜತೆ ಸೇರಿಸಿಕೊಂಡು ದೇವಳದಲ್ಲಿ ಹತ್ತಾರು ಶತಮಾನಗಳಿಂದ ಗೌರವಿಸಿಕೊಂಡಿರುವ ಸಂಪ್ರದಾಯವನ್ನು ತಿರುಚಿ ಅದಕ್ಕೆ ಲಿಂಗಬೇಧದ ಬಣ್ಣ ಹಚ್ಚಿ ನ್ಯಾಯಾಲಯದ ಮೆಟ್ಟಿಲೇರಿಸಿದರು ಎನ್ನುವ ಅಭಿಪ್ರಾಯವೂ ಇದೆ. “ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕೊಡಬೇಕು, ಲಿಂಗದ ಆಧಾರದ ಮೇಲೆ ಮಹಿಳೆಯರ ಶೋಷಣೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. ಆದರೆ ವಾಸ್ತವವಾಗಿ ಯಾವುದೇ ಆಸ್ತಿಕ ಮಹಿಳೆ ಆ ನಿರ್ಧಿಷ್ಟ ವಯಸ್ಸಿನಲ್ಲಿ ಶಬರಿಮಲೆಗೆ ಪ್ರವೇಶಿಸಲು ಅಪೇಕ್ಷಿಸುವುದೇ ಇಲ್ಲ, ಯಾಕೆಂದರೆ ಪ್ರತಿಯೊಂದು ಮಹಿಳೆಗೂ ಆ ಕ್ಷೇತ್ರದ ಪದ್ಧತಿಗಳೇನು ಮತ್ತು ಅದರ ಹಿನ್ನೆಲೆಗಳೇನು ಎಂಬ ಸ್ಪಷ್ಟವಾದ ಅರಿವಿದೆ. ಅವರು ಆ ವಯಸ್ಸು ಮೀರುವವರೆಗೂ ಭಕ್ತಿಯಿಂದ ಕಾಯಲು ಸಿದ್ಧರಿದ್ದಾರೆ. ವಿಪರ್ಯಾಸವೆಂದರೆ ಯಾರು ಹಿಂದೂ ಧರ್ಮದವರೇ ಅಲ್ಲವೋ, ಯಾರು ತಪ್ಪಾಗಿ ಹಿಂದೂ ಧರ್ಮದಲ್ಲಿ ಹುಟ್ಟಿದವರಂತೆ ವರ್ತಿಸುವ ಎಡಚರೋ ಅಂತಹ ಮಹಿಳೆಯರು ಪ್ರವೇಶ ನಿಷೇಧವಿರುವ ವಯಸ್ಸಿನಲ್ಲೇ ಪ್ರವೇಶಿಸಬೇಕೆನ್ನುವುದನ್ನು ಹಠ ಅಥವಾ ಚಟ ಅನ್ನಬಹುದು. ಇದು ಧರ್ಮವನ್ನು ನಾಶ ಮಾಡುವ ಉದ್ದೇಶವಾಗಿರದೆ ಬೇರೇನಾಗಿರಲು ಸಾಧ್ಯ? ಸೋ ಕಾಲ್ಡ್ ಮಹಿಳೆಯರ ಪರವಾಗಿನ ಸುಪ್ರೀಂ ಕೋರ್ಟ್ ತೀರ್ಪನ್ನು ಕೋಟ್ಯಾಂತರ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ನಮಗ್ಯಾರಿಗೂ ಆ ನಿರ್ದಿಷ್ಟ ವಯಸ್ಸಿನಲ್ಲಿ ಶಬರಿಮಲೆ ಪ್ರವೇಶಿಸುವ ಅಪೇಕ್ಷೆ ಇಲ್ಲ, ಅಂತಹ ಯಾವ ಮಹಿಳೆಯರನ್ನು ಪ್ರವೇಶಿಸಲು ನಾವು ಬಿಡುವುದಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ನಿಷೇಧವನ್ನು ಮೀರಿ ಮಹಿಳೆ ಏನಾದರೂ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಿದ್ದಲ್ಲಿ ಕ್ಷೇತ್ರದ ಪಾವಿತ್ರ್ಯತೆ ನಾಶವಾಗುತ್ತದೆ, ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ ಎಂಬ ಪ್ರತೀತಿ ಇದೆ. ಮಹಿಳೆಯರ ಪರವಾಗಿದೆ ಎಂದು ಹೇಳಲಾಗುವ ತೀರ್ಪನ್ನು ಇಷ್ಟು ಬೃಹತ್ ಸಂಖ್ಯೆಯಲ್ಲಿ ಜಗತ್ತಿನ ಮೂಲೆಮೂಲೆಗಳಲ್ಲಿ ಮಹಿಳೆಯರು ಬೀದಿಗೆ ಬಂದು ವಿರೋಧಿಸುತ್ತಿರುವುದನ್ನು ನೋಡಿದಾಗ ಇದು ಅಯ್ಯಪ್ಪ ಸ್ವಾಮಿಯ ಮಹಿಳಾ ಭಕ್ತರ ಭಾವನೆಗಳಿಗೆ ವಿರುದ್ಧವಾದುದು, ಆ ಶ್ರದ್ಧೆಯನ್ನು ನಾಶ ಮಾಡುವ ಉದ್ದೇಶದಿಂದ ಧರ್ಮದ್ರೋಹಿಗಳ ವ್ಯವಸ್ಥಿತ ಹುನ್ನಾರ ಇದು ಎಂಬುದು ಸ್ಪಷ್ಟವಾಗುತ್ತದೆ.
ಹಾಗಿದ್ದರೆ ಅದ್ಯಾವ ನಿಯಮ ಇಷ್ಟೊಂದು ಸದ್ದು ಮಾಡುತ್ತಿದೆ? ನಿಯಮದ ಹಿನ್ನೆಲೆ ಏನು?
ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ಮಾಡುವವರು ೪೧ ದಿನಗಳ ಕಾಲ ಕಠಿಣ ಬ್ರಹ್ಮಚರ್ಯ ವೃತವನ್ನು ಆಚರಿಸಬೇಕು, ದಿನಕ್ಕೆ ಎರಡು ಬಾರಿ ತಣ್ಣೀರ ಸ್ನಾನ ಮಾಡಬೇಕು, ಮಡಿಯಲ್ಲಿ ತಯಾರಿಸಿದ ಸಸ್ಯಾಹಾರವನ್ನೇ ಸೇವಿಸಬೇಕು, ದುರ್ಗಮ ಬೆಟ್ಟದ ದಾರಿಯನ್ನು ಕಾಲ್ನಡಗಿಯಲ್ಲಿಯೇ ಪಯಣಿಸಬೇಕು, ಯಾವುದೆ ಮಹಿಳೆಯರ ಸಂಪರ್ಕ ಹೊಂದಬಾರದು ಎಂಬಂತಹ ಇನ್ನೂ ಹಲವು ಕಾಠಿಣ್ಯದ ನಿಯಮಗಳನ್ನು ಪಾಲಿಸಲೇಬೇಕು. ಅದೇ ರೀತಿ ಮಹಿಳೆಯರ ವಿಷಯದಲ್ಲಿ ಹತ್ತು ವರ್ಷದಿಂದ ಐವತ್ತು ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅಂದರೆ ಮಹಿಳೆ ರಜೋದರ್ಶನ (ಮೊದಲ ಸಲ ಋತುಮತಿ ಆಗುವುದು) ದಿಂದ ರಜೋನಿವೃತ್ತಿ(ಋತುಬಂಧ)ಯ ಅವಧಿಯಲ್ಲಿನ ಮಹಿಳೆಯರಿಗೆ ಪ್ರವೇಶ ಇಲ್ಲದಿರುವುದರಿಂದ, ರಜಸ್ವಲೆಯಾದ ಮಹಿಳೆ ಅಪವಿತ್ರಳು, ಬಹಿಷ್ಟೆ ಎಂಬ ಕಾರಣದಿಂದ ಅವರುಗಳಿಗೆ ಪ್ರವೇಶ ನಿರಾಕರಿಸಿಲಾಗಿದೆ ಎಂಬಂತೆ ಬಿಂಬಿಸಲಾಯಿತು. ಆದರೆ ವಾಸ್ತವ ಬೇರೆಯದೇ ಇದೆ. ಪುರಾತನ ಕಾಲದಿಂದಲೂ ಋತುಮತಿಯಾದ ಮಹಿಳೆ ದೇವಸ್ಥಾನಗಳನ್ನು ಪ್ರವೇಶಿಸುವುದಿಲ್ಲ ಮತ್ತು ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ. ರಜಸ್ವಲೆಯಾದ ಮಹಿಳೆಯರ ದೇಹದಲ್ಲಿ ರಜೋಗುಣ ಅಧಿಕವಾಗಿರುತ್ತದೆ ಎಂಬ ಕಾರಣವನ್ನು ಕೊಡಲಾಗುತ್ತದೆ. ಆದರೆ ಶಬರಿಮಲೆಯಲ್ಲಿ ರಜೋದರ್ಶನದಿಂದ ರಜೋನಿವೃತ್ತಿಯ ವರೆಗಿನ ಅವಧಿಯ ಮಹಿಳೆಯರ ಪ್ರವೇಶ ನಿಷೇಧಿಸಿರುವುದಕ್ಕೆ ಕೇವಲ ಅವಳು ರಜಸ್ವಲೆಯಾಗುತ್ತಾಳೆಂಬ ಕಾರಣ ಅಲ್ಲವೇ ಅಲ್ಲ.
ದೇವಸ್ಥಾನಗಳು ಆಗಮಿಕ ಶಾಸ್ತ್ರಗಳ ಆಧಾರದ ಮೇಲೆ ನಿರ್ಮಿಸಲಾಗುವ ಶಕ್ತಿ ಕ್ಷೇತ್ರಗಳಾಗಿದ್ದು ಪ್ರತಿಯೊಂದು ದೇವಸ್ಥಾನವನ್ನೂ ನಿರ್ದಿಷ್ಟ ಕಾಂತೀಯ ಕ್ಷೇತ್ರದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಹಾಗಾಗಿ ದೇವಾಲಯದ ಆವರಣದಲ್ಲಿ ಧನಾತ್ಮಕ ಶಕ್ತಿಯೊಂದು ಪ್ರವಹಿಸುತ್ತಿರುತ್ತದೆ. ದೇವಸ್ಥಾನಗಳು ನಮ್ಮ ಜೀವ ಶಕ್ತಿಯನ್ನು ಊರ್ಧ್ವಮುಖವಾಗಿ ಚಲಿಸುವಂತೆ ಮಾಡುತ್ತವೆ. ಮಹಿಳೆಯರ ಋತುಚಕ್ರದ ಸಮಯದಲ್ಲಿ ಶಕ್ತಿಯು ಕೆಳಮುಖವಾಗಿ ಚಲಿಸುತ್ತಿರುತ್ತದೆ. ಈ ಕಾಲದಲ್ಲಿ ಆಕೆ ದೇವಸ್ಥಾನಗಳಂತ ಊರ್ಧ್ವಮುಖಿ ಶಕ್ತಿಯ ಜಾಗಗಳಿಗೆ ಭೇಟಿ ನೀಡಿದರೆ ಆಕೆಯ ಗರ್ಭಾಶಯಕ್ಕೆ ತೊಂದರೆ ಆಗಬಹುದು ಮಾತ್ರವಲ್ಲ ಇದರಿಂದಾಗಿ ಆಕೆ ಮುಂದೆ ಬಂಜೆ ಆಗುವ ಸಾಧ್ಯತೆಗಳೂ ಇವೆ ಎಂದು ಹಿರಿಯ ವೈದ್ಯೆ ನಿಶಾ ಪಿಳ್ಳೈ ಹೇಳಿದ್ದನ್ನು ಇಲ್ಲಿ ಗಮನಿಸಬಹುದು. ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ನೈಸ್ತಿಕ ಬ್ರಹ್ಮಚಾರಿ ಸ್ವರೂಪದಿಂದ ನೆಲೆಸಿರುತ್ತಾನೆ. ಅವನು ನಿರಂತರ ಬ್ರಹ್ಮಚರ್ಯ ಆಚರಿಸುವುದರ ಜೊತೆಗೆ ಬ್ರಹ್ಮಚರ್ಯದ ಪ್ರೇರಕನೂ ಆಗಿದ್ದಾನೆ. ಹೀಗಾಗಿ ಸಂಪೂರ್ಣ ಆವರಣವು ಬ್ರಹ್ಮಚರ್ಯ ಶಕ್ತಿಯನ್ನೇ ಪ್ರಚೋದಿಸುವ ಸ್ಥಳವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಸ್ತ್ರೀಯರು ಸಂತಾನೋತ್ಪತ್ತಿಯ (ರಜೋದರ್ಶನದಿಂದ ರಜೋನಿವೃತ್ತಿ) ಅವಧಿಯಲ್ಲಿ ಪ್ರವೇಶಿಸುವುದರಿಂದ ಸ್ತ್ರೀಯರ ಸಂತಾನೋತ್ಪತ್ತಿಯ ಸಾಮರ್ಥ್ಯವೇ ಕುಗ್ಗಿಹೋಗುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ. ಹಾಗಾಗಿ ಈ ಅವಧಿಯನ್ನು ಹೊರತು ಪಡಿಸಿದ ಮಹಿಳೆಯರು, ಅಂದರೆ ಹತ್ತು ವರ್ಷದ ಒಳಗಿನವರು ಹಾಗೂ ಐವತ್ತು ವರ್ಷ ದಾಟಿದ ಮಹಿಳೆಯರಿಗೆ ಮುಕ್ತಪ್ರವೇಶ ಇದೆ. ನಿರ್ಧಿಷ್ಟ ವಯಸ್ಸಿನ ನಿರ್ಬಂಧ ಇರುವುದು ಮಹಿಳೆ ಋತುಮತಿಯಾಗುವುದರಿಂದ ಅಶುದ್ಧ ಎಂಬ ಕಾರಣಕ್ಕೆ ಅಲ್ಲ ಬದಲಿಗೆ, ದೇವಸ್ಥಾನದ ವಿಶಿಷ್ಟವಾದ ಸಂಸ್ಕೃತಿ ಮತ್ತ ಆಚರಣೆಯ ಕಾರಣದಿಂದಾಗಿ ಹಾಗೂ ಆ ಅವಧಿಯಲ್ಲಿ ಮಹಿಳೆ ಪ್ರವೇಶಿಸಿದರೆ ಅವಳ ಆರೋಗ್ಯದ ಮೇಲೆ ಪರಿಣಾಮ ಬೀಳುವುದರಿಂದ ಮಹಿಳೆಯರ ಒಳಿತಿಗಾಗಿಯೇ ಈ ನಿಯಮ ಇರುವುದು. ಎಲ್ಲ ಆಸ್ತಿಕ ಮಹಿಳೆಯರು, ಅಯ್ಯಪ್ಪ ಸ್ವಾಮಿಯ ಮಹಿಳಾ ಭಕ್ತರು ಇದನ್ನು ತಲೆತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.
ಹಿಂದೂ ಧರ್ಮ ವೈವಿಧ್ಯಮಯ ಆಚರಣೆಯ ಸಂಪ್ರದಾಯಗಳು, ವಿವಿಧತೆಯಲ್ಲಿ ಏಕತೆ ಎಂಬತಹ ತಳಹದಿಯ ಮೇಲೆ ಸ್ಥಾಪಿತವಾಗಿದೆ ನಮ್ಮ ಹಿಂದೂ ಸಂಸ್ಕೃತಿ. ಶಬರಿಮಲೆ ಇಂತಹ ಒಂದು ವಿಶಿಷ್ಟವಾದ ಸಂಪ್ರದಾಯವಾಗಿದೆ. ಆದರೆ ಸಮಾನತೆಯ ಹೆಸರಿನಲ್ಲಿ ವಿಶಿಷ್ಟ ಸಂಪ್ರದಾಯಗಳಿಗೆ ಅಂತ್ಯಹಾಡಿ, ಸಂಸ್ಕೃತಿಯನ್ನು ನಾಶಮಾಡುವ ಕೆಲಸವನ್ನು ಹಿಂದೂ ವಿರೋಧಿ ಶಕ್ತಿಗಳು ಮಾಡುತ್ತಿವೆ. ಸಮಾನತೆಯ ಹೆಸರಿನಲ್ಲಿ, ಹಕ್ಕುಗಳ ಹೆಸರಿನಲ್ಲಿ ಕ್ಷೇತ್ರದ ಸಂಪ್ರದಾಯಗಳನ್ನು ಮೀರಿದರೆ, ದೇವರ ಆಶಯಗಳನ್ನು ಗೌರವಿಸದಿದ್ದಲ್ಲಿ ಸ್ವಾಮಿ ಅಯ್ಯಪ್ಪನನ್ನು ನೈಸ್ತಿಕ ಬ್ರಹ್ಮಚಾರಿ ಅವತಾರದಲ್ಲಿ ದರ್ಶನ ಪಡೆಯುವ ಈ ವಿಶಿಷ್ಟ ಸಂಪ್ರದಾಯವನ್ನೇ ನಾವು ಶಾಶ್ವತವಾಗಿ ಕಳೆದುಕೊಳ್ಳುವ ಸಂದರ್ಭ ಬರಬಹುದು. ಸಮಾನತೆಯ ಮುಖವಾಡ ಧರಿಸಿ ಹಿಂದೂ ಧರ್ಮದ ಮೂಲ ಆಶಯಕ್ಕೇ ಧಕ್ಕೆ ಉಂಟು ಮಾಡುವುದು ಸರ್ವಥಾ ಸಲ್ಲ.
ಕ್ಷೇತ್ರದ ಆರಾಧ್ಯ ದೇವರ ಆಚರಣೆಗಳು, ಸಂಪ್ರದಾಯಗಳು ತಪ್ಪಿದ ಮೇಲೆ ದೇವಸ್ಥಾನದ ಶಕ್ತಿಗೆ ಬೆಲೆಯುಂಟೇ? ಇದರಿಂದ ಸಮಸ್ತ ಹಿಂದೂ ಸಮಾಜಕ್ಕೆ, ಅಯ್ಯಪ್ಪ ಸ್ವಾಮಿಯ ಭಕ್ತರಿಗೆ (ಮಹಿಳೆಯರು ಹಾಗೂ ಪುರುಷರು) ಎಲ್ಲರಿಗೂ ತುಂಬಲಾರದ ನಷ್ಟ ಎಂಬುದಂತೂ ಸತ್ಯ. ಹಾಗಾಗಿ ಹಿಂದೂ ಧರ್ಮದ ಅತಿದೊಡ್ಡ ಶ್ರದ್ಧಾ ಕೇಂದ್ರದ ಸಂಸ್ಕೃತಿಯನ್ನು ಉಳಿಸಲು ನಾವು ಈ ಧರ್ಮಯುದ್ಧಕ್ಕೆ ಧುಮುಕಲೇಬೇಕು. ಕಮ್ಯುನಿಸ್ಟರು ಹಿಂದೂ ಧರ್ಮದ ಮೇಲೆ ಮಾಡುತ್ತಿರುವ ದಾಳಿಗೆ ಸಮರ್ಪಕ ಉತ್ತರ ನೀಡಲೇಬೇಕು. ಇಲ್ಲದಿದ್ದರೆ ದೇವರು ಧರ್ಮದೊಂದಿಗಿನ ಒಂದೊಂದೇ ಕೊಂಡಿಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.