ಶೈಲಶ್ರೀ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಎ.ಸಿ.ನರಸಿಂಹಮೂರ್ತಿ ಹಾಗೂ ಎ.ಪ್ರಭಾಕರ್ ರಾವ್ ರವರು 1966 ರಲ್ಲಿ ನಾಡಿನ ಹೆಮ್ಮೆಯ ಸಾಹಿತಿಗಳಾದ ಅ.ನ.ಕೃಷ್ಣರಾಯರ (ಅ.ನ.ಕೃ) “ಸಂಧ್ಯಾರಾಗ” ಕಾದಂಬರಿಯನ್ನು ಆಯ್ದು ಎಸ್.ಕೆ.ಭಗವಾನ್ ರವರೇ ಚಿತ್ರಕಥೆ ಬರೆದು ಎ.ಸಿ.ನರಸಿಂಹಮೂರ್ತಿ ರವರ ಜೊತೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಜಿ.ಕೆ.ವೆಂಕಟೇಶ್ ಸೇರಿದಂತೆ ವಿದ್ವಾನ್ ಬಾಲಮುರಳಿಕೃಷ್ಣ ಹಾಗೂ ಪಂಡಿತ್ ಭೀಮಸೇನ್ ಎಂಬ ದೈತ್ಯ ಪ್ರತಿಭಾನ್ವಿತರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಉದಯ್ ಕುಮಾರ್, ಕೆ.ಎಸ್.ಅಶ್ವಥ್, ನರಸಿಂಹರಾಜು, ಭಾರತಿ, ಪಂಡರೀಬಾಯಿ, ಜೂನಿಯರ್ ರೇವತಿ, ಇಂದ್ರಾಣಿ, ಶಾಂತಮ್ಮ, ಶೈಲಶ್ರೀರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ರಾಷ್ಟ್ರಪ್ರಶಸ್ತಿಯನ್ನು ಅತ್ತ್ಯುತ್ತಮ ಚಿತ್ರಕ್ಕಾಗಿ, 1966-67ನೇ ಸಾಲಿನ ಮೂರನೇ ಅತ್ಯುತ್ತಮ ಚಿತ್ರ, ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಥೆ:
ಪಂಡಿತ್ ಭೀಮಸೇನ್ ಜೋಷಿ ರವರ ದನಿಯಲ್ಲಿ “ಕನ್ನಡತಿ ತಾಯೆ ಬಾ” ಎಂಬ ಗೀತೆಯೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಲಕ್ಷ್ಮಣನಿಗೆ (ರಾಜಕುಮಾರ್) ಸಂಗೀತದ ಮೇಲೆ ಒಲವು. ಹಾಗಾಗಿ ವಿದ್ಯೆ ಶೂನ್ಯ. ಅದೇ ರಾಮಣ್ಣ (ಉದಯ್ ಕುಮಾರ್) ಓದಿನ ಮೇಲೆ ಆಸಕ್ತಿ ತೋರಿ, ಚೆನ್ನಾಗಿ ಓದಿ ಲಾಯರ್ ಕೂಡ ಆಗುತ್ತಾನೆ. ಶ್ರೀನಿವಾಸರಾಯರು (ಅಶ್ವಥ್) ಹಾಗೂ ಮೀನಾಕ್ಷಮ್ಮ (ಪಂಡರೀಬಾಯಿ) ಅವರ ಮಕ್ಕಳಾದ ಇವರು ತಂದೆತಾಯಿಯ ಆದರ್ಶದ ನೆರಳಿನಲ್ಲಿ ಬದುಕುತ್ತಾರೆ. ಲಕ್ಷ್ಮಣನಿಗಿರುವ ನಯ ವಿನಯ ರಾಮಣ್ಣನಲ್ಲಿ ಇರುವುದಿಲ್ಲ. ರಾಮಣ್ಣನ ವಿದ್ಯಾಭ್ಯಾಸ ಹಾಗೂ ಲಕ್ಷ್ಮಣನ ಸಂಗೀತಾಭ್ಯಾಸಕ್ಕಾಗಿ ಬೆಂಗಳೂರಿಗೆ ಕುಟುಂಬ ಸಮೇತ ಹಳ್ಳಿ ಬಿಟ್ಟು ಹೋಗುತ್ತಾರೆ. ಇವರ ಮನೆಯಲ್ಲಿ ವಾರಾನ್ನದ ನೆಪದಲ್ಲಿ ಬಡಮಕ್ಕಳಿಗೆ ಊಟ ಹಾಕುತ್ತಾರೆ. ಅಷ್ಟೇ ಅಲ್ಲದೇ ಬಡವಿದ್ಯಾರ್ಥಿಗಳಿಗೂ ಸಹ ಆಶ್ರಯ ಕೊಡುತ್ತಾರೆ. ಹೀಗೆ ಆಶ್ರಯ ಪಡೆದ ವೆಂಕಟೇಶ (ನರಸಿಂಹರಾಜು) ಆ ಕುಟುಂಬಕ್ಕೆ ವಿಧೇಯನಾಗಿರುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಹುತೇಕ ಸಿನಿಮಾಗಳಲ್ಲಿ ನಗಿಸುತ್ತಿದ್ದ ನರಸಿಂಹರಾಜು ರವರು ಇಲ್ಲಿ ಹೆಚ್ಚಾಗಿ ನಗಿಸುವುದಿಲ್ಲ. ಕಥೆಗೆ ಪೋಷಕ ಪಾತ್ರ ಮಾಡಿದ್ದಾರೆ. ಲಕ್ಷ್ಮಣನ ಸಂಗೀತ ಸಾಧನೆಗೆ ಸಹಾಯ ಮಾಡುತ್ತಾರೆ. ಮೀನಾಕ್ಷಮ್ಮನ ಆಸೆಯಂತೆ ವೆಂಕಟೇಶನಿಗೆ ತನ್ನ ಮಗಳನ್ನು ಕೊಟ್ಟು ಮದುವೆಯೂ ಮಾಡುತ್ತಾರೆ. ತಂಗಿಯ ಮದುವೆಯ ನಂತರ ರಾಮಣ್ಣ ಹಾಗೂ ಲಕ್ಷ್ಮಣನಿಗೂ ಮದುವೆಯಾಗುತ್ತದೆ. ಒಂದು ಬಿಡಿಗಾಸು ದುಡಿದು ತರದೇ, ಸಂಗೀತ ಸಾಧನೆಯಲ್ಲೇ ತೊಡಗಿಸಿಕೊಂಡ ಲಕ್ಷ್ಮಣನಿಗೆ ಜಯಲಕ್ಷ್ಮಿ ಹೆಂಡತಿಯಾಗಿ ಗಂಡನ ಶ್ರೇಯೋಭಿಲಾಷೆಯಂತೆ ಬೆನ್ನ ಹಿಂದೆ ಪ್ರೋತ್ಸಾಹಿಸುತ್ತಾಳೆ. ಇದಲ್ಲವೇ ಗಂಡ-ಹೆಂಡತಿ ಅನುರಾಗ.
ಇವರೆಲ್ಲರ ಮದುವೆಯ ನಂತರ ಮೀನಾಕ್ಷಮ್ಮಳಿಗೆ ಕಾಯಿಲೆ ಶುರುವಾಗಿ, ಕೊನೆಗೂ ಕೊನೆಯುಸಿರೆಳೆಯುತ್ತಾಳೆ. ಹೆಂಡತಿಯನ್ನು ಕಳೆದುಕೊಂಡ ನಂತರ ಶ್ರೀನಿವಾಸರಾಯರು ಕೌಟುಂಬಿಕ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ. ಒಮ್ಮೆ ಕರೆಂಟು ಬಿಲ್ಲು ಹೆಚ್ಚಾಗಿ ಬಂದಿದೆ ಎಂಬ ಕಾರಣಕ್ಕಾಗಿ ರಾತ್ರಿ ಒಂಬತ್ತು ಗಂಟೆಗೆ ಮನೆಯ ಎಲ್ಲಾ ಲೈಟ್ ಆಫ್ ಮಾಡಿ, ಕತ್ತಲು ಮಾಡಿಸುತ್ತಾನೆ ರಾಮಣ್ಣ. ಇದರಿಂದ ಕೋಪಗೊಂಡು ರಾಮಣ್ಣನಿಗೆ ಬುದ್ದಿ ಹೇಳಲು ಅವಸರವಾಗಿ ಮೆಟ್ಟಿಲು ಹತ್ತುತ್ತಿದ್ದ ಶ್ರೀನಿವಾಸರಾಯರು ಮೆಟ್ಟಿಲಿಂದ ಜಾರಿಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ. ಅಲ್ಲಿಂದ ಕುಟುಂಬದ ಚಿತ್ರಣವೇ ಬದಲಾಗುತ್ತದೆ. ಸಾಯುವ ಮುನ್ನ ಜಯಲಕ್ಷ್ಮಿ ತನ್ನ ಅತ್ತೆ ಮೀನಾಕ್ಷಮ್ಮನಿಗೆ ಕೊಟ್ಟ ಮಾತಿನಂತೆ ಅದೆಷ್ಟೇ ನೋವು-ತೊಂದರೆಗಳಾದರೂ ಮನೆ ಭಾಗವಾಗಲು ಒಪ್ಪುವುದಿಲ್ಲ ಅಲ್ಲದೇ ಎಲ್ಲರೂ ಒಂದೇ ಸೂರಿನಡಿ ಇರಲು ಪ್ರಯತ್ನಿಸುತ್ತಾರೆ. ಅತ್ತೆ ಬದುಕಿರುವಾಗಲೇ ಸಾಸಿವೆ ಕಾಳಿನಷ್ಟು ಬೆಲೆ ಕೊಡದ ಸೊಸೆಯರು ಜಯಲಕ್ಷ್ಮಿಯನ್ನು ನೋಡಿ ಕಲಿಯಬೇಕು ಎನಿಸುತ್ತದೆ. ಕುಟುಂಬದ ಹಿರಿಯರಾಗಿ ಮಕ್ಕಳು, ಸೊಸೆಯಂದಿರನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಪರಿಯನ್ನು ಪ್ರತಿ ಹಿರಿಯರು ಸೂಕ್ಷ್ಮವಾಗಿ ಗಮನಿಸಬೇಕು. ಕುಟುಂಬದಲ್ಲಿ ಹಿರಿಯರು ಅನ್ನೋರು ಇಲ್ಲದೇ ಹೋದರೆ, ಪ್ರತಿಯೊಬ್ಬರ ಸ್ವೇಚ್ಛತೆಯಿಂದ ಅದೆಷ್ಟು ಅನಾಹುತಗಳಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ಕಾಣಬಹುದು.
ಬರುಬರುತ್ತಾ ರಾಮಣ್ಣನ ಕೋಪ ಹೆಚ್ಚಾಗಿ, ಕೋಪದೊಂದಿಗೆ ಅಹಂಕಾರವೂ ಹೆಚ್ಚಾಗಿ ದರ್ಪ, ದುವರ್ತನೆ ಅವನಲ್ಲಿ ರಣತಾಂಡವವಾಡುತ್ತದೆ. ಇದರ ಪರಿಣಾಮವಾಗಿ ವೆಂಕಟೇಶ ಕೂಡ ಮನೆ ಬಿಟ್ಟು ಹೋಗುತ್ತಾನೆ. ತಮ್ಮ ಲಕ್ಷ್ಮಣ ಹಾಗೂ ಅವನ ಹೆಂಡತಿ ದನದ ಕೊಟ್ಟಿಗೆಯನ್ನೇ ವಾಸದ ಮನೆಯನ್ನಾಗಿ ಮಾಡಿಕೊಂಡಿರಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಿರುವಾಗ ಒಮ್ಮೆ ಬಾವಿಯಿಂದ ನೀರು ಸೇದುವ ಸಮಯದಲ್ಲಿ ಬಂದ ಹೊಟ್ಟೆ ನೋವಿನಿಂದ ಅವಳು ಒಂದೆರಡು ದಿನಗಳು ಬಳಲಿ ಕೊನೆಯುಸಿರೆಳೆಯುತ್ತಾಳೆ. ನೊಂದವರಿಗೇನೆ ಹೆಚ್ಚು ಕೆಡುಕು ಹಾಗೂ ತೊಂದರೆಗಳು. ವಿಶೇಷವೆಂದರೆ ಹಗಲಿನಲ್ಲಿ ಟ್ರಾಫಿಕ್ ಇಲ್ಲದ ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಈ ಸಿನಿಮಾದ ಕೆಲ ದೃಶ್ಯಗಳಲ್ಲಿ ಕಾಣಬಹುದು. ಹೆಂಡತಿಯನ್ನು ಕಳೆದುಕೊಂಡ ಲಕ್ಷ್ಮಣ ಬೆಂಗಳೂರಿನಿಂದ ಮದರಾಸಿಗೆ ಪ್ರಯಾಣಿಸಿ ತಂಜಾವೂರು ಕೃಷ್ಣಯ್ಯನವರ ಬಳಿ ಶಿಷ್ಯವೃತ್ತಿ ಮಾಡಿ, ವಾಪಾಸು ಬಂದು ದೇಶದ ಹಲವೆಡೆ ಸಂಗೀತ ಕಚೇರಿ ನೀಡುತ್ತಾನೆ. ಲಕ್ಷ್ಮಣನನ್ನು ಲಕ್ಷ್ಮಣರಾಯರು ಎಂದು ಕರೆದು ಜನ ಗೌರವಿಸಿ ಪ್ರೀತಿಸುವ ಮಟ್ಟಕ್ಕೆ ಬೆಳೆದು ನಿಲ್ಲುತ್ತಾನೆ. ಅತ್ತ ತನ್ನ ಕೋಪ ಹಾಗೂ ದುರಹಂಕಾರದಿಂದ ತನ್ನನ್ನು ತಾನೇ ಸುಟ್ಟುಕೊಂಡಂತಾಗಿದ್ದ ರಾಮಣ್ಣ ಕೊನೆಗೆ ಬುದ್ದಿ ಕಲಿತು ಪಶ್ಚಾತ್ತಾಪದಿಂದ ಲಕ್ಷ್ಮಣ ಹಾಗೂ ವೆಂಕಟೇಶನನ್ನು ಸೇರುತ್ತಾನೆ. ಒಂದೊಮ್ಮೆ ಬೆಂಗಳೂರಿನ ಟೌನ್ ಹಾಲಿನಲ್ಲಿ ಲಕ್ಷ್ಮಣರಾಯರ ಸಂಗೀತ ಕಚೇರಿ ಏರ್ಪಡಿಸಿರುತ್ತಾರೆ. ಮೈಸೂರು ಮಹಾರಾಜರು ಹಾಗೂ ಶೃಂಗೇರಿ ಶ್ರೀಗಳು ಕಳುಹಿಸಿದ ಪ್ರಶಸ್ತಿಗಳನ್ನು ಸ್ವೀಕರಿಸಿ ಜನರ ಒತ್ತಾಯದ ಮೇರೆಗೆ ಪೂರ್ವ ಕಲ್ಯಾಣಿ ರಾಗದಲ್ಲಿ “ನಂಬಿದೇ ನಿನ್ನ ನಾದ ದೇವತೆ” ಎಂಬ ಹಾಡು ಹಾಡುತ್ತಲೇ ಇಹಲೋಕ ತ್ಯಜಿಸುತ್ತಾನೆ. ಚಿತ್ರದ ಕೊನೆಗೆ “ಶುಭಂ” ಬದಲಾಗಿ “ಇದೇ ಸಂಧ್ಯಾರಾಗ” ಎಂದು ತೋರಿಸುತ್ತಾರೆ. ಅದನ್ನು ನೋಡಿದಾಕ್ಷಣ ಹೌದು ಎನ್ನದೇ ಸುಮ್ಮನಿರಲಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ಸಿನಿಮಾ ಸಂಗೀತದ ರುಚಿಯನ್ನು ಉಣಬಡಿಸುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಸಂಗೀತದ ಮಹತ್ವ ಕುರಿತು ತಿಳಿಯಲು.
2. ಕುಟುಂಬಕ್ಕೆ ಹಿರಿಯರ ಅಗತ್ಯ ಎಷ್ಟಿದೆ ಹಾಗೂ ಅವರನ್ನು ಗೌರವಿಸುವ ಪರಿ ಹೇಗೆ ಎಂಬುದನ್ನು ತಿಳಿಯಲು.
3. ಸಂಗೀತಪ್ರಿಯರು, ಹಾಡುಗಾರರು, ಸಂಗೀತ ಪ್ರೇಮಿಗಳು, ಸಾಹಿತ್ಯಾಸಕ್ತರು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.