ರಿತು ಸೇನ್, ಛತ್ತೀಸ್ಗಢದ ಸರ್ಗುಜ ಜಿಲ್ಲೆಯ ಕಲೆಕ್ಟರ್. 2014ರಲ್ಲಿ ಕಲೆಕ್ಟರ್ ಆಗಿ ಅಂಬಿಕಾಪುರ ನಗರಕ್ಕೆ ಬಂದಾಗ ಅವರನ್ನು ಸ್ವಾಗತಿಸಿದ್ದು ಗಬ್ಬು ನಾರುತ್ತಿದ್ದ ಕಸದ ರಾಶಿಗಳು. ಮೊದಲ ನೋಟದಲ್ಲೇ ಈ ನಗರ ಅವರ ಅಸಹನೆಗೆ ಗುರಿಯಾಗಿತ್ತು. ಅದೇ ಕ್ಷಣ ಆ ನಗರದ ಚಿತ್ರಣವನ್ನು ಬದಲಾಯಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು ಅವರು.
ಆದರೆ ಅಂಬಿಕಾಪುರದ ಸ್ವಚ್ಛತೆ ಅವರಿಗೆ ದೊಡ್ಡ ಸವಾಲೇ ಆಗಿತ್ತು. 1,45,000 ಜನಸಂಖ್ಯೆಯುಳ್ಳ ಆ ನಗರದ ಸ್ವಚ್ಛತೆಗೆ ಅನುದಾನ ಒಗ್ಗೂಡಿಸುವುದು ಕಷ್ಟಸಾಧ್ಯವೇ ಆಗಿತ್ತು. ಎರಡು ತಿಂಗಳುಗಳ ಕಾಲ ಎಲ್ಲಾ ಸ್ಟೇಕ್ಹೋಲ್ಡರ್ಸ್ಗಳ ಮನವೊಲಿಸುವ ಕಾರ್ಯ ಮಾಡಿದ ಅವರು, ಕೊನೆಗೂ ಸ್ವಚ್ಛತೆಗೆ ರೂಪುರೇಶೇ ಸಿದ್ಧಪಡಿಸಿದರು. ಮೊದಲು ಘನತ್ಯಾಜ್ಯ ಮತ್ತು ಹಸಿ ತ್ಯಾಜ್ಯ ನಿರ್ವಹಣೆಗೆ ಸಂಪನ್ಮೂಲ ನಿರ್ವಹಣೆಯ ಮಾದರಿಯನ್ನು ಸಿದ್ಧಪಡಿಸಲಾಯಿತು.
ಈ ಕಾರ್ಯಕ್ಕೆ ಅವರು ಸ್ವಸಹಾಯ ಸಂಘಗಳ ಮಹಿಳೆಯರನ್ನು ಒಳಪಡಿಸಿದರು. ಪ್ರತಿ ತಂಡವನ್ನು 100 ಮನೆಗಳಿಗೆ ನಿಯೋಜಿಸಿದರು. ಆ ಮನೆ ಮನೆಗಳಿಗೆ ಹೋಗಿ ಅವರು ಹಸಿ ಮತ್ತು ಘನ ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಹಿಸಿದರು. ಗಾರ್ಬೇಜ್ ಕ್ಲಿನಿಕ್ನ್ನೂ ಸ್ಥಾಪನೆ ಮಾಡಲಾಯಿತು. ಅಲ್ಲೂ ಮಹಿಳೆಯರು ಹಸಿ ಮತ್ತು ಒಣ ಕಸಗಳನ್ನು ವಿಂಗಡಿಸುವ ಕಾರ್ಯ ಮಾಡಿದರು.
ಇದೇ ಕಾರ್ಯ ಮುಂದುವರೆದು 2016ರ ವೇಳೆಗೆ ಎಲ್ಲಾ 48 ವಾರ್ಡ್ಗಳಲ್ಲೂ ಸ್ವಚ್ಛತಾ ಕಾರ್ಯ ನಡೆಯಿತು. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಬಂದಿತು. 447 ಮಹಿಳೆಯರು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಗಾರ್ಬೇಜ್ ಕ್ಲಿನಿಕ್ಗಳಲ್ಲಿ ತ್ಯಾಜ್ಯ ವಿಂಗಡನೆ ಕಾರ್ಯ ಮಾಡುತ್ತಿದ್ದಾರೆ. ಜಾಕೆಟ್, ಮಾಸ್ಕ್ ಗ್ಲೋವ್ಸ್ ಸೇರಿದಂತೆ ಸುರಕ್ಷತಾ ವ್ಯವಸ್ಥೆಯನ್ನು ಅವರಿಗೆ ಕಲ್ಪಿಸಿಕೊಡಲಾಗಿದೆ.
ಸೇನ್ ಅವರ ಪ್ರಯತ್ನದ ಫಲವಾಗಿ ಡಂಪಿಂಗ್ ಯಾರ್ಡ್ ಆಗಿದ್ದ ಅಲ್ಲಿನ 16 ಎಕರೆ ಪ್ರದೇಶ ಇಂದು ಸ್ವಚ್ಚತಾ ಅರಿವು ಮೂಡಿಸುವ ಪಾರ್ಕ್ ಆಗಿ ಪರಿವರ್ತನೆಗೊಂಡಿದೆ. ಕಸದಿಂದ ತುಂಬಿ ತುಳುಕುತ್ತಿದ್ದ 15 ಕಸದ ತೊಟ್ಟಿಗಳ ಜಾಗದಲ್ಲಿ ಇಂದು ಕೇವಲ 5 ಕಸದ ಬುಟ್ಟಿಗಳಷ್ಟೇ ಇವೆ. ಜನ ಕಸವನ್ನು ಬೀದಿಗೆ ಹಾಕುವುದನ್ನು ಬಿಟ್ಟು, ಅದನ್ನು ಸಂಗ್ರಹಕಾರರಿಗೆ ನೀಡುತ್ತಿದ್ದಾರೆ.
ಗಾರ್ಬೇಜ್ ಕ್ಲಿನಿಕ್ಗಳಲ್ಲಿ ದುಡಿಯುವ ಮಹಿಳೆಯರು ಮಾಸಿಕ ರೂ.5000ದವರೆಗೆ ಸಂಪಾದನೆ ಮಾಡುತ್ತಿದ್ದಾರೆ.
ಮನಸ್ಸು ಮಾಡಿದರೆ ಅಧಿಕಾರಿಯಾದವರು ಸಮಾಜದಲ್ಲಿ ಎಂತಹ ಪರಿವರ್ತನೆಯನ್ನೂ ತರಬಲ್ಲರು ಎಂಬುದಕ್ಕೆ ರಿತು ಸೇನ್ ಉತ್ತಮ ಉದಾಹರಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.