ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ಎಂಬುದು ’ರಬ್ಬಿಷ್’ ಎಂದ ರಾಷ್ಟ್ರೀಯ ಮಟ್ಟದ ಜನಪ್ರಿಯ ಮಾಧ್ಯಮದ ಸೋ ಕಾಲ್ಡ್ ಕಂಟೆಂಟ್ ಸ್ಟ್ರಟಜಿಸ್ಟ್ನ ಮಾತುಗಳ ಅರ್ಥ ಏನೆಂಬುದು ನಿನ್ನೆ ಟಿವಿ ಮಾಧ್ಯಮಗಳ ನೇರ ಪ್ರಸಾರ, ಚರ್ಚೆಗಳನ್ನು ನೋಡಿ ತಿಳಿಯಿತು. ಅಬ್ಬಾ! ಅದೆಂಥಾ ಆಘಾತಕಾರಿ ಮಾತು, ಮಾಧ್ಯಮದಲ್ಲೇ ನಿಂತು ಮಾಧ್ಯಮದ ಅಸ್ತಿತ್ವಕ್ಕೆ ಕನ್ನ ಕೊರೆದ ಮಾತದು. ಮಾಧ್ಯಮದ ಇಂತಹ ಕೆಲವರಿಂದಲೇ ಮಾಧ್ಯಮ ಇಂದು ಸೂತ್ರ ಹರಿದ ಗಾಳಿಪಟದಂತಾಗಿದೆ. ವಿಜಿ ಜೈಲಿನಲ್ಲಿ ಏನು ತಿಂದ? ಈಗ ಹೇಗಿದ್ದಾನೆ? ಆತನ ದಿನಚರಿ ಏನು?, ದರ್ಶನ್ ಯಾವ ಫೋಸ್ನಲ್ಲಿ ಮಲಗಿದ? ಪೊಲೀಸರು ಆತನನ್ನು ಪ್ರಕರಣದಿಂದ ರಕ್ಷಣೆ ಮಾಡುತ್ತಿದ್ದಾರೆಯೇ? ಅಬ್ಬಾ ಅದೆಂತಾ ವ್ಯರ್ಥ ಚರ್ಚೆಗಳು, ಅಷ್ಟಕ್ಕೂ ಅದು ಆ ಪರಿ ಮುಖ್ಯ ವಿಷಯವೇ ಜನರಿಗೆ ತಿಳಿಸಲು? ಜನರ ಜೀವನದಲ್ಲಿ ಇದು ಯಾವ ಬದಲಾವಣೆ ತರಲು ಸಾಧ್ಯ? ಇದರಿಂದ ಜನರಿಗೆ ಕೆಟ್ಟ ಪ್ರಚೋದನೆ ಸಿಗಬಹುದೇ ಹೊರತು ಒಳ್ಳೆಯದಂತು ಖಂಡಿತಾ ಆಗಲಾರದು.
ಸಮಯ ಹಾಳು ಮಾಡೋ, ಏನಕ್ಕೂ ಪ್ರಯೋಜನಕ್ಕೆ ಬಾರದ ಈ ಚರ್ಚೆಗಳ ಹರಿಕಾರರು ದೊಡ್ಡ ಪತ್ರಕರ್ತರು. ಪತ್ರಕರ್ತರಿಗೆ ಮೊದಲಿದ್ದ ಬದ್ಧತೆ ಎಲ್ಲಿ ಹೋಯಿತು ಈಗ? ಇಂಥ ತಲೆಹರಟೆಗಳ ಬಗ್ಗೆ ಕಣ್ಣಿಡುವ ಪ್ರೆಸ್ ಕೌನ್ಸಿಲ್ ಚಿರ ನಿದ್ರೆಗೆ ಜಾರಿದಂತಿದೆ. ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿಗಳು ಮೂಲೆ ಸೇರಿದೆ. ದೊಡ್ಡವರೇ ತಪ್ಪೆಸಗಿದರೆ, ಇನ್ನು ಮರಿಸಿಂಹಗಳಂತಿರುವ ಯುವ ಪತ್ರಕರ್ತರ ಪಾಡೇನು? ಸೀನಿಯರ್ಗಳಿಗಿಂತ ತಾವೇನು ಕಮ್ಮಿಯಿಲ್ಲ ಎಂಬಂತೆ ಕೆಲಸಕ್ಕೆ ಬಾರದ ಮಾತುಗಳನ್ನು ಏರುಧ್ವನಿಯಲ್ಲಿ ತೂರಿಬಿಡುತ್ತಾರೆ. ಹಾಗಾದರೆ ನೈತಿಕತೆ ಉಡುಗಿತೆ? ಬೊಬ್ಬೆ ಹೊಡೆದರೆ ಜನ ನೋಡುತ್ತಾರೆ ಎಂಬ ಭ್ರಮೆಯನ್ನು ನಾವೇ ಹುಟ್ಟು ಹಾಕಿದ್ದಲ್ಲವೇ? ಹಾಗಾದರೆ ನಾವೇ ಯಾಕೆ ಇದು ತಪ್ಪು ಎಂದು ತೋರಿಸಬಾರದು? ಖಂಡಿತಾ ಅದು ಸಾಧ್ಯವಿದೆ.
ಕೆಲಸಕ್ಕೆ ಬಾರದ ಕಾರ್ಯಕ್ರಮಗಳು ಬಂದೊಡನೆ ಬೈದುಕೊಂಡು ನೋಡೋ ಬದಲು, ಟಿವಿಯನ್ನು ಸ್ತಬ್ಧವಾಗಿಸಿ ಬೇರೆ ಹವ್ಯಾಸದಲ್ಲಿ ಮುಳುಗಿದರೆ, ಟಿಆರ್ಪಿ ಗೀಳು ಹಿಡಿಸಿಕೊಂಡವರಿಗೆ ತುಸು ಪಾಠ ಕಲಿಸಿದಂತಾಗುತ್ತದೆ.
ನೋಡುಗರ ಸಂಖ್ಯೆ ಮಾತ್ರ ಬೇಕಾಗಿರುವ ಟಿಆರ್ಪಿ ಹುಚ್ಚರಿಗೆ, ನಾವು ಬೈದುಕೊಂಡು ನೋಡುತ್ತಿದ್ದೇವೆಯೇ ಅಥವಾ ಚಾನೆಲ್ ಹಾಕಿಟ್ಟು ನಿದ್ದೆ ಮಾಡುತ್ತಿದ್ದೇವೆಯೇ ಎಂಬುದು ಗಣನೆಗೆ ಬರೋದಿಲ್ಲ. ಟಿಆರ್ಪಿ ಬರುತ್ತದೆ ಎಂದು ಬೇಕಾಬಿಟ್ಟಿ ಕಾರ್ಯಕ್ರಮಗಳನ್ನು ಅವರು ಮಾಡುವುದು ಶತಸಿದ್ಧ. ಹಾಗಾದರೆ ನಾವೇ ಯಾಕೆ ಇಂತಹುಗಳನ್ನು ತ್ಯಜಿಸಬಾರದು? ಟಿಆರ್ಪಿ ಎಂಬ ಗೀಳಿಗೆ ನಾವೇ ಯಾಕೆ ಮದ್ದಾಗಬಾರದು? ಹಾಳು ಹರಟೆ ಬಂದ ಕೂಡಲೇ ಟಿವಿಗೆ ಬಾಯ್ ಹೇಳಿ ವೀಕ್ಷಣೆಯ ಶೇಕಡಾವನ್ನು ಕುಗ್ಗಿಸಿದರೆ ನಮ್ಮ ದಾರಿಗೆ ಈ ಮಾಧ್ಯಮಗಳು ಬರಲೇಬೇಕು ಹೌದಲ್ಲವೇ? ಇಂತಹ ಕಾರ್ಯಕ್ರಗಳ ವಿರುದ್ಧ ನಾವು ಶಾಂತಿಯುತವಾಗಿ ’ದಂಗೆ’ ಏಳುವುದು ಒಳ್ಳೆಯದೇ ಅಲ್ಲವೇ?
ಆಯುಷ್ಮಾನ್ ಭಾರತ್ ಯೋಜನೆಯಂತಹ ಮಹಾನ್ ಯೋಜನೆ ಆರಂಭಗೊಂಡಿರೂ ಅದನ್ನು ಬದಿಗಿಟ್ಟು ಈ ನಟ ನಟಿಯರ ಜೀವನದ ಹಿಂದೆ ಮಾಧ್ಯಮಗಳು ಹೋದರೆ ನಮಗೇನು ಮಾಹಿತಿ ಸಿಕ್ಕೀತು? ವಿವಾಹೇತರ ಸಂಬಂಧ ಅಪರಾಧವಲ್ಲ ಎಂಬ ತೀರ್ಪಿನಲ್ಲಿನ ಅಂಶಗಳೇನು? ಅಯೋಧ್ಯಾದ ಬಗ್ಗೆ ಸುಪ್ರೀಂ ನೀಡಿದ ತೀರ್ಪಿನ ಸಾರಾಂಶ ಏನು? ನಿನ್ನೆಯ ಮಟ್ಟಿಗೆ ಇಂತಹ ವಿಚಾರಗಳು ಚರ್ಚೆಗೆ ಹೆಚ್ಚು ಸೂಕ್ತವಾಗಿರುತ್ತಿದ್ದವು. ಬಿಡಿ ಆದದ್ದು ಆಯಿತು ಅಂದುಕೊಂಡು ಇನ್ನಾದರೂ ಈ ಹುಚ್ಚು ಕಾರ್ಯಕ್ರಮದ ಟಿಆರ್ಪಿ ಚಟವನ್ನು ವೀಕ್ಷಕರಾದ ನಾವೇ ನಿಗ್ರಹಿಸೋಣ, ಅಷ್ಟಕ್ಕೂ ರಿಮೋಟ್ ಕಂಟ್ರೋಲ್ ನಮ್ಮ ಕೈಯಲ್ಲೇ ಇದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ, ಏನ್ ಹೇಳ್ತೀರಾ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.