ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 1
ಗಾಂಧಿ ಎನ್ನುವ ಶಬ್ದ ನಮ್ಮ ದೇಶದಲ್ಲಿ ಅದೆಂಥ ಸಂಚಲನವನ್ನುಂಟುಮಾಡಿತು! ಶಕ್ತಿಯಿರುವುದು ಶಬ್ದದಲ್ಲಲ್ಲ, ಆ ಶಬ್ದವನ್ನು ಉಪಾಧಿಯಾಗಿ ಹೊತ್ತ ವ್ಯಕ್ತಿತ್ವದಲ್ಲಿ.
ಸಾಮಾನ್ಯರ ನಡುವೆ ಅತಿಸಾಮಾನ್ಯನಾಗಿ ಹುಟ್ಟಿಬೆಳೆದ ಮೋಹನದಾಸ ಮಹಾತ್ಮನಾಗಿ ಪ್ರಪಂಚಮುಖದಲ್ಲಿ ಬೆಳಗುವಲ್ಲಿ ಶ್ರೀರಾಮ, ಹರಿಶ್ಚಂದ್ರರಂಥ ಭಾರತೀಯ ಪುರಾಣೇತಿಹಾಸಪಾತ್ರಗಳ ಪ್ರಭಾವವೂ ಇದೆ; ಜಾನ್ ರಸ್ಕಿನ್, ಟಾಲ್ಸ್ಟಾಯ್ ಮುಂತಾದ ಸಮಕಾಲೀನ ಪ್ರಕೃತಿನಿಷ್ಠಚಿಂತಕರ ಮೇಲ್ಪಂಕ್ತಿಯಿದೆ; ಇವರೆಲ್ಲರನ್ನೂ ತನ್ನೊಳಗೆ ಪ್ರತಿಫಲಿಸಿಕೊಳ್ಳುವಂತೆ ಮಾಡಿದ ಅಂತಃಶಕ್ತಿಯಿದೆ ಮತ್ತು ಅವನ್ನು ತದ್ವತ್ತಾಗಿ ಬದುಕಿದ ಅನುಭವವಿದೆ.
ಗಾಂಧಿಬದುಕಿನಲ್ಲಿ ನಮಗೆ ನಡೆ ಮತ್ತು ನುಡಿಗಳಲ್ಲಿ ಸಿಗುವ ಅಂತರ ಅತ್ಯಲ್ಪ; ಎಲ್ಲೋ ಅಪರೂಪದಲ್ಲೆಂಬಂತೆ, ಅದೂ ಕನಿಷ್ಠಪ್ರಮಾಣದಲ್ಲಿ. ಹೌದು, ಕೇರಳದ ಮಾಪಿಳ್ಳೆ ದಂಗೆಯಲ್ಲಿ ಸಾವಿರ ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿ, ನೂರಾರು ಮಂದಿ ಹಿಂದೂ ಮಹಿಳೆಯರು ಬಲಾತ್ಕಾರಕ್ಕೊಳಗಾಗಿ, ಸಾವಿರಾರು ಹಿಂದೂಗಳ ಬಲಾತ್ಕಾರದ ಮತಾಂತರ ನಡೆದಾಗ ಪ್ರತ್ಯಕ್ಷ ಅಲ್ಲಿಗೆ ಹೋಗದೆ ಅಧ್ಯಯಿಸದೆ ಸತ್ತವನೊಬ್ಬ ಮತ್ತು ಮತಾಂತರಗೊಂಡದ್ದು ಬರೇ ಎರಡು ಕುಟುಂಬಗಳು ಎಂದುಬಿಟ್ಟರು ಗಾಂಧೀಜಿ. ಗಾಂಧೀಜಿಯಂಥ ಗಾಂಧೀಜಿ ಬಾಯಲ್ಲಿ ಬರಬಾರದ ಸುಳ್ಳಾಗಿತ್ತದು. ಆದರೆ ಇಂಥ ಅನಪೇಕ್ಷಿತ ಮಾತುಗಳು ಅವರ ಬದುಕಲ್ಲಿ ನಮಗೆ ಪದೇಪದೇ ಸಿಗಲಾರವು. ಈ ಸುಳ್ಳು ಗಾಂಧೀಜಿ ವ್ಯಕ್ತಿತ್ವಕ್ಕೆ ಪ್ರಕ್ಷಿಪ್ತವಾಗಿರುವಂಥವು. ಹಾಗಾಗಿ ಇವು ಸಂಖ್ಯಾಪ್ರಮಾಣದ ದೃಷ್ಟಿಯಿಂದ ಅತ್ಯಂತ ನಗಣ್ಯ; ಸನ್ನಿವೇಶಗಾಂಭೀರ್ಯ ದೃಷ್ಟಿಯಿಂದ ಅತಿಮಹತ್ತ್ವದ್ದಾದರೂ ಕೂಡಾ.
ಸರಳಜೀವನವನ್ನು ಜೀವಿಸಿ ಎಂದ ಗಾಂಧೀಜಿ ತಾವೇ ಸ್ವತಃ ಹಾಗೆ ಬದುಕಿ ತೋರಿದರು. ಗಾಂಧೀಜಿಯ ಸರಳತೆಗಾಗಿ ದುಬಾರಿ ಖರ್ಚಾಯಿತು ಎಂದು ಅವರ ಶಿಷ್ಯೆ ಸರೋಜಿನಿ ನಾಯ್ಡುರವರೇ ಅವರೆದುರೇ ಹಾಸ್ಯಶೈಲಿಯಲ್ಲಿ ಗಂಭೀರವಾಗಿ ಕಟಕಿಯಾಡಿದ್ದಿದೆ. ಇಲ್ಲಿ ವಿರೋಧಾಭಾಸಕ್ಕಿಂತಲೂ ಗಾಂಧೀಜಿ ಅದೆಷ್ಟು ಸರಳ-ನಿಃಸ್ಪೃಹರಾಗಿದ್ದರು, ನಿಂದಾಸ್ವೀಕೃತಿಯುಳ್ಳವರಾಗಿದ್ದರು ಎಂಬುದನ್ನು ಗಮನಿಸಬೇಕು. ಇದು ಸ್ವವಿಮರ್ಶೆಗೆ ಬೇಕಾದ ಬಹುಮುಖ್ಯ ದ್ರವ್ಯ. ಸರಳಬದುಕಿನ ಮಟ್ಟಿಗೆ ಗಾಂಧಿ ಒಂದು ಕೊನೆಯಲ್ಲಿದ್ದರು. ಎಂದರೆ ಗಾಂಧಿಯಷ್ಟು ಸರಳವಾಗಿ ಬದುಕಲು ಯಾರಿಗೂ ಸಾಧ್ಯವಿಲ್ಲವೆಂಬಷ್ಟು ತೀವ್ರವಾಗಿ ಅವರು ಬದುಕಿದರು. ಸರಳತೆಗೂ ದಾರಿದ್ರ್ಯಕ್ಕೂ ಅಂತರವಿಲ್ಲವೆಂಬಷ್ಟು ತೀವ್ರವಾಗಿ! ಅಂದಹಾಗೆ ಗಾಂಧೀಜಿ ಸರಳತೆಯನ್ನು ಅಪ್ಪಿಕೊಂಡದ್ದೇ ದರಿದ್ರರ, ಅದರಲ್ಲೂ ದಟ್ಟದರಿದ್ರರ ಪ್ರತಿನಿಧಿಯಾಗಿ.
ದರಿದ್ರರಲ್ಲಿ ನಮ್ಮನ್ನು ಕಂಡುಕೊಳ್ಳದೆ ಮತ್ತು ಇದಕ್ಕೆ ವಿಲೋಮವಾಗಿ ನಮ್ಮಲ್ಲಿ ದರಿದ್ರರನ್ನು ಕಂಡುಕೊಳ್ಳದೆ ಇಂಥ ಸರಳತೆಯನ್ನು ಬದುಕುವುದು ಬಿಡಿ, ಇದನ್ನು ಅರ್ಥೈಸಿಕೊಳ್ಳುವುದೇ ಅಸಾಧ್ಯ. ಈ ದರ್ಶನವನ್ನು ಪಡೆದು ಅದಕ್ಕೆ ಪೂರಕವಾಗಿ ಬದುಕಿದಾಗಲೇ ನಮ್ಮ ರಾಷ್ಟ್ರೀಯ ಬದುಕು ಸಮಗ್ರವಾದೀತು.
ಮದ್ಯ, ಮಾಂಸ ಮತ್ತು ಮಾನಿನಿಯರ ಸಹವಾಸ ಮಾಡಲಾರೆ ಎಂಬ ಮಾತನ್ನು ತಾಯಿಗೆ ನೀಡಿಯೇ ಅವರು ದಕ್ಷಿಣ ಆಫ್ರಿಕೆಗೆ ಹೋದರು. ಘೋರ ಸ್ವನಿಯಂತ್ರಣ ಅವರಿಗಿತ್ತಾದರೂ ತಾಯಿಗೆ ನೀಡಿದ ಮಾತನ್ನು ಉಲ್ಲಂಘಿಸಬಹುದಾದ ಒತ್ತಡಕ್ಕೆ ತಾವು ಸಿಲುಕಿದ್ದನ್ನು ಸ್ವತಃ ಅವರೇ ದಾಖಲಿಸಿಕೊಂಡಿದ್ದಾರೆ. ಆದರೆ ಕೊನೆಗೂ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಸಫಲರಾದರು. ಅವರ ಬದುಕನ್ನು ರೂಪಿಸುವಲ್ಲಿ ತಾಯಿ ಪುತಲೀಭಾಯಿಯ ಪಾತ್ರವೂ ಮಹತ್ತ್ವದ್ದೇ. ಗಾಂಧೀಜಿ ಮಾಡಿಕೊಂಡ ಸ್ವವಿಮರ್ಶೆಯ ಒರೆಗಲ್ಲಾಗಿ ತಾಯಿಯೂ ಇದ್ದರು.
ಆತ್ಮಸಾಕ್ಷಿಯ ಜಾಗದಲ್ಲಿ ತಾಯಿ! ಇದೊಂದು ರೂಪಕದಂತೆಯೂ ಇದೆ. ಜತೆಗೆ ಒಂದು ಭಾರತೀಯವಾದ ದರ್ಶನವೂ ಇದೆ. ತನ್ನ ಜಾಗದಲ್ಲಿ ತಾಯಿ ಮತ್ತು ತನ್ನನ್ನು ನಡೆಸುವ ತಾಯಿ. ಎರಡನ್ನೂ ಒಟ್ಟಿಗೆ ಮತ್ತು ಅಭಿನ್ನವಾಗಿ ಅನುಭವಿಸುವ ಬದುಕು.
ಇದು ಮಾತೃಪ್ರಧಾನವಾದ ಬದುಕೂ ಹೌದು. ಹಾಗಾಗಿ ಭಾರತೀಯವಾದ ಬದುಕೂ ಹೌದು.
ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ಎಂಬ ಮಾತಿದೆಯಷ್ಟೆ. ಪಶ್ಚಿಮದ ಮಟ್ಟಿಗೆ ಆಕೆ ಪ್ರೇಯಸಿಯೇ ಇರಬಹುದು. ನಮ್ಮ ಮಟ್ಟಿಗೆ ಆಕೆ ಖಚಿತವಾಗಿಯೂ ತಾಯಿಯೇ.
ಗಾಂಧೀಜಿ ಭಾರತವನ್ನು ಈ ಬಗೆಯಲ್ಲೂ ಪ್ರತಿನಿಧಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.