ಭಾರತದ ಧಾರ್ಮಿಕ ಇತಿಹಾಸವನ್ನು ಅವಲೋಕಿಸಿದರೆ ನಮಗೆ ರಾಷ್ಟ್ರವಿಜೇತ ಸನ್ಯಾಸಿಗಳ ಸಂದರ್ಶನವಾಗುತ್ತದೆ. ಆದರೆ ನಾವೀಗ ಬದುಕುತ್ತಿರುವ ಈ ಶತಮಾನದಲ್ಲಿ ವಿಶ್ವ ವಿಜೇತನಾದ ಧೀರ ಸನ್ಯಾಸಿ ಯೋರ್ವ ಸಮಕ್ಷಮದಲ್ಲಿ ನಿಂತಿದ್ದೇವೆ. ವಿವೇಕಾನಂದರ ಧೀರ ಗಂಭೀರ ನಿಲುವೇ ಅವರ ವಿಶ್ವವನ್ನು ಜಯಿಸಲು ಸಮರ್ಥ ವೆಂಬುದನ್ನು ಸಾರಿ ಹೇಳುತ್ತಿದೆ. ನಿರಂತರ ಕಾಂತಿಮಯ ಕಿರಣಗಳನ್ನು ಹೊಮ್ಮಿಸುತ್ತಿರುವ ಅವರ ಪ್ರಕಾಶಮಾನ ನಯನ ದ್ವಯ ಪ್ರತಿಧ್ವನಿಗಳು ಪ್ರತಿವಾದಿಗಳ ಬಾಯಿ ಮುಚ್ಚಿಸುವ ಅವರ ಅವಿವೇಕವನ್ನು ಅವರಿಗೆ ತೋರಿಸಿಕೊಡವಂತಿದೆ.
ಇನ್ನು ಅವರ ಅಂತರಂಗದ ವ್ಯಕ್ತಿತ್ವವೋ! ಅದು ಬ್ರಹ್ಮ ಸ್ಪರ್ಶದಿಂದ ಪುನೀತಗೊಂಡದ್ದು; ಸತ್ಯಸಾಕ್ಷಾತ್ಕಾರದಿಂದ ಸಂಸ್ಕರಣಗೊಂಡದ್ದು. ಅಂತಹ ಗಂಭೀರ ವ್ಯಕ್ತಿತ್ವದಿಂದ ಸಿಡಿಯುತ್ತಿದ್ದ ಅವರ ವಾಣಿಯಲ್ಲಿ ಲಕ್ಷ್ಮಿಯ ತೇಜಸ್ಸು ಸರಸ್ವತಿಯ ಓಜಸ್ಸು. ಇಂತಹ ಒಬ್ಬ ಸನ್ಯಾಸಿ ಅಂದಿನ ಗುಲಾಮ ರಾಷ್ಟ್ರವಾಗಿದ್ದ ಬಡ ಭಾರತದಿಂದ ಪುಟಿದೆದ್ದು ವಿಶ್ವದ ವೈಭವೋಪೇತ ರಾಷ್ಟ್ರವಾದ ಅಮೆರಿಕಾಗೆ ತೆರಳಿ ಅಲ್ಲಿನ ಜನ ಮನವನ್ನು ಭಾರತದ ಭವ್ಯ ಸನಾತನ ಧರ್ಮ ಸಂಸ್ಕೃತಿಗಳಿಗೆ ಹರಿಸಿತ್ತು ಒಂದು ರೋಮಾಂಚನಕಾರಿ ಘಟನೆಯೇ ಸರಿ.
ಚಿಕಾಗೋದ ಸರ್ವಧರ್ಮ ಸಮ್ಮೇಳನ!
ಅಮೆರಿಕದ ನಾಲ್ಕು ಸಹಸ್ರ ಸುಶಿಕ್ಷಿತ ಸಭಿಕರಿಂದ ಕೂಡಿದ ಸರ್ವಧರ್ಮ ಸಮ್ಮೇಳನವದು.
ಕ್ರೈಸ್ತ ಮತವೇ ಸರ್ವಶ್ರೇಷ್ಠ ಮೊತ್ತವೆಂದು ನಿರೂಪಿಸುವುದಕ್ಕಾಗಿ ನಿರ್ಮಾಣಗೊಂಡಿದ್ದ ವಿಶ್ವ ವೇದಿಕೆ ಅದಾಗಿದ್ದರೂ ಸ್ವಾಮಿ ವಿವೇಕಾನಂದರ ಪಾಲಿಗೆ ಆ ವೇದಿಕೆ ವಿಶ್ವ ವೇದಿಕೆಯಾಯಿತು ; ವೀರ ಸನ್ಯಾಸಿ ವಿವೇಕಾನಂದರನ್ನು ವಿಶ್ವವಿಖ್ಯಾತ ಗಳಿಸಲೆಂದೇ ರೂಪುಗೊಂಡ ವಿಶ್ವ ವೇದಿಕೆಯಾಗಿ ರೂಪುಗೊಂಡಿತು.
ಸರ್ವಧರ್ಮ ಸಮ್ಮೇಳನದ ವೈಜ್ಞಾನಿಕ ವಿಭಾಗದ ಅಧ್ಯಕ್ಷರಾದ Honorable Marvin Snell ಹೀಗೆ ಬರೆಯುತ್ತಾರೆ “ಸರ್ವಧರ್ಮ ಸಮ್ಮೇಳನದ ಸಭೆಯ ಮೇಲೆ ಅಮೆರಿಕದ ಜನ ವರ್ಗದಲ್ಲಿ ಇನ್ನು ಹಿಂದೂ ಧರ್ಮವು ಉಂಟು ಮಾಡಿದಷ್ಟು ಗಾಢ ಪರಿಣಾಮವನ್ನು ಬೇರಾವ ಧಾರ್ಮಿಕ ಸಂಸ್ಥೆಯು ಮಾಡಲಿಲ್ಲ. ಅದರಲ್ಲೂ ಹಿಂದೂ ಧರ್ಮದ ಅತಿ ಪ್ರತಿನಿಧಿಯಾದ ಸ್ವಾಮಿ ವಿವೇಕಾನಂದರು ನಿಸ್ಸಂಶಯವಾಗಿ ಸರ್ವಧರ್ಮ ಸಮ್ಮೇಳನದಲ್ಲಿ ಅತ್ಯಂತ ಜನಪ್ರಿಯ ಹಾಗೂ ಪರಿಣಾಮಕಾರಿ ವ್ಯಕ್ತಿಯಾಗಿದ್ದರು.
ಅತ್ಯಂತ ಸಂಪ್ರದಾಯಸ್ಥರ ಕಟ್ಟಾ ಕ್ರೈಸ್ತರು ಕೂಡ ವಿವೇಕಾನಂದರನ್ನು ಕುರಿತು ಹೇಳುತ್ತಾರೆ “ಮನುಷ್ಯರ ಮಧ್ಯೆ ನಿಜಕ್ಕೂ ಅವರೊಬ್ಬ ರಾಜನೇ ಸರಿ” ಎಂದು.
ನ್ಯೂಯಾರ್ಕ್ ಹೆರಾಲ್ಡ್ ಎಂಬ ಪತ್ರಿಕೆಯು ಹೀಗೆ ಬರೆಯುತ್ತದೆ “ನಿಸ್ಸಂಶಯವಾಗಿಯೂ ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದ ಅತೀ ಶ್ರೇಷ್ಠ ವ್ಯಕ್ತಿ. ಇವರ ಮಾತುಗಳನ್ನು ಕೇಳಿದ ಮೇಲೆ ಇಂತಹ ರಾಷ್ಟ್ರಕ್ಕೆ ಧರ್ಮ ಪ್ರಚಾರಕರನ್ನು ಕಲಿಸುವುದು ಎಂತಹ ಮೂರ್ಖತನ! ಎನ್ನಿಸುತ್ತದೆ”.
Detroit journal ಹೇಳಿತು “The Social Lion of the Day is Swami Vivekananda.”
ಮತ್ತೊಂದು ಪತ್ರಿಕೆಯ ಸಂಪಾದಕೀಯ ಹೀಗೆಂದು ಹೇಳಿತು “ಸ್ವಾಮಿ ವಿವೇಕಾನಂದರನ್ನು ನೋಡುವ ಅವರ ಭಾಷಣವನ್ನು ಕೇಳುವ ಅವಕಾಶವನ್ನು ಬುದ್ಧಿವಂತನಾದ ಯಾವನೂ ಕಳೆದುಕೊಳ್ಳಬಾರದು. ಮಾನಸಿಕ ನೈತಿಕ ಹಾಗೂ ಆಧ್ಯಾತ್ಮಿಕ ಸಂಸ್ಕೃತಿಯಿಂದ ಕೂಡಿದ ಅವರ ವ್ಯಕ್ತಿತ್ವವು, ಅಗರ ಜನಾಂಗದ ಸಹಸ್ರಾರು ವರ್ಷಗಳ ಭವ್ಯ ಪರಂಪರೆಯನ್ನು ಸಾರಿ ಹೇಳುತ್ತದೆ …… ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಅಧ್ಯಯನ ಮಾಡಬೇಕು”.
ಅಬ್ಬಕ್ಕ ಚಿಕಾಗೊ ಅಮೆರಿಕ ನ್ಯೂ ಯಾರ್ಕ್ ಡೆಟ್ರಾಯ್ಟ್ ಲಂಡನ್ ಸ್ವಾಮಿ ವಿವೇಕಾನಂದರು ಹೋಗಿದ್ದೆನಲ್ಲ ಅವರದ್ದೇ ಮಾತು. ಎಲ್ಲ ಮುಖ್ಯ ಪತ್ರಿಕೆಗಳಲ್ಲಿ ಅವರ ವಿದ್ಯುತ್ ವಾಣಿಯ ಸಂಚಲನ ಎಲ್ಲೆಡೆ ಹಬ್ಬಿ ಬಿಟ್ಟಿತ್ತು.
ಈ ಘಟನೆಯಾಗಿ 125 ವರ್ಷಗಳಾಗಿವೆ.
“ಶಿಕಾಗೊ ನಗರದ ದಟ್ಟ ವಾತಾವರಣದ ಮಧ್ಯದಲ್ಲಿ ಪ್ರಖರ ಪೀತಾರುಣ ವಸ್ತ್ರಧಾರಿಯಾಗಿ ಭಾರತೀಯ ಸೂರ್ಯನಂತೆ ಕಂಗೊಳಿಸುತ್ತಿದ್ದ ತೇಜೋಮಯ ಮೂರ್ತಿ; ಸಿಂಹಸದೃಶ ಶಿರ; ಚುರುಕಿನ ಚಲನವಲನ – ಇದು, ಸರ್ವ ಧರ್ಮ ಸಮ್ಮೇಳನದ ಪ್ರತಿನಿಧಿಗಳಿಗಾಗಿ ಕಾದಿರಿಸಿದ್ದ ಕೋಣೆಯಲ್ಲಿ ಸ್ವಾಮಿ ವಿವೇಕಾನಂದರನ್ನು ಮೊಟ್ಟಮೊದಲು ಭೇಟಿಯಾದಾಗ ನಾನು ಕಂಡ ದೃಶ್ಯ. ಅವರನ್ನು ಜನ ಸಂನ್ಯಾಸಿಯೆನ್ನುತ್ತಿದ್ದರು; ಅದನ್ನು ಅಲ್ಲಗಳೆಯಲಾಗದು; ಏಕೆಂದರೆ ನಿಜಕ್ಕೂ ಅವರೊಬ್ಬ ಯೋಧ – ಸಂನ್ಯಾಸಿ. ಆದರೆ ಪ್ರಥಮ ನೋಟದಲ್ಲಿ, ನನಗೆ ಅವರೊಬ್ಬ ಸಂನ್ಯಾಸಿಗಿಂತ ಹೆಚ್ಚಾಗಿ ಯೋಧನಂತೆಯೇ ಕಂಡರು! ಏಕೆಂದರೆ ಅವರು ಆಗ ವೇದಿಕೆಯ ಮೇಲಿರಲಿಲ್ಲ. ಆಗ ಅವರ ವ್ಯಕ್ತಿತ್ವದಲ್ಲಿ ರಾಷ್ಟ್ರಾಭಿಮಾನ – ಸ್ವಜನಾಭಿಮಾನಗಳು ಕಿಡಿಗಳಂತೆ ಸಿಡಿಯುತ್ತಿದ್ದವು. ಜಗತ್ತಿನ ಧರ್ಮಗಳ ಪೈಕಿ ಹೆಚ್ಚು ಕಡಿಮೆ ಅತ್ಯಂತ ಕಿರಿಯದೆನುಬಹುದಾದ ಧರ್ಮಕ್ಕೆ, ಸೇರಿದ ಕುತೂಹಲಭರಿತ ವೀಕ್ಷಕರಿಂದ ಸುತ್ತುವರಿದ ಜಗತ್ತಿನ ಪ್ರಾಚೀನತಮ ಜೀವಂತ ಧರ್ಮದ ಆ ಪ್ರತಿನಿಧಿಯು ಎಂದಿಗೂ ತಲೆಬಾಗಲು ಸಿದ್ಧನಿರಲಿಲ್ಲ. ತನ್ನ ಸನಾತನ ಧರ್ಮವು ಅಮೇರಿಕೆಯ ‘ಶ್ರೇಷ್ಠತಮ’ ಧರ್ಮಕ್ಕಿಂತಲೂ ತೃಣಮಾತ್ರವಾದರೂ ಕನಿಷ್ಥವೆಂದು ಒಪ್ಪಿಕೊಳ್ಳಲು ಆತನು ಸಿದ್ಧನಿರಲಿಲ್ಲ. ಭಾರತಾಂಬೆಯ ಸುಪುತ್ರನೂ ದೂತನೂ ಆದ ಆತನ ಸಮ್ಮುಖದಲ್ಲಿ, ಸೊಕ್ಕಿದ ಪಾಶ್ಚಾತ್ಯ ರಾಷ್ಟಗಳ ಮುಂದೆ ಭಾರತವು ಅಪಮಾನಕ್ಕೀಡಾಗಲು ಸಾಧ್ಯವಿರಲಿಲ್ಲ. ಆತನು ಭಾರತಮಾತೆಯ ಸಂದೇಶವನ್ನು ತಂದಿದ್ದನು; ಆಕೆಯ ಹೆಸರಿನಲ್ಲಿ ಮಾತನಾಡಿದನು; ಜನರು ಆಕೆಯ ಹಿರಿಮೆಯನ್ನು ಸ್ಮರಿಸುವಂತೆ ಮಾಡಿದನು. ವೀರ್ಯವಂತನೂ ಬಲಾಢ್ಯನೂ ಆದ ಆತನು ಪುರುಷರಲ್ಲಿ ಪುರುಷಸಿಂಹನಾಗಿ ನಿಂತು ಛಲದಿಂದ ತನ್ನ ಕಾರ್ಯವನ್ನು ಸಾಧಿಸಲು ಸಮರ್ಥನಾದನು” ಶ್ರೀಮತಿ ಆನ್ನೀ ಬೆಸೆಂಟ್ ಸ್ವಾಮೀಜಿಯನ್ನು ಕಂಡು ಹೇಳಿದ ಮಾತುಗಳಿವು. ಅಬ್ಬಬ್ಬಾ ಇದನ್ನು ಓದಿದವರಿಗೆ ಮೈ ರೋಮಾಂಚನವಾಗುವುದಂತು ನಿಶ್ಚಿತ!
ಅಬ್ಬಬ್ಬಾ ಈ ಘಟನೆಯಾಗಿ 125 ವರ್ಷ ಆಗಿಯೇ ಹೋಯಿತು ಚಿಕಾಗೋದ ಆ ವೇದಿಕೆ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿದಂತ ವೇದಿಕೆಯಾಯಿತು, ಹಿಂದುತ್ವದ ಶ್ರೇಷ್ಠತೆಯನ್ನು ಜಗತ್ತಿಗೆ ಶಂಖಾನಾದವಾಗಿ ಮೊಳಗಿಸಿತು. ಮಲಗಿದ್ದ ಭಾರತೀಯರಿಗೆ ತಮ್ಮ ನಿಜಶಕ್ತಿಯನ್ನು ತೋರಿಸಿ ಬಡಿದೆಬ್ಬಿಸಲಾಯಿತು. ಕ್ರೈಸ್ತ ಮತವೇ ಸರ್ವ ಶ್ರೇಷ್ಠ ಎಂದು ಸಾರುತ್ತಿದ್ದ ಮಿಷಿನರಿಗಳಿಗೆ ತಮ್ಮ ಯೋಗ್ಯತೆಯನ್ನು ಪರಿಚಯಮಾಡಿಕೊಟ್ಟಿತು. ಭಾರತದ ವೈಭವದ ಜೈತ್ರಯಾತ್ರೆ ಇಲ್ಲಿಂದ ಪ್ರಾರಂಭವಾಯಿತು.
ಈ ವಿಷಯಗಳನ್ನು ಕೇಳಿದರೆ ಮೈ ರೊಮಾಂಚನವಾಗುತ್ತದೆ. ಹೌದು ಭಾರತದ ವೀರ ಸನ್ಯಾಸಿ ವಿಶ್ವ ವಿಜೇತ ಸ್ವಾಮಿ ವಿವೇಕಾನಂದರು ಈ ದಿನವನ್ನು ಭಾರತೀಯರ ಪಾಲಿಗೆ ದಿಗ್ವಿಜಯದ ದಿನವನ್ನಾಗಿ ಮಾಡಿದರು. ಬನ್ನಿ ಈ ಸುಸಂದರ್ಭವನ್ನು ವೈಭವದಿಂದ ಆಚರಿಸೋಣ. ಮತ್ತೆ ಭಾರತವನ್ನು ದಿವ್ಯ ಭವ್ಯ ಸಮರ್ಥ ಸದೃಢ ಸಶಕ್ತ ಭಾರತವನ್ನಾಗಿಸೋಣ ಮತ್ತೆ ತಾಯಿ ಭಾರತಿಯನ್ನು ವಿಶ್ವಮಾತೆ ಜಗದ್ಗುರುವನ್ನಾಗಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.