ಇಲ್ಲಿನ ಭಾಷೆ, ಆಚರಣೆ, ಧರ್ಮ, ಶಿಕ್ಷಣ ಎಲ್ಲವನ್ನೂ ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ ಪರಕೀಯರು ನಮ್ಮ ದೇಶವನ್ನು ಹಾವಾಡಿಗರ ದೇಶವೆಂದು ಕರೆದಿದ್ದರು. ವಿಜ್ಞಾನವೆಂದರೇನು ಎನ್ನುವುದನ್ನೇ ಅರಿಯದವರು ಎಂದು ತಿಳಿದಿದ್ದರು. ಆದರೆ ನಮ್ಮದೇ ಜೀವನ ಶೈಲಿಯಲ್ಲಿ ವಿಜ್ಞಾನ ಹಾಸು ಹೊಕ್ಕಾಗಿರುವುದನ್ನು ಅವರಿಗೆ ಕಂಡುಕೊಳ್ಳಲು ಆಗಿರಲಿಲ್ಲ. ಬಹುಷಃ ಇಂದಿಗೂ ಕಂಡುಕೊಳ್ಳಲು ಆಗಿಲ್ಲ. ಹಾಗಾಗಿಯೇ ನಮ್ಮ ಅದೆಷ್ಟೋ ಆಚರಣೆಗಳು ಈಗಲೂ ವಿಜ್ಞಾನಿಗಳಿಗೆ ಬಿಡಿಸಲಾಗದ ಸವಾಲಾಗಿವೆ.
ಹಾಗೆಂದು ಆಧುನಿಕ ವಿಜ್ಞಾನ ಲೋಕದಲ್ಲಿ ಭಾರತೀಯರು ತೀರಾ ಹಿಂದೆ ಬಿದ್ದಿದ್ದಾರೆ ಎಂದೇನೂ ಭಾವಿಸಬೇಕಿಲ್ಲ. ಜಗತ್ತಿನ ಬಹುತೇಕ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಲ್ಲಿ ಇಂದಿಗೂ ಭಾರತೀಯರದ್ದೇ ಮೇಲುಗೈ. ಆದರೂ ಭಾರತೀಯರಿಗೆ ವಿದೇಶೀ ವಿಜ್ಞಾನ ಎಂದರೆ ಅದೇನೋ ಅಕ್ಕರೆ. ಭಾರತೀಯರು ತಂತ್ರಜ್ಞಾನದಲ್ಲಿ ಹಿಂದುಳಿದವರು ಎನ್ನುವ ಭಾವನೆ. ತಾವು ಖರೀದಿಸುವ ಯಾವುದೇ ಉತ್ಪನ್ನಗಳ ಮೇಲೆ ಅಮೇರಿಕನ್ ಟೆಕ್ನಾಲಜಿ, ಜರ್ಮನ್ ಟೆಕ್ನಾಲಜಿ, ಜಪಾನ್ ಟೆಕ್ನಾಲಜಿ ಎಂದು ಮುದ್ರಿಸಿದ್ದರೆ ಏನೋ ಒಂದು ಹೆಮ್ಮೆ ಮತ್ತು ಅದನ್ನು ಖರೀದಿಸಿದ ಬಗ್ಗೆ ಸಾರ್ಥಕ ಭಾವನೆ!
ಆದರೆ ಇತ್ತೀಚಿಗೆ ಆ ಮನೋಭಾವ ಕೂಡಾ ಬದಲಾಗುತ್ತಿದೆ. ಆಧುನಿಕ ವಿಜ್ಞಾನ ಕ್ಷೇತ್ರದಲ್ಲೂ ಭಾರತ ತನ್ನದೇ ಆದ ಛಾಪು ಮೂಡಿಸುತ್ತಿದೆ. ಅದಕ್ಕೆಲ್ಲಾ ಕಾರಣ ಅಂತಹಾ ಮನೋಭಾವಗಳಿಗೆ ಪೂರಕವಾಗಿ ಸ್ಪಂದಿಸುತ್ತಿರುವ ಸರ್ಕಾರ.
ಮಾನ್ಯ ಪ್ರಧಾನ ಮಂತ್ರಿಗಳು ಇತ್ತೀಚೆಗಷ್ಟೇ ಗಟಾರದ ನೀರಿನಿಂದ ಗ್ಯಾಸ್ ಉತ್ಪಾದಿಸಿ ಬಳಕೆ ಮಾಡುತ್ತಿರುವ ವ್ಯಕ್ತಿಯೊಬ್ಬನ ಬಗ್ಗೆ ತಿಳಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಹಾಗೆಯೇ ಭಾರತೀಯನೊಬ್ಬ ತನ್ನ ಮನೆಯಲ್ಲೇ ಒಂದು ಸಣ್ಣ ಜೈವಿಕ ಇಂಧನ ಘಟಕವನ್ನು ಸ್ಥಾಪಿಸಿಕೊಂಡು ಮನೆಯಲ್ಲಿ ಉತ್ಪಾದನೆಯಾಗುವ ಹಸೀ ಕಸ ಮತ್ತು ಜಾನುವಾರುಗಳ ಸಗಣಿಯಿಂದ ಗ್ಯಾಸ್ ಉತ್ಪಾದಿಸಿ ಅದನ್ನು ಟ್ರ್ಯಾಕ್ಟರ್ ಟೈರಿನ ಟ್ಯೂಬ್ ನ ಒಳಗೆ ತುಂಬಿಕೊಂಡು ಬೇಕಾದ ಕಡೆಗೆ ಸಾಗಿಸಬಲ್ಲ ಸರಳ ತಂತ್ರಜ್ಞಾನ ಬಳಕೆ ಮಾಡುತ್ತಿರುವುದನ್ನೂ ಪ್ರಸ್ತಾಪಿಸಿದ್ದರು.
ಹಿಂದೆ ಅಲ್ಲಲ್ಲಿ ತಮಗೆ ತೋಚಿದಂತೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಈ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದ ಜನಸಾಮಾನ್ಯರಿಗೆ ಇದೀಗ ನೂರಿಪ್ಪತ್ತೈದು ಕೋಟಿ ಜನ ಸಂಖ್ಯೆಯ ದೇಶದ ಪ್ರಧಾನ ಮಂತ್ರಿಯೇ ಬೆಂಬಲಕ್ಕಿದ್ದಾರೆ. ಅಷ್ಟೇ ಅಲ್ಲ,ಆ ರೀತಿಯ ಸಂಶೋಧನೆಗಳಿಗೆ ಸ್ವತಃ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯೇ ಬೆಂಬಲಕ್ಕೆ ನಿಂತಿದೆ. ಕೇವಲ ಬಾಹ್ಯ ಬೆಂಬಲವಷ್ಟೇ ಅಲ್ಲ, ದೇಶದ ವಿಜ್ಞಾನದ ಪ್ರಗತಿಗೆ ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿನಂತೆ ದೇಶ ವೈಜ್ಞಾನಿಕವಾಗಿ ಪ್ರಗತಿಯಾಗಬೇಕಿದ್ದರೆ ಅದು ಮುಂದಿನ ಪ್ರಜೆಗಳಿಗೆ ಬೆಂಬಲವಾಗಿ ನಿಲ್ಲುವುದರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮನಗಂಡಿರುವ ಸರ್ಕಾರ ನೀತಿ ಆಯೋಗದ ಮೂಲಕ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ದೇಶದಾದ್ಯಂತ ಪ್ರಾರಂಭಿಸಿದೆ.
ಮಕ್ಕಳ ವೈಜ್ಞಾನಿಕ ಮನೋಭಾವನೆಯನ್ನು ಬಾಲ್ಯದಿಂದಲೇ ಉತ್ತೇಜಿಸುವುದರ ಜೊತೆಗೆ ಮಕ್ಕಳಲ್ಲಿ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ನೈಪುಣ್ಯತೆಯನ್ನು ಬೆಳೆಸುವುದು, ಅವರ ವಿಭಿನ್ನ ಆಲೋಚನೆ ಶಕ್ತಿಯನ್ನು ಕಾರ್ಯ ರೂಪಕ್ಕೆ ತಂದು ನಮ್ಮ ದೇಶದ ಮಕ್ಕಳು ಆರ್ಥಿಕವಾಗಿ ಮುಂದುವರಿದ ಯಾವುದೇ ದೇಶಗಳಿಗಿಂತ ಕಡಿಮೆಯೇನಿಲ್ಲ ಎಂದು ತೋರಿಸುವುದು ಹಾಗೂ ಮುಂದಿನ ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಮುಂಚೂಣಿ ದೇಶವಾಗಿಸುವುದು ಅಟಲ್ ಟಿಂಕರಿಂಗ್ ಲ್ಯಾಬ್ಗಳ ಸ್ಥಾಪನೆಯ ಹಿಂದಿನ ಮುಖ್ಯ ಉದ್ದೇಶ.
ಪರಸ್ಪರ ನಿಯಮಿತವಾಗಿ ವಸ್ತು ಪ್ರದರ್ಶನಗಳನ್ನು ನಡೆಸುವುದು, ನಿರಂತರವಾಗಿ ವಿಜ್ಞಾನ ಕಾರ್ಯಾಗಾರಗಳನ್ನು ನಡೆಸುವುದು, ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ವಿನ್ಯಾಸಗಳನ್ನು ರೂಪಿಸುವ ಸ್ಪರ್ಧೆ ಏರ್ಪಡಿಸಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳನ್ನು ದೇಶದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವುದೂ ಸೇರಿದಂತೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಅಟಲ್ ಟಿಂಕರಿಂಗ್ ಲ್ಯಾಬ್ಗಳ ಬಗ್ಗೆ ತಿಳಿಯುವುದು ಪ್ರತಿಯೊಬ್ಬರ ಕರ್ತವ್ಯ.
ಸರ್ಕಾರೀ, ಖಾಸಗಿ, ಸೆಂಟ್ರಲ್, ಲೋಕಲ್ ಎನ್ನದೆ ಆರರಿಂದ ಹತ್ತನೇ ತರಗತಿಯ ವರೆಗಿನ ಯಾವುದೇ ಶಾಲೆಗಳೂ ಕೂಡಾ ಅಟಲ್ ಟಿಂಕರಿಂಗ್ ಲ್ಯಾಬ್ ತೆರೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಶಾಲೆಗಳಿಗೆ ಟಿಂಕರಿಂಗ್ ಲ್ಯಾಬ್ ಸ್ಥಾಪನಾ ವೆಚ್ಚವಾಗಿ 10 ಲಕ್ಷ ರೂ.ಗಳನ್ನು ನೀಡುತ್ತದೆ. ನಂತರ ಪ್ರತೀ ಅಟಲ್ ಟಿಂಕರಿಂಗ್ ಲ್ಯಾಬ್ಗೆ ಗರಿಷ್ಟ ಐದು ವರ್ಷಗಳ ಅವಧಿಗೆ ಅದರ ನಿರ್ವಹಣಾ ವೆಚ್ಚವಾಗಿ 10 ಲಕ್ಷ ರೂ.ಗಳನ್ನು ಒದಗಿಸಲಾಗುತ್ತದೆ. ಹೀಗೆ ಆಯ್ಕೆಯಾಗಿರುವ 1500 ಶಾಲೆಗಳ ಎರಡನೆಯ ಪಟ್ಟಿಯೊಂದರಲ್ಲೇ ನಮ್ಮ ರಾಜ್ಯದ 130 ಶಾಲೆಗಳು ಆಯ್ಕೆಯಾಗಿವೆ. ಆ ಪಟ್ಟಿಯಲ್ಲಿ ಬೆಂಗಳೂರಿನಿಂದ ಹಿಡಿದು ಬಾಗಲಕೋಟೆಯವರೆಗೆ, ಹಾಸನದಿಂದ ಹಿಡಿದು ಹಾವೇರಿಯವರೆಗೆ, ಚಿಕ್ಕಮಗಳೂರಿನಿಂದ ಹಿಡಿದು ಚಾಮರಾಜನಗರದವರೆಗೆ ಎಲ್ಲಾ ಜಿಲ್ಲೆಗಳ ಶಾಲೆಗಳೂ ಆಯ್ಕೆಯಾಗಿವೆ.
ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಕಳೆದ ಜೂನ್ ತಿಂಗಳಲ್ಲಿ ಮತ್ತೆ 3000 ಶಾಲೆಗಳನ್ನು ಆಯ್ಕೆ ಮಾಡಿದೆ. ಆ ಮೂಲಕ ದೇಶದಾದ್ಯಂತ ಒಟ್ಟು 5441 ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ತೆರೆದಂತಾಗಲಿದೆ. ಅಷ್ಟೇ ಅಲ್ಲದೆ ಭಾರತದ ಬಹುತೇಕ ಜಿಲ್ಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ಗಳು ಕಾರ್ಯಾರಂಭ ಮಾಡಿದಂತಾಗಲಿದೆ. ಇವುಗಳಿಂದಾಗಿ ಇನ್ನೆರಡು ವರ್ಷಗಳಲ್ಲಿ ಭಾರತದ ಒಟ್ಟು ಒಂದು ಮಿಲಿಯನ್ ಮಕ್ಕಳು ಸಂಶೋಧಕರಾಗಿ ಗುರುತಿಸಿಕೊಳ್ಳಲಿದ್ದಾರೆ. ಕೇವಲ ಅಷ್ಟಕ್ಕೇ ನಿಲ್ಲುವುದಿಲ್ಲ. ಸರ್ಕಾರ ಭಾರತದಾದ್ಯಂತ ಒಟ್ಟು 30,000 ಶಾಲೆಗಳಲ್ಲಿ ಲ್ಯಾಬ್ ಗಳನ್ನು ತೆರೆಯುವ ಮಹತ್ವಾಕಾಕ್ಷೆ ಹೊಂದಿದೆ. ಆಗ ಭಾರತದ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್ ಕಾರ್ಯಾರಂಭ ಮಾಡಿದಂತಾಗುತ್ತದೆ. ಅಷ್ಟೇ ಅಲ್ಲ, ಆಗ ಐದರಿಂದ ಆರು ಮಿಲಿಯನ್ ಭಾರತೀಯ ಮಕ್ಕಳು ನೇರವಾಗಿ ಆವಿಷ್ಕಾರಗಳಲ್ಲಿ ತೊಡಗಿಕೊಂಡು ವಿಶ್ವಕ್ಕೆ ದೇಶದ ಕೊಡುಗೆಯನ್ನು ನೀಡಲಿದ್ದಾರೆ.
ಈ ಅಟಲ್ ಟಿಂಕರಿಂಗ್ ಲ್ಯಾಬ್ಗಳ ಸ್ಥಾಪನೆ ಕೇವಲ ಘೋಷಣೆ ಅಥವಾ ಅನುದಾನ ನೀಡಿಕೆಗಷ್ಟೇ ಸೀಮಿತವಾಗಿ ನಂತರ ನೇಪಥ್ಯಕ್ಕೆ ಸರಿಯುವಂತಹಾ ಹಲವಾರು ಯೋಜನೆಗಳಂತಲ್ಲ. ಉದಾಹರಣೆಗೆ ಕಳೆದ 2017 ರಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ಗಳ ಸ್ಥಾಪನೆಗೆ ಆಯ್ಕೆಯಾದ 200 ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶಾಲೆಗಳಲ್ಲಿ ಮೈಸೂರಿನ ಕೌಟಿಲ್ಯ ವಿದ್ಯಾಲಯ ಕೂಡಾ ಒಂದು. ಹಾಗೆಯೇ ಕೌಟಿಲ್ಯ ವಿದ್ಯಾಲಯ ಆ ಪಟ್ಟಿಯಲ್ಲಿ ಮೈಸೂರು ನಗರದಿಂದ ಆಯ್ಕೆಯಾದ ಏಕೈಕ ಶಾಲೆಯೂ ಹೌದು.
2017 ರ ಸೆಪ್ಟೆಂಬರ್ ಹನ್ನೆರಡರಂದು ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ಮಾಜಿ ನಿರ್ದೇಶಕರಾದ ಪದ್ಮ ಭೂಷಣ, ಪದ್ಮಶ್ರೀ ಡಾ. ಬಿ.ಎನ್ ಸುರೇಶ್ ಅವರಿಂದ ಉದ್ಘಾಟನೆಗೊಂಡ ಕೌಟಿಲ್ಯ ವಿದ್ಯಾಲಯದ ಅಟಲ್ ಟಿಂಕರಿಂಗ್ ಲ್ಯಾಬ್ ಅದೇ ದಿನದಿಂದಲೇ ಸಂಪೂರ್ಣವಾಗಿ ಮಕ್ಕಳ ಸಂಶೋಧನೆಗಾಗಿ ತೆರೆದುಕೊಂಡಿತು. ಪ್ರತಿನಿತ್ಯ ನೂರಾರು ಮಕ್ಕಳು ಸ್ವಂತ ಆಸಕ್ತಿಯಿಂದ ಅದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ತಮ್ಮ ಶಾಲೆಯಷ್ಟೇ ಅಲ್ಲದೆ ಸಮೀಪದ ಇತರ ಶಾಲೆಗಳ ಮಕ್ಕಳಿಗೂ ಲ್ಯಾಬ್ ಉಪಯೋಗಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ ಎನ್ನುವ ಲ್ಯಾಬ್ನ ಉಸ್ತುವಾರಿ ನಿರ್ವಹಿಸುತ್ತಿರುವ ಶಿಕ್ಷಕರಾದ ಶ್ರೀ ಸಂದೀಪ್ ಎ.ಎಸ್. ಅವರು ಹೇಳುವಂತೆ ಈಗಾಗಲೇ ಇದೇ ಲ್ಯಾಬ್ನ ಉಪಕರಣಗಳು ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಶಾಲೆಯ ಮಕ್ಕಳಷ್ಟೇ ಅಲ್ಲದೆ ಇತರ ಶಾಲೆಯ ಮಕ್ಕಳೂ ಸಹ ವಿವಿಧ ಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಇಂತಹಾ ಉತ್ತಮ ಯೋಜನೆಯೊಂದನ್ನು ಎಷ್ಟು ಉತ್ತಮವಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ Hongirana School of Excellence ಒಂದು ಅತ್ಯುತ್ತಮ ಉದಾಹರಣೆ. ಅಟಲ್ ಟಿಂಕರಿಂಗ್ ಲ್ಯಾಬ್ಗಾಗಿ ಆಯ್ಕೆಯಾದ ದೇಶದ ಮೊದಲ 257 ಶಾಲೆಗಳ ಪೈಕಿ ಹೊಂಗಿರಣ ಶಾಲೆ ಕೂಡಾ ಒಂದು. ಆಯ್ಕೆಗಾಗಿ ಹೈದರಾಬಾದ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಥಳೀಯ ಸಮಸ್ಯೆಯೊಂದನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಸವಾಲು ನೀಡಲಾಗಿತ್ತು. ಮಲೆನಾಡು ಭಾಗದ ಶೇ.70 ರಷ್ಟು ಜನರಿಗೆ ನೇರವಾಗಿ ಸಂಬಂಧಪಡುವ ಪ್ರಮುಖ ಸಮಸ್ಯೆಯಾದ ಹಾಗೂ ಕೆಲವೊಮ್ಮೆ ಜೀವ ಹಾನಿ ಕೂಡಾ ಸಂಭವಿಸಬಹುದಾದ ಅಡಿಕೆ ಮರ ಹತ್ತಿ ಗೊನೆ ಕೊಯ್ಯುವ ಮತ್ತು ಅಡಿಕೆ ಮರಗಳಿಗೆ ಔಷಧ ಸಿಂಪಡಿಸುವ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಯಂತ್ರದ ನೀಲ ನಕ್ಷೆಯೊಂದನ್ನು ಶಾಲಾ ಮಕ್ಕಳು ಅಂದು ಪ್ರಸ್ತುತಪಡಿಸುವ ಮೂಲಕ ಆ ಶಾಲೆ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಗಾಗಿ ಆಯ್ಕೆಯಾಯಿತು. ಆಯ್ಕೆಯಾಗಿ ಕೇವಲ ಎರಡು ತಿಂಗಳ ಒಳಗಾಗಿ ನಿಗದಿಪಡಿಸಲಾದ ಮೊತ್ತ ದೊರೆತಿತಾದರೂ ಸ್ವ ಪ್ರೇರಣೆಯಿಂದ ಇನ್ನೂ ಹೆಚ್ಚಿನ ಬಂಡವಾಳ ತೊಡಗಿಸಿ ಆ ಶಾಲೆ ಲ್ಯಾಬ್ಗಾಗಿಯೇ ಪ್ರತ್ಯೇಕ ಕಟ್ಟಡವೊಂದನ್ನು ಕಟ್ಟಿಸಿಕೊಂಡಿತು. ಜೊತೆಗೆ ತಾವು ಪ್ರಸ್ತುತಪಡಿಸಿದ್ದ ನೀಲ ನಕ್ಷೆಯ ವಿನ್ಯಾಸವನ್ನು ಕೆಲವೇ ತಿಂಗಳಲ್ಲಿ ಪೂರ್ತಿಗೊಳಿಸಿ ಮೊಬೈಲ್ ಮೂಲಕವೇ ನಿಯಂತ್ರಿಸಬಲ್ಲ ರೊಬೊಟಿಕ್ ತಂತ್ರಜ್ಞಾನ ಹೊಂದಿದ ಅಡಿಕೆ ಮರ ಹತ್ತಿ ಗೊನೆ ಕೊಯ್ಯುವ ಮತ್ತು ಅಡಿಕೆ ಮರಗಳಿಗೆ ಔಷಧ ಸಿಂಪಡಿಸುವ ಯಂತ್ರದ ಮಾದರಿಯೊಂದನ್ನು ತಯಾರಿಸಿಯೇ ಬಿಟ್ಟಿತು!
ಆ ಮಾದರಿ ಅಗ್ರಿ ಟೆಕ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲದೆ ಇದೀಗ ಅದೊಂದು ಅತ್ಯುತ್ತಮ ಸ್ಟಾರ್ಟಪ್ ಆಗಬಲ್ಲ ವಿನ್ಯಾಸವೆಂದು ಗುರುತಿಸಿರುವ ಸರ್ಕಾರ ಪೇಟೆಂಟ್ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮುಂದೆ ಬಂದಿದೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅದರ ಮಾರ್ಗದರ್ಶಿ ಹಾಗೂ ನಿರ್ವಹಣೆಯ ಹೊಣೆ ಹೊತ್ತಿರುವ ಶ್ರೀ ರೋಹಿತ್ ವಿ. ಸಾಗರ್ ಅವರು.
ಹೊಂಗಿರಣ ಶಾಲೆಯು ಸ್ವಯಂ ಆಸಕ್ತಿಯಿಂದ “ಹೊಂಗಿರಣ ಟಿಂಕರಿಂಗ್ ಟೂರ್” ಎನ್ನುವ ಹೊಸಾ ಪರಿಕಲ್ಪನೆಯ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ. ದ್ವಿತೀಯ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳ ತಂಡ ಹಾಗೂ ತಮ್ಮ ಅಟಲ್ ಟಿಂಕರಿಂಗ್ ಲ್ಯಾಬ್ನ ಪರಿಕರಗಳೊಂದಿಗೆ ತಮ್ಮದೇ ಶಾಲೆಯ ವಾಹನದಲ್ಲಿ ಸುತ್ತ ಮುತ್ತಲಿನ ಸರ್ಕಾರೀ ಶಾಲೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳಿಗೆ ವಿವಿಧ ಪ್ರಯೋಗಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಅದು ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ತಮ್ಮ ಶಾಲೆಗೂ ಭೇಟಿ ಕೊಡುವಂತೆ ಕೇವಲ ರಾಜ್ಯವಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಆಹ್ವಾನಗಳು ಬರುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಹೊಂಗಿರಣ ATL ಹೊಸದಾಗಿ ಸ್ಥಾಪನೆಯಾಗುತ್ತಿರುವ ATL ಗಳಿಗೆ ಮಾರ್ಗದರ್ಶನವನ್ನೂ ಮಾಡುತ್ತಿದೆ. ಈಗಾಗಲೇ ಅಲ್ಲಿಗೆ ಸುಮಾರು ಹದಿನೆಂಟು ಹೊಸಾ ATL ಗಳು ಭೇಟಿ ಕೊಟ್ಟು ಸೂಕ್ತ ಮಾಹಿತಿಗಳನ್ನು ಪಡೆದುಕೊಂಡಿವೆ ಎಂದು ಮಾರ್ಗದರ್ಶಕರಾದ ರೋಹಿತ್ ವಿ.ಸಾಗರ್ ಅವರು ಸಂತಸ ವ್ಯಕ್ತಪಡಿಸುತ್ತಾರೆ.
ಮುಂದೊಂದು ದಿನ ದೇಶದ ಭವಿಷ್ಯವನ್ನೇ ಬದಲಿಸಬಲ್ಲ ದೂರಗಾಮಿ ಚಿಂತನೆಯ ಯೋಜನೆಯಾದ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಗಾಗಿ ನಿಮ್ಮ ಸಮೀಪದ ಯಾವ ಯಾವ ಶಾಲೆಗಳು ಈಗಾಗಲೇ ಆಯ್ಕೆಯಾಗಿವೆ ಎನ್ನುವುದನ್ನು ತಿಳಿಯಬೇಕೇ? ಹಾಗಿದ್ದರೆ ಅದಕ್ಕಾಗಿ ಈ ಲಿಂಕ್ ಗಳನ್ನು ಬಳಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.