ಬಡತನವನ್ನು ಶಾಪ ಎನ್ನಲಾಗುತ್ತದೆ. ಕೈಯಲ್ಲಿ ಬಿಡಿಗಾಸಿಲ್ಲದೆ, ಹಸಿದ ಹೊಟ್ಟೆಯಲ್ಲಿ ಕಷ್ಟಕೋಟಿಗಳ ಮಹಾ ಸಾಗರವನ್ನು ಈಜಿ ದಡ ಸೇರುವುದು ಬಡವನಾದವನಿಗೆ ಅನಿವಾರ್ಯ. ಎದುರಾಗುವ ಪ್ರತಿ ಸವಾಲನ್ನು ಎದೆಗುಂದದೆ ಸ್ವೀಕರಿಸಿ ನಿಶ್ಚಿತ ಗುರಿಯನ್ನು ತಲುಪುವವನನ್ನು ಮಾತ್ರ ಸಮಾಜ ಸಾಧಕ ಎಂದು ಗುರುತಿಸಿ ಸನ್ಮಾನಿಸುತ್ತದೆ. ಅಂತಹ ಅಪೂರ್ವ ಸಾಧಕರಲ್ಲಿ ಸ್ವಪ್ನ ಬರ್ಮನ್ ಕೂಡ ಒಬ್ಬಳು.
ವಯಸ್ಸು 21, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಂತೆ ಮಾಡಿದವಳು, ತ್ರಿವರ್ಣ ಧ್ವಜವನ್ನು ಮೇಲಕ್ಕೆ ಹಾರಿಸಿ ಭಾರತೀಯರನ್ನು ಪುಳಕಿತಗೊಳಿಸಿದವಳು. ಭಾರತದ ಕ್ರೀಡಾ ಇತಿಹಾಸದಲ್ಲಿ ಈಕೆಯ ಹೆಸರು ಅಜರಾಮರವಾಗಿರುತ್ತದೆ, ಯಾಕೆಂದರೆ ಏಷ್ಯನ್ ಗೇಮ್ಸ್ನ ಹೆಪ್ಟಾಥ್ಲಾನ್ ವಿಭಾಗದಲ್ಲಿ ಬಂಗಾರ ಗೆದ್ದ ದೇಶದ ಮೊತ್ತ ಮೊದಲ ಹೆಪ್ಟಾಥ್ಲಿಟ್ ಈಕೆ. ಹೆಪ್ಟಾಥ್ಲಾನ್ನ ಏಳು ಇವೆಂಟ್ಗಳಲ್ಲಿ ದಾಖಲೆಯ 6026 ಪಾಯಿಂಟ್ಗಳನ್ನು ಗಳಿಸಿ ವಿಜಯಿಯಾಗಿ ಈಕೆ ಹೊರಹೊಮ್ಮಿದ್ದಾಳೆ.
ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ 1996ರಲ್ಲಿ ಜನಿಸಿದ ಈಕೆ ಬಾಲ್ಯದಿಂದಲೇ ಬಡತನದ ಕಠೋರತೆಯನ್ನು ಎದುರಿಸಿದಾಕೆ. ತಂದೆ ಪಂಚನನ್ ಬರ್ಮನ್, ವೃತ್ತಿಯಲ್ಲಿ ರಿಕ್ಷಾ ಡ್ರೈವರ್, ಆದರೆ 2013ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದವರು ಇಂದಿಗೂ ಹಾಸಿಗೆಯಲ್ಲೇ ಇದ್ದಾರೆ. ತಾಯಿ ಬಸನ, ನಾಲ್ಕು ಮಕ್ಕಳನ್ನು ಸಾಕುವುದಕ್ಕಾಗಿ ಬೇರೆಯವರ ಮನೆಯಲ್ಲಿ ದುಡಿಯುತ್ತಾರೆ, ಬಿಡುವಿದ್ದಾಗ ಚಹಾ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾ ಬೆಳೆದವಳು ಸ್ವಪ್ನ. ಆದರೆ ಆಕೆಯ ಹಸಿದ ಹೊಟ್ಟೆಗೆ ಆಕೆಯ ಕನಸನ್ನು ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಎದುರಾದ ಪ್ರತಿ ಕಷ್ಟ ಆಕೆಯನ್ನು ಇನ್ನಷ್ಟು ದೃಢಗೊಳಿಸಿದೆ, ಆಕೆಯ ಕನಸಿಗೊಂದು ನಿಶ್ಚಿತ ಪಥವನ್ನು ನೀಡಿದೆ. ಓಟ, ಜಿಗಿತ, ಎಸೆತ ಎಲ್ಲದರಲ್ಲೂ ಆಕೆ ಪರಿಪಕ್ವತೆ ಪಡೆದಿದ್ದಾಳೆ ಎಂದರೆ ಅದಕ್ಕೆ ಅವಳ ದೃಢತೆ, ಆತ್ಮವಿಶ್ವಾಸ, ಪರಿಶ್ರಮ ಕಾರಣ. ಇದರಿಂದಲೇ ಆಕೆ ಇಂದು ಸ್ವರ್ಣ ಬಾಲೆ ಎನಿಸಿಕೊಂಡಿರುವುದು.
ಪಾದಗಳಲ್ಲಿ ಆರು ಬೆರಳುಗಳನ್ನು ಹೊಂದಿರುವ ಈಕೆಗೆ ಸರಿ ಹೊಂದುವ ಶೂಗಳು ಇನ್ನೂ ಭಾರತದಲ್ಲಿ ಸಿದ್ಧವಾಗಿಲ್ಲ. ಆಕೆಯ ಕೋಚ್ ಸುಭಾಷ್ ಸರ್ಕಾರ್ ಆಕೆಗೆ ಸರಿಹೊಂದುವ ಶೂ ಹುಡುಕಿ ಹುಡುಕಿ ಸುಸ್ತಾಗಿದ್ದಾರೆ. ಇದೇ ಕಾರಣಕ್ಕೆ ಆಕೆ ಪ್ರತಿ ಓಟದಲ್ಲೂ ಅಸಹನೀಯ ನೋವು ಪಡಬೇಕಾಗುತ್ತದೆ. ಈ ಬಗ್ಗೆ ಇತ್ತೀಚಿಗೆ ಅವಳು ಬಹಿರಂಗವಾಗಿಯೇ ಅಸಮಾಧಾನವನ್ನು ತೋಡಿಕೊಂಡಿದ್ದಾಳೆ. ಈ ಮೂಲಕ ದೇಶದ ಕ್ರೀಡಾ ತಜ್ಞರನ್ನು ಚಿಂತನೆಗೆ ಹಚ್ಚಿದ್ದಾಳೆ.
ಪ್ರಶಸ್ತಿ ರೂಪದಲ್ಲಿ ಸಿಕ್ಕ ಹಣ, ಪ್ರೋತ್ಸಾಹ ಧನ, ಸರ್ಕಾರ ನೀಡುವ ಸ್ಕಾಲರ್ಶಿಪ್ನಿಂದ ತನ್ನ ಕುಟುಂಬವನ್ನು ಪೋಷಣೆ ಮಾಡುತ್ತಿರುವ ಈಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಆಶಯವಿದೆ. ಇದಕ್ಕೆ ಆಕೆಗೆ ಕ್ರೀಡಾಭಿಮಾನಿಗಳ ಬೆಂಬಲ, ಪ್ರೋತ್ಸಾಹ ಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಈಕೆಯಂತಹ ಇನ್ನು ಅನೇಕ ಕ್ರೀಡಾ ಪ್ರತಿಭೆಗಳಿದ್ದು, ಅವರನ್ನು ಮುನ್ನಲೆಗೆ ತಂದು ಪ್ರೋತ್ಸಾಹಿಸಿದರೆ ಮಾತ್ರ ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮೆರೆಯಬಲ್ಲುದು, ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಬಲ್ಲುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.