ಕೇರಳ ರಾಜ್ಯ ಹಿಂದೆಂದೂ ಕಂಡುಕೇಳರಿಯದ ಪ್ರವಾಹಕ್ಕೆ ತುತ್ತಾಗಿದೆ. ಸುಮಾರು 400 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಇಡೀ ಭಾರತ ಕೇರಳಿಗರ ನೋವಿಗೆ ಸ್ಪಂದಿಸಲು ಮುಂದಾಗಿದೆ.
ಆದರೆ ಕೇರಳ ಸರ್ಕಾರ ಮಾತ್ರ ಇದನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಸುತ್ತಿದೆ. ಜೊತೆಜೊತೆಗೆ ಇದರ ಹಿಂದೆ ಬೇರೆ ಉದ್ದೇಶವಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗುತ್ತಿದೆ.
ಕೇರಳ ನೆರೆ ಪರಿಹಾರವಾಗಿ 700 ಕೋಟಿ ದೇಣಿಗೆ ನೀಡುವುದಾಗಿ ಯುಎಇ (ಅರಬ್ ಸಂಯುಕ್ತ ಸಂಸ್ಥಾನದ ರಾಜಕುಮಾರ) ಸರ್ಕಾರ ಸಹ ಘೋಷಿಸಿತ್ತು. ಥೈಲ್ಯಾಂಡ್ ಸೇರಿದಂತೆ ಕೆಲ ದೇಶಗಳು ಕೇರಳ ಪ್ರವಾಹಕ್ಕೆ ಅಗತ್ಯ ನೆರವು ನೀಡಲು ಮುಂದೆ ಬಂದಿದ್ದವು. ಆದರೆ ಕೇರಳ ನೆರೆ ಪರಿಹಾರವಾಗಿ ಯಾವುದೇ ವಿದೇಶಿ ದೇಣಿಗೆಯನ್ನು ಸ್ವೀಕರಿಸುವುದಿಲ್ಲ ಎಂದು ಭಾರತ ಸರ್ಕಾರ ನಯವಾಗಿ ಸೌಜನ್ಯದಿಂದ ವಿದೇಶಗಳ ಪ್ರಸ್ತಾಪವನ್ನು ತಿರಸ್ಕರಿಸಿತು.
ಅರಬ್ ದೇಶಗಳಲ್ಲಿ ಕೇರಳದ ಲಕ್ಷಾಂತರ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಕೊಲ್ಲಿ ರಾಷ್ಟ್ರಗಳಿಗೂ ಕೇರಳಕ್ಕೂ ವಿಶೇಷವಾದ ಸಂಬಂಧವಿದೆ. ಈ ನೆಲೆಯಲ್ಲಿ ನೀಡಿದ ನೆರವನ್ನು ತಿರಸ್ಕರಿಸುವುದು ತಪ್ಪು ಎಂದು ಕೇರಳ ಸರ್ಕಾರ ಹಾಗೂ ಹಲವು ಬುದ್ಧಿಜೀವಿಗಳು ಕೇಂದ್ರ ಸರ್ಕಾರದವರನ್ನು ಟೀಕಿಸಲಾರಂಭಿಸಿದೆ. ಇಡೀ ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನ ಮಾಡುತ್ತಿದೆ. ಕೇರಳದ ಹಣಕಾಸು ಸಚಿವ ಥಾಮಸ್ರಂತೂ ‘ಇವರು (ಭಾರತ ಸರ್ಕಾರ) ಕೊಡುವುದೂ ಇಲ್ಲ, ಕೊಡುವವರನ್ನು ಬಿಡುವುದೂ ಇಲ್ಲ. ರಾಜ್ಯವನ್ನು ಮತ್ತೆ ಕಟ್ಟಲು ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ಇವರು ಅರ್ಥಮಾಡಿಕೊಳ್ಳುವುದಿಲ್ಲ. ಹಣ ಕೇಳಿದಾಗ ಕೇಂದ್ರ ಸರ್ಕಾರದ ಬಳಿ ಹಣ ಇರುವುದಿಲ್ಲ. ವಿದೇಶಿ ದೇಣಿಗೆಯನ್ನು ನಿರಾಕರಿಸಿ ಬಿಡುತ್ತಾರೆ’ ಎಂದು ಸಾರ್ವಜನಿಕವಾಗಿ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಆದರೆ ವಾಸ್ತವವಾಗಿ ಭಾರತ ಸರ್ಕಾರದ ಈ ನಿರ್ಧಾರದ ಹಿಂದಿರುವುದು ‘ದೇಶ ಹಿತ’, ದೇಶದ ಸ್ವಾಭಿಮಾನ, ಗೌರವ.
ಇದೀಗ ಭಾರತ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿದೆ. ಮಾತ್ರವಲ್ಲದೇ ವಿಶ್ವದ 6ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕಳೆದ ಕೆಲ ವರ್ಷಗಳಿಂದ ವಿಶ್ವಬ್ಯಾಂಕ್, ಐಎಂಎಫ್ಗಳಿಂದ ಅನಗತ್ಯವಾಗಿ ಹಣಪಡೆಯುವ ಗೋಜಿಗೆ ಹೋಗಿಲ್ಲ. ಬದಲಾಗಿ ನಾವೀಗ ಬೇಡುವ ಸ್ಥಿತಿಯಲ್ಲಿಲ್ಲ; ನೀಡುವ ಸ್ಥಿತಿಯಲ್ಲಿದ್ದೇವೆ ಎಂದು ಜಗತ್ತಿಗೆ ಸಾರುತ್ತಿದೆ. ಶ್ರೀಲಂಕಾ, ಥೈಲ್ಯಾಂಡ್, ಇಂಡೋನೇಷ್ಯಾ ದೇಶಗಳ ಪ್ರವಾಹ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು. ಇನ್ನು ಅಪ್ಘಾನಿಸ್ತಾನದಂತಹ ದೇಶಗಳ ಪುನರ್ನಿರ್ಮಾಣದಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದೀಗ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುತ್ತಿದೆ. ಭಾರತದ ಮಾತಿಗೆ ಜಗತ್ಮನ್ನಣೆ ದೊರೆಯುತ್ತಿದೆ. (ಉದಾ: ಹವಾಮಾನ ವೈಪರೀತ್ಯಗಳ ಕುರಿತ ಭಾರತದ ನಿಲುವಿಗೆ ಜಗದ್ಮನ್ನಣೆ, ವಿಶ್ವದ ಪ್ರಮುಖ ಕೂಟಗಳಲ್ಲಿ ಒಂದೊಂದಾಗಿ ಭಾರತಕ್ಕೆ ಸ್ಥಾನ ಲಭಿಸುತ್ತಿರುವುದು). ಇಂತಹ ಸಂದರ್ಭದಲ್ಲಿ ಭಾರತ ಕೈಚಾಚಬೇಕಾದ ಅಗತ್ಯವಿಲ್ಲ. ಮತ್ತು ಭಾರತದ ಆರ್ಥಿಕತೆಯೂ ಸುದೃಢವಾಗಿದೆ.
2004 ರಲ್ಲಿ ಸುನಾಮಿ ಅಪ್ಪಳಿಸಿದ ಪರಿಣಾಮವಾಗಿ ದೇಶದ 12ಕ್ಕೂ ಅಧಿಕ ರಾಜ್ಯಗಳು ಸಂತ್ರಸ್ಥವಾದಾಗಲೂ ಸುಮಾರು 12 ಸಾವಿರ ಮಂದಿ ಮೃತಪಟ್ಟು 6 ಲಕ್ಷಕ್ಕೂ ಅಧಿಕ ಮಂದಿ ಮನೆಮಠ ಕಳೆದುಕೊಂಡಾಗಲೂ ಭಾರತ ವಿದೇಶಿ ನೆರವನ್ನು ಪಡೆಯಲಿಲ್ಲ. ಇತ್ತೀಚೆಗೆ ಉತ್ತರಾಖಂಡ(2013), ಕಾಶ್ಮೀರ (2014) ಪ್ರವಾಹ ಸಂದರ್ಭದಲ್ಲಿಯೂ ಭಾರತ ವಿದೇಶೀ ನೆರವನ್ನು ಪಡೆಯದೇ ಸ್ವತಂತ್ರವಾಗಿ ಪುನರ್ವಸತಿ ಕಾರ್ಯ ಕೈಗೊಂಡು ಯಶಸ್ವಿಯಾಗಿದೆ ಎಂಬುದನ್ನು ಗಮನಿಸಬೇಕು.
ಈಗಾಗಲೇ ದೇಶದ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ (ಸ್ವತಃ ಪ್ರವಾಹ ಪರಿಸ್ಥಿತಿಯಲ್ಲಿರುವ ಈಶಾನ್ಯ ಭಾರತದ ರಾಜ್ಯಗಳೂ ಕೂಡಾ) ಕೇರಳಕ್ಕೆ ಪರಿಹಾರ ನೀಡಲು ಮುಂದಾಗಿವೆ. ಆರೆಸ್ಸೆಸ್ನ 85 ಸಾವಿರಕ್ಕೂ ಅಧಿಕ ಮಂದಿ ಸ್ವಯಂಸೇವಕರು ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಕೆಲಸದಲ್ಲಿ ಹಗಲಿರುಳು ತೊಡಗಿಸಿಕೊಂಡಿದ್ದಾರೆ. ಹಲವಾರು ಸಂಘಸಂಸ್ಥೆಗಳು, ಇಡೀ ಭಾರತೀಯ ಜನಸಮುದಾಯ ಏಕಕಂಠದಿಂದ ಕೇರಳಿಗರ ನೋವಿಗೆ ಸ್ಪಂದಿಸುತ್ತಿದೆ, ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಾ. ಸ್ವತಃ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ ತುರ್ತು 500 ಕೋಟಿ ನೆರವು ನೀಡಿದ್ದಾರೆ. ಸೇನೆ, ಔಷಧ ಸೇರಿದಂತೆ ಅಗತ್ಯ ಸಾಮಗ್ರಿಗಳ ವಿತರಣೆಗೂ ಮುಂದಾಗಿದೆ. ಈಗ ಕೇರಳ ಸರ್ಕಾರ, ಅನಗತ್ಯ ರಾಜಕೀಯ ಕಾರಣಗಳಿಂದ ವಿವಾದಸೃಷ್ಟಿಸುವುದನ್ನು ಬಿಟ್ಟು ಜನರಿಗೆ ಪುನರ್ವಸತಿ ಕಲ್ಪಿಸುವತ್ತ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾದ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.