ಈ ಚಿತ್ರವನ್ನು 1975 ರಲ್ಲಿ ಅನಂತಲಕ್ಷ್ಮಿ ಫಿಲಂಸ್ ಅಡಿಯಲ್ಲಿ ಜಿ.ವಿ.ಅಯ್ಯರವರು ನಿರ್ಮಾಣ ಮಾಡಿದರು. ಕನ್ನಡದ ಪ್ರಖ್ಯಾತ ಸಾಹಿತಿಯಾದ ಶ್ರೀ ತ.ರಾ.ಸು. ರವರ ಹಂಸಗೀತೆ ಕಥೆಯನ್ನು ಆಯ್ದುಕೊಂಡು, ಜಿ.ವಿ.ಅಯ್ಯರ್ ರವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಾರೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಅನಂತ ನಾಗ್, ರೇಖಾರಾವ್, ಬಿ.ವಿ.ಕಾರಂತ್, ಪ್ರೇಮಾ ಕಾರಂತ್, ಮೈಸೂರುಮಠ್ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಡಾ. ಎಂ. ಬಾಲಮುರುಳಿಕೃಷ್ಣರವರ ಸಂಗೀತವಿದ್ದು, ಜಿ.ವಿ.ಅಯ್ಯರ್ ರವರ ಸಾಹಿತ್ಯದ ಗೀತೆಗಳಿವೆ. ಟಿ.ಜಿ.ಲಿಂಗಪ್ಪ ಹಾಗೂ ಬಿ.ವಿ.ಕಾರಂತ್ರವರ ಹಿನ್ನೆಲೆ ಸಂಗೀತವಿದೆ. 23ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ, ಅತ್ಯುತ್ತಮ ಗಾಯಕ (ಡಾ. ಬಾಲಮುರಳಿಕೃಷ್ಣ) ಪ್ರಶಸ್ತಿಗಳನ್ನು ರಾಷ್ಟ್ರ ಮಟ್ಟದಲ್ಲಿ ಹಾಗೂ ದ್ವಿತಿಯ ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಂಗೀತ ನಿರ್ದೇಶಕ (ಡಾ. ಬಾಲಮುರಳಿಕೃಷ್ಣ, ಬಿ.ವಿ.ಕಾರಂತ್), ಅತ್ಯುತ್ತಮ ಛಾಯಾಗ್ರಾಹಕ (ನೆಮಾಯ್ ಘೋಷ್) ಪ್ರಶಸ್ತಿಗಳನ್ನು ರಾಜ್ಯಮಟ್ಟದಲ್ಲಿ ತನ್ನದಾಗಿಸಿಕೊಂಡಿದೆ.
ಸಿಕ್ಕ ಚಿಕ್ಕದೊಂದು ಆಧಾರವನ್ನು ಹಿಡಿದು, ಊರೂರು ಅಲೆದು, ಅನೇಕ ಹಿರಿಯರನ್ನು ಸಂಪರ್ಕಿಸಿ, ವೆಂಕಟಸುಬ್ಬಯ್ಯ ನವರು “ಬೈರವಿ ವೆಂಕಟಸುಬ್ಬಯ್ಯ”ರಾದ ಕಥೆಯನ್ನು 1952 ರಲ್ಲಿ ತ.ರಾ.ಸು. ರವರು ಕಾದಂಬರಿಯ ರೂಪದಲ್ಲಿ ಈ ಕಲ್ಪನೆಗೆ ಅಕ್ಷರ ರೂಪ ಕೊಡುತ್ತಾರೆ. ಈ ಕೃತಿಯನ್ನು ಆಧರಿಸಿ ರಾಜಾ ನವಾತೆ ರವರ ನಿರ್ದೇಶನದಲ್ಲಿ ಹಿಂದಿ ಭಾಷೆಯಲ್ಲಿ “ಬಸಂತ್ ಬಹಾರ್” ಎಂಬ ಹೆಸರಿನಲ್ಲಿ ಚಿತ್ರ 1956 ರಲ್ಲಿಯೇ ಬಿಡುಗಡೆಯಾಗುತ್ತದೆ. ನಂತರದ 1975 ರಲ್ಲಿ “ಹಂಸಗೀತೆ”ಯನ್ನು ಜಿ.ವಿ. ಅಯ್ಯರ್ ರವರು ಕರ್ನಾಟಕ ಸಂಗೀತ ಅಮೋಘ ಕಲಾಕೃತಿಯನ್ನಾಗಿಸಿ ಬೆಳ್ಳಿತೆರೆಗೆ ತಂದರು. ಈ ಚಿತ್ರದಲ್ಲಿ ಇರುವುದು ಕೇವಲ 15 ನಿಮಿಷಗಳ ಕಾಲ ಸಂಭಾಷಣೆ ಮಾತ್ರ. ಉಳಿದದ್ದೆಲ್ಲಾ ಸಂಗೀತಮಯ. ನಾಲ್ಕೈದು ದಶಕಗಳ ಹಿಂದಿನ ಚಿತ್ರದುರ್ಗ ಕೋಟೆಯನ್ನು ನೆಮಾಯ್ ಘೋಷ್ ರವರು ತಮ್ಮ ಕ್ಯಾಮೆರಾದಲ್ಲಿ ಬಹಳ ಸುಂದರವಾಗಿ ಸೆರೆಹಿಡಿದಿದ್ದಾರೆ. ಮದಕರಿನಾಯಕನ ಆಸ್ಥಾನ ದೃಶ್ಯ ಸೇರಿದಂತೆ ಬಹುತೇಕ ಎಲ್ಲ ದೃಶ್ಯಗಳೂ ನೈಜತೆಯಿಂದ ಕೂಡಿದೆ.
ಕಥೆ:
ರಾತ್ರಿ ಹೊತ್ತಲ್ಲಿ ದುರ್ಗದ ರಾಜರಾದ ಮದಕರಿನಾಯಕರು ಕಾವಲುಪಡೆಯೊಂದಿಗೆ ಕೋಟೆಯ ಬಾಗಿಲುಗಳನ್ನು ದಾಟಿ ಏಕನಾಥೇಶ್ವರಿಯ ದರುಷನಕ್ಕಾಗಿ ಬರುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅಲ್ಲಿಗೆ ಬ್ರಾಹ್ಮಣ ಯುವಕನಾದ ವೆಂಕಟಸುಬ್ಬಯ್ಯ (ಅನಂತನಾಗ್) ಬಂದು ದೇವತೆಗೆ ದೀರ್ಘದಂಡ ಹಾಕಿ ನಮಸ್ಕರಿಸುತ್ತಾ, ತಾನು ಬಂದ ಉದ್ದೇಶವನ್ನು ತಿಳಿಸುತ್ತಾ ಏಕನಾಥೇಶ್ವರಿ ತಾಯಿಯ ಕೃಪೆಗಾಗಿ ನಿವೇದಿಸಿಕೊಳ್ಳುತ್ತಾನೆ. ತಾನಿನ್ನೂ ಸಂಗೀತ ಕಲಿಯುವ ಹಂತದಲ್ಲಿದ್ದಾಗಲೇ, “ಹೌದಪ್ಪ ಚಾವಡಿ”ಯಂತಿದ್ದ ಗುರುಗಳ ಅಹಂಕಾರ ಮುರಿಯಲು ಗುರುಗಳಿಗೆ ಸವಾಲು ಹಾಕಿರುತ್ತಾನೆ. ದೈವಕೃಪೆಯಿಂದ ಆ ಸಂಗೀತ ಕಚೇರಿಯಲ್ಲಿ ವೆಂಕಟಸುಬ್ಬಯ್ಯನದೇ ಮೇಲುಗೈಯಾಗುತ್ತಾದೆ. ಸೋತ ತಿರುಮಲಯ್ಯಚಾರ್ಯರು ತನ್ನ ಬಿರುದು ಬಾವಲಿಗಳನ್ನು ತನಗಿಂತಲೂ ಚೆನ್ನಾಗಿ ಹಾಡಿದ ವೆಂಕಟಸುಬ್ಬಯ್ಯನ ಪಾದಗಳಿಗೆ ಅರ್ಪಿಸಿ, ಕಚೇರಿಯಿಂದ ಎದ್ದು ಹೊರಬಂದು, ಸೋತ ಅವಮಾನ ತಾಳಲಾರದೇ ಗೋಪಾಲಸ್ವಾಮಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಗುರುಗಳ ಸಾವಿಗೆ ಕಾರಣನಾದ ವೆಂಕಟಸುಬ್ಬಯ್ಯನಿಗೆ ಸಂಗೀತ ಹೇಳಿಕೊಡಲು ಯಾರೂ ಮುಂದೆ ಬರುವುದಿಲ್ಲ. ಒಂದಿರುಳು ರಾತ್ರಿ ಹೀಗೆ ಆಕಾಶ ನೋಡುತ್ತಾ, ಚಿಂತಿಸುತ್ತಿರುವಾಗ ಎಲ್ಲಿಂದಲೋ ಕೇಳಿ ಬರುತ್ತಿದ್ದ ರಾಗಾಲಾಪನೆಯ ಜಾಡು ಹಿಡಿದು ಹೊರಡುತ್ತಾನೆ ವೆಂಕಟಸುಬ್ಬಯ್ಯ. ಅಲ್ಲೊಬ್ಬ ತಿರುಕ (ಬಿ.ವಿ.ಕಾರಂತ್) ರಾಗಾಲಾಪ ಮಾಡುತ್ತಿರುತ್ತಾನೆ. ಅವನನ್ನು ಕಾಲು ಹಿಡಿದು ನೀವೆ ನನ್ನ ಗುರುಗಳಾಗಬೇಕು ಎಂದು ಬೇಡುತ್ತಾನೆ. ಆತ ಅದೆಷ್ಟೇ ಕೋಪದಿಂದ, ನಿಕೃಷ್ಠನಾಗಿ ಹೇಳಿದರೂ ವೆಂಕಟಸುಬ್ಬಯ್ಯ ಮಾತ್ರ ಆತನನ್ನು ಹಿಂಬಾಲಿಸುವುದು ಬಿಡುವುದಿಲ್ಲ. ಸುಖವಾಗಿ ಬೆಳೆದಿದ್ದ ವೆಂಕಟಸುಬ್ಬಯ್ಯ ಆ ಗುರುವಿಗಾಗಿ ಭಿಕ್ಷೆ ಬೇಡುತ್ತಾನೆ, ಹಳಸಿದ ಅನ್ನ ತಿನ್ನುತ್ತಾನೆ, ಕಲ್ಲು ಮುಳ್ಳೆನ್ನದೆ ದಾರಿ ಸವೆಸುತ್ತಾನೆ. ಸಾಧನೆ ಮಾಡಬೇಕಂಬ ಹಠವಿದ್ದವರು ಎಂಥ ಕಠಿಣ ಮಾರ್ಗವಾದರೂ ಸರಿ, ಹಿಂತಿರುಗದೇ ದಾರಿ ಸವೆಸಬೇಕು ಎನ್ನುವುದನ್ನು ತಿಳಿಸುತ್ತದೆ. ಅಂತೂ ಇಂತೂ ಆತ ತಿಳಿದಾಗ, ಹೊತ್ತಲ್ಲದ ಹೊತ್ತಲ್ಲಿ ರಾಗಗಳನ್ನು ಹೇಳಿಕೊಡುತ್ತಿದ್ದ. ಒಂದಿನ ಆತನೂ ದೈವಾಧೀನನಾಗುತ್ತಾನೆ. ಗಡ್ಡ ಬಿಟ್ಟು ಭಿಕಾರಿಯಂತಿದ್ದವನಿಗೆ, ಆಗ ಊರಿನ ನೆನಪಾಗಿ, ಚಿತ್ರದುರ್ಗದ ಮನೆಗೆ ಬರುತ್ತಾನೆ ವೆಂಕಟಸುಬ್ಬಯ್ಯ. ಅಲ್ಲಿ ವಿಧವೆಯಾದ ತಾಯಿಯನ್ನು ಕಂಡು ಶೋಕತಪ್ತನಾಗುತ್ತಾನೆ. ಅಂತೂ ಮಾವನ ಮಾತಿನಂತೆ ಸಾಧನೆಯ ಕಡೆ ಮತ್ತೆ ಗಮನ ಕೊಡುತ್ತಾನೆ. ಅಂತೂ ಇಂತೂ ರಾಜಾ ಮದಕರಿನಾಯಕನ ಆಸ್ಥಾನ ಸಂಗೀತ ವಿಧೂಷಕನಾಗುತ್ತಾನೆ. ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗುತ್ತಾದೆ. ಯಾವುದೇ ಕ್ಷೇತ್ರವಾದರೂ ಸರಿ, ಸಾಧನೆ ಮಾಡಿದವನಿಗೆ ಅಹಂಕಾರ ಬರಬಾರದು. ಬಂದರೆ ಸಾಧನೆಯ ಬೆಲೆ ಕ್ಷೀಣಗೊಳ್ಳುತ್ತಿರುತ್ತೆ. ಅದೇ ವೆಂಕಟಸುಬ್ಬಯ್ಯನಲ್ಲೂ ಆದದ್ದು. ಅಹಂಕಾರಿಯೂ ಆಗುತ್ತಾನೆ.
ಅವನ ಅಹಂಕಾರವೂ ಸಹ ಚೋಟುದ್ದದ ಬಾಲಕನ ರೂಪದಲ್ಲಿ ಸಿಕ್ಕು, ತಬಲ ಬಾರಿಸಿದಂತೆಯೇ ನಲುಗುತ್ತದೆ. ಅಹಂಕಾರ ಕರಗಿದ ನಂತರ ಆಸ್ಥಾನದಿಂದ ತನಗಿತ್ತ ಸಕಲ ಸೌಕರ್ಯವನ್ನು ಮದಕರಿನಾಯಕರಿಗೆ ಹಿಂದಿರುಗಿಸುತ್ತಾನೆ ವೆಂಕಟಸುಬ್ಬಯ್ಯ. ತದನಂತರ ಸಂಗೀತ ಸ್ವರ ಸಾಧನೆಯ ಬೆನ್ನು ಹತ್ತುತ್ತಾನೆ. ಯಾವುದಾದರೂ ಒಂದು ರಾಗದಲ್ಲಿ ಸಾಧನೆ ಮಾಡಲೆಬೇಕೆಂದು ಹಠತೊಟ್ಟುತ್ತಾನೆ. ಸಾಧನೆಗೆ ನೂರೆಂಟು ವಿಘ್ನ. ವೆಂಕಟಸುಬ್ಬಯ್ಯನಿಗೂ ಹೆಣ್ಣಿನ ರೂಪದಲ್ಲಿ ಈ ವಿಘ್ನ ಬರುತ್ತದೆ. ಆಕೆಯ (ರೇಖಾರಾವ್) ಮೋಹಕೆ ಸೋತು, ಪ್ರಣಯದಲ್ಲಿಯೇ ಮುಳುಗಿ ಮತ್ತೆ ಸಾಧನೆ ಮರೆತುಬಿಡುತ್ತಾನೆ. ಮತ್ತೆ ಮಾವನೇ ಬಂದು ಸಾಧನೆಯ ಕುರಿತಂತೆ ಎಚ್ಚರಿಸುತ್ತಾನೆ. ಆಗ ಮತ್ತೊಮ್ಮೆ ಹಠಯೋಗಿಯಂತೆ ಸಂಗೀತವನ್ನು ಧ್ಯಾನಿಸುತ್ತಾನೆ. ಭೈರವಿ ರಾಗವನ್ನು ಒಲಿಸಿಕೊಂಡು “ಬೈರವಿ ವೆಂಕಟಸುಬ್ಬಯ್ಯ” ಎಂದೇ ಹೆಸರುವಾಸಿಯಾಗುತ್ತಾನೆ.
ಇತ್ತ ಚಿತ್ರದುರ್ಗ ಕೋಟೆಯು ಮದಕರಿನಾಯಕನ ಕೈತಪ್ಪಿ ಹೈದರಾಲಿಯ ವಶವಾಗಿ, ಟಿಪ್ಪುಸುಲ್ತಾನನ ಆಳ್ವಿಕೆಗೆ ಒಳಪಡುತ್ತದೆ. “ಬೈರವಿ ವೆಂಕಟಸುಬ್ಬಯ್ಯ” ನವರ ಸಂಗೀತ ಕೇಳಬೇಕೆಂದು ನವಾಬನು ಹುಕುಂ ಮಾಡಿದರೂ, ವೆಂಕಟಸುಬ್ಬಯ್ಯ ದೇವಿ ಸಾನಿಧ್ಯದಲ್ಲಷ್ಟೇ ಹಾಡುವುದಾಗಿ, ಹಾಡು ಕೇಳಲು ಅಲ್ಲಿಗೇ ಬರಬೇಕಾಗಿ ಮದವಿರುವ ದೊರೆಗಳಿಗೆ ಹೇಳುತ್ತಾನೆ. ಅಷ್ಟಕ್ಕೇ ಕುಪಿತನಾದ ಟಿಪ್ಪು ಸುಲ್ತಾನ್ ನಾಳೆಯವರೆಗೂ ಕಾಲಾವಕಾಶ ನೀಡುತ್ತೇನೆ, ಆಸ್ಥಾನದಲ್ಲಿ ಬಂದು ಹಾಡದೇ ಹೋದರೆ ರಾಜಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಕಠಿಣವಾಗಿ ಎಚ್ಚರಿಸುತ್ತಾನೆ. ಆಸ್ಥಾನದಿಂದ ನೇರವಾಗಿ ಮನೆಗೆ ಬಂದು, ತುಸು ಕೋಪದಿಂದಲೇ ತಂಬೂರಿ ಹಿಡಿದು, ನೇರವಾಗಿ ಏಕನಾಥೇಶ್ವರಿ ದೇಗುಲದ ಆವರಣಕ್ಕೆ ಬಂದು ಹಾಡುತ್ತಾನೆ. ನಡುರಾತ್ರಿಯಾದರೂ ವೆಂಕಟಸುಬ್ಬಯ್ಯ ಹಾಡುತ್ತಲೇ ಇರುತ್ತಾನೆ. ಅಲ್ಲಿಗೆ ವೇಷ ಮರೆಸಿ ಬಂದ ಟಿಪ್ಪು ಸುಲ್ತಾನ್ ಕೂಡ ವೆಂಕಟಸುಬ್ಬಯ್ಯನ ಗಾಯನದಲ್ಲಿ ಮೈಮರೆಯುತ್ತಾನೆ. ಹೀಗೆ ಹಾಡುತ್ತಾ ಹಾಡುತ್ತಾ ಇರುವಾಗಲೇ ವೆಂಕಟಸುಬ್ಬಯ್ಯ ತನ್ನ ನಾಲಿಗೆ ಕತ್ತರಿಸಿಕೊಂಡು ಹಾಡು ನಿಲ್ಲಿಸುತ್ತಾನೆ. ಇದು ಘೋರವೆನಿಸುತ್ತದೆ. ಅಲ್ಲಿಗೆ ಹಂಸ ತಾನು ಹಾಡುವುದನ್ನು ನಿಲ್ಲಿಸುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಸಂಗೀತದಲ್ಲಿ ಪ್ರೀತಿ ಇದ್ದವರು, ಸಂಗೀತದಲ್ಲಿ ಆಸಕ್ತಿ ಇದ್ದವರು, ಸಂಗೀತವನ್ನು ಆರಾಧಿಸುವವರು ಈ ಸಿನಿಮಾ ನೋಡಲೇಬೇಕು.
2. ಸಾಧನೆ ಮಾಡಬೇಕೆಂದುಕೊಂಡವರು, ಸಾಧನೆಯ ಹಾದಿಯಲ್ಲಿ ಹೋರಾಡುತ್ತಿರುವವರು ತಪ್ಪದೇ ನೋಡಬೇಕಾದ ಚಿತ್ರ.
3. ನಾಲ್ಕೈದು ದಶಕಗಳ ಹಿಂದಿನ, ಚಿತ್ರದುರ್ಗ ಕೋಟೆ ಹಾಗೂ ಚಂದವಳ್ಳಿ ತೋಟದ ಸೌಂದರ್ಯವನ್ನು ಕಾಣಬಹುದು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.