ಇಸ್ಲಾಮ್ ರಾಷ್ಟ್ರಗಳೊಂದಿಗೆ ಅಣುಬಂಧಕ್ಕೆ ಮುಂದಾದ ಭುಟ್ಟೋ
24 ಜನವರಿ 1972ರಂದು ಮುಲ್ತಾನ್ನಲ್ಲಿ ನಡೆದ ಪಾಕಿಸ್ತಾನದ ಅತಿ ಪ್ರಮುಖ ಮಿಲಿಟರಿ ಅಧಿಕಾರಿಗಳು ಮತ್ತು ಉನ್ನತ ವೈಜ್ಞಾನಿಕರೊಂದಿಗಿನ ಗುಪ್ತ ಭೇಟಿಯ ನಂತರ ಅಧ್ಯಕ್ಷ ಜುಲ್ಫಿಕರ್ ಭುಟ್ಟೋಗೆ ತನ್ನ ಮಹತ್ವಾಕಾಂಕ್ಷೆಯ ಇಸ್ಲಾಮೀ ನ್ಯೂಕ್ಲಿಯರ್ ಬಾಂಬಿನ ಸಾಕಾರಕ್ಕೆ ದೇಶದ ದಾರಿದ್ರ್ಯವೇ ಎಲ್ಲಕ್ಕಿಂತ ದೊಡ್ಡತಡೆ ಎನ್ನುವುದು ಸ್ಪಷ್ಟವಾಗಿತ್ತು. ಇದನ್ನು ಮೆಟ್ಟಿ ನಿಲ್ಲುವ ಮೊದಲ ಯೋಜನೆಯಾಗಿ ಆತನಿಗೆ ಹೊಳೆದ ಕಲ್ಪನೆಯೇ ವೈಶ್ವಿಕ ಇಸ್ಲಾಮಿ ಏಕತೆಯದ್ದು. ತನ್ನ ಯೋಜನೆಯ ಮೊದಲ ಹಂತವಾಗಿ ಆತ 20 ದೇಶಗಳ ಪ್ರವಾಸಕ್ಕೆ ಹೊರಟ. ಸೌದಿ ಅರಬ್, ಈಜಿಪ್ಟ್, ಇರಾನ್ ಮತ್ತು ಲಿಬಿಯಾಗಳು ಆತನ ಪ್ರವಾಸದ ಯಾದಿಯಲ್ಲಿ ಎಲ್ಲಕ್ಕಿಂತ ಮೇಲಿದ್ದ ದೇಶಗಳು.
ಲಿಬಿಯಾದಲ್ಲಿ ಆತನ ಭೇಟಿ ಕರ್ನಲ್ ಮುವಮ್ಮರ್ ಗಡಾಫಿಯೊಡನಾಯಿತು. ಬಂಡು ಖೋರ ಗೆರಿಲ್ಲಾಗಳ ನಾಯಕ ೨೭ ವರ್ಷದ ಗಡಾಫಿ, ಮುಸ್ಲಿಂ ಜಗತ್ತಿನ ಅನೂಚಾನ ಪದ್ಧತಿಯಂತೆ ತನ್ನದೇ ದೇಶದ ರಾಜ ಇದ್ರಿಸ್ನನ್ನು ಸ್ಥಾನಭ್ರಷ್ಟನಾಗಿಸಿ ೧೯೬೯ರಲ್ಲಿ ಅಧಿಕಾರಕ್ಕೇರಿದ್ದ. ಎಲ್ಲ ನಿರಂಕುಶಮತಿಗಳಂತೆ ಆಗಷ್ಟೆ ಕೈಗೆ ಬಂದಿದ್ದ ಅಧಿಕಾರದ ಜರ್ಬನ್ನು ಮೆರೆಯಿಸುವ ಆತನ ಉಮೇದಿಗೆ ಸಾಧನವೊಂದರ ಅವಶ್ಯಕತೆಯಿತ್ತು. ನ್ಯೂಕ್ಲಿಯರ್ ಬಾಂಬ್ ಆತನಿಗೆ ಹೇಳಿ ಮಾಡಿಸಿದ ಆಟಿಕೆಯಾಗಿ ಕಂಡಿತು. ಗದಾಫಿಯ ಇಂಗಿತಗಳನ್ನೇ ತನ್ನ ಮಹತ್ವಾಕಾಂಕ್ಷೆಗಳಿಗೆ ಉರುವಲಾಗಿ ಬಳಸುವಲ್ಲಿ ಭುಟ್ಟೊ ಹಿಂದೆ ಬೀಳಲಿಲ್ಲ.
ಸೌದಿಯ ರಾಜ ಫೈಸಲ್ನಿಗೆ ತನ್ನ ದೇಶದ ಪೆಟ್ರೋಲಿಯಂ ಬಾವಿಗಳು ನಿರಾಯಾಸವಾಗಿ ಗಳಿಸಿ ಕೊಡುತ್ತಿದ್ದ ಶ್ರೀಮಂತಿಕೆಯನ್ನು ಮುಂದೆ ಬರಲಿರುವ ತನ್ನ ಅಸಂಖ್ಯ ಪೀಳಿಗೆಗಳವರೆಗೆ ಕಾಪಿಟ್ಟುಕೊಳ್ಳಲು ಪರಿಣಾಮಕಾರಿಯಾದ ರಕ್ಷಣಾಸ್ತ್ರವೊಂದರ ಅವಶ್ಯಕತೆ ಕಂಡು ಬಂದಿತ್ತು. ಆದರೆ ತಾನಾಗಿಯೇ ನ್ಯೂಕ್ಲಿಯರ್ ಶಸ್ತ್ರಗಳನ್ನು ನಿರ್ಮಿಸಲು ಅಮೇರಿಕದ ಹಂಗು ಮತ್ತು ನೆರೆಯಲ್ಲೇ ಇದ್ದ ಬದ್ಧ ವೈರಿ ಇಸ್ರೇಲಿನ ಹದ್ದಿನ ಕಣ್ಣುಗಳ ಗೂಢಚಾರಿಕೆಗಳೇ ತೊಡಕಾಗಿತ್ತು. ಹೀಗಾಗಿ ಆತನ ಬಯಕೆಗಳ ಬಸಿರನ್ನು ಹೆತ್ತು ಹೊತ್ತುಕೊಡಲು ಪಾಕಿಸ್ತಾನವೇ ಸೂಕ್ತ ಬಾಡಿಗೆ ತಾಯಿ ಎಂಬುದನ್ನು ಭುಟ್ಟೋ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದ.
1974 ರ ಫೆಬ್ರುವರಿಯಲ್ಲಿ ವಿಶ್ವ ಮುಸ್ಲಿಂ ದೇಶಗಳ ಸಮ್ಮೇಳನದ ಮೇಜವಾನಿಯನ್ನು ಪಾಕಿಸ್ತಾನ ವಹಿಸಿಕೊಂಡಿತ್ತು.
ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ ಭುಟ್ಟೊ ಸೌದಿ ಮತ್ತು ಲಿಬಿಯಾಗಳ ಅನುಗ್ರಹಗಳಿಕೆಯ ಹೆಜ್ಜೆಯಾಗಿ ಮೊದಲು ಲಾಹೋರದಲ್ಲಿನ ಪಾಕಿಸ್ತಾನದ ಅತಿ ದೊಡ್ಡ ಕ್ರಿಕೇಟ್ ಮೈದಾನಕ್ಕೆ ಗಡಾಫಿಯ ಹೆಸರಿಟ್ಟು ಆತನ ಕೈಯ್ಯಿಂದಲೇ ಅದರ ಉದ್ಘಾಟನೆಯನ್ನೂ ಮಾಡಿಸಿದ. ಅದರಂತೆಯೇ ಪಾಕಿಸ್ತಾನದ ಲಿಯಾಲ್ಪುರವನ್ನು ಸೌದಿಯ ಅರಸ ಫೈಸಲನ ಹೆಸರಿನಲ್ಲಿ ಫೈಸಲಾಬಾದ್ ಆಗಿ ಮರುನಾಮಕರಣ ಮಾಡಿಸಿದ. ಇದರ ಬೆನ್ನಲ್ಲೇ 100 ಮಿಲಿಯನ್ ಡಾಲರ್ಗ 2 ಪೆಟ್ಟಿಗೆಗಳಲ್ಲಿ ಬಿಯಾದಿಂದ ಪಾಕಿಸ್ತಾನಕ್ಕೆ ಬಂದಿಳಿದವು. ಬೇಡಿದಷ್ಟು ಹಣದ ಪೂರೈಕೆಯ ಆಶ್ವಾಸನೆಯನ್ನು ಸೌದಿಯ ರಾಜನೂ ಭುಟ್ಟೊಗೆ ನೀಡಿದ. ಬದಲಿಗೆ, ಪಾಕಿಸ್ತಾನವು ತಯಾರಿಸುವ ನ್ಯೂಕ್ಲಿಯರ್ ಬಾಂಬ್ನಿಂದ ಸೌದಿಗೆ ರಕ್ಷಣೆ ಕೊಡುವ ವಾಗ್ದಾನವನ್ನು ಭುಟ್ಟೋನಿಂದ ಪಡೆದ.
ನೋಡ ನೋಡುತ್ತಿದ್ದಂತೆ, ಪಾಕಿಸ್ತಾನದ ಕನಸಿನ ಅಣ್ವಸ್ತ್ರವನ್ನು ಇಸ್ಲಾಮೀ ದೇಶಗಳು ಪಶ್ಚಿಮದ ರಾಷ್ಟ್ರಗಳ, ಇಸ್ರೇಲ್ ಮತ್ತು ಭಾರತದ ವಿರುದ್ಧದ ಪವಿತ್ರ ಜಿಹಾದಿನಲ್ಲಿ ಹೊಂದಿರಲೇ ಬೇಕಾದ ನ್ಯಾಯಯುತ ಅಸ್ತ್ರವೆಂಬ ತನ್ನ ವಾದವನ್ನು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಭುಟ್ಟೋ ಅತ್ಯಂತ ಸಫಲನಾಗಿದ್ದ. ಈ ಹೊತ್ತಿಗೆಲ್ಲ ನಾಗರಿಕ ಉದ್ದೇಶಗಳಿಗಾಗಿ ಪಾಕಿಸ್ತಾನದೊಡನೆ ತನ್ನ ಅಣುಬಾಂಬ್ ತಂತ್ರಜ್ಞಾನವನ್ನು ಕೆನಡಾ ಹಂಚಿಕೊಳ್ಳತೊಡಗಿತ್ತು. ಲಾಹೋರಿನಿಂದ ತುಸು ದೂರದಲ್ಲಿ ಅದು ಪ್ಲುಟೋನಿಯಮ್ ಬಳಕೆಯಿಂದ ವಿದ್ಯುತ್ ಉತ್ಪಾದಿಸುವ ಘಟಕವೊಂದನ್ನು ನಡೆಸುತ್ತಿತ್ತು. ಫ್ರಾನ್ಸ್ ಸಹ ತನ್ನ ತಂತ್ರಜ್ಞಾನವನ್ನು ಪಾಕಿಸ್ತಾನದೊಡನೆ ಶಾಂತಿಯುತ ಉದ್ದೇಶಗಳಿಗೆ ಬಳಸಲು ಸಮ್ಮತಿ ಸೂಚಿಸಿತ್ತು.
ಆದರೆ, ತಾನೊಂದು ಕಂಡರೆ ದೈವವೊಂದು ಬಗೆವಂತೆ ಭುಟ್ಟೋನ ಆವೇಶ, ಉನ್ಮಾದಗಳು ಒಮ್ಮೆಲೇ ಕಲವಿಲಗೊಳ್ಳುವ, ತನ್ನ ಕನಸಿನಲ್ಲಿಯೂ ಎಣಿಸಿರದ ವಿಕಟ ಸಂದರ್ಭವೊಂದು ಧುತ್ತನೆ ಹುಟ್ಟಿಕೊಂಡಿತು. ಅದು 18 ಮೇ 1974. ಪಾಕಿಸ್ತಾನದ ಗಡಿಯಿಂದ ಸುಮಾರು ನೂರು ಮೈಲಿಗಳ ಅಂತರದಲ್ಲಿ ಭಾರತದ ಸರಹದ್ದಿನ ನೆಲ ಒಮ್ಮೆಲೇ ಜೋರಾಗಿ ಅದುರಿತು. ಹೆಚ್ಚುಕಮ್ಮಿ ಹಿರೋಷಿಮಾ- ನಾಗಾಸಾಕಿನಗರಗಳ ಮೇಲೆ ಅಮೇರಿಕ ಪ್ರಯೋಗಿಸಿದ್ದ ಮೊದಲ ಅಣುಬಾಂಬ್ಗಳಷ್ಟೇ ಸಾಮರ್ಥ್ಯದ ಅಣ್ವಸ್ತ್ರ್ರವೊಂದರ ಪರೀಕ್ಷಣೆಯನ್ನು ಭಾರತ ಯಶಸ್ವಿಯಾಗಿ ಪೂರ್ತಿಗೊಳಿಸಿತ್ತು. ಅಣುಸ್ಫೋಟ ಭಾರತದಲ್ಲಾದರೂ ಅದರ ನಡುಕ, ಪರಿಣಾಮಗಳು ಭಾರತದ ಗಡಿಯಾಚೆ ಚೀನಾ, ಪಾಕಿಸ್ತಾನದ ಸರ್ಕಾರಗಳ ಮತ್ತು ಮಿಲಿಟರಿ ನಾಯಕರ ಗುಂಡಿಗೆಗಳಲ್ಲಿಯೇ ಹೆಚ್ಚಾಗಿ ಕಂಡುಬಂದವು.
ಅಂದಿನವರೆಗೆ ಕೇವಲ ಅಮೇರಿಕ, ಬ್ರಿಟನ್, ಫ್ರಾನ್ಸ್, ಸೋವಿಯತ್ ರಷ್ಯಾ ಮತ್ತು ಚೀನಾ ದೇಶಗಳಷ್ಟೇ ಸಾಧಿಸಲು ಶಕ್ತವಾಗಿದ್ದ ತಂತ್ರಜ್ಞಾನವನ್ನು ಭಾರತ ತನ್ನ ಕೈವಶ ಮಾಡಿಕೊಂಡಿತ್ತು. ಇದು ಈ ದೇಶಗಳಿಗೆ ನುಂಗಲಾರದ, ಅರಗಿಸಿಕೊಳ್ಳಲಾಗದ ವಾಸ್ತವವಾಗಿತ್ತು. ಈ ಐದು ದೇಶಗಳು ಪ್ರಚುರಪಡಿಸಿದ್ದ, ತಾವು ಈಗಾಗಲೇ ತಯಾರಿಸಿದ್ದ ಅಸ್ತ್ರಗಳನ್ನು ಉಳಿಸಿಕೊಂಡು ಇತರೆ ದೇಶಗಳು ಮಾತ್ರ ಯಾವುದೇ ನೆಲೆಯಲ್ಲಿ ಅಣ್ವಸ್ತ್ರಗಳನ್ನು ಹೊಂದಕೂಡದು ಎಂಬ ಅತಿರೇಕದ ಅಣ್ವಸ್ತ್ರ ಪ್ರಸರಣ ನಿರೋಧಕ ಒಪ್ಪಂದವೆಂಬ ಒಮ್ಮುಖದ ನೀತಿಗೆ ಭಾರತ ಸಮೇತ ಪಾಕಿಸ್ತಾನ ಮತ್ತು ಇಸ್ರೇಲ್ಗಳೂ ತಮ್ಮ ಸಹಮತಿಯನ್ನು ಸೂಚಿಸಿರಲಿಲ್ಲ.
ಭಾರತದ ನ್ಯೂಕ್ಲಿಯರ್ ಯೋಜನೆಗೂ ಮತ್ತು ಚೀನಾ, ಪಾಕಿಸ್ತಾನದಂತಹ ದೇಶಗಳ ನ್ಯೂಕ್ಲಿಯರ್ ಕಾರ್ಯಕ್ರಮಗಳಿಗೂ ಇದ್ದ ಮೂಲಭೂತ ವ್ಯತ್ಯಾಸ ಉದ್ದೇಶ ಶುದ್ಧಿಯದ್ದು. ಭಾರತದ ಸಾರ್ವಭೌಮತೆಗೆ ಚೀನಾ ಯಾವತ್ತೂ ಕಂಟಕವೇ ಎಂಬ ಕಟುಸತ್ಯವನ್ನು 1962 ರ ಯುದ್ಧ ಸಾಬೀತುಪಡಿಸಿತ್ತು. ಪಾಕಿಸ್ತಾನವೂ ಚೀನಾದ ಸೆರಗಿನಡಿಯಲ್ಲಿ ಸರಿದು ಮತ್ತೆ ತಗಾದೆ ತೆಗೆಯುವ ಎಲ್ಲ ಲಕ್ಷಣಗಳೂ ಅಂದಿಗೇ ನಿಜವಾಗಿದ್ದವು. ಮೇಲಾಗಿ ಭಾರತದ ಪ್ರಜಾಪ್ರಭುತ್ವ ಸರ್ಕಾರಗಳ ಮತ್ತು ಅದರ ನೆರೆಯಲ್ಲಿರುವ ಇಸ್ಲಾಮೀ, ಕಮ್ಯುನಿಸ್ಟ್ ದೇಶಗಳ ಸರ್ಕಾರಗಳ ಹೋಲಿಕೆಯನ್ನು ಒಂದೇ ತಕ್ಕಡಿಯಲ್ಲಿ ಮಾಡಲು ಯಾವತ್ತೂ ಸಾಧ್ಯವಿರಲಿಲ್ಲ. ಹೀಗಿದ್ದೂ ಭಾರತದ ಅಣುಪರೀಕ್ಷಣೆಗೆ ತಾನೇ ಬಲಿಪಶುವೆಂಬಂತೆ ಚಿತ್ರಿಸಿಕೊಳ್ಳುವ ಚಾಳಿಯನ್ನು ಪಾಕಿಸ್ತಾನ ಇನ್ನೂ ಹೆಚ್ಚಿನ ಗದ್ದಲದಿಂದ ಮುಂದುವರೆಸಿತು.
“ಭಾರತಕ್ಕೆ ಅದರ ಅಣು ಪರೀಕ್ಷಣೆಯಿಂದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವ ಅಥವಾ Blackmail ಮಾಡುವ ಕನಸುಗಳಿದ್ದರೆ ಅಂತಹ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ” ಎಂಬ ಹೇಳಿಕೆಯನ್ನು ಭುಟ್ಟೋ ಮುಕ್ತವಾಗಿಯೇ ಕಾರತೊಡಗಿದ್ದ. ಈಗಂತೂ ಭುಟ್ಟೋನ ಇಸ್ಲಾಮಿಕ್ ಬಾಂಬಿನ ತಯಾರಿಯನ್ನು ಮತ್ತು ಅವನನ್ನು ವಿರೋಧಿಸುವ ಯಾವುದೇ ಧ್ವನಿಯನ್ನು ಪಾಕಿಸ್ತಾನದ ವಿರುದ್ಧ, ಇಸ್ಲಾಮಿನ ವಿರುದ್ಧ ಹೂಡಿರುವ ಷಡ್ಯಂತ್ರವೆಂಬ ಕಲ್ಪನೆಯನ್ನು ಆತ ವ್ಯವಸ್ಥಿತವಾಗಿ ಹರಿಯಬಿಟ್ಟಿದ್ದ.
ಆದರೆ, ತನ್ನ ಜೀವಿತದಲ್ಲೇ ಬಾಂಬಿನ ಸಾಕ್ಷಾತ್ಕಾರ ಸಾಧ್ಯವಾದೀತೆ ಎಂಬಂತಹ ಪರಿಸ್ಥಿತಿಗಳು ಆತನ ಕಣ್ಮುಂದೆಯೇ ಅನಾವರಣಗೊಳ್ಳತೊಡಗಿದವು.
ನ್ಯೂಕ್ಲಿಯರ್ ಅಸ್ತ್ರಗಳನ್ನು ಹೊಂದುವ ಹಕ್ಕು ತಮಗೆ ಮಾತ್ರ ಸೇರಿದ್ದು ಎಂಬ ಕೈಬೆರಳೆಣಿಕೆಯಷ್ಟಿರುವ ದೇಶಗಳ ಧಿಮಾಕಿನ ವರ್ತನಗೆ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷಣಾ ಸ್ಫೋಟ ತೀವ್ರ ಆಘಾತವನ್ನೇ ಕೊಟ್ಟಿತ್ತು. ಒದಗಿದ್ದ ಪ್ರಸಂಗವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಮುಂದಾದ ಈ ರಾಷ್ರಗಳು ಅಣ್ವಸ್ತ್ರ ಪ್ರಸರಣ ವಿರೋಧಿ ನೀತಿಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಹೇರಲು ಮೊದಲಾದವು. ಇದರ ವ್ಯತಿರಿಕ್ತ ಪರಿಣಾಮ ಮಾತ್ರ ಭಾರತಕ್ಕಿಂತ ಪಾಕಿಸ್ತಾನದ ಮೇಲೆ ಹೆಚ್ಚಾಯಿತು. ಪಾಕಿಸ್ತಾನದ ಜೊತೆ ತಾನು ಕೆಲಸ ಮಾಡಬೇಕಾದರೆ ಮೊದಲು ಅದರ ಅಣು ರಿಯಾಕ್ಟರ್ಗಳನ್ನು ಅಂತರಾಷ್ಟ್ರೀಯ ಸಮಿತಿಯ ಪರೀಕ್ಷಣೆಗೆ ಒಳಪಡಿಸಬೇಕು ಎಂಬ ಷರತ್ತನ್ನು ಕೆನಡಾ ಒಡ್ಡಿತು. ಈ ಮೊದಲು ಸಹಕರಿಸಿದ್ದ ಬ್ರಿಟನ್ ಮತ್ತು ಫ್ರಾನ್ಸ್ಗಳು ಕೂಡ ಹಠಾತ್ತನೆ ನಡೆದ ಬೆಳವಣಿಗೆಯಲ್ಲಿ ಪಾಕಿಸ್ತಾನಕ್ಕೆ ಕೊಟ್ಟ ಪ್ಲುಟೋನಿಯಂ ಆಗಲಿ ತಂತ್ರಜ್ಞಾನವಾಗಲಿ ಕೇವಲ ನಾಗರೀಕ ಉದ್ದೇಶಗಳಿಗೆ ಸೀಮಿತವಾಗಲಾರವು ಎಂಬ ಸಂಶಯವನ್ನೊಡ್ಡಿ ತಮ್ಮ ಸಹಕಾರವನ್ನು ಹಿಂಪಡೆದವು.
ಪ್ರತಿ ದಿಕ್ಕಿನಿಂದಲೂ ಹಿನ್ನಡೆಯ ಸಮಾಚಾರಗಳನ್ನೇ ಕೇಳಬೇಕಾದ ಅಸಹಾಯಕತೆಗೆ ಸಿಕ್ಕಿದ್ದಾಗಲೇ ದೂರದ ನೆದರ್ಲ್ಯಾಂಡಿನಿಂದ ಬಂದ ಒಂದು ಪತ್ರ ಭುಟ್ಟೋನ ಕೈಸೇರಿತು. ಅದನ್ನು ಬರೆದವ ತನ್ನನ್ನು ಯುರೇನಿಯಂ ಸಂಸ್ಕರಣ ವಿಧಾನದ ಪರಿಣಿತನೆಂದು ಪರಿಚಯಿಸಿಕೊಂಡಿದ್ದ. ಪಾಕಿಸ್ತಾನಕ್ಕೆ ಬೇಕಾದ ಅಣುಬಾಂಬ್ ತಯಾರಿಯ ಯೋಜನೆಯಲ್ಲಿ ತನಗೊಂದು ಅವಕಾಶವನ್ನು ನೀಡುವಂತೆ ಕೋರಿಕೊಂಡಿದ್ದ. ಆತನೇ ಡಾ.ಅಬ್ದುಲ ಖದೀರ್ ಖಾನ್ ಅಲಿಯಾಸ್ ಎ. ಕ್ಯೂ. ಖಾನ್. ಮುಂದಿನ ದಿನಗಳಲ್ಲಿ ಈತನೇ ಜಾಗತಿಕ ನ್ಯೂಕ್ಲಿಯರ್ ತಂತ್ರಜ್ಞಾನ ಕಳ್ಳ ಮಾರಾಟದ ಅನಭಿಷಿಕ್ತ ದೊರೆಯಾಗುವವನಿದ್ದ. ಇಡೀ ಜಗತ್ತನ್ನೇ ಅಣುಶಸ್ತ್ರಗಳ ಅಖಾಡಾವನ್ನಾಗಿ ಪರಿವರ್ತಿಸುವವನಿದ್ದ. ಅಂಥವನ ಬರುವಿಕೆಗಾಗಿಯೇ ಪಾಕಿಸ್ತಾನ ಕಾತರಿಸಿ ಕುಳಿತಿತ್ತು.
(ಸಶೇಷ..)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.