ಧಾರವಾಡ : ಸಾವಿರಾರು ವರ್ಷಗಳ ಹಿಂದೆ ರಿಗ್ವೇದದ ಕಾಲದ ಸಮಯದಲ್ಲಿ ಸರಸ್ವತಿ ನದಿಯು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸರಸ್ವತಿ ನದಿಯು ತನ್ನ ಅಸ್ತಿತ್ವನ್ನು ಕಳೆದುಕೊಂಡಿತು ಎಂದು ನಂಬಿದ್ದ ನಮಗೆ, ಇತ್ತೀಚಿನ ವೈಜ್ಙಾನಿಕ ಸಂಶೋಧನೆಗಳ ಬಳಿಕ ಅದು ಇನ್ನೂ ಅಸ್ತಿತ್ವದಲ್ಲಿದ್ದು ಕಾಲನುಕ್ರಮೇಣ ಆ ನದಿಯೇ ಇಂದಿನ ಗಾಘ್ಗರ-ಹಕ್ಕರ್ ನದಿಯ ಹರಿವ ಹಾಗೂ ಬತ್ತಿದ ಪ್ರದೇಶ ಎಂದು ಕಂಡು ಹಿಡಿಯಲಾಗಿದೆ. ಸರಸ್ವತಿ ನದಿಯು, ಇಂದಿನ ಪಾಕಿಸ್ಥಾನ ಮತ್ತು ಉತ್ತರ ಭಾರತದ ರಾಜಸ್ತಾನ, ಹರಿಯಾಣ ಹಾಗೂ ಗುಜರಾತ್ ಭಾಗಗಳಲ್ಲಿದ್ದುದರ ಬಗ್ಗೆ ವಿಜ್ಞಾನ ಲೋಕ ಅಪೂರ್ವ ಮಾಹಿತಿಯನ್ನು ಕಲೆಹಾಕಿದ್ದು, ಅದೇ ಮಾದರಿಯಲ್ಲಿ ನಮ್ಮ ಶಾಲ್ಮಲಾ ನದಿ ಉಗಮಸ್ಥಾನದಿಂದ ಅದರ ಸಮುದ್ರ ಸೇರುವವರೆಗೆ ಸಂಪೂರ್ಣ ಅಧ್ಯಯನವಾಗಬೇಕಿದೆ ಎಂದು ಹರ್ಷವರ್ಧನ್ ಶೀಲವಂತ ಧಾರವಾಡದ ನೇಚರ್ ರಿಸರ್ಚ್ ಸೆಂಟರ್ ಹಾಗೂ ನೇಚರ್ ಪಸ್ಟ್ ಇಕೋ ವಿಲೇಜ್ ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಶಾಲ್ಮಲಾ ನದಿ ಉಗಮಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೆರೆದಂತಹ ಪರಿಸರ ಪ್ರೇಮಿಗಳಿಗೆ ಈ ವಿಷಯವನ್ನು ತಿಳಿಸಿದರು. ಅಷ್ಟೇಅಲ್ಲದೇ, ದಾಖಲೆಗಳ ಪ್ರಕಾರ ಬೆಡ್ತಿ ನದಿಗೆ ಎರಡು ಜಲಮೂಲಗಳು ಕಾರಣ ಒಂದು ಧಾರವಾಡದ ಶಾಲ್ಮಲಾ ಉಗಮ ಮತ್ತೊಂದು ಹುಬ್ಬಳ್ಳಿ ತಾಲೂಕಿನಲ್ಲಿ ಸೇರುವ ಬೆಡ್ತಿ ಹಳ್ಳ. ಇವೆರಡೂ ಕಲಘಟಗಿ ಬಳಿ ಸೇರಿ ಬೇಡ್ತಿಯಾಗಿ ಮುಂದೆ ದಕ್ಷಣಾಭಿಮುಖಿಯಾಗಿ 96 ಕಿಲೋಮೀಟರ್ ಉತ್ತರ ಕನ್ನಡದಲ್ಲಿ ಹರಿದು, ನಂತರ ಸಹ್ಯಾದ್ರಿಯ ಮಾಗೋಡ ಫಾಲ್ಸ್ಗೆ ಕೊಡಿಕೊಂಡು ಹರಿಗದ್ದೆ ಹಳ್ಳಿಯ ಸಮೀಪ ಸೋಂದಾ ನದಿಗೆ ಸೇರಿ, ಮುಂದೆ 15 ಕಿ.ಮೀ. ಗುಂಡಿಬೆಲೆಯ ಬಳಿ ಸಮುದ್ರದ ಅಂಚನ್ನು ತಲುಪುತ್ತದೆ ಎಂದು ಮಾಹಿತಿ ನೀಡಿದರು. ಈ ಉಲ್ಲೇಖ ಜಿಲ್ಲಾ ಗ್ಯಾಜೆಟಿಯರ್ನಲ್ಲಿ ಮಾತ್ರ ಇದ್ದು ಇನ್ನೊಮ್ಮೆ ಇದರ ಸಮಗ್ರ ಅಧ್ಯಯನ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಧಾರವಾಡದ ವಾಲ್ಮಿಯ ನಿರ್ದೆಶಕರಾದ ಡಾ. ರಾಜೇಂದ್ರ ಪೋದ್ದಾರ ಮತನಾಡಿ ಯಾವಾಗಲೂ ಜಲದೊಂದಿಗೆ ಜನ ಬೆರೆಯಬೇಕಾಗಿದೆ. ಪುರಾತನ ಕಾಲದಿಂದಲೂ ನಾವು ನೀರಿದ್ದಲ್ಲಿಯೇ ಜನವಸತಿ ಎಂಬುದನ್ನು ತಿಳಿದಿದ್ದೇವೆ. ಆದರೆ, ಹಿಂದಿನಂತೆ ನಾವು ನೀರನ್ನು ಗೌರವಿಸುತ್ತಿಲ್ಲ. ಹೀಗಾಗಿ, ನೀರು ಮಲೀನಗೊಳ್ಳುತ್ತಿದ್ದು, ನೀರನ್ನು ಸಂದಿಗ್ಧ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೇವೆ. ಅದಕ್ಕಾಗಿ ಜಲದೊಂದಿಗೆ ಜನ ಬೆರೆಯುವ ಅವಶ್ಯಕತೆ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ನೇಚರ್ ರಿಸರ್ಚ್ ಸೆಂಟರ್ನ ಉಪಾಧ್ಯಕ್ಷರಾದ ಚಂದ್ರಶೇಖರ ಭೈರಪ್ಪನವರ ಮಾತನಾಡಿ, ಪರಿಸರವನ್ನು ಹಾಗೂ ನೀರನ್ನು ಸಂರಕ್ಷಿಸುವುದು ಕೇವಲ ಪರಿಸರವಾದಿಗಳಿಗೊ ಅಥವಾ ಸರಕಾರಕ್ಕೋ ಮೀಸಲಾದ ಕೆಲಸವಲ್ಲ, ಪ್ರತಿಯೊಬ್ಬರೂ ಪರಿಸರದ ಉಳಿವಿಗಾಗಿ ಪ್ರಯತ್ನ ಪಟ್ಟರೆ ಮಾತ್ರ ಅದನ್ನು ಉಳಿಸಲು ಸಾಧ್ಯ ಈ ನಿಟ್ಟಿನಲ್ಲಿ, ಶಾಲ್ಮಲಾ ಉಗಮಸ್ಥಾನಕ್ಕೆ ಧಕ್ಕೆಯಾಗದಂತೆ ಅದನ್ನು ಕಾಯ್ದುಕೊಂಡು ಸಾರ್ವಜನಿಕರಿಗಾಗಿಯೇ ಮೀಸಲಿಟ್ಟರುವ ಅದರ ಮಾಲೀಕರಾದ ರುದ್ರಪ್ಪ ಹರಕುಣಿ ಮತ್ತು ತಲೆತಲಾಂತರದಿಂದ ಅದನ್ನು ಪೂಜಿಸಿಕೊಂಡು ಬಂದಿರುವ ಸೋಮಯ್ಯ ಬಳ್ಳಾರಿಯವರನ್ನು ಶ್ಲಾಘಿಸಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ತುಂಬಿ ಹರಿಯುತ್ತಿರುವ ಶಾಲ್ಮಲೆಯ ಪುಷ್ಕರಣಿಯಲ್ಲಿ ನೇಚರ್ ಫಸ್ಟ್ ಇಕೊ ವಿಲೇಜಿನ ಸಂಸ್ಥಾಪಕರಾದ ಪಂಚಯ್ಯ ವಿ. ಹಿರೇಮಠ ಬಾಗೀನ ಅರ್ಪಿಸಿ, ನಂತರ ಆ ಧಾರ್ಮಿಕ ತ್ಯಾಜ್ಯಗಳು ನೀರು ಸೇರದಂತೆ ತೆಗೆದು ಹೊಸದಾಗಿ ಕಾಣಿಕೆ ನೀಡಿದ ತ್ಯಾಜ್ಯತೊಟ್ಟಿಗೆ ಹಾಕಿ ಉದ್ಘಾಟಿಸಿದರು. ನೇಚರ್ ರಿಸರ್ಚ್ ಸೆಂಟರ್ನ ಕಾರ್ಯದರ್ಶಿ ಪ್ರಕಾಶ ಗೌಡರ ನೀರನ್ನು ಮಲೀನಗೊಳಿಸದೆ, ಧಾರ್ಮಿಕ ತ್ಯಾಜ್ಯಗಳನ್ನು ಹೇಗೆ ನಾವು ವಿಲೇವಾರಿ ಮಾಡಬೇಕು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಹೇಗೆ ನಾವು ಪರಿಸರಯುಕ್ತವಾಗಿ ಆಚರಿಸಬೇಕೆಂದು ಬಂದಂತ ಭಕ್ತಾದಿಗಳಿಗೆ ಜಾಗೃತಿ ಮೂಡಿಸಿದರು. ಅಷ್ಟೇ ಅಲ್ಲದೇ, ಶಾಲ್ಮಲೆಗೆ ಬರುವ ಭಕ್ತಾದಿಗಳು ಇನ್ನು ಮುಂದೆ, ಧಾರ್ಮಿಕ ತ್ಯಾಜ್ಯವನ್ನು ಹೊಸದಾಗಿ ಇಟ್ಟಿರುವ ಒಣ ಹಾಗೂ ಹಸಿ ತ್ಯಾಜ್ಯ ತೊಟ್ಟಿಗಳಲ್ಲಿ ಹಾಕಿ ನೀರನ್ನು ಮಲೀನಗೊಳ್ಳದಂತೆ ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದರು.
ಇದಾದ ನಂತರ, ಶಾಲ್ಮಲಾ ಉಗಮಸ್ಥಾನದ ಆವರಣದಲ್ಲಿ ಪವಿತ್ರ ಪಂಚವಟಿ ವನವನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಅನೀಲ ಅಳ್ಳೊಳ್ಳಿ, ಶಿವಾಜಿ ಸೂರ್ಯವಂಶಿ, ವಿರೇಶ ಕೆಲಗೇರಿ, ಅಸ್ಲಂ ಅಬ್ಬಿಹಾಳ, ಗಿರೀಶ ಹಾಗೂ ನಯನಾ ಯಾಲಕ್ಕಿಶೆಟ್ಟರ, ಆರೀಫ, ಕುಮಾರ ಹಿರೇಮಠ ಹಾಗೂ ಪ್ರವೀಣ ಪಾಟೀಲ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.