ಅಸ್ಸಾಂ ಕಂಧೂಲಿಮಾರಿ ಗ್ರಾಮ. ಅಪ್ಪಯ್ಯನ ಗದ್ದೆಯೊಳಗೆ ಹರಕಲು ಶೂ ಪೇರಿಸಿಕೊಂಡು ಅಕ್ಕಪಕ್ಕದ ಹುಡುಗರ ಜೊತೆ ಫುಟ್ಬಾಲ್ ಆಟವಾಡುತ್ತಿದ್ದ ಎರಡು ಜಡೆಯ ಪೋರಿಗೆ ಪಿಟಿ ಮೇಷ್ಟ್ರು ಕರೆದು ಅಥ್ಲಿಟಿಕ್ಸ್ ಬಗ್ಗೆಯೂ ಗಮನಹರಿಸುವಂತೆ ಸೂಚಿಸಿದ್ದರು. ಫುಟ್ಬಾಲ್ನಲ್ಲೇ ಮುಂದಿನ ಪಯಣವೆಂದು ಅಂದುಕೊಡಿದ್ದವಳಿಗೆ ಓಟ ಸ್ಪರ್ಧೆಯಲ್ಲಿ ಬಹುಮಾನ ಬಂದಿತ್ತು. ಪಿಟಿ ಮಾಸ್ಟರ್ ಶಂಸುಲ್ ಹೋಕ್ ಆ ಪೋರಿಯನ್ನ ನಾಗಾ ಸ್ಪೋಟ್ಸ್ ಅಸೋಸಿಯೇಷನ್ನಿನ ಗೌರಿಶಂಕರ್ ರಾಯ್ ಅವರಿಗೆ ಪರಿಚಯಿಸಿದರು. ಅಲ್ಲಿಂದ ಮುಂದೆ ಅಂತರ್ ಜಿಲ್ಲಾ ಮಟ್ಟದಲ್ಲಿ ಚಿನ್ನ ಬಾಚಿಕೊಂಡ ಹುಡುಗಿ 2018 ರ ವರ್ಲ್ಡ್ ಅಂಡರ್ 20 ಚಾಂಪಯನ್ಶಿಪ್ನ ತನಕ ತಿರುಗಿ ನೋಡಲೇ ಇಲ್ಲ. ಮುಂದಿನದ್ದು ಇತಿಹಾಸದ ಪುಟಗಳಲ್ಲಿ ದಾಖಲಿಸಿದಂತಹ ಘಟನಾವಳಿ. ಭಾರತದ ಹೆಸರನ್ನು ಸ್ವರ್ಣ ಪದಕಗಳ ಸಾಲಿಗೆ ಅಂಟಿಸಿದವಳು, ಹೌದು ಈಕೆ ಬೇರಾರೂ ಅಲ್ಲ, ಇಡೀ ರಾಷ್ಟ್ರದ ಮನಗೆದ್ದ ಹರಿಣದಂತಹ ಹುಡುಗಿ ‘ಹಿಮಾದಾಸ್’.
ಅಂತರ್ ಜಿಲ್ಲಾ ಮಟ್ಟದಲ್ಲೇ ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ದೇಶನಾಲಯದ ಕೋಚ್ ನಿಪೋನ್ ದಾಸ್ರವರ ಕಣ್ಣಿಗೆ ಬಿದ್ದ ಹಿಮಾಳನ್ನು ಮುಂದಿನ ತರಬೇತಿಗಾಗಿ ಗವಾಹಟಿಗೆ ಬರುವಂತೆ ಆಹ್ವಾನಿಸಲಾಯಿತು, ಮೊದಲಿಗೆ ಬಾಕ್ಸಿಂಗ್ ಮತ್ತು ಫುಟ್ಬಾಲ್ ಮಾತ್ರವಿದ್ದ ಅಕಾಡೆಮಿಯಲ್ಲಿ ಅಥ್ಲೇಟಿಕ್ಸ್ ವಿಭಾಗವನ್ನೂ ಆರಂಭಿಸಲಾಯಿತು. ಆರಂಭದಲ್ಲಿ ವಿರೋಧಿಸಿದರೂ ನಂತರ ಅಳುಕಿನಿಂದಲೇ ತಂದೆತಾಯಿಯರು ಕಳುಹಿಸಿಕೊಟ್ಟಿದ್ದರು.
2018ರ ಕಾಮನ್ವೆಲ್ತ್ನಲ್ಲಿ 400 ಮೀಟರ್ ಮತ್ತು 4×400ಮೀಟರ್ ರಿಲೇಯಲ್ಲಿ ಹಿಮಾ ಭಾಗವಹಿಸಿದ್ದರು. 400ಮೀಟರ್ ಓಟದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದರೂ ಆರನೇ ಸ್ಥಾನದಲ್ಲಿ ನಿಲ್ಲಬೇಕಾಯಿತು, ಚಿನ್ನ ಗೆದ್ದ ಬೊಸ್ಟ್ವಾನದ ಅಮ್ಯಾಂಟಲ್ ಮೊಂಟ್ಶೋರಿಗಿಂತ ಕೇವಲ 1.17 ಸೆಕೆಂಡುಗಳ ಅಂತರದಿಂದಷ್ಟೆ ಹಿಂದಿದ್ದರು. ಈಕೆ ಭಾಗವಹಿಸಿದ್ದ 4×400 ಮೀಟರ್ ರಿಲೇ ಕೂಡ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು.
ಮುಂದೆ, ಫಿನ್ಯಾಂಡಿನ ತಾಂಪೇರ್ನಲ್ಲಿ ನಡೆಯುತ್ತಿರುವ ಅಂಡರ್-20 ಚಾಂಪಿಯನ್ಶಿಪ್ನಲ್ಲಿ 51.46 ಸೆಕೆಂಡುಗಳಲ್ಲಿ 400 ಮೀಟರ್ ಓಟದಲ್ಲಿ ಇಡೀ ಜಗತ್ತು ಬೆರಗಾಗುವಂತೆ ಚಿನ್ನ ಗೆದ್ದುಬಿಟ್ಟಳು ಹುಡುಗಿ, ಮೊದಲ ಮುನ್ನೂರು ಮೀಟರ್ ಸಾಧಾರಣವಾಗಿದ್ದರೂ ಕೊನೆಯ ನೂರು ಮೀಟರ್ನಲ್ಲಿ ಮೂರು ಓಟಗಾರ್ತಿಯರನ್ನು ಹಿಂದಿಕ್ಕಿ ಪದಕದೊಡತಿಯಾಗಿ ವಿಜೃಂಭಿಸಿದಳು. ಈಗಿದೆಲ್ಲ ಇತಿಹಾಸ.
ಈಕೆ ಪದಕ ಪಡೆದದ್ದು ಸಂಭ್ರಮವಾದರೆ ಇನ್ನು ಪದಕ ನೀಡುವ ಸಂದರ್ಭದಲ್ಲಿ ರಾಷ್ಟ್ರಗೀತೆ ಮೊಳಗುವಾಗ ಆಕೆಯ ಮೊಗದಲ್ಲಿ ಭಾವೋದ್ವೇಗದ ಆನಂದಭಾಷ್ಪ ತನ್ನಿಂತಾನೆ ಕೆನ್ನೆಯ ಮೇಲೆ ಜಾರಿಬಿದ್ದ ಆ ಕ್ಷಣವನ್ನು, ಭಾರತೀಯರೆಂದಿಗೂ ಮರೆಯಲಾರರು. ಈ ಮಣ್ಣಿನ ಆತ್ಮೀಯ ಬಂಧನವನ್ನು ಹೃದಯದಲ್ಲಿ ಧಾರಣೆ ಮಾಡಿಕೊಂಡ ಪೂರ್ವೋತ್ತರ ಮೂಲೆಯ ನಾಡಿನ ಸಣ್ಣ ಗ್ರಾಮದ ಹುಡುಗಿಯೊಬ್ಬಳ ದೇಶಭಕ್ತಿಯ ನಿಸ್ವಾರ್ಥ ಅಭಿವ್ಯಕ್ತಿ ರಾಷ್ಟ್ರಕರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಮುಗ್ಧವಾದ ಮುಖದಲ್ಲಿ ಸಾರ್ಥಕತೆಯ ಭಾವ ತುಂಬಿತುಳುಕಿ ಮಾತು ಸೋತು ಸಂತಸ ಹೊರಬಂದ ಬಗೆಯದು. ಇನ್ನು ಆಕೆ ರಾಷ್ಟ್ರಧ್ವಜ ಹಿಡಿದು, ಕುತ್ತಿಗೆ ಸುತ್ತ ಗುಮ್ಚಾ ಹೊದ್ದು ಗೆಲುವಿನ ನಗೆ ಬೀರಿದ ದೃಶ್ಯವಂತೂ ಕೋಟ್ಯಾಂತರ ಭಾರತೀಯರ ಭಾವಭಿತ್ತಿಯಲ್ಲಿ ನೆಲೆಯೂರಿಬಿಟ್ಟಿದೆ.
ಸಾಮಾಜಿಕ ಜಾಲತಾಣಗಳಲ್ಲೆಲ್ಲ ಹಿಮಾದಾಸ್ಳಿಗೆ ಅಭಿನಂದನೆಗಳ ಮಹಾಪೂರವೇ ಹರಿದಿದೆ. ನಿಜಕ್ಕೂ ಭಾರತವಾ ಎನಿಸುತ್ತಿದೆಯಾ ?? ಹೌದು ಕ್ರಿಕೆಟ್ಲ್ಲದೆ ಬೇರೆ ಯಾವ ಆಟವೂ ಜಗತ್ತಿನಲ್ಲಿಲ್ಲ ಎನ್ನುವಂತೆ ಭಾಸವಾಗುತ್ತಿದ್ದ ಭಾರತದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಹಿಮಾ ದಾಸ್ಳಂತಹ ಗ್ರಾಮೀಣ ಪ್ರತಿಭೆಗಳ ಸಾಧನೆಯನ್ನೂ ಜನ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ. ಹಿಮಾ ದಾಸಳ ಗೆಲುವನ್ನು ತಮ್ಮದೇ ಗೆಲುವೆಂಬಂತೆ ಸಂಭ್ರಮಿಸುತ್ತಿದ್ದಾರೆ. ಹಿಮಾ ಗೆದ್ದಾಗ ಅರೆಬರೆ ಇಂಗ್ಲೀಷಿನಲ್ಲಿ ಪ್ರತಿಕ್ರಿಯೆ ನೀಡಿದರು ಎನ್ನಲಾಗಿ ಟ್ವೀಟ್ ಮಾಡಿದ್ದ ಸ್ಪೋರ್ಟ್ಸ್ ಫೆಡರೇಶನ್ನಿಗೆ ಜನ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ, ದೇಶದ ಹೆಮ್ಮೆಯ ಮಗಳ ಬಗ್ಗೆ ಹಗುರವಾಗಿ ಮಾತನಾಡುವವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹಿಮಾ ದಾಸಳ ಗೆಲುವನ್ನ ಸಣ್ಣ ಕಾಲಂನ ಸುದ್ದಿ ಮಾಡಿದ ಮುಖ್ಯ ವಾಹಿನಿಯ ಮಾಧ್ಯಮಗಳಿಗೆ ನಿಷ್ಠುರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೌದು ಭಾರತದ ಜನ ಬದಲಾಗುತಿದ್ದಾರೆ. ಭಾರತ ಬದಲಾಗುತ್ತಿದೆ. ಬದಲಾವಣೆಯ ಹೊಸ ಗಾಳಿ, ಹೊಸ ದಿಶೆಗೆ ಭಾರತ ತಿರುಗಿಕೊಳ್ಳುತ್ತಿದೆ. ಆಳುವವರಿಗೆ ಆಸ್ಥೆ ಹೆಚ್ಚಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಾಮನ್ವೆಲ್ತ್ನಲ್ಲಿ ಆಡಿ ಗೆದ್ದ ಎಲ್ಲ ಆಟಗಾರರಿಗೆ ಔತಣಕೂಟ ಏರ್ಪಡಿಸಿ ಅಭಿನಂದಿಸಿದ್ದಾರೆ. ಕ್ರೀಡಾಪಟುಗಳಿಗೆ ಹೊಸ ವಿಶ್ವಾಸ ನೀಡುತ್ತಿದ್ದಾರೆ, ಬೆನ್ನಿಗೆ ನಿಂತು ಶಹಬ್ಬಾಸ್ ಹೇಳುತ್ತಿದ್ದಾರೆ. ಎಲ್ಲಾ ಕ್ರೀಡೆಗಳಿಗೂ ಸಮಾನ ಅವಕಾಶ ಸಲ್ಲುತ್ತಿದೆ, ಇಡೀ ಭಾರತ ಈ ನವಸ್ಥಿತ್ಯಂತರಕ್ಕೆ ಅತ್ಯಂತ ಅಕ್ಕರೆಯಿಂದ ತೆರೆದುಕೊಳ್ಳುತ್ತಿದೆ.
ಜೆಎನ್ಯುನಂಥಹ ವಿಶ್ವವಿದ್ಯಾಲಯಗಳಲ್ಲಿ ಕೂತು ‘ಭಾರತ್ ತೇರೆ ಟುಕ್ಡೆ ಹೋಂಗೆ’ ಅಂತ ಎಷ್ಟೇ ಬೊಬ್ಬೆ ಹೊಡೆದರೂ, ದೇಶವನ್ನು ಛಿದ್ರ ಛಿದ್ರ ಮಾಡುವ ಹೊಂಚು ಹಾಕಿದರೂ ಭಾರತದ ಯುವಜನತೆ ಅಂತವರ ತಡೆ ತಿರುಗಿ ಕ್ಯಾರೇ ಎನ್ನುತ್ತಿಲ್ಲ. ದೇಶ ವಿರೋಧಿ ನೀತಿಯನ್ನು, ದೇಶ ಒಡೆಯುವ ಹುನ್ನಾರವನ್ನು ಖಂಡಿಸಿ, ಬಡತನದಲ್ಲೇ ಹುಟ್ಟಿ ಕಷ್ಟ ಪಟ್ಟು ದೇಶಕ್ಕೆ ಕೀರ್ತಿ ತಂದ ಹಿಮಾದಾಸ್ಳಂತಹ ದೇಶದ ಮಕ್ಕಳಿಗೆ, ಈ ನೆಲವನ್ನು ಪ್ರೀತಿಸುವ, ಈ ಮಣ್ಣಿನ ಕಣವನ್ನು ದೇವರೆನ್ನುವ ದೇಶಭಕ್ತರ ಬೆನ್ನಿಗೆ ಯುವಜನತೆ ನಿಲ್ಲುತ್ತಿದ್ದಾರೆ.
ಹಿಮಾದಾಸ್ನಂತಹ ಹೆಣ್ಣುಮಕ್ಕಳು ದೇಶದ ಖ್ಯಾತಿಯನ್ನು ಮುಗಿಲೆತ್ತರಕ್ಕೇರಿಸುತ್ತಿದ್ದಾರೆ. ಅಷ್ಟೇ ಅಲ್ಲ ದೇಶಕ್ಕಾಗಿ ದುಡಿಯಲು ಎಂತಹ ಹೋರಾಟಕ್ಕೂ ಸಿದ್ಧ ಎನ್ನುವ ಆಕೆಯ ಧೋರಣೆ ನಿಜಕ್ಕೂ ಗಂಟಲುಬ್ಬಿ ಬರುತ್ತದೆ. ಆಕೆ ಮಾಧ್ಯಮದವರೆದುರಿಗೆ ಮಾತನಾಡುತ್ತ- “ನನ್ನ ಭೂತಕಾಲದ ಬಗೆಗೆ ಮಾತನಾಡಲು ಇಷ್ಟವಿಲ್ಲ, ಎಲ್ಲರಿಗೂ ಜೀವನದಲ್ಲಿ ಕಷ್ಟಗಳಿರುತ್ತವೆ, ಆದರೆ ದೇಶಕ್ಕೇನಾದರೂ ಮಾಡಬೇಕೆಂಬ ಹಂಬಲವಿದ್ದರೆ ಹೋರಾಟ ಮಾಡಲೇಬೇಕು. ನನ್ನ ಭೂತಕಾಲ ಹೇಗಿತ್ತು, ನಾನು ನಡೆದು ಬಂದ ಹಾದಿ ಎಷ್ಟು ಕ್ಲಿಷ್ಟಕರವಾಗಿತ್ತು ಅದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲಾರೆ. ಹಿಂದಿನದನ್ನು ಬಿಟ್ಟುಬಿಡಿ, ಇನ್ನು ಮುಂದಿನದರ ಬಗ್ಗೆ ಮಾತನಾಡಿ” ಎಂದು ಪ್ರೇರಣೆ ನೀಡುತ್ತಾರೆ ಚಿನ್ನದ ಹುಡುಗಿ ಹಿಮಾ ದಾಸ್. ಇಂತಹ ಹೆಣ್ಣಮಕ್ಕಳ ಸಂಖ್ಯೆ ಹೆಚ್ಚಾಗಲಿ. ಯುವಜನತೆ ಇಂತಹ ಸಾಧಕರಿಂದ ಸ್ಪೂರ್ತಿ ಪಡೆಯಲಿ, ರಾಷ್ಟ್ರ ಕಟ್ಟುವ ಕಾಯಕದಲಿ ತೊಡಗಿಸಿಕೊಳ್ಳುವಂತಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.