ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದಿದ್ದು, ತುಳುನಾಡು ಎಜ್ಯುಕೇಶನಲ್ ಟ್ರಸ್ಟ್ ಶಿಕ್ಷಣ ಕ್ಷೇತ್ರಕ್ಕೆ ಬಹುಮುಖ್ಯ ಕೊಡುಗೆಗಳನ್ನು ಇದುವರೆಗೆ ನೀಡುತ್ತಾ ಬಂದಿದೆ. ದಿ| ಹರಿದಾಸ ಆಚಾರ್ಯರ ನೇತೃತ್ವದಲ್ಲಿ ಪ್ರಾರಂಭವಾದ ಈ ಟ್ರಸ್ಟಿನ ಕನಸಿನ ಕೂಸಾದ ಶಾರದಾ ವಿದ್ಯಾಲಯ 25 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿತು. ಇದು ಜಿಲ್ಲೆಯ ಪ್ರಥಮ ಸಿ.ಬಿ.ಎಸ್.ಇ. ಪಠ್ಯಕ್ರಮದ ಶಾಲೆಯಾಗಿ ರೂಪಿತಗೊಂಡು ಇಂದು ಶಿಕ್ಷಣವರ್ಗ ಹಾಗೂ ಶಿಷ್ಯವೃಂದದ ಸಾಧನೆಯಿಂದ ಅಪಾರ ಪ್ರಗತಿಯನ್ನು ಗಳಿಸಿ ಮನೆಮಾತಾಗಿದೆ.
ಒಂದು ಶಾಲೆಯಿಂದ ಪ್ರಾರಂಭಿಸಲ್ಪಟ್ಟು, ಶಾರದಾ ಸಮೂಹ ಶಿಕ್ಷಣ ಸಂಸ್ಥೆಯಾಗಿ ಮಾರ್ಪಟ್ಟು ಇಂದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದೀಗ ನಾಲ್ಕು ವಿದ್ಯಾ ಕೇಂದ್ರಗಳು ಈ ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಎಂಟು ಸಾವಿರ ವಿದ್ಯಾರ್ಥಿಗಳು ನರ್ಸರಿಯಿಂದ ಪದವಿವರೆಗಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಪ್ರಯೋಜನ ಪಡೆಯುತ್ತಿದ್ದಾರೆ.
ತುಳುನಾಡು ಎಜ್ಯುಕೇಶನಲ್ ಟ್ರಸ್ಟಿನ ಅಧ್ಯಕ್ಷರಾಗಿರುವ ಶ್ರೀಯುತ ಪ್ರೊ| ಎಂ.ಬಿ.ಪುರಾಣಿಕರು ಹಾಗೂ ದಕ್ಷ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಕೆ.ಎಸ್. ಕಲ್ಲೂರಾಯ, ಕಾರ್ಯದರ್ಶಿಗಳಾದ ಶ್ರೀ ಎಂ.ಎಸ್. ಶಾಸ್ತ್ರಿ, ಟ್ರಸ್ಟಿಗಳಾದ ಶ್ರೀ ಪ್ರದೀಪ ಕುಮಾರ ಕಲ್ಕೂರಾ ಮತ್ತು ಶ್ರೀ ಎಚ್. ಸೀತಾರಾಮ್ ಅವರ ದೂರದೃಷ್ಟಿ, ಭಾರತೀಯ ಸಂಸ್ಕೃತಿಯ ಬಗೆಗಿನ ಒಲವು, ಸಾಮಾಜಿಕ ಕಳಕಳಿಯ ಫಲವಾಗಿ 2016 ಡಿಸೆಂಬರಿನಲ್ಲಿ ತಲಪಾಡಿಯ ದೇವಿನಗರದಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಮುಂಭಾಗದ ವಿಶಾಲವಾದ 12 ಎಕರೆ ಪ್ರದೇಶದಲ್ಲಿ ಶಾರದಾ ಆಯುರ್ಧಾಮ ಕ್ಯಾಂಪಸ್ನಲ್ಲಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಪ್ರಾರಂಭಗೊಂಡಿತು. ಶಾಸ್ತ್ರೀಯ ಪದ್ಧತಿಗನುಸಾರವಾಗಿ ಆಯುರ್ವೇದ ಚಿಕಿತ್ಸೆಯು ಇಲ್ಲಿನ ನುರಿತ ವೈದ್ಯ ವೃಂದದಿಂದ ದೊರೆಯುತ್ತಿದ್ದು, ಮೂಲಭೂತ ಸೌಕರ್ಯಗಳೊಂದಿಗೆ ರೋಗಿಗಳ ಅನುಕೂಲಕ್ಕಾಗಿ ವೈಫೈ-ಎ.ಸಿ. ಕೊಠಡಿಗಳು ಹಾಗೂ ನಾನಾ ಸ್ತರದ ವಾರ್ಡ್ ಹಾಗೂ ಕೊಠಡಿ ಸೌಲಭ್ಯಗಳನ್ನು ಹೊಂದಿ ಉತ್ತಮವಾದ ನರ್ಸಿಂಗ್ ಹಾಗೂ ಅನುಭವಿ ಸಿಬ್ಬಂದಿಗಳ ಸೇವೆಯಿಂದ ಈಗಾಗಲೇ ನಗರದ ಮನೆಮಾತಾಗಿದೆ.
ಇದೀಗ ಆಯುರ್ವೇದ ಚಿಕಿತ್ಸಾ ಸೌಲಭ್ಯವನ್ನು ‘ಅಷ್ಟಾಂಗ ಆಯುರ್ವೇದ’ ರೂಪದಲ್ಲಿ ಪ್ರಸ್ತುತಪಡಿಸಲು 100 ಹಾಸಿಗೆಗಳ ಸೌಲಭ್ಯಗಳುಳ್ಳ ಶಾರದಾ ಆಯುರ್ವೇದ ಆಸ್ಪತ್ರೆ ಮನೋಹರವಾಗಿ ರೂಪಿತಗೊಂಡಿದೆ. HEALING HANDS & CARING HEARTS ಎಂಬ ಘೋಷವಾಕ್ಯದೊಂದಿಗೆ ಈ ಆಸ್ಪತ್ರೆಯು ಹೊರರೋಗಿ ವಿಭಾಗದಲ್ಲಿ ಕಾರ್ಯ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆ, ಶಲ್ಯ ತಂತ್ರ, ಪ್ರಸೂತಿ ಹಾಗೂ ಸ್ತ್ರೀರೋಗ, ಕುಮಾರಬ್ರುತ್ಯ, ವಾಗೀಕರಣ, ಫಿಸಿಯೋಥೆರಪಿ, ಸ್ವಸ್ಥ್ಯಮೃತ ಮತ್ತು ಯೋಗ ವಿಭಾಗಗಳನ್ನು ಒಳಗೊಂಡಿದ್ದು, ತಜ್ಞ ವೈದ್ಯರಿಂದ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಹೊರ ಹಾಗೂ ಒಳರೋಗಿಗಳ ತಪಾಸಣೆಗಾಗಿ ಆತ್ಯಾಧುನಿಕ ಪರೀಕ್ಷಾ ಉಪಕರಣಗಳು ಹಾಗೂ ವ್ಯವಸ್ಥೆಯನ್ನು ಆಳವಡಿಸಲಾಗಿದೆ. ಅಲ್ಲದೆ ಕ್ಷ-ಕಿರಣ (X-ray), ಸ್ಕ್ಯಾನಿಂಗ್, ದಂತ ಚಿಕಿತ್ಸೆ, ಲ್ಯಾಬೋರೇಟರಿ, ಹೆರಿಗೆ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಒಳಗೊಂಡಿದೆ. ಒಳ ರೋಗಿಯ ಅನುಕೂಲಕ್ಕೆ ಅನುಗುಣವಾಗಿ ಜನರಲ್ ವಾರ್ಡ್, ಸೆಮಿಸ್ಪೆಷಲ್ ವಾರ್ಡ್, ಹವಾನಿಯಂತ್ರಿತ ಹಾಗೂ ರಹಿತ ಸ್ಪೆಷಲ್ ವಾರ್ಡ್ ಮತ್ತು ಡಿಲಕ್ಸ್ ರೂಮ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಚಿಕಿತ್ಸಾ ಸಂದರ್ಭದಲ್ಲಿ ವೈದ್ಯರ ಮಾರ್ಗದರ್ಶನದಂತೆ ರೋಗಕ್ಕನುಗುಣವಾಗಿ ಪಥ್ಯಾಹಾರವನ್ನು ಒದಗಿಸಲಾಗುವುದು.
ಪ್ರಕೃತಿಯ ಸುಂದರ ಪರಿಸರದಲ್ಲಿ ತೆಂಗು-ಕಂಗಿನ ತೋಟದ ನಡುವೆ ಶಾರದಾ ಆಯುರ್ವೇದ ಆಸ್ಪತ್ರೆಯು ದಿನಾಂಕ 1 ಜುಲೈ ಭಾನುವಾರದಂದು ಆದರಣೀಯ ಶ್ರೀ. ಶ್ರೀಪಾದ ಎಸ್ಸೋ ನಾಯಕ್, ಕೇಂದ್ರ ಸರಕಾರದ ಆಯುಷ್ ಮಂತ್ರಿಗಳು ಇವರಿಂದ ಉದ್ಘಾಟಿತಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಡಾ| ಸಚ್ಚಿದಾನಂದ, ಉಪ-ಕುಲಪತಿಗಳು, ರಾಜೀವ್ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಕರ್ನಾಟಕ, ಡಾ| ಬಿ.ಆರ್.ರಾಮಕೃಷ್ಣ, ಅಧ್ಯಕ್ಷರು, ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್, ಶ್ರೀ ಯು.ಟಿ.ಖಾದರ್, ವಸತಿ ಮತ್ತು ನಗರಾಭಿವೃದ್ಧಿ ಸಚಿವರು ಕರ್ನಾಟಕ ಇವರುಗಳ ಉಪಸ್ಥಿತರಿರುವರು. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಇವರು ಆಶೀರ್ವಚನಗೈಯಲಿದ್ದಾರೆ.
ನಮ್ಮ ಕರಾವಳಿ ಭಾಗದ ಈ ಆಸ್ಪತ್ರೆಯು ಆಯುರ್ವೇದ ವೈದ್ಯ ಪದ್ಧತಿಯಂತೆ ಸಾಮಾನ್ಯ ಜನರ ಕೈಗೆ ಎಟಕುವ ದರದಲ್ಲಿ ಉತ್ಕೃಷ್ಟವಾದ ಸೇವೆಯನ್ನು ಆಸಕ್ತರಿಗೆ ಕೊಡಲಿದೆ. ಸ್ವಂತ ವಾಹನದಲ್ಲಿ ಬರುವ ಬಂಧುಗಳು ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ (NH-66)ಯಲ್ಲಿ ಕೆ.ಸಿ.ರೋಡು ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ದೇವಿನಗರವನ್ನು ತಲುಪಬಹುದು. ಉಳಿದಂತೆ ನಮ್ಮ ಬಂಧುಗಳು ಮಂಗಳೂರಿನ ಶಾರದಾ ವಿದ್ಯಾಲಯಕ್ಕೆ ಮಧ್ಯಾಹ್ನ ೧೨.೦೦ ಗಂಟೆಗೆ ಬಂದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಭೋಜನ ಸ್ವೀಕರಿಸಿ ಅನಂತರ ನಮ್ಮ ಶಾಲೆಯ ವಾಹನಗಳಲ್ಲಿ ತಲಪಾಡಿಯ ಆಯುರ್ಧಾಮಕ್ಕೆ ಕರೆದುಕೊಂಡು ಹೋಗಿ ಕಾರ್ಯಕ್ರಮದ ಬಳಿಕ ಮಂಗಳೂರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸದವಕಾಶವನ್ನು ನಮ್ಮ ಹಿತೈಷಿ ಬಂಧುಗಳು ಸದುಪಯೋಗಿಸಿಕೊಂಡು ಸಹಕರಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ವಿನಂತಿಸಿಕೊಂಡಿದ್ದಾರೆ.
ಈ ಪತ್ರಿಕಾ ಗೋಷ್ಠಿಯಲ್ಲಿ ಶಾರದಾ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯ, ಟ್ರಸ್ಟಿಗಳಾದ ಶ್ರೀ ಪ್ರದೀಪ ಕುಮಾರ ಕಲ್ಕೂರ, ಶಾರದಾ ವಿದ್ಯಾನಿಕೇತನ ಆಡಳಿತಾಧಿಕಾರಿ ಶ್ರೀ ವಿವೇಕ್ ತಂತ್ರಿ, ಶಾರದಾ ಆಯುರ್ವೇದಿಕ್ ಆಸ್ಪತ್ರೆಯ ಮೆಡಿಕಲ್ ಆಫಿಸರ್ ಡಾ| ರವಿಗಣೇಶ್ ಹಾಗೂ ಶ್ರೀ ದಯಾನಂದ ಕಟೀಲ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.