ಕಾರ್ಗಿಲ್ ಯುದ್ಧದ ಪ್ರಾರಂಭವಾಗೋ ಮೊದಲೇ ಭಾರತ ಮಾತೆಯ ಪಾದಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ವೀರ ಕ್ಯಾಪ್ಟನ್ ಸೌರಭ್ ಕಾಲಿಯಾ.
ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ಥಾನ ಕಾದಾಡಿದ ಕಾರ್ಗಿಲ್ ಯುದ್ದವೇ ದೊಡ್ಡ ಯುದ್ದವೆನ್ನಬಹುದು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ, ಸಾಹಸಗಳಿಂದ ಭಾರತ ಈ ಯುದ್ದದಲ್ಲಿ ಜಯಭೇರಿ ಬಾರಿಸಿತು. ನಿಯಮಗಳನ್ನು ಗಾಳಿಗೆ ತೂರಿ 1999ರಲ್ಲಿ ಪಾಪಿ ಪಾಕಿಸ್ಥಾನ ನಮ್ಮ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ನೆಲೆಗಳಿಗೆ ತನ್ನ ಸೈನ್ಯ ಮತ್ತು ಕಾಶ್ಮೀರಿ ಉಗ್ರರನ್ನು ನುಸುಳಿಸಿತು. ಇದೇ ಯುದ್ದದ ಕಾರಣ. ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರು ನಮ್ಮ ಹಲವು ಭಾರತೀಯ ನೆಲೆಗಳನ್ನು ಆಕ್ರಮಿಸಿಕೊಂಡರು. ಈ ನೆಲೆಗಳನ್ನು ಮರುವಶ ಪಡೆದು ಕೊಳ್ಳಲು ಕಾರ್ಗಿಲ್ ಜಿಲ್ಲೆ ಮತ್ತು ಗಡಿ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ನಡೆದ ರೋಚಕ ಯುದ್ದವೇ ಕಾರ್ಗಿಲ್ ಯುದ್ದ.
ಪಾಕಿಸ್ಥಾನದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ಥಾನದ ನವಾಜ್ ಷರೀಫ್ ಎದುರು ಕುಳಿತು ಕೈಕುಲುಕಿದರು. ನಾವು ಪಾಕಿಸ್ಥಾನಕ್ಕೆ ರೈಲು ಬಿಟ್ಟದ್ದಾಯಿತು. ಬಸ್ಸೂ ಓಡಿಸಿದ್ದಾಯಿತು, ಕೈಕುಲುಕಿದ್ದೂ ಆಯಿತು. ಆದರೆ ಪಾಕಿಸ್ಥಾನ ಮಾತ್ರ ಬದಲಾಗಲಿಲ್ಲ. ತನ್ನ ನರಿಬುದ್ಧಿಯನ್ನು ಪ್ರದರ್ಶಿಸುವುದಕ್ಕೆ ಪಾಕಿಸ್ಥಾನ ತಡ ಮಾಡಲೇ ಇಲ್ಲ.
ಜೋಜಿ ಲಾ ಪಾಸ್, ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ.
ಕಾರ್ಗಿಲ್ನಲ್ಲಿ ಅತಿ ಹಿಮ ಬೀಳುತ್ತಿದ್ದಂತೆ ಭಾರತೀಯ ಸೇನೆ ಹಿಂದೆ ಬರುತ್ತದೆ. ನಂತರ ಹಿಮ ಕರಗುತ್ತಲೇ ಮತ್ತೆ ಅಲ್ಲಿಗೆ ಹೋಗುತ್ತದೆ. ಇದು ಹಿಂದೆಯಿಂದ ನಡೆದು ಬಂದಿರುವಂಥ ಪದ್ದತಿಯಾಗಿತ್ತು.
ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್ನ, ಪೂರ್ವ ಬಟಾಲಿಕ್ನ ಮತ್ತು ದ್ರಾಸ್ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್ಗಳನ್ನು ಕಟ್ಟಿಕೊಂಡರು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತ್ತು.
ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ವಿಷಯ ತಲುಪಿತ್ತು. ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು.
ಕಾರ್ಗಿಲ್ನ ಆ ಪರ್ವತಗಳಲ್ಲಿ ಸುಮಾರು 20-25 ನುಸುಳುಕೋರರು ಬಜರಂಗ್ ಪೋಸ್ನಲ್ಲಿ ಬಂದು ಕೂತಿದ್ದಾರೆಂಬ ಮಾಹಿತಿ ಇತ್ತು. ಈ ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಹಾಗು ನುಸುಳುಕೋರರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮೇ 15 ರಂದು ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತು 5 ಜನ ಸಂಗಡಿರೊಂದಿಗೆ ಕಸ್ಕರ್ ಭಾಗದಲ್ಲಿದ್ದ ಬಜರಂಗ್ ಪೋಸ್ ಕಡೆಗೆ ಹೊರಟ.
ದಟ್ಟವಾದ ಕಾಡು, ಮೈಕೊರೆಯುವ ಛಳಿ, ಅಗಾಧವಾದ ಹಿಮಪಾತವನ್ನು ಲೆಕ್ಕಿಸದೇ ಸೌರಭ್ ಮುನ್ನಡೆದ. ಬಜರಂಗ್ ಪೋಸ್ಟ್ ಹತ್ತಿರ ಹೋಗುತ್ತಿದ್ದಂತೆ ಸೌರಭ್ ಮತ್ತು ಅವನ ತಂಡದ ಮೇಲೆ ನೂರಾರು ಜನ ಪಾಪಿ ಪಾಕಿಸ್ತಾನಿಯರು ಗುಂಡಿನ ಮಳೆ ಸುರಿಸಲಿ ಶುರು ಮಾಡಿದರು. ಸೌರಭ್ ಮತ್ತು ಅವನ ಸಂಗಡಿಗರು ಕೆಚ್ಚೆದೆಯಿಂದ ಹೋರಾಡುತ್ತಿದ್ದರು. ಪಾಕಿಯರ ಗುಂಡಿನ ಮಳೆ ನಿಲ್ಲಲೇ ಇಲ್ಲ. ತಮ್ಮ ಬಳಿ ಇದ್ದ ಮದ್ದು-ಗುಂಡುಗಳು ಖಾಲಿಯಾಗುತ್ತಿರುವುದನ್ನು ಅರಿತ ಸೌರಭ್ ಅಲ್ಲಿಂದ ತಪ್ಪಿಸಿಕೊಂಡು ವಾಪಸ್ ಬರಲು ಪ್ರಯತ್ನಿಸಿದ.
ಆದರೆ ದುರದೃಷ್ಟವಷಾತ್ ಪಾಕಿಯರು ಈ 5 ಜನರನ್ನು ಸುತ್ತುವರೆದು ಬಂಧಿಸಿದರು. ಇಲ್ಲಿಂದ ಮುಂದಿನ ಕಥೆ ದಾರುಣವಾದದ್ದು. ಈ ಐದು ಜನರನ್ನು ಪಾಕಿಯರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ದು ಸುಮಾರು 25 ದಿನಗಳ ಕಾಲ ಅವರಿಗೆ ಚಿತ್ರಹಿಂಸೆ ಕೊಟ್ಟು ಕೊನೆಯಲ್ಲಿ ಗುಂಡಿಟ್ಟು ಕೊಂದರು. ಜೂನ್ 9 ರಂದು ಪಾಪಿಸ್ಥಾನ ಸೌರಭ್ನ ದೇಹವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತು.
ದೆಹಲಿಯಲ್ಲಿ ಅವನ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿದ ವೈದ್ಯರು ದಂಗುಬಡಿದರು. ಆ ಪರಿಯ ಚಿತ್ರಹಿಂಸೆಯನ್ನು ಅವರು ಎಂದೂ ನೋಡಿರಲಿಲ್ಲ. ದೇಹವನ್ನು ಸಿಗರೇಟ್ ಇಟ್ಟು ಸುಟ್ಟಿದ್ದರು. ಕಬ್ಬಿಣದ ಕಂಬಿಗಳನ್ನು ಕಾಯಿಸಿ ಕಣ್ಣುಗುಡ್ಡೆಗಳನ್ನು ಅದರಲ್ಲಿ ಸುಟ್ಟು ಕಿತ್ತು ಹಾಕಿದ್ದರು. ಬೆರಳುಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಚಾಕುವಿನಿಂದ ಚರ್ಮ ಸುಲಿದಿದ್ದರು. ಪ್ರಾಣಿಗಳನ್ನು ಬಿಟ್ಟು ಕಚ್ಚಿಸಿದರು. ಮರ್ಮಾಂಗವನ್ನು ಕತ್ತರಿಸಿ ಬಿಸಾಡಿದರು. ಈ ಎಲ್ಲ ಚಿತ್ರಹಿಂಸೆಯನ್ನು ಕೊಟ್ಟು ಕೊನೆಗೆ ಗೊಂಡಿಟ್ಟುಕೊಂದರು.
ಪಾಪಿಗಳ ಚಿತ್ರಹಿಂಸೆ ಕಿರುಕುಳ ಅನುಭವಿಸಿದ ಸೌರಭ್ ತನ್ನ ಕೊನೆಯ ಉಸಿರಿರುವವರೆಗೂ ಭಾರತದ ಯಾವುದೇ ಗುಪ್ತಚರ ಮಾಹಿತಿಯನ್ನಾಗಲಿ ಸೇನೆಯ ವಿಷಯವಾಗಲಿ ಅಣುವಷ್ಟೂ ಬಿಟ್ಟುಕೊಡಲಿಲ್ಲ. ಹೃದಯದ ಬಡಿತ ನಿಲ್ಲುವವರೆಗೂ ತಾಯೀ ಭಾರತಿಯ ವೀರ ಪುತ್ರನಾಗಿ ಬದುಕಿದ.
ದೇಶಕ್ಕಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿಟ್ಟು ಸೇವೆಗೈಯುವ ವೀರರನ್ನು, ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಲ್ಲ ಕೃತಜ್ಞತೆ. ದೇಶ ಕಾಯುವ ವೀರ ಯೋಧರ ಕುರಿತು ಒಮ್ಮೆಯಾದರೂ ಚಿಂತಿಸುವ ಪ್ರಯತ್ನ ಮಾಡೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.