×
Home About Us Advertise With s Contact Us

ರಾಷ್ಟ್ರೀಯ ಏಕತೆಗಾಗಿ ಹಿಂದಿ ಅಗತ್ಯ: ರಾಜ್ಯಪಾಲ

IMG-20150327-WA0016ಮಂಗಳೂರು: ರಾಷ್ಟ್ರೀಯ ಏಕತೆಯನ್ನು ಕಾಪಾಡಲು ಹಿಂದಿ ಭಾಷೆಯನ್ನು ಪ್ರಚಾರ ಮತ್ತು ಪ್ರಸಾರ ಮಾಡುವ ಅಗತ್ಯವಿದೆ. ಹಿಂದಿಯನ್ನು ಬಲಿಷ್ಠಗೊಳಿಸಿದರೆ ದೇಶ ಬಲಿಷ್ಠಗೊಳ್ಳುತ್ತದೆ ಎಂದು ರಾಜ್ಯಪಾಲ ವಜುಭಾಯ್ ವಾಲಾ ಅಭಿಪ್ರಾಯಪಟ್ಟರು.

ಅವರು ನಗರದ ಓಶಿಯನ್ ಪರ್ಲ್‌ನ ಸಭಾಂಗಣದಲ್ಲಿ ಶನಿವಾರ ದಕ್ಷಿಣ ಮತ್ತು ದಕ್ಷಿಣ-ಪಶ್ಚಿಮ ಕ್ಷೇತ್ರಗಳ ಸಂಯುಕ್ತ ಕ್ಷೇತ್ರೀಯ ರಾಜಭಾಷಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ಭಾಷೆಯಿಂದ ಜ್ಞಾನವನ್ನು ಬಲಿಷ್ಠಗೊಳಿಸಬೇಕು. ನಮ್ಮ ಜ್ಞಾನವನ್ನು ಇತರರ ಏಳಿಗಾಗಿ ಉಪಯೋಗಿಸಬೇಕು. ಗಂಗಾ ನದಿ ಉತ್ತರದಿಂದ ಹರಿದರೆ ಜ್ಞಾನದ ಗಂಗೆ ದಕ್ಷಿಣ ಭಾರತದಿಂದ ಹರಿಯುತ್ತಿದೆ. ವಿಶ್ವವೇ ಒಂದು ಕುಟುಂಬ ಎಂಬ ಸಿದ್ಧಾಂತ ಇಲ್ಲಿ ಜೀವಂತವಾಗಿದೆ. ಇಲ್ಲಿನ ಅನೇಕ ಸಾಧು ಸಂತರು ರಾಷ್ಟ್ರಕ್ಕಾಗಿ ಮಹತ್ತರ ಕಾರ್ಯ ಮಾಡಿದ್ದಾರೆ. ಇಲ್ಲಿನ ಜೀವನ ಪದ್ಧತಿ, ಸಂಸ್ಕಾರ ಮಹತ್ವದ್ದು. ಇಲ್ಲಿನ ಭಾಷೆಗಳ ಸಾಹಿತ್ಯವನ್ನು ಹಿಂದಿಗೆ ಭಾಷಾಂತರ ಮಾಡಿದರೆ ಮಾತ್ರ ಅದರ ಜ್ಞಾನ ಇಡೀ ದೇಶಕ್ಕೆ ಪಸರಿಸುತ್ತದೆ’ ಎಂದರು.

‘ಪ್ರತಿಯೊಂದು ಸ್ವತಂತ್ರ ರಾಷ್ಟ್ರಕ್ಕೂ ಅದರದೇ ಆದ ಧ್ವಜ, ಚಿಹ್ನೆ, ರಾಷ್ಟ್ರ ಪಕ್ಷಿ, ಪ್ರಾಣಿ, ಭಾಷೆಗಳಿರುತ್ತವೆ. ಅಂತೆಯೇ ಭಾರತದ ರಾಷ್ಟ್ರ ಭಾಷೆ ಹಿಂದಿ. ಇದನ್ನು ಸಂವಿಧಾನ ಕೂಡ ಹೇಳಿದೆ. ರಾಷ್ಟ್ರೀಯ ಏಕತೆಯನ್ನು ಕಾಪಾಡಲು ಹಿಂದಿಯನ್ನು ಪ್ರಚಾರ, ಪ್ರಸಾರ ಮಾಡಬೇಕು ಆದರೆ ಇದರಿಂದ ಇತರ ಭಾಷೆಗಳಿಗೆ ಅವಮಾನವಾಗಬಾರದು’ ಎಂದರು.

ನಾನು ವಿಧಾನಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದಾಗ ಎಲ್ಲರಿಗೂ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಭಾಷಣದ ಪ್ರತಿಯನ್ನು ನೀಡಿದ್ದೆ. ನನ್ನ ಭಾಷೆಯನ್ನು ಅವರು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲಿ ಎಂಬ ಕಾರಣಕ್ಕಾಗಿ ನೀಡಿದ್ದೆ. ಇದರಿಂದ ಸಮಭಾವ ಮೂಡುತ್ತದೆ. ಎಲ್ಲಾ ಭಾಷೆಯ ಬಗ್ಗೆಯೂ ನಾವು ಸಮಭಾವವನ್ನು ಬೆಳೆಸಿಕೊಳ್ಳಬೇಕು. ರಾಜ್ಯಭಾಷೆಯನ್ನೂ ಬೆಳೆಸಬೇಕು ಎಂದು ತಿಳಿಸಿದರು.

ದೇಶದ ಜನರನ್ನು ಹಿಂದಿಯಲ್ಲಿ ಮಾತನಾಡುವಂತೆ ಮಾಡಲು, ಹಿಂದಿ ಅರ್ಥೈಸಿಕೊಳ್ಳುವಂತೆ ಮಾಡಲು, ಹಿಂದಿಯಲ್ಲಿ ಬರೆಯುವಂತೆ ಮಾಡಲು ಈ ಕಾರ್ಯಕ್ರಮ ಮಹತ್ವದಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಹಿಂದಿಯಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ಹಲವಾರು ಗಣ್ಯರಿಗೆ ರಾಜಭಾಷಾ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು. ಅಲ್ಲದೇ ವಿವಿಧ ಹಿಂದಿ ಇಲಾಖೆಗಳ ಮ್ಯಾಗಜೀನ್‌ಗಳನ್ನು ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top