ಸುಮಾರು 2 ವರ್ಷಗಳಿಂದ ನಡೆಯುತ್ತಿರುವ ಹೋರಾಟ ಈಗ ಬಹುತೇಕ ನಿರ್ಣಾಯಕ ಹಂತವನ್ನು ಮುಟ್ಟಿದೆ ಎಂದೇ ಹೇಳಬಹುದು. ಕಳತ್ತೂರು ಜನಜಾಗೃತಿ ಹೋರಾಟ ಸಮಿತಿಯಿಂದ ಪಾದೂರು ಸಹಿತ ಮಂಗಳೂರು ಮತ್ತು ಉಡುಪಿ ಜಿಲ್ಲೆಯ 24ಗ್ರಾಮಗಳನ್ನು ಉಳಿಸುವ ಹೋರಾಟಕ್ಕೆ ಅಂತಿಮ ಸ್ವರೂಪ ಸಿಗುವ ಸಾಧ್ಯತೆ ಇದೆ. ಐಎಸ್ಪಿಆರ್ಎಲ್ನಿಂದ ಪೈಪ್ಲೈನ್ ಅಳವಡಿಸುವ ಕಾರ್ಯಕ್ಕೆ ಗ್ರಾಮಸ್ಥರಿಂದ ತೀವ್ರ ಹೋರಾಟ ನಡೆದಿರುವುದರಿಂದ ಅತ್ತ ಸರ್ಕಾರ ಈ ಯೋಜನೆಯ ಸಾಧಕ-ಭಾದಕಗಳನ್ನು ಪರಾಮರ್ಶಿಸುವ ಮನಸ್ಸು ಮಾಡಬೇಕಿದೆ.
ಉಡುಪಿಯ 7 ಹಾಗೂ ಮಂಗಳೂರಿನ 17 ಗ್ರಾಮಗಳ ರೈತರ ಜಮೀನುಗಳನ್ನು ಖರೀದಿಸಿಕೊಂಡು ಅಲ್ಲಿ ಪೈಪ್ಲೈನ್ ಅಳವಡಿಸಿ ಕಚ್ಚಾತೈಲ ಸಂಸ್ಕರಣಾ ಘಟಕವನ್ನು ಅಳವಡಿಸುವ ಕಾರ್ಯಕ್ಕೆ ಕೇಂದ್ರ ಮುಂದಾಗಿತ್ತು. ಸಾಮಾನ್ಯವಾಗಿ ರಾಷ್ಟ್ರದ ಭದ್ರತಾ ದೃಷ್ಟಿಯಿಂದ ಸರ್ಕಾರಗಳು ಕೈಗೊಳ್ಳುವ ಯಾವುದೇ ಯೋಜನೆಗೆ ಭೂಮಿ ಬೇಕೆಂದಾಗ ಅದನ್ನು ವಿರೋಧಿಸದೆ ಸರ್ಕಾರ ಭೂ ಸ್ವಾಧೀನ ಕಾಯ್ದೆ ೧೯೬೨ ರಂತೆ ಬಿಟ್ಟುಕೊಡಬೇಕಾಗುತ್ತದೆ ಎನ್ನುವ ಕಾನೂನು ಇದೆ. ಆದರೆ ಆ ಕಾನೂನು ಎಷ್ಟು ರೈತ ವಿರೋಧಿಯಾಗಿದೆ ಎಂದರೆ ಆ ಕಾಯ್ದೆಯ ಪ್ರಕಾರ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ಭೂಮಿಯ ಮಾರುಕಟ್ಟೆ ದರಕ್ಕಿಂತ ಹತ್ತು ಶೇಕಡಾ ಹಣವನ್ನು ರೈತನಿಗೆ ಕೊಟ್ಟರೆ ಸಾಕಾಗುತ್ತದೆ. ಇದರ ಪ್ರಕಾರ ರೈತ ಕನಿಷ್ಟ ಬೆಲೆಗೆ ತನ್ನ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ಮುಟ್ಟುತ್ತಾನೆ. ಆದರೆ ಆ ಕಾಯ್ದೆಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿ ರೈತರ ಅನುಕೂಲತೆಗೆ ತಕ್ಕಂತೆ ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ. ಇದರಂತೆ ರೈತ ತಾನು ತ್ಯಾಗ ಮಾಡುವ ಭೂಮಿಯ ಗರಿಷ್ಟ 4 ಪಟ್ಟು ಮಾರುಕಟ್ಟೆ ದರವನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ಅಳವಡಿಸಲಾಗಿದೆ. ಅದರೊಂದಿಗೆ ಭೂ ಸ್ವಾಧೀನ ಅಧಿಕಾರಿಗಳು ತಾವು ಸ್ವಾಧಿನಪಡಿಸಿಕೊಳ್ಳುವ ಪ್ರದೇಶದ ಒಟ್ಟು 80 ಶೇಕಡಾದಷ್ಟು ರೈತರು ಸ್ವಹಿತಾಸಕ್ತಿಯಿಂದ ಭೂಮಿಯನ್ನು ಬಿಟ್ಟುಕೊಡಲು ಒಪ್ಪಬೇಕಾಗುತ್ತದೆ.
ಆದರೆ ಕಳತ್ತೂರು ಜನಜಾಗೃತಿ ಸಮಿತಿಯ ಒತ್ತಾಯವೆಂದರೆ ಪಾದೂರು ಸಹಿತ ಅಕ್ಕಪಕ್ಕದ ಗ್ರಾಮಗಳಲ್ಲಿ ಅಧಿಕಾರಿಗಳು ಸರಿಯಾಗಿ ಸರ್ವೆಯನ್ನು ಮಾಡಿಲ್ಲ. ರೈತರಿಗೆ ಸರಿಯಾಗಿ ನೋಟಿಸ್ ಕಳುಹಿಸಿಲ್ಲ. ಅನೇಕ ರೈತರಿಗೆ ತಮ್ಮ ಭೂಮಿ ತಮ್ಮಿಂದ ಕಳೆದುಹೋಗುತ್ತದೆ ಎನ್ನುವುದೇ ಗೊತ್ತಿಲ್ಲ. ಯಾರದ್ದೋ ನೋಟಿಸ್ ಇನ್ನಾರಿಗೋ ಹೋಗಿದೆ. ಮತ್ತೆ ಕೆಲವು ರೈತರಿಗೆ ಉದ್ಯೋಗ ಕೊಡುತ್ತೇವೆ ಅಥವಾ ಇತರ ಅನೇಕ ಅಮಿಷಗಳನ್ನು ಒಡ್ಡಿ ಭೂಮಿಯನ್ನು ಖರೀದಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಸ್ವಾಧೀನ ಪಡೆದುಕೊಳ್ಳುವ ಭೂಮಿಯ ಸರ್ವೇ ಕಾರ್ಯ ನಡೆಸಿಲ್ಲ. ಇನ್ನೂ ಮುಖ್ಯವಾಗಿ ಹಳೇ ಕಾಯ್ದೆಯಲ್ಲಿ ಇರುವಂತೆ ಭೂಮಿಯ ಬೆಲೆಯ ಹತ್ತು ಶೇಕಡಾ ಹಣ ಕೊಟ್ಟು ಖರೀದಿಸಲು ಮುಂದಾಗಿರುವ ಅಧಿಕಾರಿಗಳ ಕ್ರಮಕ್ಕೆ ಈಗ ಈ ಭಾಗದಲ್ಲಿ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದರೆ ಜನರ ವಿರೋಧದ ನಡುವೆಯೇ ಇಲ್ಲಿ ಪೈಪ್ಲೈನ್ ಅಳವಡಿಸುವ ಕಾರ್ಯಕ್ಕೆ ಕಂಪೆನಿ ಮುಂದಾಗಿದೆ. ಅದಕ್ಕಾಗಿ ಪಕ್ಷಾತೀತವಾಗಿ ಹೋರಾಡಲು ಊರಿನ ನಾಗರಿಕರು ಸಜ್ಜಾಗಿದ್ದಾರೆ.
ಇಲ್ಲಿ ಇರುವ ಇನ್ನೊಂದು ತಾಂತ್ರಿಕ ಸಮಸ್ಯೆ ಎಂದರೆ ಒಬ್ಬ ರೈತನ ಭೂಮಿಯಲ್ಲಿ ಪೈಪ್ಲೈನ್ ಅಳವಡಿಸುವುದರಿಂದ ಅಲ್ಲಿ ಪೈಪ್ಲೈನ್ನ ಎರಡು ಕಡೆಗಳಲ್ಲಿ ಕನಿಷ್ಟ 60 ಅಡಿಗಳಷ್ಟು ಭೂಮಿಯನ್ನು ಉಪಯೋಗಿಸಲು ಸಾಧ್ಯವಿಲ್ಲ. ಅದರೊಂದಿಗೆ ರೈತನ ಜಮೀನಿನ ನಡುಭಾಗದಲ್ಲಿ ಪೈಪ್ಲೈನ್ ಹಾದು ಹೋಗುವುದರಿಂದ ಭವಿಷ್ಯದಲ್ಲಿ ಆ ಇಡೀ ಪ್ರದೇಶವೇ ಬೇಸಾಯಕ್ಕೆ ಅನುಪಯುಕ್ತವಾಗುತ್ತದೆ., ಅದರೊಂದಿಗೆ ಈ ಯೋಜನೆಗೆ ಸ್ಥಳೀಯ ನಂದಿಕೂರಿನಿಂದ ವಿದ್ಯುತ್ ಸರಬರಾಜು ಆಗುವುದಿಲ್ಲ, ಆ ವಿದ್ಯುತ್ ಪ್ರವಹಿಸುವ ವಿದ್ಯುತ್ ಲೈನ್ಗಳು ರೈತರ ಜಮೀನಿನ ಮೇಲೆಯಿಂದ ಹಾದುಹೋಗಲಿವೆ.
ಸದ್ಯಕ್ಕೆ ದೇಶದ ಹಿತದೃಷ್ಟಿಯಿಂದ ರೈತರು ತಮ್ಮ ಭೂಮಿಯನ್ನು ಕೊಡಲು ಹಿಂದೇಟು ಹಾಕುತ್ತಿಲ್ಲ. ಆದರೆ ಅದಕ್ಕೆ ಸರಿಯಾದ ಬೆಲೆ ಸಿಗಬೇಕು ಎನ್ನುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ. ಎಕರೆಗೆ ಇಪ್ಪದೈದು ಸಾವಿರ ಇರುವ ಭೂಮಿಗೆ ನಾಲ್ಕು ಸಾವಿರ ನಿಗದಿಗೊಳಿಸಿ ಅದಕ್ಕೆ ಹತ್ತು ಶೇಕಡಾದಂತೆ 400 ರೂಪಾಯಿ ಕೊಟ್ಟರೆ ಯಾವ ರೈತ ತಾನೇ ಸುಮ್ಮನೆ ಇದಾನು? ಅದಕ್ಕೆ ತಕ್ಕಂತೆ ಇನ್ನೂ ಬರಲಿರುವ ಹೊಸ ತಿದ್ದುಪಡಿಯಾಗಿರುವ ಕಾಯ್ದೆಯಂತೆ ದರ ನಿಗದಿಪಡಿಸಬೇಕು ಎನ್ನುವುದು ಇಲ್ಲಿನ ನಾಗರಿಕರ ಮನವಿ. ಈಗಾಗಲೇ ಕರಾವಳಿಯಲ್ಲಿ ಬರುತ್ತಿರುವ ಹತ್ತು ಹಲವು ಯೋಜನೆಗೆ ಭೂಮಿಯನ್ನು ಬಿಟ್ಟುಕೊಟ್ಟು ರೈತ ಕಂಗಾಲಾಗಿದ್ದಾನೆ. ಅದರೊಂದಿಗೆ ಇನ್ನೂ ಹತ್ತು ಹಲವು ಯೋಜನೆಗಳು ಇಲ್ಲಿ ಬರಲು ದಿನಗಣನೆ ನಡೆಸುತ್ತಿವೆ. ಪ್ರವಾಸೋದ್ಯಮ, ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ, ಕೃಷಿ ಪ್ರಧಾನ ನಾಡಾಗಿದ್ದ ಕರಾವಳಿಯಲ್ಲಿ ಇನ್ನೂ ಮುಂದೆ ಹಲವು ಕೈಗಾರಿಕೆಗಳು ನಾಟ್ಯವಾಡಲಿವೆ. ಈಗಾಗಲೇ ಕರಾವಳಿಯಲ್ಲಿ ಪ್ರಕೃತಿ ಮುನಿದಿರುವಿಕೆಗೆ ಏರುತ್ತಿರುವ ಈ ಉಷ್ಣಾಂಶವೇ ಸಾಕ್ಷಿ ಎನ್ನುವುದು ವಿಜ್ಙಾನಿಗಳ ಅಭಿಪ್ರಾಯ. ಅದರೊಂದಿಗೆ ಕಡಿಮೆ ಬೆಲೆಗೆ ರೈತನ ಭೂಮಿ ಕಸಿದು ಭವಿಷ್ಯದಲ್ಲಿ ನಮಗೆ ಎರಡು ಹೊತ್ತು ಅನ್ನ ಕೂಡ ಸಿಗದ ಪರಿಸ್ಥಿತಿ ಬರುತ್ತದಾ? ಕಾಲವೇ ಉತ್ತರಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.