ಬೆಳ್ತಂಗಡಿ: ಕನ್ನಡ ಹಾಗೂ ತುಳು ಕರಾವಳಿ ಜನತೆಗೆ ಎರಡು ತಾಯಿ ಇದ್ದಂತೆ. ವ್ಯವಹಾರದ ಭಾಷೆ ಕನ್ನಡದ ಜತೆಗೆ ತುಳು, ಕೊಂಕಣಿ, ಬ್ಯಾರಿ, ಮಲಯಾಳವನ್ನು ಉಳಿಸಿಕೊಂಡಿದ್ದಾರೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತುಳುವರ ಪಾತ್ರ ದೊಡ್ಡದು ಎಂದು ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ಹಳೆಕೋಟೆ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ವಾಣಿ ಪದವಿ ಪೂರ್ವ ವಿದ್ಯಾಲಯ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಜೂನಿಯರ್ ಚೇಂಬರ್ ಉಜಿರೆ ಇವುಗಳ ಆಶ್ರಯದಲ್ಲಿ ಬೋಳ್ತೇರ್(ಬೆಳ್ತಂಗಡಿ) ತುಳು ಮಿನದನ 2014-15 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಓದುಗರ ಸಂಖ್ಯೆ ಕಡಿಮೆಯಾಗಿದ್ದು, ಇತರ ಲಿಪಿಗಳ ಮೂಲಕವೂ ತುಳು ಭಾಷೆಯನ್ನು ಉಳಿಸುವ ಕಾರ್ಯ ನಡೆಯುತ್ತಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ತನ್ನ ಇತಿಹಾಸವನ್ನು ಸಂದಿ, ಪಾಡ್ದನಗಳ ಮೂಲಕ ಜಗತ್ತಿಗೆ ತಿಳಿಸುತ್ತಿದೆ. ಸತ್ಯ-ಧರ್ಮವನ್ನು ಮನಸಾರೆ ನಂಬಿ ನಡೆದುಕೊಂಡು ಮುಂದುವರಿದವರು ತುಳುವರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಮಾತನಾಡಿ ಯುವಜನತೆ ತುಳು ಬಳಸಿ, ತುಳು ಬೆಳೆಸಬೇಕು. ಅಕಾಡೆಮಿ ವತಿಯಿಂದ ಸಾಕಷ್ಟು ತುಳು ಬೆಳವಣಿಗೆಯ ಕಾರ್ಯಗಳು ನಡೆದಿವೆ ಎಂದರು.
ಮುಖ್ಯ ಅತಿಥಿಗಳಾದ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ಪಾಲೇದು ಮಾತನಾಡಿದರು.
ತುಳುವಿನ ಕುರಿತು ಅದೆಷ್ಟೇ ಹೋರಾಟಗಳು ನಡೆದರೂ ಇಂದಿಗೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ತುಳು ಭಾಷೆಯ ಬೆಳವಣಿಗೆಗೆ ಮಹಿಳೆಯರ ಕೊಡುಗೆ ದೊಡ್ಡದು. ಮಹಿಳೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಸಾಹಿತಿ ಅನಂತರಾಮ ಬಂಗಾಡಿ ಹೇಳಿದರು.
ಡಾ. ಎಂ. ಎಂ.ದಯಾಕರ್ ಉಜಿರೆ ಅವರು ಮಾತನಾಡಿ, ಪರಶುರಾಮ ಸೃಷ್ಟಿ ಹಾಗೂ ನಾಗದೇವರ ಭೂಮಿ ಎನ್ನುವ ನಂಬಿಕೆ ನಡೆದು ಬಂದ ತುಳುನಾಡಿನಲ್ಲಿ ಇಂದು ಕೈಗಾರಿಕೀಕರಣದ ಪ್ರಭಾವ ಕಾಣುತ್ತಿದೆ. ಲಿಪಿ ಇಲ್ಲದ ಭಾಷೆ ಇತರ ಭಾಷೆಯ ಶಬ್ದಗಳನ್ನು ತನ್ನೊಡಲಿಗೆ ಹಾಕಿಕೊಂಡಂತಹ ಸ್ಥಿತಿ ತುಳುವಿಗೆ ಬಂದಿದೆ ಎಂದರು.
ಡಾ. ಎಸ್. ಆರ್. ವಿಘ್ನರಾಜ್, ತುಳುವಿಗೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ತುಳು ಲಿಪಿಯಲ್ಲಿ ನೂರಾರು ಇತಿಹಾಸ, ಶಾಸನಗಳಿವೆ. ೧೫ ಸಾವಿರ ಹಸ್ತಪ್ರತಿಗಳಿವೆ. ಇವುಗಳನ್ನು ರಕ್ಷಿಸಬೇಕಿದೆ. ೪೮ ವಿಷಯ ವೈವಿಧ್ಯಗಳು ತುಳು ಲಿಪಿಯಲ್ಲಿವೆ. ಆದರೆ ತುಳು ಲಿಪಿಗೆ ರಾಜಮರ್ಯಾದೆ ದೊರೆಯದ ಹಿನ್ನೆಲೆಯಲ್ಲಿ ಅದು ಮರೆಯಾಗಿದೆ ಎಂದರು.
ಅಕಾಡೆಮಿ ಸದಸ್ಯ ಡಾ. ದಿವಾ ಕೊಕ್ಕಡ ಮಾತನಾಡಿ, ತುಳುವಿಗೆ ಪ್ರತ್ಯೇಕ ಲಿಪಿಯನ್ನು ಮುಂದುವರಿಸಿಕೊಂಡು ಹೋಗುವ ಅನಿವಾರ್ಯತೆ ಇದೆಯೇ ಎಂದು ಪ್ರಶ್ನಿಸಿದರು. ಡಿ. ಯದುಪತಿ ಗೌಡ ಅವರು, ಕ್ನನಡ ಲಿಪಿಯ ಮೂಲಕ ಸಾಕಷ್ಟು ಮಂದಿಗೆ ತಲುಪುತ್ತದೆ. ತುಳು ಲಿಪಿಯನ್ನೇ ಆಶ್ರಯಿಸಿದರೆ ಯಾರಿಗೂ ತಲುಪುವುದಿಲ್ಲ ಎಂದರು.
ಮಂಗಳೂರಿನ ಡಾ. ಕಿಶೋರ್ ಕುಮಾರ್ ರೈ, ತುಳು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗದಿರಲು ಅದನ್ನು ಬೆನ್ನತ್ತಿರುವುದು ಕೂಡಾ ಕಾರಣ ಎಂದರು. ಸತೀಶ್ ನಾಯ್ಕ ವೇಣೂರು, ಈ ಹಿಂದೆ ಹಿರಿಯರ ಮಾರ್ಗದರ್ಶನದಲ್ಲಿ ಸಂಸ್ಕೃತಿ ಮುಂದುವರಿಯುತ್ತಿತ್ತು. ಜನಪದದ ಅಡಿಯಲ್ಲಿ ಧರ್ಮದ ನೆರಳಿತ್ತು. ಈಗ ಅದೆಲ್ಲವೂ ತುಂಡು ತುಂಡಾಗಿ ಹೋಗಿದೆ. ಹೊಸ ಭಾಷೆಗೆ ಆದ್ಯತೆ ದೊರೆಯುತ್ತಿದೆ ಎಂದರು.
ವೇದಿಕೆಯಲ್ಲಿ ವಾಣಿ ಕಾಲೇಜಿನ ಜತೆ ಕಾರ್ಯದರ್ಶಿ ಮೋಹನ ಗೌಡ, ಉಜಿರೆ ಜೆಸಿಐ ಅಧ್ಯಕ್ಷ, ತುಳು ಅಕಾಡೆಮಿ ಮಾಜಿ ಸದಸ್ಯ ಡಾ. ಶ್ರೀನಾಥ್ ಎಂ.ಪಿ., ಅಕಾಡೆಮಿ ಸದಸ್ಯೆ ಜಯಶ್ರೀ ಉಪಸ್ಥಿತರಿದ್ದರು.
ತುಳು ಸಾಹಿತ್ಯೊದ ಬುಳೆಚ್ಚಿಲ್ ವಿಚಾರಕೂಟ: ತುಳು ಸಾಹಿತ್ಯದ ಬೆಳವಣಿಗೆ ಎಂಬ ಕುರಿತು ನಡೆದ ಪ್ರತ್ಯೇಕ ಗೋಷ್ಠಿಯಲ್ಲಿ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕ ಡಾ. ಪೂವಪ್ಪ ಕಣಿಯೂರು, ತುಳು ಸಾಹಿತ್ಯದ ಬೆಳವಣಿಗೆಗೆ ಜನಪದದ ಪ್ರಯತ್ನ ದೊಡ್ಡದು. ಅದರ ಜತೆಗೆ ಲಿಪೀಕರಣ ಮಾಡಿ ಸಾಹಿತ್ಯ ರಚಿಸಿದವರ ಸಂಖ್ಯೆ ದೊಡ್ಡದಲ್ಲದಿದ್ದರೂ ಶ್ರಮ ದೊಡ್ಡದು. ಸಂಗೀತ, ನಾಟಕ, ಯಕ್ಷಗಾನ, ಸಿನಿಮಾದ ಮೂಲಕವೂ ತುಳು ತನ್ನತನವನ್ನು ಇಂದಿನ ಜನಮಾನಸದೆಡೆಗೆ ಕೊಂಡೊಯ್ಯುತ್ತಿದೆ ಎಂದರು.
ಪ್ರತಿಕ್ರಿಯೆ ನೀಡಿದ ಪತ್ರಕರ್ತ ಲಕ್ಷೀ ಮಚ್ಚಿನ, ಸಂಪರ್ಕ ಭಾಷೆಯಾಗಿ ಅತಿದೊಡ್ಡ ಸ್ಥಾನದಲ್ಲಿರುವ ತುಳು ಲಿಪಿ ಇಲ್ಲದ ಹಿನ್ನೆಲೆಯಲ್ಲಿ ಸಾಹಿತ್ಯ ಪಸರಿಸುವಲ್ಲಿ ಹಿಂದುಳಿದಿದೆ. ಆದರೆ ಆಧುನಿಕತೆಗೆ ಒಡ್ಡಿಕೊಂಡು ಮನೆ ಮನೆಯಲ್ಲಿ ಉಳಿದಿದೆ ಎಂದರು.
ಅಕಾಡೆಮಿ ಮಾಜಿ ಸದಸ್ಯ, ವಾಣಿ ಕಾಲೇಜು ಪ್ರಾಚಾರ್ಯ ಡಿ. ಯದುಪತಿ ಗೌಡ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಡಾ. ದಿವ ಕೊಕ್ಕಡ ಪ್ರಸ್ತಾವಿಸಿದರು. ವಾಣಿ ಕಾಲೇಜಿನ ಉಪ ಪ್ರಾಚಾರ್ಯ ವಿಷ್ಣು ಪ್ರಕಾಶ್ ಎಂ. ನಿರ್ವಹಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಜಯಕುಮಾರ್ ಶೆಟ್ಟಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.