ನಾವು ಹಿಂದುಗಳು. ನಮ್ಮಲ್ಲಿ ಹಬ್ಬಗಳಿಗೇನೂ ಕೊರತೆಯಿಲ್ಲ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಸಹಸ್ರಾರು ವರ್ಷದಿಂದ ಅನೇಕರಿಗೆ ಬದುಕುವ ರೀತಿಯನ್ನು ಕಲಿಸಿಕೊಟ್ಟ ಸನಾತನ ಧರ್ಮ ನಮ್ಮದು. ಹೀಗಿರುವಾಗ ನಮ್ಮ ಹಬ್ಬಗಳನ್ನು ಆಚರಿಸುವುದು ಬಿಟ್ಟು ಅದ್ಯಾವುದೋ ಸಂಸ್ಕೃತಿಯ ಆಚರಣೆ ಎಷ್ಟು ಸರಿ. ಸನಾತನ ಧರ್ಮಕ್ಕೆ ಸೇರಿದ ನಮಗೆ ಹೊಸ ವರ್ಷ ಪ್ರಾರಂಭವಾಗುವುದು ಚೈತ್ರಮಾಸದ ಪಾಡ್ಯದಂದು. ಅಂದರೆ ಯುಗಾದಿ ಅಂದು. ಹೆಸರೇ ಹೇಳುವಂತೆ ಯುಗ ಅಂದರೆ ವರ್ಷ ಅದರ ಆದಿ ಯುಗಾದಿ. ಪ್ರಾಕೃತಿಕವಾಗಿಯೂ, ವೈಜ್ಞಾನಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಯುಗಾದಿಯೇ ನಮಗೆ ಹೊಸ ವರ್ಷವಾಗಿರುವಾಗ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಏಕೆ??? ಜನವರಿ 1 ಕೇವಲ ಕ್ಯಾಲೆಂಡರ್ ಬದಲಾವಣೆ ಆಗಬೇಕು ಹೊರತು ನಮ್ಮ ಆಚರಣೆ ಪದ್ದತಿ ರೀತಿ ನೀತಿಯಲ್ಲ. ಹಾ! ಈಗ ಯುಗಾದಿಯು ನಮಗೆ ಹೊಸ ವರ್ಷ ಹೇಗೆ ಎಂಬ ಅಂಶಗಳನ್ನು ತಿಳಿಯೋಣ.
ಪ್ರಾಕೃತಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (10:35) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ 31 ರಂದು ರಾತ್ರಿ 12 ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.
ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ. ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ, ಯುಗಾದಿ ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.
ಐತಿಹಾಸಿಕ ಕಾರಣಗಳು: ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.
ಆಧ್ಯಾತ್ಮಿಕ ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
ಸರಿಯಾದ ಕಾರಣಗಳಿಲ್ಲದಿದ್ದರೂ ನಾವು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಾ ಡಿಸೆಂಬರ್ 31 ರಂದು ಹೊಸವರ್ಷ ಎಂದು ಆಚರಿಸುತ್ತೇವೆ. ರಾತ್ರಿ 12 ಗಂಟೆಗೆ ಡಿಸ್ಕೋ, ಪಬ್ಬುಗಳ ಕರ್ಕಶ ಸದ್ದು, ಕುಡಿದು ಕುಣಿಯುವ ಹುಡುಗರೊಂದಿಗೆ ಹೊಸವರ್ಷವನ್ನು ಆಚರಿಸುವುದು ನಿಮಗೆ ಸರಿ ಅನಿಸುತ್ತದೆಯೇ? ಅದನ್ನು ನೋಡಿ ನಿಜವಾಗಲೂ ಹೊಸವರ್ಷವೆಂದು ನಮಗೆ ಅನಿಸುತ್ತದೆಯೇ? ನೀವೇ ಇದರ ಕುರಿತು ವಿಚಾರ ಮಾಡಿ. ನಮ್ಮ ದಿನದ ಆರಂಭವು ಕತ್ತಲು, ದುಃಖದಿಂದ ಆಗಬೇಕೆಂದು ನಿಮಗೆ ಅನಿಸುತ್ತದೆಯೇ? ಹಿಂದೂ ಸಂಸ್ಕೃತಿಯನುಸಾರ ದಿನದ ಆರಂಭವು ಬೆಳಗ್ಗೆ ಸೂರ್ಯೋದಯದೊಂದಿಗೆ ಆಗುತ್ತದೆ. ಹಾಗಾದರೆ ಕೇವಲ ಕ್ಯಾಲೆಂಡರ್ ಬದಲಾಯಿಸುವ ಒಂದು ದಿನಕ್ಕೆ ಇಷ್ಟೊಂದು ಅಬ್ಬರ ಇಷ್ಟೊಂದು ಸಂಭ್ರಮ ಬೇಕೇ? ನೀವೇ ಯೋಚಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.