ಭಾರತದ ಸಂವಿಧಾನ ಜನತೆಗೆ ಕೊಡಮಾಡಿರುವ ಸ್ವಾತಂತ್ರ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು. ತಮ್ಮ ಭಾವನೆಗಳನ್ನು ಮುಕ್ತವಾಗಿ ಇತರರೊಂದಿಗೆ ಹಂಚಿಕೊಳ್ಳುವ ಈ ಸ್ವಾತಂತ್ರ್ಯ ಸ್ವಚ್ಛಂಧತೆಗೆ ತಿರುಗಬಾರದು ಎಂಬ ಎಚ್ಚರದ ಆಶಯವೂ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು. ಸ್ವಚ್ಛಂಧತೆಗೆ ತಿರುಗದ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾತಂತ್ರ ವ್ಯವಸ್ಥೆಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಮುಂದೆಯೂ ವಹಿಸಲಿದೆ.
ಈಚೆಗೆ ಸುಪ್ರೀಂಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಒಂದು ಐತಿಹಾಸಿಕ ತೀರ್ಪನ್ನು ನೀಡಿರುವುದನ್ನು ಪ್ರಜ್ಞಾವಂತರೆಲ್ಲರೂ ಸ್ವಾಗತಿಸಿದ್ದಾರೆ. ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ಯುಪಿಎ ಸರ್ಕಾರ ೨೦೦೮ರಲ್ಲಿ ತಿದ್ದುಪಡಿ ತಂದು 66ಎ ಸೆಕ್ಷನ್ ಸೇರಿಸಿಬಿಟ್ಟಿತ್ತು. ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ತಿದ್ದುಪಡಿಯನ್ನು ವಿರೋಧಿಸಿದ್ದರು. ಯಾವುದೇ ಸಂವಹನ ಸಾಧನದ ಮೂಲಕ ಅವಹೇಳನಕಾರಿ ಸಂದೇಶ ಪ್ರಸಾರ ಮಾಡಿದವರಿಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ೬೬ಎ ಸೆಕ್ಷನ್ನಲ್ಲಿತ್ತು. ಹಾಗಾಗಿ ಈ ಸೆಕ್ಷನ್ ದುರ್ಬಳಕೆಯಾಗುವ ಅವಕಾಶ ಹೇರಳವಾಗಿತ್ತು. ಇದೇ ಹಿನ್ನೆಲೆಯಲ್ಲಿ ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೊಂದು ಹಿನ್ನೆಲೆಯೂ ಇತ್ತು. ೨೦೧೨ರಲ್ಲಿ ಮುಂಬೈನಲ್ಲಿ ಈ ಕಾನೂನಿನ್ವಯ ಇಬ್ಬರು ಯುವತಿಯರ ಬಂಧನವಾದಾಗ ಅದು ಎಷ್ಟೊಂದು ಕರಾಳವಾದುದು ಎಂಬುದು ಸಾರ್ವಜನಿಕರ ಅರಿವಿಗೆ ಬಂದಿತ್ತು. ಶಿವಸೇನಾ ವರಿಷ್ಠ ಬಾಳಾ ಠಾಕ್ರೆ ನಿಧನರಾದ ಸಂದರ್ಭದಲ್ಲಿ ಮುಂಬೈ ನಗರವನ್ನು ಏಕೆ ಬಂದ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದ ಫೇಸ್ಬುಕ್ ಸಂದೇಶದಲ್ಲಿ ಪ್ರಶ್ನಿಸಿದ್ದು ಮತ್ತು ಆ ಪೋಸ್ಟ್ಗೆ ಲೈಕ್ ಒತ್ತಿದ್ದಕ್ಕಾಗಿ ಇಬ್ಬರು ಯುವತಿಯರ ಬಂಧನವಾಗಿತ್ತು. ಇಂತಹದೇ ಇನ್ನಷ್ಟು ಘಟನೆಗಳೂ ಜರುಗಿದ್ದವು. ರಾಜಕೀಯ ನೇತಾರರಾದ ಮಮತಾ ಬ್ಯಾರ್ನಜಿ, ಪಿ. ಚಿದಂಬರಂ ಪುತ್ರ ಕಾರ್ತಿ ಹಾಗೂ ಉ.ಪ್ರ. ಸಚಿವ ಅಜಂಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾದಾಗ ಟೀಕಿಸಿದವರ ವಿರುದ್ಧ ಬಂಧನದಂತಹ ತೀವ್ರ ಕ್ರಮಗಳಿಗೆ ಇದು ಕಾರಣವಾಗಿತ್ತು. ಸೈಬರ್ ಅಪರಾಧದ ನಿಯಂತ್ರಣದ ಸೋಗಿನಲ್ಲಿ ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಈ ಸೆಕ್ಷನ್ ೬೬ಎ ಅವಕಾಶ ಕಲ್ಪಿಸಿತ್ತು ಎನ್ನುವುದು ವಾಸ್ತವ. ಈಗ ಈ ಸೆಕ್ಷನ್ನ್ನು ಕಿತ್ತುಹಾಕಿರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಂತಾಗಿದೆ.
ಸಾಮಾಜಿಕ, ರಾಜಕೀಯ, ಧಾರ್ಮಿಕ ಅಥವಾ ಇನ್ಯಾವುದೇ ಕ್ಷೇತ್ರದ ನಾಯಕರು ಅಥವಾ ವಿದ್ಯಮಾನಗಳ ಕುರಿತು ಟೀಕಿಸಬಾರದು ಎಂಬ ಸಂಗತಿಯೇ ಅಸ್ವಾಭಾವಿಕ ಹಾಗೂ ಸಂವಿಧಾನವಿರೋಧಿ. ಆರೋಗ್ಯಕರ ಟೀಕೆಗಳಿಗೆ ನಮ್ಮ ಪ್ರಾಚೀನ ಪರಂಪರೆ ಹಿಂದಿನಿಂದಲೂ ಉತ್ತೇಜನ ನೀಡುತ್ತಲೇ ಬಂದಿದೆ. ಅದನ್ನೆಂದೂ ಅದು ಹತ್ತಿಕ್ಕಿಲ್ಲ. ‘ನಿಂದಕರಿರಬೇಕಯ್ಯ…’ ಎಂದು ಪುರಂದರದಾಸರು ಹಾಡಿರುವುದು ಇದೇ ಹಿನ್ನೆಲೆಯಲ್ಲಿ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ವಿರುದ್ಧವೂ ನಿಂದನೆಯ ಮಾತುಗಳು ಕೇಳಿಬಂದಾಗ ಅದಕ್ಕೆ ಪ್ರತಿರೋಧ ತೋರದೆ, ಶ್ರೀರಾಮ ಆ ನಿಂದನೆಯನ್ನು ಹೇಗೆ ಕಳೆದುಕೊಳ್ಳಬಹುದು ಎಂದು ಯೋಚಿಸಿ ಕಾರ್ಯಮಗ್ನನಾದ. ಟೀಕೆ, ನಿಂದನೆಗಳು ಬೌದ್ಧಿಕ ಜಗತ್ತಿನ ಕಟ್ಟಡದ ಕಾಂಕ್ರಿಟ್ನಂತೆ ಕಾರ್ಯನಿರ್ವಹಿಸಿರುವುದು ಪ್ರಾಚೀನ ಇತಿಹಾಸದಿಂದ ಸ್ಪಷ್ಟ.
ತೊಗಾಡಿಯಾಗೆ ನಿಷೇಧ
ಆದರೆ ಕಾಲ ಸರಿದಂತೆ ಟೀಕೆ, ನಿಂದನೆಗಳನ್ನು ಹತ್ತಿಕ್ಕುವ ಪ್ರಕ್ರಿಯೆ ಶುರುವಾದುದ್ದು ಒಂದು ದುರದೃಷ್ಟಕರ ಬೆಳವಣಿಗೆ. ತನ್ನನ್ನು ಎಲ್ಲರೂ ಸದಾಕಾಲ ಹೊಗಳುತ್ತಲೇ ಇರಬೇಕು, ಯಾರೂ ಟೀಕಿಸಕೂಡದು ಎಂಬ ಧೋರಣೆ ಸಾಮಾಜಿಕ, ರಾಜಕೀಯ, ಧಾರ್ಮಿಕ ರಂಗಗಳ ನಾಯಕರಲ್ಲಿ ಬೆಳೆದುಬಂದಿದ್ದಕ್ಕೆ ನಿದರ್ಶನಗಳು ಹಲವಾರು. ಈಗಲೂ ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಇತ್ತೀಚಿನ ನಿದರ್ಶನಗಳನ್ನೇ ತೆಗೆದುಕೊಳ್ಳೋಣ. ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾ ಅವರ ಬೆಂಗಳೂರು, ಮೈಸೂರು, ಉಡುಪಿ ಭಾಷಣಗಳ ಮೇಲೆ ರಾಜ್ಯ ಸರ್ಕಾರ ನಿರ್ಬಂಧ ಹೇರಿ, ಅವರು ಆ ಸಭೆಗಳಲ್ಲಿ ಮಾತನಾಡದಂತೆ ಆದೇಶಿಸಿತು. ತೊಗಾಡಿಯಾ, ವಿಹಿಂಪ ಸ್ವರ್ಣ ಜಯಂತಿ ಅಂಗವಾಗಿ ನಡೆದ ಆ ಸಭೆಗಳಿಗೆ ಬಂದು ಭಾಷಣ ಮಾಡಿದರೆ ಸಾರ್ವಜನಿಕ ನೆಮ್ಮದಿಗೆ ಭಂಗ ಬರುತ್ತದೆ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ರಾಜ್ಯ ಸರ್ಕಾರದ ವಾದ. ಆದರೆ ಇದೇ ತೊಗಾಡಿಯಾ ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ನಡೆದ ಇಂತಹದೇ ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದಾಗ ಸಾರ್ವಜನಿಕ ನೆಮ್ಮದಿಗೆ ಯಾವುದೇ ರೀತಿಯಲ್ಲೂ ಭಂಗ ಉಂಟಾಗಲಿಲ್ಲ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯೊದಗಲಿಲ್ಲ. ತೊಗಾಡಿಯಾ ಭಾಷಣ ಮಾಡಿದರೆ ಕರ್ನಾಟಕದಲ್ಲಿ ಮಾತ್ರ ಸಾರ್ವಜನಿಕ ನೆಮ್ಮದಿಗೆ ಭಂಗ ಬರುತ್ತದೆಂಬ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವೇ ಅದೆಷ್ಟು ಹಾಸ್ಯಾಸ್ಪದ! ರಾಜ್ಯದಲ್ಲಿ ಹಿಂದು ಸಮಾಜೋತ್ಸವದ ಹಿನ್ನೆಲೆಯಲ್ಲಿ ಹಿಂದುಗಳು ಭಾರೀ ಸಂಖ್ಯೆಯಲ್ಲಿ ಒಗ್ಗೂಡುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪ ಎನಿಸಿತ್ತು. ತೊಗಾಡಿಯಾ ಅವರು ಬರದಂತೆ ನಿಷೇಧ ಹೇರಿದರೆ ಹಿಂದು ಸಮಾಜೋತ್ಸವ ವಿಫಲವಾಗಬಹುದೆಂಬುದು ಕಾಂಗ್ರೆಸ್ ನಾಯಕರ, ಅದರಲ್ಲೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಚಿಂತನೆ. ಆದರೆ ಅದz ಬೇರೆ. ತೊಗಾಡಿಯಾ ಬರದಿದ್ದರೂ ಎಲ್ಲೆಡೆ ಹಿಂದು ಸಮಾಜೋತ್ಸವ ಭರ್ಜರಿಯಾಗಿ ನಡೆಯಿತು. ತೊಗಾಡಿಯಾ ಬದಲಿಗೆ, ಮಂಗಳೂರಿನಲ್ಲಿ ಸಾಧ್ವಿ ಬಾಲಿಕಾ ಸರಸ್ವತಿ, ಬೆಂಗಳೂರಿನಲ್ಲಿ ಗೋಪಾಲ್ಜೀ ಮೊದಲಾದವರು ತೊಗಾಡಿಯಾ ಅವರಿಗಿಂತಲೂ ಪ್ರಖರವಾಗಿ ಭಾಷಣ ಮಾಡಿದರು. ಒಟ್ಟಾರೆ ಹಿಂದು ಸಮಾಜೋತ್ಸವ ನಿರೀಕ್ಷೆಗಿಂತಲೂ ಚೆನ್ನಾಗಿಯೇ ನೆರವೇರಿತು.
ತೊಗಾಡಿಯಾ ಅವರ ವಿರುದ್ಧ ನಿಷೇಧ ಹೇರಲು ರಾಜ್ಯ ಸರ್ಕಾರಕ್ಕೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ಗಟ್ಟಿಯಾದ ಕಾರಣಗಳಾಗಲಿ ಇರಲಿಲ್ಲ. ತೊಗಾಡಿಯಾ ವಿರುದ್ಧ ಹಲವಾರು ಕೇಸುಗಳಿವೆ ಎಂಬುದೊಂದೇ ಅವರ ವಿರುದ್ಧ ಸರ್ಕಾರದ ಆರೋಪ. ತೊಗಾಡಿಯಾ ವಿರುದ್ಧ ಕೇಸುಗಳಿದ್ದ ಮಾತ್ರಕ್ಕೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಕೊಟ್ಟವರ್ಯಾರು? ತೊಗಾಡಿಯಾ ವಿರುದ್ಧ ಕೇಸುಗಳಿರಬಹುದು. ಆದರೆ ಆ ಕೇಸುಗಳ ವಿಚಾರಣೆ ನಡೆದು, ಅವರು ಅಪರಾಧಿಯೆಂದು ಸಾಬೀತಾಗಿಲ್ಲವಲ್ಲ. ಹಲವು ರಾಜಕಾರಣಿಗಳ ವಿರುದ್ಧವೂ ಒಂದಲ್ಲ ಹಲವು ಕೇಸುಗಳು ದಾಖಲಾಗುತ್ತಲೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ತಪ್ಪಿತಸ್ಥರು, ಸಮಾಜದ್ರೋಹಿಗಳು ಎಂದೇನೂ ಅಲ್ಲವಲ್ಲ. ಪತ್ರಿಕಾ ಸಂಪಾದಕರ ವಿರುದ್ಧವೂ ಅನೇಕರು ಕೇಸು ಹಾಕುತ್ತಲೇ ಇರುತ್ತಾರೆ. ತಮ್ಮ ವಿರುದ್ಧ ಸುದ್ದಿ ಪ್ರಕಟವಾದರೆ, ತಮಗೆ ಮಾನಹಾನಿ ಆಗಿದೆಯೆಂದು ಹಲವರು ಸಂಪಾದಕರ ವಿರುದ್ಧ ಮೊಕದ್ದಮೆ ಹೂಡುವುದುಂಟು. ಹೊಸದಿಗಂತದ ಸಂಪಾದಕನಾಗಿದ್ದಾಗ ನನ್ನ ವಿರುದ್ಧವೂ ೧೫ಕ್ಕಿಂತ ಹೆಚ್ಚು ಕೇಸುಗಳಿದ್ದವು. ಈಗಲೂ ನಾಲ್ಕೈದು ಕೇಸುಗಳು ವಿಚಾರಣೆಯ ಹಂತದಲ್ಲಿವೆ. ಆಗಾಗ ಕೋರ್ಟಿಗೆ ಹೋಗುತ್ತಲೇ ಇರುತ್ತೇನೆ. ಕೆಲವು ಕೇಸುಗಳು ವಜಾ ಆಗಿವೆ. ಉಳಿದ ಕೇಸುಗಳ ತೀರ್ಪು ಇನ್ನಷ್ಟೇ ಬರಬೇಕಾಗಿದೆ. ಕೋರ್ಟಿಗೆ ಹೋದ ಮಾತ್ರಕ್ಕೆ ನಾನೊಬ್ಬ ಅಪರಾಧಿ ಎಂದು ಯಾರಾದರೂ ಹೇಳಲು ಸಾಧ್ಯವೆ? ತೊಗಾಡಿಯಾ ಅವರು ಭಾಷಣ ಮಾಡದಂತೆ ಕರ್ನಾಟಕದಲ್ಲಿ ನಿಷೇಧ ಹೇರಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಪ್ಪಟ ಹರಣ. ಇದರ ವಿರುದ್ಧ ಯಾವೊಬ್ಬ ಬುದ್ಧಿಜೀವಿಯೂ ಚಕಾರವೆತ್ತಲಿಲ್ಲ ಎನ್ನುವುದು ಸೋಜಿಗ! ಎಡಪಂಥೀಯ ನಾಯಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದರೆ ಆಕಾಶ – ಭೂಮಿ ಒಂದಾಗುವಂತೆ ಇದೇ ಬುದ್ಧಿಜೀವಿಗಳು ಬೊಬ್ಬೆ ಹೊಡೆಯುತ್ತಿದ್ದರು.
ಚಿಮೂಗೆ ಅವಮಾನ
ತೀರಾ ಈಚೆಗೆ ನಡೆದ ಇನ್ನೊಂದು ಪ್ರಸಂಗ. ಮಾ. ೨೫ರಂದು ವಿಧಾನಸೌಧದಲ್ಲಿ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿತ್ತು. ದೇವರ ದಾಸಿಮಯ್ಯ ಜಯಂತಿ ಆಚರಣೆ ಸರಿಯಲ್ಲ. ಬದಲಿಗೆ ಜೇಡರ ದಾಸಿಮಯ್ಯ ಜಯಂತಿ ಆಚರಿಸಬೇಕು ಎಂದು ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಸೇರಿದಂತೆ ನಾಲ್ಕೈದು ಮಂದಿ ಅದೇ ಸಭಾಂಗಣದಲ್ಲಿ ಶಾಂತವಾಗಿ ಪ್ರತಿಭಟಿಸಿದರು. ಅಷ್ಟಕ್ಕೇ ಅವರನ್ನು ಸರ್ಕಾರದ ಕೆಲವು ಭಟ್ಟಂಗಿಗಳು ತಳ್ಳಾಡಿದರು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ, ವಯೋವೃದ್ಧ ಹಾಗೂ ಜ್ಞಾನವೃದ್ಧ ಚಿಮೂ ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ, ಅನಂತರ ಬಿಟ್ಟರು.
ಚಿಮೂ ಅವರೇನೂ ದಿಢೀರನೆ ಈ ಪ್ರತಿಭಟನೆ ನಡೆಸಿರಲಿಲ್ಲ. ಕೆಲವು ದಿನಗಳ ಹಿಂದೆಯೇ ಸಂಸ್ಕೃತಿ ಸಚಿವೆ ಉಮಾಶ್ರೀ ಅವರನ್ನು ಭೇಟಿ ಮಾಡಿ, `ದೇವರ ದಾಸಿಮಯ್ಯ ವಚನಕಾರನಲ್ಲ. ಆತ ಒಬ್ಬ ಶಿವಭಕ್ತ, ಅಷ್ಟೇ. ಆದರೆ ಜೇಡರ ದಾಸಿಮಯ್ಯ ವಚನಕಾರರಾಗಿದ್ದು `ರಾಮನಾಥ’ ಅಂಕಿತದಿಂದ ಸಾಕಷ್ಟು ವಚನಗಳನ್ನು ರಚಿಸಿದ್ದಾರೆ. ಇದರ ಬಗ್ಗೆ ಬೆಳಕು ಚೆಲ್ಲುವ ಸಾಕಷ್ಟು ದಾಖಲೆಗಳಿವೆ. ದೇವರ ದಾಸಿಮಯ್ಯ ೧೧ನೇ ಶತಮಾನದ ವ್ಯಕ್ತಿಯಾದರೆ, ಜೇಡರ ದಾಸಿಮಯ್ಯ ೧೨ನೇ ಶತಮಾನದ ವ್ಯಕ್ತಿ…’ ಇತ್ಯಾದಿ ಸಾಕಷ್ಟು ಸಾಕ್ಷ್ಯಾಧಾರಿತ ದಾಖಲೆಗಳನ್ನು ನೀಡಿ, ಸರ್ಕಾರ ಕಾರ್ಯಕ್ರಮ ನಡೆಸುವುದೇ ಆದರೆ, ಜೇಡರ ದಾಸಿಮಯ್ಯನ ಜಯಂತಿ ಆಚರಿಸಬೇಕು. ವಚನಕಾರರಲ್ಲದ ದೇವರ ದಾಸಿಮಯ್ಯನಿಗೆ ವಚನಕಾರ ಪಟ್ಟ ಕಟ್ಟುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ಕೊಡಕೂಡದು ಎಂದು ವಿನಂತಿಸಿಕೊಂಡಿದ್ದರು. ದೇವರ ದಾಸಿಮಯ್ಯ ಜಯಂತಿ ಆಚರಣೆಗೆ ತಮ್ಮದೇನೂ ವಿರೋಧವಿಲ್ಲ . ಆದರೆ ದೇವರ ದಾಸಿಮಯ್ಯನಿಗೆ ವಚನಕಾರ ಪಟ್ಟ ಕಟ್ಟುವುದು ಸರಿಯಲ್ಲ ಎಂಬುದು ಸಂಶೋಧಕ ಚಿಮೂ ಅವರ ನಿಲುವು.
ಇಷ್ಟಾದರೂ ಸರ್ಕಾರ ಮಾತ್ರ ಸಂಶೋಧಕರ ಮಾತು ಕೇಳದೇ ತನ್ನ ಹಠ ಮುಂದುವರೆಸಿ ಕಾರ್ಯಕ್ರಮ ನಡೆಸಿತು. ಅಷ್ಟೇ ಅಲ್ಲ, ಶಾಂತ ರೀತಿಯಿಂದ ಇದನ್ನು ಪ್ರತಿಭಟಿಸಿದ ಇಳಿವಯಸ್ಸಿನ ಚಿಮೂ ಅವರನ್ನು ಬಂಧಿಸಿ ಅವಮಾನವೆಸಗಿತು. ಸೋಜಿಗವೆಂದರೆ ಅದೇ ವೇದಿಕೆಯಲ್ಲಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಈ ಬಗ್ಗೆ ಒಂದೂ ಮಾತು ಆಡದೆ ಮೌನವಾಗಿದ್ದರು. ಚಿದಾನಂದ ಮೂರ್ತಿ ಅವರು ಹೇಳುತ್ತಿರುವುದು ಸರ್ಕಾರಕ್ಕೆ ಒಪ್ಪಿಗೆಯಾಗದಿರಬಹುದು, ಆದರೆ ಹಿರಿಯ ಸಂಶೋಧಕರಾದ ಅವರನ್ನು ಹೀಗೆ ಬಂಧಿಸಿ, ಅಗೌರವದಿಂದ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಕಂಬಾರರು ಹೇಳಲೇ ಇಲ್ಲ. ಒಬ್ಬ ಹಿರಿಯ ಸಾಹಿತಿಗೆ ಸರ್ಕಾರ ಮಾಡುತ್ತಿರುವ ಅಪಮಾನವನ್ನು ಕಂಡು ಅವರ ಎದೆಯಲ್ಲಿ ಆಕ್ರೋಶ ಹೊಮ್ಮಲೇ ಇಲ್ಲ! ಎಷ್ಟಾದರೂ ಅವರು ಸರ್ಕಾರಿ ಕೃಪಾಪೋಷಿತ ಸಾಹಿತಿಯಲ್ಲವೆ?
ಚಿಮೂ ಅವರು ಕಾರ್ಯಕ್ರಮದಲ್ಲಿ ಗದ್ದಲ ಎಬ್ಬಿಸಿರಲಿಲ್ಲ. ಕಪ್ಪು ಬಾವುಟ ಪ್ರದರ್ಶಿಸಿರಲಿಲ್ಲ. ಯಾರ ಭಾಷಣಕ್ಕೂ ಅಡ್ಡಿಪಡಿಸಿರಲಿಲ್ಲ. ಸರ್ಕಾರದ ಈ ಕಾರ್ಯಕ್ರಮ ಸರಿಯಲ್ಲ ಎಂದು ಸಾತ್ವಿಕ ಪ್ರತಿಭಟನೆ ಮಾತ್ರ ನಡೆಸಿದ್ದರು. ಅಷ್ಟಕ್ಕೇ ಅವರನ್ನು ಒರಟಾಗಿ ಬಂಧಿಸಿ, ಠಾಣೆಯಲ್ಲಿ ಕೂರಿಸುವ ಅಗತ್ಯವಾದರೂ ಏನಿತ್ತು? ನಾಡಿನ ಸಾಕ್ಷಿ ಪ್ರಜ್ಞೆಯೆಂದೇ ಗುರುತಿಸಲಾಗಿರುವ ಚಿಮೂ ಅವರನ್ನು ಈ ಪರಿಯಾಗಿ ಅಗೌರವಿಸುವ ಮೂಲಕ ರಾಜ್ಯ ಸರ್ಕಾರ ಸಾಕ್ಷಿ ಪ್ರಜ್ಞೆಯನ್ನು ಹೊಸಗಿಹಾಕಲು ಯತ್ನಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕೊಡಲಿ ಏಟು ಹಾಕಿದೆ.
ಚಿಮೂ ಅವರ ಜಾಗದಲ್ಲಿ ಪ್ರೊ. ಎಂ.ಎಂ. ಕಲಬುರ್ಗಿ ಅಥವಾ ಗಿರೀಶ್ಕಾರ್ನಾಡ್ ಇದ್ದಿದ್ದರೆ ಆಗಲೂ ಸರ್ಕಾರ ಹೀಗೆಯೇ ನಡೆದುಕೊಳ್ಳುತ್ತಿತ್ತಾ? ತನ್ನ ಮೂಗಿನ ನೇರಕ್ಕೆ ನಡೆಯದವನನ್ನು ಹತ್ತಿಕ್ಕಲೇ ಬೇಕು ಎಂಬ ಸರ್ವಾಧಿಕಾರಿ ಧೋರಣೆ ಮಾತ್ರ ಬಯಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಳರಸರು ಅಂಕುಶ ಹಾಕುತ್ತಲೇ ಇರುತ್ತಾರೆ ಎನ್ನುವುದಕ್ಕೆ ಇದು ಇತ್ತೀಚಿನ ಒಂದು ಸ್ಯಾಂಪಲ್!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.