ನಮ್ಮ ನಂಬಿಕೆಗಳೇ ತಲೆಕೆಳಗಾದರೆ, ನಾವು ನಂಬಿದವರೇ ನಮಗೆ ಕೈಕೊಟ್ಟರೆ ಏನಾಗಬಹುದು? ಈಗ ಆಗಿರುವುದು ಅದೇ.
ಈಚೆಗೆ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೆಕರ್ ಒಂದು ಹೇಳಿಕೆ ನೀಡಿದ್ದರು: `ಗೋವಾದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೊಳಿಸುವುದಿಲ್ಲ. ಏಕೆಂದರೆ ಈ ರಾಜ್ಯದಲ್ಲಿ ಶೇ. 40 ಮಂದಿಯ ಆಹಾರ ಗೋಮಾಂಸ. ಶೇ. 40 ರಷ್ಟು ಮಂದಿ ಪ್ರತಿನಿತ್ಯ ಗೋಮಾಂಸ ಬಳಸುತ್ತಿರುವುದರಿಂದ ಅವರ ಆಹಾರದ ಹಕ್ಕನ್ನು ನಾನು ಹೇಗೆ ಕಸಿದುಕೊಳ್ಳಲಿ?’
ಗೋವಾ ಮುಖ್ಯಮಂತ್ರಿಯ ಈ ಮಾತನ್ನು ಒಪ್ಪೋಣ. ಆ ರಾಜ್ಯದಲ್ಲಿ ಶೇ. 40 ಮಂದಿ ಗೋಮಾಂಸ ತಿನ್ನುತ್ತಿರಬಹುದು. ಏಕೆಂದರೆ ಪೋರ್ಚುಗೀಸರ ದಾಳಿಗೆ ಒಳಗಾದ ಬಳಿಕ ಗೋವಾದಲ್ಲಿ ಸಾಕಷ್ಟು ಬಲವಂತದ ಮತಾಂತರ ನಡೆದು ಅಲ್ಲಿ ಹಿಂದುಗಳ ಸಂಖ್ಯೆ ಕ್ಷೀಣಿಸಿದ್ದು ಇತಿಹಾಸ. ಪೋರ್ಚುಗೀಸರ ದಾಳಿಗೂ ಮೊದಲು ಗೋವಾದಲ್ಲಿ ಗೋಮಾಂಸ ತಿನ್ನುವವರ ಸಂಖ್ಯೆ ತೀರಾ ಬೆರಳೆಣಿಕೆಯಷ್ಟಿತ್ತು. ಈಗ ಹೆಚ್ಚಾಗಿದೆ ಎಂಬುದು ಗೋವಾ ಮುಖ್ಯಮಂತ್ರಿಯ ಹೇಳಿಕೆಯಿಂದ ಸ್ಪಷ್ಟವಾಗಿದೆ. ಅವರ ಈ ಹೇಳಿಕೆ ಎಷ್ಟರಮಟ್ಟಿಗೆ ನಿಜ ಎಂಬುದನ್ನು ಪ್ರತ್ಯಕ್ಷ ಪರಿಶೀಲಿಸಿಯೇ ನೋಡಬೇಕಷ್ಟೆ.
ಅದು ಹೇಗಾದರೂ ಇರಲಿ, ಆದರೆ ಅವರ ಈ ಹೇಳಿಕೆಯಲ್ಲಿ ಇನ್ನೊಂದು ಸತ್ಯ ಅಡಗಿದೆ ಎಂಬುದನ್ನು ಮರೆತರೆ ಹೇಗೆ? ಶೇ. 40 ಮಂದಿ ಗೋವಾದಲ್ಲಿ ಗೋಮಾಂಸ ತಿನ್ನುತ್ತಾರೆಂಬುದನ್ನು ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ ಉಳಿದ ಶೇ. 60 ಮಂದಿ ಗೋಮಾಂಸ ತಿನ್ನುವುದಿಲ್ಲ ಎಂಬ ಅಂಶ ಸತ್ಯದ ಇನ್ನೊಂದು ಮುಖವಲ್ಲವೆ? ಮುಖ್ಯಮಂತ್ರಿ ಪಾರ್ಸೆಕರ್ ಹೇಳಿಕೆ ನೀಡುವಾಗ ಇದನ್ನೇಕೆ ಮರೆತಿದ್ದಾರೆ? ಅಥವಾ ಇದು ಜಾಣ ಮರೆವೆ? ಶೇ. 40 ಮಂದಿಗಿಂತ ಶೇ. 60 ಮಂದಿ ಬಹುಸಂಖ್ಯಾತರಲ್ಲವೆ? ಹಾಗಿರುವಾಗ ಶೇ. 60 ಮಂದಿಯ ಗೋವಿನ ಬಗೆಗಿರುವ ಗೌರವ, ಪೂಜನೀಯ ಭಾವನೆ, ಶ್ರದ್ಧೆಗಳನ್ನು ರಕ್ಷಿಸುವ ಗುರುತರ ಹೊಣೆಗಾರಿಕೆ ಈ ಮುಖ್ಯಮಂತ್ರಿಗೆ ಇದೆಯಲ್ಲವೆ?
ಮುಖ್ಯಮಂತ್ರಿ ಪಾರ್ಸೆಕರ್ ಅವರ ಈ ಹೇಳಿಕೆಯ ಹಿಂದೆ ಅಲ್ಪಸಂಖ್ಯಾತರನ್ನು ಓಲೈಸುವ ಹಿಡನ್ ಅಜೆಂಡಾ ಇದೆ ಎಂಬುದು ಯಾರಿಗಾದರೂ ಗೊತ್ತಾಗುವ ಸಂಗತಿ. ಗೋವಾದಲ್ಲಿ ಬಿಜೆಪಿಗೆ 1994 ರಲ್ಲಿ ಒಟ್ಟು 40 ಶಾಸಕರ ವಿಧಾನಸಭೆಯಲ್ಲಿ ಇದ್ದಿದ್ದು ಕೇವಲ 4 ಸ್ಥಾನ. ಇದೀಗ ಅದು 22 ಸ್ಥಾನಗಳಿಗೆ ಏರಿಕೆಯಾಗಿರುವುದು ಅಲ್ಲಿನ ಅಲ್ಪಸಂಖ್ಯಾತ ಕ್ರೈಸ್ತ ಮತದಾರ ಬಂಧುಗಳ ಕೃಪೆಯಿಂದಾಗಿ! ಈ ಬಾರಿ ಬಿಜೆಪಿಗೆ ಆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿರುವುದೂ ಕ್ರೈಸ್ತರು ಬಿಜೆಪಿಯತ್ತ ಒಲಿದಿದ್ದರಿಂದಾಗಿ.
ಆದರೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾದ ರಾಷ್ಟ್ರಮಟ್ಟದ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳೇ ಬೇರೆ. `Cow and its Progeny: In view of the contribution of cow and its progeny to agriculture, socio-economic and cultural life of our country, the Department of Animal Husbandry will be suitably strengthened and empowered for the protection and promotion of cow and its progeny. Necessary legal framework will be created to protect and promote cow and its progeny.’ ಇಡೀ ಪ್ರಣಾಳಿಕೆಯಲ್ಲಿ ಸರ್ಚ್ಲೈಟ್ ಹಾಕಿ ಹುಡುಕಿದರೂ ಗೋಮಾಂಸ ಅಧಿಕವಾಗಿ ಬಳಸುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತರುವುದಿಲ್ಲ ಎಂಬ ಅಂಶ ಎಲ್ಲೂ ಕಂಡು ಬರುತ್ತಿಲ್ಲ. ಅಲ್ಲದೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ದೇಶದಲ್ಲಿ ಗೋಸಂರಕ್ಷಣೆಯ ಕುರಿತು ತಮ್ಮ ಪ್ರತಿಯೊಂದು ಭಾಷಣದಲ್ಲೂ ಸಮರ್ಥಿಸಿಕೊಂಡಿದ್ದರು. 2013 ನ. 23 ರಂದು ಖಾಂಡ್ವಾದಲ್ಲಿ ಮೋದಿ ಮಾಡಿದ ಚುನಾವಣಾ ಪ್ರಚಾರ ಭಾಷಣ ಗಮನಿಸಿ: `ಲಾಲ್ ಬಹುದ್ದೂರ್ ಶಾಸ್ತ್ರಿ ಹಸಿರು ಕ್ರಾಂತಿಯ ಕುರಿತು ಮಾತನಾಡಿದ್ದಾರೆ. ಯುಪಿಎ ಸರ್ಕಾರ ಗೋಮಾಂಸ ರಫ್ತು ಪ್ರಾಯೋಜಿಸುವ ಮೂಲಕ ಗುಲಾಬಿ ಕ್ರಾಂತಿ (Pink revolution)ಯನ್ನು ಪ್ರೋತ್ಸಾಹಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಕಸಾಯಿಖಾನೆಗಳಿಗೆ ಸಬ್ಸಿಡಿ ನೀಡಿ ದನಗಳು ಹಾಗೂ ಪ್ರಾಣಿಗಳನ್ನು ಅಪಾರ ಪ್ರಮಾಣದಲ್ಲಿ ಹತ್ಯೆ ಮಾಡುತ್ತಿದೆ. ಆದರೆ ನಾವು (ಬಿಜೆಪಿ) ಗೋವಂಶದ ರಕ್ಷಣೆಗಾಗಿ ಅತ್ಯಗತ್ಯ ಕಾನೂನು ಕ್ರಮಕೈಗೊಳ್ಳುತ್ತೇವೆ.’ ಕೃಷಿಗೆ ಶಾಪವಾಗಿ ಪರಿಣಮಿಸಿರುವ ಗೋಹತ್ಯೆಯನ್ನು ನಿಷೇಧಿಸಿ ಗೋವುಗಳನ್ನು ರಕ್ಷಿಸಲಾಗುವುದೆಂದು ಅದೇ ಸಂದರ್ಭದ ಹಲವಾರು ಭಾಷಣಗಳಲ್ಲಿ ಮೋದಿ ಘೋಷಿಸಿದ್ದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಕಳೆದ ಮಾರ್ಚ್ ಮೊದಲ ವಾರ ಗೋಮಾಂಸ ಮಾರಾಟ ಮಾಡುವವರಿಗೆ 5 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸುವ ಮಸೂದೆಯನ್ನು ಜಾರಿಗೆ ತಂದಿದ್ದರು. ಬಿಜೆಪಿ ಆಡಳಿತವಿರುವ ಇನ್ನೊಂದು ರಾಜ್ಯ ಹರಿಯಾಣದಲ್ಲೂ ಗೋಮಾಂಸ ಮಾರಾಟಗಾರರಿಗೆ 3-5 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಆದೇಶ ಜಾರಿಗೊಳಿಸಲಾಗಿತ್ತು. ಈ ವಿದ್ಯಮಾನಗಳು ಗೋವಿನ ಬಗ್ಗೆ ಅಪಾರ ಶ್ರದ್ಧೆ ಇಟ್ಟುಕೊಂಡಿರುವವರಿಗೆ ಸಂತಸ ತಂದಿತ್ತು. ಇನ್ನಾದರೂ ಗೋವಂಶದ ರಕ್ಷಣೆ ಸಾಧ್ಯವಾಗಬಹುದೆಂದು ಕನಸು ಕಂಡಿದ್ದರು.
ಆದರೀಗ ಗೋವಾ ಬಿಜೆಪಿ ಮುಖ್ಯಮಂತ್ರಿ ಪಾರ್ಸೆಕರ್ ಗೋಹತ್ಯೆ ನಿಷೇಧ ಜಾರಿಗೊಳಿಸಲಾರೆ ಎಂದಿದ್ದಾರೆ. ಇವರಿಗಿಂತ ಮೊದಲು ಮುಖ್ಯಮಂತ್ರಿಯಾಗಿದ್ದ, ಈಗ ಕೇಂದ್ರ ರಕ್ಷಣಾ ಸಚಿವರಾಗಿರುವ ಮನೋಹರ ಪಾರಿಕ್ಕರ್ ಕೂಡ ಗೋವಾದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸಾಧ್ಯವಿಲ್ಲ ಎಂದಿದ್ದರು. ಇವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪಡ್ನವೀಸ್ ಕೂಡ ಈಚೆಗೆ ಗೋಮಾಂಸ ಮಾರಾಟಗಾರರನ್ನು ರಕ್ಷಿಸುವುದಾಗಿ, ಅವರಿಗೆ ತೊಂದರೆ ಕೊಡುತ್ತಿರುವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಮ್ಮ ರಾಗ ಬದಲಿಸಿದ್ದಾರೆ.
ಇವೆಲ್ಲ ಸಾಲದೆಂಬಂತೆ, ಉರಿಯುವ ಗಾಯದ ಮೇಲೆ ಉಪ್ಪು ಸವರಿದಂತೆ, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ಷಾ ಕೂಡ `ದೇಶಾದ್ಯಂತ ನಾವು ಗೋಹತ್ಯೆ ನಿಷೇಧಿಸುತ್ತೇವೆಂದು ಎಲ್ಲಿಯೂ ಹೇಳಿಲ್ಲ. ಗೋಹತ್ಯೆ ನಿಷೇಧದ ಕುರಿತು ಆಯಾ ರಾಜ್ಯಗಳೇ ಸೂಕ್ತ ನಿರ್ಧಾರ ಕೈಗೊಳ್ಳಲಿವೆ’ ಎಂಬ ಹೇಳಿಕೆ ನೀಡಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಕ್ಕೆ ತದ್ವಿರುದ್ಧ ನಡೆ ತೋರಿದ್ದಾರೆ. ಕೇಂದ್ರದ ಸಚಿವ ನಖ್ವಿ `ಗೋಮಾಂಸ ತಿನ್ನುವವರು ಪಾಕಿಸ್ಥಾನಕ್ಕೆ ಹೋಗಲಿ’ ಎಂದು ಅಬ್ಬರಿಸಿದ್ದರೂ ಇನ್ನೊಬ್ಬ ಸಚಿವ ಕಿರಣ್ ರಿಜಿಜು `ನಾನು ಗೋಮಾಂಸ ತಿನ್ನುತ್ತೇನೆ. ನನ್ನನ್ನು ಯಾರು ತಡೆಯುತ್ತಾರೆ ನೋಡೋಣ’ ಎಂದು ಸವಾಲು ಹಾಕಿರುವುದು ಗೋಹತ್ಯೆ ನಿಷೇಧ ಕಾಯ್ದೆಗೆ ತಣ್ಣೀರೆರೆಚಿದಂತಾಗಿದೆ. ಸಚಿವ ಕಿರಣ್ ರಿಜಿಜು ಅನಂತರ ತಾನು ಹಾಗೇ ಹೇಳಿಯೇ ಇಲ್ಲ ಎಂದು ಸಮರ್ಥಿಸಿಕೊಂಡಿದ್ದರೂ ಅವರ ಮೊದಲಿನ ಹೇಳಿಕೆಯನ್ನು ಟಿವಿ ವಾಹಿನಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವುದರಿಂದ ಇರಿಸುಮುರಿಸಿಗೊಳಗಾಗುವ ಸರದಿ ಈಗ ಸಚಿವರದು!
ಅಲ್ಲಿಗೆ ಬಿಜೆಪಿಗೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಎಳ್ಳಷ್ಟು ಆಸಕ್ತಿಯೂ ಇಲ್ಲ ಎನ್ನುವುದು ಹಗಲಿನಷ್ಟು ನಿಚ್ಚಳವಾಯಿತಲ್ಲ! ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವುದನ್ನು ಮರೆತೇ ಬಿಟ್ಟಿದ್ದಾರೆ ಎಂಬುದೂ ಸಾಬೀತಾಯಿತಲ್ಲ! ಗೋಹತ್ಯೆ ನಿಷೇಧ ಸಾಧ್ಯವಿಲ್ಲವೆಂದು ಹೀಗೆ ಸ್ಪಷ್ಟವಾಗಿ ಬಿಜೆಪಿ ಸರ್ಕಾರಗಳು ಹೇಳುವ ಮೂಲಕ ಗೋಸಂರಕ್ಷಣೆ ಅಭಿಯಾನಕ್ಕೆ ಒಂದು ದೊಡ್ಡ ಹೊಡೆತ ಕೊಟ್ಟಂತಾಗಿದೆ. ಇದನ್ನೇ ಒಂದು ಅವಕಾಶವೆಂದು ಭಾವಿಸಿ, ಇತರ ರಾಜ್ಯಗಳೂ ತುಷ್ಟೀಕರಣದ ನುಣುಚಿಕೊಳ್ಳುವಿಕೆಗೆ ಮುಂದಾಗುವ ಅವಕಾಶ ಧಾರಾಳವಾಗಿ ತೆರೆದುಕೊಂಡಂತಾಗಿದೆ. ಗೋವಾ ಮುಖ್ಯಮಂತ್ರಿ ಪಾರ್ಸೆಕರ್ ಸ್ಪಷ್ಟ ಹೇಳಿಕೆ, ಮಹಾರಾಷ್ಟ್ರ ಮುಖ್ಯಮಂತ್ರಿ ಪಡ್ನವೀಸ್ ಬದಲಿಸಿದ ರಾಗ, ಬಿಜೆಪಿ ಅಧ್ಯಕ್ಷ ಅಮಿತ್ಷಾ ಈಗ ಹೊರಡಿಸಿದ `ಫರ್ಮಾನ್’ – ಇವುಗಳಿಂದಾಗಿ ಇಡೀ ಗೋಹತ್ಯಾ ನಿಷೇಧ ಕಾನೂನು, ಅದಕ್ಕಾಗಿ ಅವಿರತವಾಗಿ ನಡೆದುಕೊಂಡು ಬಂದ ಶತಮಾನಗಳ ಹೋರಾಟ ಎಲ್ಲವೂ ಗಾಂಭೀರ್ಯ ಕಳೆದುಕೊಂಡು ನಗೆಪಾಟಲಿಗೀಡಾಗುವ ಸಾಧ್ಯತೆ ಕಂಡುಬರುತ್ತಿದೆ.
ದೇಶದಲ್ಲೀಗ 36 ಸಾವಿರ ಕಸಾಯಿಖಾನೆಗಳಿವೆ. 1760 ರಷ್ಟು ಹಿಂದೆ ಸರ್ಕಾರದ ಅಧಿಕೃತ ಕಸಾಯಿಖಾನೆ ಒಂದೇ ಒಂದು ಇರಲಿಲ್ಲ. 1910 ರಲ್ಲಿ ದೇಶದಲ್ಲಿ ಕಸಾಯಿಖಾನೆಗಳ ಸಂಖ್ಯೆ 350 ಕ್ಕೆ ತಲುಪಿತ್ತು. ಆದರೆ ಸ್ವಾತಂತ್ರ್ಯ ಬಂದ ಬಳಿಕ ಕಸಾಯಿಖಾನೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವುದು ಗೋಸಂತತಿ ರಕ್ಷಣೆ ಕುರಿತು ಆಡಳಿತಾರೂಢ ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ದ್ಯೋತಕ. 36 ಸಾವಿರ ಕಸಾಯಿಖಾನೆಗಳಿಗೆ ಹಗಲುರಾತ್ರಿ ನಿರಂತರ ಕೆಲಸ ದೊರೆಯಬೇಕಾದರೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಗೋವುಗಳು ವಧೆಯಾಗಲೇ ಬೇಕು. ಕಾಂಗ್ರೆಸ್ ಸರ್ಕಾರ ಕಸಾಯಿಖಾನೆಗಳಿಗೆ ಸಬ್ಸಿಡಿ ನೀಡಿ, ಅವುಗಳ ಸಂಖ್ಯೆ ಹೆಚ್ಚಿಸಿತ್ತೆಂದು ಬಿಜೆಪಿ ಆರೋಪಿಸಿತ್ತು. ಬಿಜೆಪಿ ಕೂಡ ಇದೇ ಕೆಲಸಕ್ಕೆ ಈಗ ಮುಂದಾಗಿದೆಯೇ?
ವಾಣಿಜ್ಯ ನಗರಿ ಮುಂಬೈವೊಂದರಲ್ಲೇ ಪ್ರತಿನಿತ್ಯ 1 ಲಕ್ಷ ಕೆ.ಜಿ. ಗೋಮಾಂಸ ಮಾರಾಟವಾಗುತ್ತದೆ. ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಮೊದಲ ಕಾಯ್ದೆಯಿಂದ ಇದಕ್ಕೆ ತೀವ್ರ ಹೊಡೆತಬಿದ್ದಿತ್ತು. ಕಸಾಯಿಖಾನೆಗಳಿಂದ ಗೋವಿನ ರಕ್ತ ಹರಿಯುವುದು ನಿಂತುಹೋಗಿತ್ತು. ಈಗ ಅದೇ ಬಿಜೆಪಿ ಸರ್ಕಾರದ ಬದಲಾದ ನಿಲುವಿನಿಂದಾಗಿ ಮತ್ತೆ ಕಸಾಯಿಖಾನೆಗಳಲ್ಲಿ ಗೋಮಾತೆಯ ರಕ್ತ ಕೋಡಿಕೋಡಿಯಾಗಿ ಹರಿಯುವಂತಾಗಿದೆ.
ಬಿಜೆಪಿ 2014 ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ Protecting Culture and Heritage ಎಂಬ ಪ್ರತ್ಯೇಕ ಶೀರ್ಷಿಕೆಯಡಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ರಾಮಸೇತು ರಕ್ಷಣೆ, ಗೋವಂಶ ಸಂರಕ್ಷಣೆ, ಸಮಾನ ನಾಗರಿಕ ಸಂಹಿತೆ ರಚನೆ ಮುಂತಾದ ಬಹುಸಂಖ್ಯಾತ ಹಿಂದು ಸಮುದಾಯಕ್ಕೆ ಅತ್ಯಂತ ಪ್ರಿಯವಾಗುವ ಭಾರೀ ಭರವಸೆಗಳನ್ನೇ ನೀಡಿತ್ತು. ಬಿಜೆಪಿ ಭಾರೀ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದೂ ಕೂಡ ಇದೇ ಭರವಸೆಗಳ ಭದ್ರ ಏಣಿಯನ್ನೇರಿ. ಆದರೀಗ ಬಿಜೆಪಿ ತಾನು ಅಧಿಕಾರಕ್ಕೇರಿದ ಏಣಿಯನ್ನೇ ಪಕ್ಕಕ್ಕೆ ಒದ್ದಿರುವುದು ಎಂತಹ ವಿಪರ್ಯಾಸ!
ಕಾಂಗ್ರೆಸ್ ಹಿಂದೆ ಮಾಡಿದ್ದು ಕೂಡ ಇದನ್ನೇ. ಈಗ ಬಿಜೆಪಿ ಸರ್ಕಾರ ಮಾಡುತ್ತಿರುವುದೂ ಇದೇ. ಎಲ್ಲವೂ ಅಲ್ಪಸಂಖ್ಯಾತ ವೋಟ್ ಬ್ಯಾಂಕ್ ತುಷ್ಟೀಕರಣಕ್ಕಾಗಿ! ಚುನಾವಣೆಗೆ ಮುನ್ನ ಬಿಜೆಪಿ ಹೇಳಿದ್ದೇ ಒಂದು. ಈಗ ಮಾಡುತ್ತಿರುವುದೇ ಇನ್ನೊಂದು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ತಾನು ನಂಬಿದ ಮೌಲ್ಯಾದರ್ಶಗಳನ್ನೇ ಗಾಳಿಗೆ ತೂರುತ್ತಿದೆ ಎಂದು ಬಿಜೆಪಿ ಅಭಿಮಾನಿಗಳಿಗೆ ಅನಿಸಿದರೆ ಅದು ತಪ್ಪೇ?
ಒಟ್ಟಾರೆ ಗೋಹತ್ಯೆ ನಿಷೇಧಕ್ಕಾಗಿ ಶತ ಶತಮಾನಗಳಿಂದ ನಡೆದ ಹೋರಾಟಕ್ಕೆ ಬಿಜೆಪಿಯೇ ತಡೆಗೋಡೆಯಾಯಿತೆ? ಗೋಕುಲ ಸಂರಕ್ಷಕರು, ಗೋಮಾತೆಯನ್ನು ಪ್ರತಿನಿತ್ಯ ದೇವರೆಂದು ಪೂಜಿಸುವವರು, ಗೋಸಂತತಿ ಬೆಳೆಸಲು ಅಹರ್ನಿಶಿ ಬೆವರು ಬಸಿದವರು ಬಿಜೆಪಿಯ ಈ ನಿಲುವಿನಿಂದ ಆಘಾತಕ್ಕೊಳಗಾಗಿರುವುದಂತೂ ನಿಜ. ಜತೆಗೆ ಪುಣ್ಯಕೋಟಿ ಕೂಡ ತಬ್ಬಲಿಯಾಗಿ, ಹೆಬ್ಬುಲಿಯಂತೆ ಹೊಂಚು ಹಾಕಿರುವ ಕಟುಕರ ಕೈಗೆ ಬಲಿಪಶುವಾಗುವ ಕರುಣಾಜನಕ ವಿದ್ಯಮಾನ ಎಲ್ಲೆಡೆ ಹೆಚ್ಚಬಹುದು.
ಕ್ಷಮಿಸು, ನಿಜಕ್ಕೂ ನೀನು ತಬ್ಬಲಿಯಾದೆ ತಾಯೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.