ಉಡುಪಿ : ಉಡುಪಿಯಲ್ಲಿ ನ. 24 ರಿಂದ 26 ವರೆಗೆ ನಡೆಯುತ್ತಿರುವ ಹಿಂದೂ ಧರ್ಮ ಸಂಸದ್ನ ಪ್ರಮುಖ ಆಕರ್ಷಣೆಯಾಗಿ ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್ನಲ್ಲಿ ಹಿಂದೂ ಧರ್ಮ, ಸಂಸ್ಕೃತಿಯ ವೈಭವವನ್ನು ಸಾರುವ ಹಿಂದೂ ವೈಭವ ‘ಪ್ರದರ್ಶಿನಿ’ ಮೈದಳೆದಿದೆ. ‘ಹಿಂದೂ ವೈಭವ’ ಶೀರ್ಷಿಕೆಯ ಪ್ರದರ್ಶಿನಿ ಸಾರ್ವಜನಿಕರ ಮನಸೂರೆಗೊಳ್ಳುತ್ತಿದೆ.
ಈ ಪ್ರದರ್ಶಿನಿಯಲ್ಲಿ ಏನೇನಿದೆ..!
‘ಹಿಮಾಲಯ’ ಪರ್ವತ ಶ್ರೇಣಿಯ ಮಾದರಿಯನ್ನು ಹೋಲುವ ಪ್ರವೇಶ ದ್ವಾರವಿದ್ದು ಇದರೊಳಗೆ ಪ್ರವೇಶಿಸಿದಾಗ ಸುಮಾರು 30,900 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ವೈವಿಧ್ಯಮಯ 110ಕ್ಕೂ ಅಧಿಕ ಸ್ಟಾಲ್ಗಳಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಹಿಂದೂ ರಾಜ ಮಹಾರಾಜರು, ಪ್ರಾಚೀನ ಋುಷಿಮುನಿಗಳು ನೀಡಿದ ಕೊಡುಗೆ ಸೇರಿದಂತೆ ಪ್ರಮುಖವಾಗಿ ಇತ್ತೀಚಿನ 800 ವರ್ಷಗಳಲ್ಲಿ ಹಿಂದೂ ಧರ್ಮ ಬೆಳೆದು ಬಂದ ಪರಿಯ ಬಗ್ಗೆ ಈ ಪ್ರದರ್ಶಿನಿ ಬೆಳಕು ಚೆಲ್ಲಿದೆ. ಜತೆಗೆ ಗೋಶಾಲೆಗಳು, ನಾನಾ ಆಶ್ರಮಗಳ ಸ್ಟಾಲ್ಗಳೂ ಇವೆ.
ಅನುರಣಿಸಲಿದೆ ಓಂಕಾರ
ಪ್ರವೇಶ ದ್ವಾರದ ಮೂಲಕ ಒಳಪ್ರವೇಶಿಸಿದಾಗ ಭಾರತ ಮಾತೆ, ಉಡುಪಿ ಶ್ರೀಕೃಷ್ಣನ ಭವ್ಯ, ಆಕರ್ಷಕ ಚಿತ್ರಗಳು ಸೆಳೆಯಲಿವೆ. ಗುಹೆಯಾಕಾರದ ನಿರ್ಮಾಣವನ್ನು ಪ್ರವೇಶಿಸುತ್ತಿದ್ದಂತೆ ಓಂಕಾರ ನಾದ ಮೈಮನಗಳನ್ನು ಪುಳಕಿತಗೊಳಿಸಲಿದೆ. ನಂತರ ಆಕಾಶ ಮಂಡಲ ರಾರಾಜಿಸಲಿದೆ.
ಏನೆಲ್ಲ ನೋಡಬಹುದು?
ಸನಾತನ ಹಿಂದೂ ಧರ್ಮದ ಸೂಕ್ಷ್ಮ ಪರಿಚಯವನ್ನು ನೋಡಬಹುದಾಗಿದೆ. ಸಂಘಟಕರ ನಿರಂತರ ಶ್ರಮದಿಂದ ಹಿಂದೂ ಸಾಮ್ರಾಜ್ಯ ವೈಭವ, ಕ್ಷೇತ್ರ ವೈಭವ, ಜ್ಞಾನ, ಗ್ರಂಥ ವೈಭವ, ವಿಜ್ಞಾನ, ಸಂಗೀತ, ಯಕ್ಷ ವೈಭವ, ತುಳುನಾಡಿನ ದೇವ-ದೈವ, ಭಜನೆ, ಶಿಲ್ಪಕಲಾ ವೈಭವ, ನಾರಿ ವೈಭವ ಹೀಗೆ ಸುಮಾರು 25ಕ್ಕೂ ಅಧಿಕ ವಿಭಾಗಗಳಲ್ಲಿ ಹಿಂದೂ ವೈಭವವನ್ನು ಅನಾವರಣಗೊಳಿಸಲಾಗಿದೆ. ಸುಮಾರು 54 ಸ್ಟಾಲ್ಗಳು, ಚಾರ್ಟ್ಗಳು, ವಿಚಾರಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ:
ಪ್ರದರ್ಶಿನಿಯಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ತನ್ನನ್ನು ಮುಡಿಪಾಗಿಟ್ಟ ಛತ್ರಪತಿ ಶಿವಾಜಿ ಮಹಾರಾಜನ ಜೀವನ ಚರಿತ್ರೆ ವರ್ಣಮಯವಾಗಿ ಮೂಡಿಬಂದಿದೆ. ಅಲ್ಲದೆ ಹಿಂದೂ ಸಾಮ್ರಾಜ್ಯ ವಿಜಯ ನಗರದ ವೈಭವವನ್ನು ಸಾರುವ ಭಿತ್ತಿ ಚಿತ್ರ, ದೇವಾಲಯದ ಆಕರ್ಷಕ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿವೆ.
ಅಷ್ಟೇ ಅಲ್ಲದೆ ಗೋ ಸಂರಕ್ಷಣೆಯ ಕುರಿತು ಅಭಯಾಕ್ಷರ ಸಹಿ ಸಂಗ್ರಹ ಕಾರ್ಯವೂ ನಡೆಯುತ್ತಿದೆ.
ವರದಿ : ಹ. ರಾ. ವಿನಯಚಂದ್ರ, ಉಡುಪಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.