ಭಾರತವನ್ನಾಳುತ್ತಿದ್ದ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದ ಹೋರಾಟಗಾರರು ಇವರು. ಗಾಂಧೀಜಿ ನಾಯಕರಾಗುವ ಮೊದಲೇ ಸ್ವರಾಜ್ಯದ ಕಲ್ಪನೆಯನ್ನು ವಿವರಿಸಿದರು, ಅಸಹಾಕಾರ ಚಳವಳಿ ನಡೆಸಿದರು. ದೇಶಕ್ಕಾಗಿ ಸೆರೆಮನೆ ಕಂಡರು. ಸಮಾಜ ಸುಧಾರಕರು. ಕಾರ್ಮಿಕರ ಗೆಳೆಯರು. ದಿಟ್ಟ ಪತ್ರಿಕೋದ್ಯಮಿ. ಬಡತನ, ಕಷ್ಟಗಳನ್ನು ಲೆಕ್ಕಿಸದೆ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಆದರ್ಶವಾದಿ ಬಿಪಿನ್ ಚಂದ್ರಪಾಲ್. ಇಂದು ಈ ಮಹಾನ್ ರಾಷ್ಟ್ರ ಭಕ್ತರ ಜನ್ಮದಿನ.
ಸಿಲ್ಹಟ್ನ (ಇಂದಿನ ಬಾಂಗ್ಲಾದೇಶ) ಒಂದು ಹಳ್ಳಿಯ ಶ್ರೀಮಂತ ಕುಟುಂಬದಲ್ಲಿ 7 ನವೆಂಬರ್, 1858ರಂದು ಜನಿಸಿದ ಪಾಲ್, ತಮ್ಮ ಶಿಕ್ಷಣವನ್ನು ಮಾಧ್ಯಮಿಕ ಹಂತದಲ್ಲೇ ಮೊಟಕುಗೊಳಿಸಬೇಕಾಯಿತು. ಇದೇ ಸಮಯದಲ್ಲಿ ಅವರು ಕೇಶವಚಂದ್ರ ಸೇನ್ ಮತ್ತು ಪಂಡಿತ್ ಶಿವನಾಥ ಶಾಸ್ತ್ರೀ ಮುಂತಾದ ಪ್ರಖ್ಯಾತ ಬಂಗಾಳಿ ನೇತಾರರ ಸಂಪರ್ಕಕ್ಕೆ ಬಂದರು. 1907 ರಲ್ಲಿ ಪಾಲ್ ಇಂಗ್ಲೆಂಡಿನಲ್ಲಿ ವಿಚಾರವಾದಿ ವಿದ್ಯಾರ್ಥಿ ಆಗಿದ್ದರು. ಅಲ್ಲಿ ‘ಸ್ವರಾಜ್’ ಪತ್ರಿಕೆಯನ್ನು ಪ್ರಾರಂಭಿಸಿದ ಅವರು ಮುಂದಿನ ವರ್ಷವೇ ಭಾರತಕ್ಕೆ ಮರಳಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಬಂದೇ ಮಾತರಂ’ ಖಟ್ಲೆಯಲ್ಲಿ ಶ್ರೀ ಅರವಿಂದರವರ ವಿರುದ್ಧ ಸಾಕ್ಷ್ಯ ನೀಡಲು ನಿರಾಕರಿಸಿದ ಪಾಲ್ 6 ತಿಂಗಳ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು.
ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಕ್ರಿಯಾಶೀಲರಾಗಿದ್ದ ಬಿಪಿನ್ಚಂದ್ರರು ತಮ್ಮ ತರ್ಕಬದ್ಧ, ಜನರನ್ನು ಬಡಿದೆಬ್ಬಿಸುವ ಭಾಷಣಗಳಿಂದ ಜನಪ್ರಿಯರಾದರು. ಅವರ ಭಾಷಣಗಳಿಗೆ ಜನ ಕಿಕ್ಕಿರಿದು ನೆರೆಯಲಾರಂಭಿಸಿದರು. ಗುಲಾಮಗಿರಿಯಲ್ಲಿ ಮುಳುಗಿಹೋಗಿದ್ದರೂ ಅದರ ಪರಿವೆ ಇಲ್ಲದೆ ಕುರಿಗಳಂತೆ ಆ ಜೀವನಕ್ಕೇ ಒಗ್ಗಿಹೋಗಿದ್ದ ಜನರನ್ನು ಬಡಿದೆಬ್ಬಿಸುವಂಥ ವಾಗ್ಮಿತೆ ಅವರದಾಗಿತ್ತು.
ಮದ್ರಾಸ್ನಲ್ಲಿ ಸ್ವರಾಜ್ಯದ ಗುಡುಗು
ತಮಿಳು ಮಹಾಕವಿ ಸುಬ್ರಹ್ಮಣ್ಯ ಭಾರತಿಯವರ ವಿನಂತಿಯಂತೆ ಮದ್ರಾಸ್ ಪ್ರಾಂತ್ಯದಲ್ಲಿ ಬಿರುಗಾಳಿಯಂತೆ ಸಂಚರಿಸಿ ಮಾಡಿದ ಭಾಷಣಗಳು ತಮಿಳರಲ್ಲಿ ರಾಷ್ಟ್ರದ ಕಲ್ಪನೆಯನ್ನು ಮೂಡಿಸಿ ಇಡೀ ಮದ್ರಾಸ್ ಪ್ರಾಂತ್ಯವೇ ಸಮರೋತ್ಸಾಹದಿಂದ ಮೇಲೆದ್ದು ನಿಲ್ಲುವಂತೆ ಮಾಡಿತು. ಮದ್ರಾಸ್ ಮರಿನಾ ಬೀಚ್ನಲ್ಲಿ ಸೇರುತ್ತಿದ್ದ 30-40 ಸಾವಿರ ಜನರಿಗೆ ಕೇಳುವಂತೆ – ಧ್ವನಿವರ್ಧಕವಿಲ್ಲದ ಆ ದಿನಗಳಲ್ಲಿ – ಗರ್ಜಿಸುತ್ತಿದ್ದ ಬಿಪಿನ್ಚಂದ್ರರು ತಮಿಳರಿಗೆ ಪ್ರೀತಿಪಾತ್ರರಾದರು. ತಾವು ಹೋದಲ್ಲೆಲ್ಲ ಬಹಿರಂಗ ಸಭೆಗಳಲ್ಲಿ ಉಪನ್ಯಾಸ ಮಾಡುತ್ತಿದ್ದರೆ ತಮ್ಮ ಆಪ್ತ ಕಾರ್ಯದರ್ಶಿ ಕುಂಜುಬಿಹಾರಿ ದಾಸ್ಗೆ ರಹಸ್ಯವಾಗಿ ಕ್ರಾಂತಿಕಾರಿ ಗುಂಪುಗಳನ್ನು ರಚಿಸುವಂತೆ ತಾಕೀತು ಮಾಡುತ್ತಿದ್ದರು. ಅದರಿಂದಲೇ ಮದ್ರಾಸ್ನಲ್ಲಿ ವಾಂಚಿ ಅಯ್ಯರ್, ನೀಲಕಂಠ ಬ್ರಹ್ಮಚಾರಿ ಮೊದಲಾದ ಕ್ರಾಂತಿಕಾರಿ ಯುವಕರ ತಂಡ ತಯಾರಾಯಿತು.
ಲಾರ್ಡ್ ಕರ್ಜನ್ ಭಾರತದ ವೈಸ್ರಾಯ್ ಆಗಿ ಬಂದನಂತರ ತನ್ನ ಕುಟಿಲ ನೀತಿಯಂತೆ ಬಂಗಾಳದ ವಿಭಜನೆ ಮಾಡಿದ. ಅದಕ್ಕೆ ಬಂಗಾಳ ಮಾತ್ರವಲ್ಲದೆ ಇಡೀ ಭಾರತ ಒಕ್ಕೊರಲಿನಿಂದ ಪ್ರತಿಭಟನೆ ಸೂಚಿಸಿತು. ಬಂಗಾಳದಲ್ಲಂತೂ ಇಡೀ ಸಮಾಜ ಏಕವ್ಯಕ್ತಿಯಂತೆ ಎದ್ದು ನಿಂತು ಪ್ರಬಲ ಚಳವಳಿ ಶುರುಮಾಡಿತು. ಅದರ ಫಲವೇ ಸ್ವದೇಶಿ ಜಾಗೃತಿ. ಕ್ರಾಂತಿಕಾರಿ ಯುವಕರ ರಕ್ತರಂಜಿತ ಇತಿಹಾಸದ ಸೃಷ್ಟಿ.
ಆ ಸಮಯದಲ್ಲಿ ಬಿಪಿನ್ ಚಂದ್ರರು ಸೋದರಿ ನಿವೇದಿತಾಳ ಜೊತೆಗೂಡಿ ಸ್ವದೇಶಿ ಚಳುವಳಿಯಲ್ಲಿ ಪಾಲ್ಗೊಂಡು ಮನೆಮನೆಗೆ ಸ್ವದೇಶಿ ವಸ್ತುಗಳನ್ನು ಸ್ವದೇಶೀತನವನ್ನು ತಲುಪಿಸಲು ಸಹಾಯಕರಾದರು. ವಿವೇಕಾನಂದರ ಬರೆವಣಿಗೆ ಹಾಗು ಮಾತುಗಳಿಂದ ಪ್ರೇರಿತರಾಗಿದ್ದ ಇವರು ನಿವೇದಿತಾಳ ಎಲ್ಲ ಕೆಲಸಗಳಲ್ಲಿಯೂ ಜೊತೆಗಿದ್ದರು.
ಬಿಪಿನ್ಚಂದ್ರರ ಒಂದು ಮುಖ್ಯ ಹವ್ಯಾಸವೆಂದರೆ ಬರವಣಿಗೆ. ಜತೆಗೆ ಪತ್ರಿಕಾ ಸಂಪಾದಕತ್ವ. ಸ್ವದೇಶಿ ಜಾಗೃತಿ ಉಂಟಾದಾಗ ಕಲ್ಕತ್ತೆಯ ಸುಬೋಧಚಂದ್ರ ಮಲ್ಲಿಕ್ ಎಂಬ ಶ್ರೀಮಂತ ದೇಶಭಕ್ತ ರಾಷ್ಟ್ರೀಯ ಶಿಕ್ಷಣ ಹಾಗೂ ಜನಜಾಗೃತಿಗಾಗಿ ಅಪಾರ ಹಣ ನೀಡಲಾರಂಭಿಸಿದರು. ‘ಬಂದೇ ಮಾತರಂ’ ಎಂಬ ದಿನಪತ್ರಿಕೆಗೆ ಹಣ ತೊಡಗಿಸಿದರು. ಅದಕ್ಕೆ ಬಿಪಿನ್ಚಂದ್ರ ಪಾಲರೇ ಘೊಷಿತ ಸಂಪಾದಕರು. ಉಗ್ರವಾದ ಬರವಣಿಗೆ. ‘ಈ ಸರ್ಕಾರವೇನಾದರೂ ಸ್ವರಾಜ್ಯ ಕೊಡುವೆವು ತೆಗೆದುಕೊಳ್ಳಿ ಎಂದರೆ ನಾನು ಧಿಕ್ಕರಿಸುತ್ತೇನೆ. ಸ್ವರಾಜ್ಯ ಹೋರಾಡಿ ಗೆದ್ದುಕೊಳ್ಳುವುದೇ ಹೊರತು ಬೇಡಿ ಪಡೆಯುವುದಲ್ಲ. ನಾವು ಸರ್ಕಾರದೊಡನೆ ಅಸಹಕಾರ ಮಾಡಿ ಅವರಿಗೆ ಆಡಳಿತ ನಡೆಸಲು ಸಾಧ್ಯವಾಗದಂತೆ ಮಾಡುವುದೇ ನಮ್ಮ ಹಾದಿ.’ ಇದು ಒಂದು ಸ್ಯಾಂಪಲ್.
ಪಾಲ್ ಓರ್ವ ಶಿಕ್ಷಕ, ಪತ್ರಕರ್ತ, ಲೇಖಕ ಹಾಗೂ ಗ್ರಂಥಪಾಲಕ ಮುಂತಾದ ಹುದ್ದೆಗಳನ್ನು ವಹಿಸಿದವರು. ಆರಂಭದಲ್ಲಿ ಬ್ರಹ್ಮ ಸಮಾಜದ ಸಮರ್ಥಕರಾಗಿದ್ದ ಪಾಲ್, ವೇದಾಂತದ ಕಡೆಗೆ ವಾಲಿದರು. ಮುಂದೆ ಅವರು ಶ್ರೀ ಚೈತನ್ಯರ ವೈಷ್ಣವ ದರ್ಶನದ ಮುಂದಾಳತ್ವ ಕೂಡ ವಹಿಸಿದರು. ಸಮಾಜ ಸುಧಾರಕರಾದ ಪಾಲ್ ಜೀವನದಲ್ಲಿ ಎರಡು ಸಲ ಒಳ್ಳೆಯ ಮನೆತನದ ವಿಧವೆಯರನ್ನು ಮದುವೆ ಮಾಡಿಕೊಂಡಿದ್ದರು. ಅವರು ರಾಜಾರಾಮಮೊಹನರಾಯ, ಕೇಶವಚಂದ್ರ ಸೇನ್, ಶ್ರೀ ಅರವಿಂದ ಘೋಷ್, ರವೀಂದ್ರನಾಥ ಟಾಗೋರ್, ಆಶುತೋಷ್ ಮುಖರ್ಜಿ ಹಾಗೂ ಆನಿ ಬೆಸೆಟ್ ಮುಂತಾದ ಆಧುನಿಕ ಭಾರತದ ಶಿಲ್ಪಿಗಳ ಜೀವನವನ್ನು ಅಧ್ಯಯನ ಮಾಡಿ, ಒಂದು ಲೇಖನ ಮಾಲೆಯನ್ನು ಪ್ರಕಟಿಸಿದರು. ವ್ಯಾಪಕ ದೃಷ್ಟಿಕೋನ ನೀಡುವ ‘ಸಮಗ್ರ ದೇಶಭಕ್ತಿ’ಯನ್ನು ಅವರು ಉಪದೇಶಿಸಿದರು. ‘ಪರಿದರ್ಶಕ್’ (1886 – ಬಂಗಾಳಿ ಸಾಪ್ತಾಹಿಕ). ‘ನ್ಯೂ ಇಂಡಿಯಾ’ (1902 – ಆಂಗ್ಲ ಸಾಪ್ತಾಹಿಕ) ಹಾಗೂ ‘ಬಂದೇ ಮಾತರಂ’ (1906– ಬಂಗಾಳಿ ದೈನಿಕ) ಅವರಿಂದ ಪ್ರಕಶಿಸಲ್ಪಟ್ಟ ಕೆಲವು ಪತ್ರಿಕೆಗಳು.
1886ರ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ ಸಿಲ್ಹಟ್ ಅನ್ನು ಪ್ರತಿನಿಧಿಸಿದ್ದರು. 1930 ರಲ್ಲಿ ಅವರು ಗಾಂಧಿಯ ‘ಅಸಹಕಾರ ಚಳುವಳಿಗೆ’ ವಿರೋಧವನ್ನು ವ್ಯಕ್ತಪಡಿಸಿದ್ದರು. 1930 ರಲ್ಲೇ ಸಕ್ರಿಯ ರಾಜಕೀಯದಿಂದ ಸಂನ್ಯಾಸ ಪಡೆದ ಪಾಲ್, ರಾಷ್ಟ್ರೀಯ ಪ್ರಶ್ನೆಗಳ ಮೇಲೆ ಟಿಪ್ಪಣಿ ಮಾತ್ರ ಮಾಡ ತೊಡಗಿದರು. 20 ಮೇ 1932 ರಂದು ಭಾರತಮಾತೆಯು ಈ ಮಹಾನ್ ದೇಶಭಕ್ತನನ್ನು ಕಳೆದುಕೊಂಡಳು.
ಬಿಪಿನ್ ಚಂದ್ರಪಾಲರು ನಿಧನರಾದ ಮೇಲೆ ಪತ್ರಿಕೆಗಳು ಅವರನ್ನು ಹೊಗಳುತ್ತಿವೆ. ಸುಮಾರು ಏಳು ವರ್ಷಗಳ ಕಾಲ, ಇಂಗ್ಲಿಷರು ಯಾಜಮಾನ್ಯ ವಹಿಸಿದ್ದ ಪತ್ರಿಕೆಗಳೇ ಪ್ರಬುದ್ಧ ವಿಚಾರದ ಅವರ ಲೇಖನಗಳನ್ನು ಪ್ರಕಟಿಸುತ್ತಿದ್ದವು ಹೊರತು ಭಾರತೀಯ ಪತ್ರಿಕೆಗಳಲ್ಲ. ಅವರ ಪಾರ್ಥಿವ ದೇಹದ ಮೇಲೆ ಪುಷ್ಪಗುಚ್ಛಗಳನ್ನು ಇರಿಸಲು ಬಂದ ಮಹಾನುಭಾವರೇ ಅವರನ್ನು ತೆಗಳುತ್ತಿದ್ದರು.
ಹೀಗೆ ತಮ್ಮ ಜೀವನದ್ದುದ್ದಕ್ಕೂ ರಾಷ್ಟ್ರವನ್ನಲ್ಲದೇ ಬೇರೆ ಯಾವುದನ್ನು ಕಾಣದೇ ರಾಷ್ಟ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ವಿಶಾಲ ಮನೋಭಾವದ ಧೀಮಂತ ನಾಯಕ ಬಿಪಿನ್ ಚಂದ್ರ ಪಾಲ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.