ಅನೇಕರು ಈ ವಿಚಾರವನ್ನು ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಬದುಕಿನಲ್ಲಿ ನಾವು ಎರಡು ರೀತಿಯ ತಪ್ಪುಗಳನ್ನು ಮಾಡುತ್ತೇವೆ. ಒಂದು – ಮಾಡಬಾರದ ತಪ್ಪುಗಳು. ಇನ್ನೊಂದು – ಮಾಡಬಹುದಾದ ತಪ್ಪುಗಳು. ಉದಾಹರಣೆಗೆ, ಪಾರ್ಕ್ನಲ್ಲಿ ಯುವಪ್ರೇಮಿಗಳ ಪ್ರೇಮವನ್ನು ಕದ್ದು ನೋಡುತ್ತಿರುವ ಪಿಂಚಣಿದಾರರು, ಮೆಜೆಸ್ಟಿಕ್ನ ಬಾತ್ರೂಮಿನಲ್ಲಿ ‘ಕನ್ನಡ ಉಳಿಸಿ’ ಎಂಬ ಘೋಷಣೆಯನ್ನು ತಪ್ಪು ತಪ್ಪಾಗಿ ಗೀಚಿರುವ ಕನ್ನಡ ಪ್ರೇಮಿ, ಇತ್ಯಾದಿ ಇತ್ಯಾದಿ. ನಮ್ಮಲ್ಲಿ ಅದೆಷ್ಟು ಜನ ಇಂತಹ ಮಾಡಬಾರದ ತಪ್ಪುಗಳನ್ನು ಮಾಡಿರಲಿಕ್ಕಿಲ್ಲ? ಆದರೆ ನಮ್ಮಲ್ಲಿ ಮಾಡಬಹುದಾದ ಘನವಾದ ತಪ್ಪುಗಳನ್ನು ಕೂಡ ತಡೆಯಲು ನಾವು ಮುಂದಾಗುವುದಿಲ್ಲವೆಂಬುದೇ ದುರಂತವೆನಿಸುತ್ತದೆ.!!
ನಾವಿರೋದೇ ಹಾಗೆ. ಇವತ್ತಿನ ಬದುಕಿನ ತಾತ್ಕಾಲಿಕ ಸಂತೃಪ್ತಿಗಾಗಿ ಎಲ್ಲ ಸವಲತ್ತುಗಳನ್ನು ಬಳಸುತ್ತಿರುವ ನಾವು, ಆ ಮೂಲಕ ಮುಂದಿನ ಪೀಳಿಗೆಯನ್ನು ಯಾವ್ಯಾವ ತೊಂದರೆಗಳಲ್ಲಿ ಸಿಲುಕಿಸಲಿದ್ದೇವೆಂಬ ಅರಿವು ಕೂಡ ನಮಗಿದ್ದಂತಿಲ್ಲ.
ಇತ್ತೀಚೆಗಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದಾಗ ಮೂಡುವ ಚಿಂತನೆಗಳಿವು. ಹಿಂದೂಗಳ ಹಬ್ಬಗಳೇ ಪ್ರತೀ ಬಾರಿಯೂ ಯಾಕೆ ಗುರಿಯಾಗುತ್ತಿವೆ? ಆದರೆ ಪ್ರಸ್ತುತ ಹಬ್ಬಗಳನ್ನು ನಾವು ಆಚರಿಸುತ್ತಿರುವುದರ ಕುರಿತಾಗಿ ವಿಮರ್ಶಿಸುವುದಕ್ಕೂ ನಮಗೆ ಸಮಯ ಸಿಗುವುದಿಲ್ಲ. ಹಾಗೆ ಒಂದು ವೇಳೆ ಚರ್ಚಿಸಿದ್ದೇ ಆದರೆ ಎಡಪಂಥೀಯ ಎಂಬ ಹಣೆಪಟ್ಟಿ! ದೀಪಾವಳಿ ಹಬ್ಬದಂದು ಪಟಾಕಿ ನಿಷೇಧ ಕೂಗು ಕೇಳಿದಾಗಲೂ ಇಂತಹದ್ದೇ ಘಟನೆ ಪುನರಾವರ್ತನೆಯಾದುದು ದುರಂತ. ಪ್ರಕೃತಿಯ ಮಲಿನಕ್ಕೆ ಕಾರಣ ಪಟಾಕಿ ಮಾತ್ರವೇ? ನಮ್ಮ ಮಕ್ಕಳಿಗೆ ಹಬ್ಬದ ದಿನದಂದು ಸಿಗುವ ಆನಂದಕ್ಕೆ ಯಾಕೆ ನೀವು ಅಡ್ಡಿಪಡಿಸುತ್ತೀರಿಯೆಂಬ ಚಿಂತನೆ ವಿಮರ್ಶೆ ಮಾಡುತ್ತಿದ್ದಾರೆ ಅನೇಕರು. ಇದೆಲ್ಲದರ ಕುರಿತಾಗಿಯೂ ಚರ್ಚಿಸೋಣ. ಆದರೆ ವಿಚಾರ ತಿಳಿಯುವ ತಾಳ್ಮೆ ನಮಗಿರಬೇಕಷ್ಟೇ.
ದೀಪಾವಳಿಯಲ್ಲಿ ಎರಡು ಶಬ್ದಗಳಿವೆ. ದೀಪ ಮತ್ತು ಅವಳಿ. ಅವಳಿ ಎಂದರೆ ಸಾಲು ಎಂಬರ್ಥ. ಅಂದರೆ ದೀಪಗಳ ಸಾಲಿನ ಹಬ್ಬ ದೀಪಾವಳಿ. ಮನೆಯಲ್ಲಿ, ದೇವಾಲಯಗಳಲ್ಲಿ ದೀಪಗಳ ಮಾಲೆಯನ್ನಿಟ್ಟು ಭಗವಂತನಿಗೆ ಪೂಜಿಸಲ್ಪಡುವ ಪುಣ್ಯಪ್ರದವಾದ ದಿನ. ಆದರೆ ಇವತ್ತಿನ ದಿವಸಗಳಲ್ಲಿ ದೀಪಾವಳಿಯ ಮುಖ್ಯ ಧ್ಯೇಯ ಪಟಾಕಿ ಸಿಡಿಸುವುದು ಎಂಬಲ್ಲಿಯವರೆಗೆ ಚಿಂತನೆಗಳು ಪ್ರಾರಂಭವಾಗಿವೆ. ಕಾರಣ ನಮ್ಮ ಸಂಪ್ರದಾಯಗಳಿಗೆ ಆಧುನಿಕತೆಯ ಸ್ಪರ್ಶವನ್ನೂ ನೀಡಬೇಕೆಂಬ ಕಲ್ಪನೆ ಬಂದುದರಿಂದ.
ಆಧುನಿಕತೆಯ ಬಿಡಬಾರದು ನಿಜ. ಅದರೊಂದಿಗೆ ಹಬ್ಬದ ಪ್ರಾಮುಖ್ಯತೆಯ ನಿಜಾರ್ಥವನ್ನು ಮರೆತರೆ ಹೇಗೆ ??
ದೀಪಾವಳಿ. ದೀಪಗಳ ಹಬ್ಬ. ಬೆಳಕಿನ ಹಬ್ಬ. ಅಂಧಕಾರದಿಂದ ಬೆಳಕಿನೆಡೆಗೆ ಸಾಗಿಸು ದೇವ ಎಂಬ ಅರ್ಥವನ್ನು ಕಲ್ಪಿಸುವ ಹಬ್ಬದ ದಿನದಂದು ಅಕ್ಷರಶಃ ನಮ್ಮನ್ನು ಕತ್ತಲೆಗೆ ನಾವೇ ತಳ್ಳುವುದು ಅದೆಷ್ಟು ಸರಿ??
ಪಟಾಕಿಗಳು ನಮಗೆ ತಾತ್ಕಾಲಿಕ ಸಂತೃಪ್ತಿಯನ್ನು ತರಬಲ್ಲದು ನಿಜ. ಆದರೆ ಹಬ್ಬದ ಖುಷಿ ಸಿಗುವುದು ಮನೆಯಲ್ಲಿ ಪಟಾಕಿ ಬದಲು ಮನೆಯವರೆಲ್ಲಾ ಒಟ್ಟಾಗಿ ದೀಪ, ಕುಂಟುದೀಪ, ಕ್ಯಾಂಡಲ್ ಅನ್ನು ಉರಿಸಿದಾಗ. ಆಗ ಭಕ್ತಿಯ ಜತೆಜತೆಗೆ ಆಂತರಿಕವಾಗಿ ಸಿಗುವ ಆನಂದವನ್ನು ವರ್ಣಿಸಲಸಾಧ್ಯ. ಪಟಾಕಿ ಸಿಡಿಸುವುದರಿಂದ ಕಿಂಚಿತ್ತೂ ಲಾಭವಿಲ್ಲವೆಂಬುದು ಖಚಿತವೆಂದ ಮೇಲೆ ಸುಖಾಸುಮ್ಮನೆ ಸಿಡಿಸುವುದು ಸರಿಯೇ? ಹಬ್ಬ ಕೇವಲ ಮನೋರಂಜನೆಯಲ್ಲ. ಅದು ನಮ್ಮ ಅಂತಃಶಕ್ತಿಯನ್ನು ಸದೃಢವಾಗಿಸಬಲ್ಲ ದಿನಗಳು. ಸದುಪಯೋಗಪಡಿಸಬೇಕಿದೆ ಅಷ್ಟೇ. ಕೃತಕವಾದ ಬೆಳಕನ್ನು ನೋಡಿ ಆನಂದ ಪಡುವ ಬದಲು ನಾವೇ ಉರಿಸಿದ ಬೆಳಕು ಮನೆಯಿಡೀ ಆವರಿಸಿದರೆ ಅದೆಷ್ಟು ಸಂತೃಪ್ತಿಯಾಗಬಲ್ಲದು ನಮಗೆ? ದಯವಿಟ್ಟು ಯೋಚಿಸಿ.
ಪಟಾಕಿಯಿಂದ ಪ್ರಕೃತಿ ಮಾಲಿನ್ಯ. ಹಬ್ಬ ಮಾಡುವುದೇ ಭಗವಂತನ ಪ್ರೀತ್ಯರ್ಥವಾಗಿ ಎಂದ ಮೇಲೆ ನಮ್ಮ ಸ್ವಾರ್ಥಕ್ಕೆ ಆತನಿಗೆ ನೈವೇದ್ಯವಾಗಿಸುವುದು ಮಾಲಿನ್ಯ ಪ್ರಕೃತಿಯೇ?
ನಮ್ಮ ಮಕ್ಕಳಿಗೆ ಸಿಗುವ ಒಂದು ದಿನದ ಖುಷಿಗಾಗಿ ವರ್ಷವಿಡೀ ಅವರ ಆರೋಗ್ಯ ಸ್ಥಿತಿ ಗೆಡುವುದಕ್ಕೆ ನಾವೇ ಕಾರಣೀಕರ್ತರಾಗುತ್ತಿದ್ದೇವೆಂಬುದನ್ನು ನಾವು ಯಾವತ್ತೂ ಚಿಂತಿಸಿಲ್ಲ.
ಕೆಲವು ವರ್ಷಗಳ ಹಿಂದೆ ಒಬಾಮಾ ಹೇಳಿದ್ದ ಮಾತು ನೆನಪಾಗುತ್ತದೆ.
“We are the first generation to feel the impact of climate change and the last generation that can do something about it.”
ನಮ್ಮ ದೇಶದ ವಾತಾವರಣ ಪ್ರಸ್ತುತ ಯಾವ ಸ್ಥಿತಿಯಲ್ಲಿದೆಯೆಂಬುದರ ಕೆಲವು ವರದಿಗಳನ್ನು ಗಮನಿಸಿ :
1. WHO ವಾಯು ಗುಣಮಟ್ಟದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ವಾಯು ಮಾಲಿನ್ಯದ ತೀವ್ರತೆಯು ಭಾರತೀಯರ ಸರಾಸರಿ ಜೀವಿತಾವಧಿಯ ಸರಾಸರಿ 3.4 ವರ್ಷ ಕಡಿಮೆಯಾದರೆ ದೆಹಲಿಯ ನಿವಾಸಿಗಳ ಪೈಕಿ ಸುಮಾರು 6.3 ವರ್ಷಗಳಷ್ಟು ಕಡಿಮೆಯಾಗಿದೆ.
2. ‘ಆಂಬಿಯೆಂಟ್ ಏರ್ ಪೊಲ್ಯೂಷನ್ ಡಾಟಾಬೇಸ್, WHO, ಮೇ 2016 ರ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕಲುಷಿತವಾಗಿರುವ 20 ನಗರಗಳಲ್ಲಿ ಕ್ರಮವಾಗಿ ಪಾಟ್ನಾ, ಗ್ವಾಲಿಯರ್, ಮತ್ತು ರಾಯ್ಪುರಗಳ ಜೊತೆಗೆ ದೆಹಲಿಯನ್ನೂ ಸೇರಿಸಿ 13 ನಗರಗಳನ್ನು ಹೊಂದಿದೆ. 1215 ಅತ್ಯಂತ ಕಲುಷಿತ ನಗರಗಳಲ್ಲಿ ದಾಖಲಾಗಿವೆ. ಅಗ್ರ 100 ಅತ್ಯಂತ ಕಲುಷಿತ ನಗರಗಳಲ್ಲಿ 31 ನಗರಗಳು ಭಾರತದ್ದೇ ಆಗಿವೆ. ಈ ನಗರಗಳ ಪಟ್ಟಿಗೆ ನಮ್ಮ ನಗರಗಳೂ ಸೇರಬೇಕೆಂಬ ಬಯಕೆಯಿದ್ದರೆ ನಿಮ್ಮಿಷ್ಟ.
ವಾಯುಮಾಲಿನ್ಯ ಬಿಡಿ, ಕನಿಷ್ಠ ನಮ್ಮ ಆರೋಗ್ಯದ ಕುರಿತಾಗಿ ಚಿಂತಿಸಿದ್ದೇವಾ??
ಖಂಡಿತವಾಗಿಯೂ ಪಟಾಕಿ ಮಾತ್ರ ಮಾಲಿನ್ಯಕ್ಕೆ ಕಾರಣವಲ್ಲ. ಆದರೆ ಇದೂ ಒಂದು ಕಾರಣವೆಂಬುದನ್ನೂ ಅಲ್ಲಗಳೆಯುವಂತಿಲ್ಲವಲ್ಲ. ಅಸಲಿ ವಿಷಯವೇನೆಂದರೆ ಪಟಾಕಿಗಳಿಂದ ಹೊರಸೂಸುವ ಹಾನಿಕಾರಕ ಅನಿಲಗಳಿಂದ ನಗರವು ಸಾಕಷ್ಟು ಮಳೆ ಅಥವಾ ಬಲವಾದ ಗಾಳಿಯನ್ನು ಪಡೆಯಲು ಬಿಡದೇ ದೀರ್ಘಕಾಲದವರೆಗೆ ಹಾನಿಕಾರಕ ಅನಿಲಗಳೇ ಗಾಳಿಯಲ್ಲಿ ಉಳಿಯುತ್ತದೆ. ಉದಾಹರಣೆಗೆ ಪಟಾಕಿಗಳಿಂದ ಬರುವ ನೈಟ್ರಾಸ್ ಆಕ್ಸೈಡ್ನಂತಹ ಅನಿಲಗಳ ಹರಿವಿನಿಂದ ಹೊರಸೂಸುವ ಹೊಗೆಯು ಉಸಿರುಗಟ್ಟಿಸುವುದರಿಂದ ರೋಗಿಗಳಲ್ಲಿ ಆಸ್ತಮಾ ದಾಳಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೃದಯಸಂಬಂಧಿತ ರೋಗಿಗಳು ಹಾಗೂ ಇನ್ನಿತರ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿರುವವರು ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಾರೆ.
ಪಟಾಕಿಗಳು ಕಾರ್ಬನ್ ಮತ್ತು ಗಂಧಕವನ್ನು ಹೊಂದಿರುತ್ತವೆ ಮತ್ತು ಅವು ಒಂದು ಶ್ರೇಣಿಯ ಅನಿಲಗಳನ್ನು ಉತ್ಪಾದಿಸುತ್ತವೆ. ಜೊತೆಗೆ, ಬಣ್ಣದ ಏಜೆಂಟ್ ಆಗಿ ಕಾರ್ಯನಿರ್ವಹಿಸುವ ಹಲವಾರು ರಾಸಾಯನಿಕಗಳು ಇವೆ, ಆಕ್ಸಿಡೈಸರ್, ಸ್ಟೇಬಿಲೈಸರ್ ಮತ್ತು ಬೈಂಡರ್ಗಳನ್ನು ಕಡಿಮೆ ಮಾಡುತ್ತವೆ. ಈ ಬಣ್ಣಗಳು ಮಿನುಗು ಪರಿಣಾಮಕ್ಕಾಗಿ ಆಂಟಿಮನಿ ಸಲ್ಫೈಡ್, ಬಿಳಿಗೆ ಅಲ್ಯೂಮಿನಿಯಂ, ಹಸಿರಿಗೆ ಬೇರಿಯಂ ನೈಟ್ರೇಟ್, ಕೆಂಪಿಗೆ ಲಿಥಿಯಂ, ತಾಮ್ರದ ನೀಲಿ ಮತ್ತು ಸ್ಟ್ರೋಂಷಿಯಂಗೆ ಕೆನ್ನೇರಳೆ ಬಣ್ಣ ಹೊಂದಿರುತ್ತವೆ. ಈ ರಾಸಾಯನಿಕ ಪದಾರ್ಥಗಳು ನಮ್ಮ ದೇಹಕ್ಕೆ ಅಪಾಯಕಾರಿ. ಅಲ್ಯೂಮಿನಿಯಂ ಮತ್ತು ಆಂಟಿಮನಿ ಸಲ್ಫೈಡ್ (ಬಣ್ಣದ ಏಜೆಂಟ್) ಆಲ್ಝೈಮರ್ನ ಕಾಯಿಲೆಗೆ ಕಾರಣವಾಗುತ್ತದೆ, ಪರ್ಕ್ಲೋರೇಟ್ (ಅಮೋನಿಯಮ್ ಮತ್ತು ಪೊಟ್ಯಾಸಿಯಮ್), ಆಕ್ಸಿಡೀಕರಿಸುವ ದಳ್ಳಾಲಿ, ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗಬಹುದು. ಇದು ಥೈರಾಯ್ಡ್ ತೊಂದರೆಗಳನ್ನು ಉಂಟುಮಾಡುತ್ತದೆ, ಕ್ಯಾಡ್ಮಿಯಮ್ ಸಂಯುಕ್ತಗಳು ಶ್ವಾಸಕೋಶಗಳನ್ನು ಹಾನಿಗೊಳಿಸುತ್ತವೆ ಮತ್ತು ಜೀರ್ಣಾಂಗವ್ಯೂಹದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಿತ್ರರೇ, ಈಗ ಯೋಚಿಸಿ. ಪಟಾಕಿಗಳ ಉಪಯೋಗವನ್ನು ನಾವು ಮಾಡಬೇಕೇ ಬೇಡವೇ ಎಂಬುದನ್ನು. ಸುಪ್ರೀಂ ಕೋರ್ಟ್ ದೀಪಾವಳಿಯಂದು ಪಟಾಕಿ ನಿಷೇಧಿಸಿದೆ ಅನ್ನುವ ಕಾರಣಕ್ಕೆ ಸಿಟ್ಟಾಗಿ ಇನ್ನಷ್ಟು ಪಟಾಕಿಗಳನ್ನು ಸಿಡಿಸುತ್ತೇವೆಂದು ಪಣ ತೊಟ್ಟಲ್ಲಿ ಇದರ ಕುರಿತಾಗಿ ಸ್ವಲ್ಪ ಚಿಂತಿಸಿ.
ಆಗಲೇ ಉಲ್ಲೇಖಿಸಿದ ಹಾಗೆ ದೀಪಾವಳಿ ದೀಪಗಳ ಹಬ್ಬ. ಶಾಂತ ರೀತಿಯಿಂದ ನೆಮ್ಮದಿಯಿಂದ, ಖುಷಿಯಿಂದ, ಯಾವುದೇ ಮಲಿನವಾಗಿಸದೇ ಆಚರಿಸುವುದಕ್ಕೆ ಸಾಧ್ಯವಿದೆಯೆಂದ ಮೇಲೆ ನಾವು ಸುಖಾಸುಮ್ಮನೆ ಮಲಿನ ಮಾಡುವುದರಲ್ಲಿ ಅರ್ಥವಿದೆಯಾ? ಪಟಾಕಿಗಳ ನಿಷೇಧ ಹಿಂದೂಗಳ ಹಬ್ಬಗಳ ಮೇಲಿನ ಹೇರಿಕೆಯೆಂದು ಪರಿಗಣಿಸದೇ ಪಕೃತಿ ಮಾತೆಗೆ ಹಬ್ಬಗಳ ಸಮರ್ಪಣೆ ಮಾಡೋಣ ಎಂಬ ಭಾವ ನಮ್ಮಲ್ಲೇಕೆ ಬಾರದು?
ಸನಾತನ ಪರಂಪರೆಯಲ್ಲಿ ನಡೆದು ಬಂದ ಆಚರಣೆಗಳು ಬಹಳ ಕಡಿಮೆಯಿದೆಯೆನ್ನುವುದು ಸ್ಪಷ್ಟವೇ. ಕಾರಣ, ಕಾಲಕ್ರಮೇಣ ಬದಲಾವಣೆಗಳು ಆ ಆಚರಣೆಗಳಿಗೆ ಸೇರಿಕೊಳ್ಳುತ್ತಾ ಹೋದುದು. ಅದಕ್ಕೆ ಪಟಾಕಿಯೂ ಒಂದು ಉದಾಹರಣೆ. ನಾವು ನವ ಆಚರಣೆ ಪ್ರಾರಂಭ ಮಾಡಿದರೆ ಮುಂದಿನ ಜನಾಂಗ ಆ ಆಚರಣೆಗಳನ್ನು ತಮಗೆ ಬೇಕಾದ, ಅಥವಾ ತಮ್ಮ ಅಗತ್ಯಕ್ಕೆ ಪೂರಕವಾಗುವಂತೆ ಆಚರಿಸಬಹುದು. ಅಂದರೆ ನಮ್ಮ ಕಾಲಘಟ್ಟದ ನಿರ್ಣಯಗಳು ನಮ್ಮ ಹಿಡಿತದಲ್ಲಿರುವುದು ಸತ್ಯವೇ. ಹಾಗಿರುವಾಗ ಯಾವುದು ಹಿತ ಯಾವುದು ಅಹಿತವೆನ್ನುವ ನಿರ್ಧಾರ ಮಾಡಬೇಕಾಗಿರುವುದು ನಾವುಗಳೇ. ಖಂಡಿತವಾಗಿಯೂ ಪಟಾಕಿ ನಿಷೇಧ ಮಾತ್ರದಿಂದ ವಾಯು ಮಾಲಿನ್ಯ ತಡೆ ಸಾಧ್ಯವಿಲ್ಲ. ಆದರೆ ಅದನ್ನು ತಡೆಯುವುದಕ್ಕೆ ಒಂದು ಹೆಜ್ಜೆಯಾಗಿ ನಾವು ಇಷ್ಟನ್ನಾದರೂ ಚಿಂತಿಸದಿದ್ದರೆ ಅದು ನಮ್ಮಿಂದಾದ ಪ್ರಮಾದ. ಯಾವತ್ತಾದರೂ ಒಂದು ದಿನ ಪಟಾಕಿ ನಿಷೇಧಿಸಲೇ ಬೇಕು. ಅದು ನಮ್ಮಿಂದಲೇ ಪ್ರಾರಂಭವಾಗಲಿ. ಇದು ಮನುಕುಲದ ಒಳಿತಿಗಾಗಿ ಅಷ್ಟೇ. ಅಜ್ಞಾನದ ಅಂಧಕಾರದಲ್ಲಿ ಅಪ್ಪಿದ ಪಿಶಾಚಿಯನ್ನು ವಿಸರ್ಜಿಸೋಣ. ಆಂಗ್ಲದಲ್ಲಿ ಒಂದು ಮಾತಿದೆಯಲ್ಲಾ.. “For the Change , Be the Change.”
ಒಟ್ಟಾರೆಯಾಗಿ ನಾವು ಆಚರಿಸುವ ಆಚರಣೆಗಳು ಹಬ್ಬಗಳು ಎಲ್ಲರ, ಎಲ್ಲವುಗಳ ಹಿತವನ್ನು ಕಾಪಾಡುವಂತಾಗಲಿ ಎಂಬ ಆಶಯವಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.