ತಿರುವನಂತಪುರಂ: ಕೇರಳದಲ್ಲಿ ಜನ ರಕ್ಷಾ ಯಾತ್ರೆ ಆರಂಭಿಸುವುದಕ್ಕೂ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಣ್ಣೂರಿನ ರಾಜರಾಜೇಶ್ವರ ದೇಗುಲದಲ್ಲಿ ಪ್ರಾರ್ಥನೆ ನಡೆಸಿದರು.
ಕೇರಳ ಸಿಎಂ ಪಿನರಾಯಿ ವಿಜಯನ್ ಅವರ ತವರು, ರಾಜಕೀಯ ಹಿಂಸಾಚಾರಕ್ಕೆ ಹೆಸರಾಗಿರುವ ಕಣ್ಣೂರಿನ ಪಿನರಾಯಿಯಿಂದಲೇ ಅವರು ಯಾತ್ರೆ ಆರಂಭಿಸಿದ್ದಾರೆ. ಈ ಮೂಲಕ ಸಿಎಂಗೆ ನೇರ ಸವಾಲು ಎಸೆದಿದ್ದಾರೆ.
ಇಂದಿನಿಂದ 15 ದಿನಗಳ ಕಾಲ ಯಾತ್ರೆ ನಡೆಯಲಿದ್ದು, ನೂರಾರು ಕಾರ್ಯಕರ್ತರೊಂದಿಗೆ ಕೇಂದ್ರ ಸಚಿವರುಗಳು ಭಾಗವಹಿಸಲಿದ್ದಾರೆ.
ಇಂದು ಕೇರಳದಲ್ಲಿ ಮಾತನಾಡಿದ ಷಾ, 150 ಆರ್ಎಸ್ಎಸ್ ಕಾರ್ಯಕರ್ತರ ಕೊಲೆಗೆ ಪಿನರಾಯಿ ವಿಜಯನ್ ಅವರೇ ಜವಾಬ್ದಾರರು. ಸಿಪಿಎಂ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.