ಅಂದು ಸೆಪ್ಟೆಂಬರ್ 21, 1918 ರ ಮಧ್ಯರಾತ್ರಿ 1.30 ….
ತುರ್ಕಿ ರಕ್ಷಣಾ ಪಡೆಯ 700 ಸೈನಿಕರು ತೈಬೀರಿಯಸ್ಗೆ ಲಗ್ಗೆಹಾಕಲು ಯತ್ನಿಸಿದರು
13ನೇ ಅಶ್ವದಳ ತುಕಡಿಯು ಹೊರವಲಯದ ಚೌಕಿಯ ಬಳಿ ಬಂದಾಗ ಅಂದಿನ ತಿಂಗಳ ಬೆಳಕಿನಲ್ಲಿ ಬ್ರಿಟಿಷರ 18ನೇ ಲಾನ್ಸ್ರ್ಸ್ ಸೇನೆಯು ತುರ್ಕರ ಸೇನೆಯ ಮೇಲೆ ಪ್ರತ್ಯಾಕ್ರಮಣ ಮಾಡಿತು.
ತುರ್ಕಿ ಸೇನೆಗೆ ಅಪಾರ ಪ್ರಾಣಹಾನಿ ಉಂಟಾಗಿ 311 ಸೈನಿಕರು ಹಾಗೂ ಅವರ ಬಳಿಯಿದ್ದ 4 ಮಶೀನ್ಗನ್ಗಳು ಆಂಗ್ಲರ ವಶವಾಯ್ತು.
ಅದೇ ಸಮಯಕ್ಕೆ ಹೈಫಾ ನಗರವು ತೆರೆದ ಮೈದಾನವಾಗಿದೆ ಎಂಬ ಗುಪ್ತ ಸೂಚನೆ ದೊರೆಯಿತು. ಸೆಪ್ಟೆಂಬರ್ 22 ರಾತ್ರಿ 1.30 ಕ್ಕೆ ಜನರಲ್ ಎ.ಡಿ.ಎ. ಕಿಂಗ್ ನೇತೃತ್ವದಲ್ಲಿ ಲಘು ವಾಹನಗಳ ತುಕಡಿಯೊಂದು ಹೈಫಾವನ್ನು ವಶಪಡಿಸಿಕೊಳ್ಳಲು ನಜರೆತ್ ರಸ್ತೆಯ ಮಾರ್ಗದಲ್ಲಿ ಮುನ್ನಡೆಯಿತು. ಮುಂದುವರಿದಂತೆ ತಮ್ಮ ದಾರಿಯನ್ನು ಅಡ್ಡಗಟ್ಟಲಾಗಿದೆ ಎಂದು ತಿಳಿಯಿತು. ಇದೇ ವೇಳೆ ಮೌಂಟ್ ಕಾರ್ಮೆಲ್ನ ಇಳಿಜಾರಿನಲ್ಲಿ ಅವಿತಿದ್ದ ತುರ್ಕಿ ಸೇನೆಯು ಬಾಂಬ್ ದಾಳಿ ಮತ್ತು ಮಶೀನ್ ಗನ್ಗಳಿಂದ ಗೋಲಿಬಾರ್ ಮಾಡಿತು. ಅಲ್ಪಸ್ವಲ್ಪ ಗಾಯಳೊಂದಿಗೆ ಬ್ರಿಟಿಷ್ ಸೇನೆ ಹಿಮ್ಮೆಟ್ಟಿತು.
ಇದಾದ ನಂತರ ನಡೆದ ಘಟನೆಗೆ ಇದು 99ನೇ ವರ್ಷ… ನೂರಕ್ಕೆ ಒಂದು ಬಾಕಿ
ಅದೇನೆಂದರೆ … ಯಹೂದಿಗಳ ತಾಯ್ನಾಡಾದ ಇಸ್ರೇಲ್ ದೇಶವು 1516 ರಿಂದ ಒಟ್ಟೋಮನ್ ತುರ್ಕರ ಆಳ್ವಿಕೆಯಲ್ಲಿತ್ತು. ಹೈಫಾ ಪಟ್ಟಣವು ಆ ದೇಶದ ಮೂರನೆ ದೊಡ್ಡ ನಗರ. ಅದು ಯಾರ ವಶವಾಗುವುದೋ ಅವರಿಗೆ ಹಲವು ರೀತಿಯ ಅನುಕೂಲಗಳು ದೊರೆಯುವುದಿತ್ತು. ಏಕೆಂದರೆ ಹೈಫಾ ಪಟ್ಟಣವು ಅಂಥ ಒಂದು ಆಯಕಟ್ಟಿನ ಜಾಗದಲ್ಲಿದೆ. ಅದು ಇಸ್ರೇಲ್ ದೇಶದ ಬಂದರು ನಗರ. ಆಹಾರ, ಮಾನವ ಸಂಪನ್ಮೂಲ, ಆಯುಧಗಳ ಸಾಗಾಟಕ್ಕೆ ಬಹಳ ಪ್ರಶಸ್ತವಾದ ಒಂದು ಜಾಗ. ಬ್ರಿಟಿಷರು ಇದನ್ನು ತಮ್ಮ ವಶಕ್ಕೆ ಪಡೆಯಲು ಹವಣಿಸುತ್ತಿದ್ದರು. ಆ ಪ್ರಯತ್ನದಲ್ಲೇ ತುರ್ಕರ ಕೈಲಿ ಒದೆ ತಿಂದಿದ್ದೂ ಆಯ್ತು. ಈ ಘಟನೆಯ ಮರುದಿನ ಮಧ್ಯರಾತ್ರಿಯೇ ಹೈಫಾದ ಬಿಡುಗಡೆಯ ಸುಮುಹೂರ್ತ ಕೂಡಿಬಂತು.
ಭಾರತದ ಹಲವು ರಾಜರು ತಂತಮ್ಮ ಸೇನೆಯನ್ನು ಬ್ರಿಟಿಷರ ಪರವಾಗಿ ಯುದ್ಧ ಮಾಡಲು ಆ ದಿನಗಳಲ್ಲಿ ಕಳುಹಿಸುತ್ತಿದ್ದದ್ದು ಸಾಮಾನ್ಯ. ಏಕೆಂದರೆ ಭಾರತವು ಆಂಗ್ಲರ ವಸಾಹತಿನ ಒಂದು ದೇಶವಾಗಿತ್ತು. ಮೊದಲನೇ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಭಾರತೀಯ ಸೇನೆಯು ಭಾಗವಹಿಸಿದ್ದು ಈ ಕಾರಣಗಳಿಂದ. ಹೈಫಾ ನಗರವನ್ನು ಒಟ್ಟೋಮನ್ ಆಳ್ವಿಕೆಯಿಂದ ಮುಕ್ತಗೊಳಿಸಲು ಭಾರತದ ಮೂವರು ಅರಸರು ತಮ್ಮ ಸೇನೆಯನ್ನು ರವಾನಿಸಿದ್ದರು. ಮೈಸೂರಿನ ಅರಸರು (ನಾಲ್ವಡಿ ಕೃಷ್ಣರಾಜ ಒಡೆಯರ್), ಜೊಧಪುರದ ರಾಜ, ಹೈದರಾಬಾದ್ ನಿಜಾಮ.
ಮೈಸೂರು ಸಂಸ್ಥಾನದಲ್ಲಿ ಚಕ್ರಾಧಿಪತ್ಯದ ರಕ್ಷಣೆಗಾಗಿ ನೇಮಕಗೊಂಡಿದ್ದ ಸೈನ್ಯವು ಎರಡು ವಿಭಾಗದಿಂದ ಕೂಡಿತ್ತು.
1. ಮೈಸೂರು ಇಂಪೀರಿಯಲ್ ಸರ್ವಿಸ್ ಲ್ಯಾನ್ಸರ್ಸ್ (ಈಟಿರಾವುತರ ಪಡೆ)
2. ಮೈಸೂರು ಇಂಪೀರಿಯಲ್ ಸರ್ವಿಸ್ ಟ್ರ್ಯಾನ್ಸ್ಪೋರ್ಟ್ ಕೋರ್ (ಇದರಲ್ಲಿ ಎತ್ತಿನ ಗಾಡಿಗಳು, ಕುದುರೆ ಗಾಡಿಗಳು, ತರಬೇತಿ ಪಡೆದ ಕುದುರೆಗಳು, ಹೇಸರ ಕತ್ತೆಗಳು, ಆಂಬುಲೆನ್ಸ್ ಗಾಡಿಗಳು)
ಈ ಎರಡೂ ವಿಭಾಗಗಳು ಮಧ್ಯಪ್ರಾಚ್ಯದಲ್ಲಿ – ಈಜಿಪ್ಟ್, ಪ್ಯಾಲೆಸ್ಟೀನ್, ಮೆಸಪೊಟೊಮಿಯಾ(ಇರಾಕ್) ಮತ್ತು ಆಫ್ರಿಕಾ ಖಂಡಗಳಲ್ಲಿ ಅನುಪಮ ಸೇವೆ ಸಲ್ಲಿಸಿದವು. ಇದಲ್ಲದೆ ಮೈಸೂರು ಸಂಸ್ಥಾನವು, ಭಾರತದ ಯುದ್ಧನಿಧಿಗೆ 50 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿತು. ಯುದ್ಧ ಸಾಮಗ್ರಿಗಳು, ಯುದ್ಧೋಪಕರಣಗಳ ತಯಾರಿಗೆ ಬೇಕಾದ ಲೋಹಗಳನ್ನು – ಕಬ್ಬಿಣ, ಅಭ್ರಕ, ಕ್ರೊಮೈಟ್, ಮರ-ಮಟ್ಟುಗಳು, ಕಂಬಳಿಗಳನ್ನು ಹೆಚ್ಚು ಹೆಚ್ಚಾಗಿ ಉತ್ಪಾದಿಸಿ ರಣರಂಗಕ್ಕೆ ಕಳುಹಿಸಿಕೊಟ್ಟಿತು.
ಅಂದು ರಣರಂಗದಿಂದ ಸೇನೆಯು ಹಿಮ್ಮೆಟ್ಟಿದ್ದು ಭಾರತೀಯ ಯೋಧರಿಗೆ ಒಂದಿನಿತೂ ಹಿಡಿಸಲಿಲ್ಲ. ಅಶ್ವದಳಪತಿ ಮೇಜರ್ ದಳಪತ್ ಸಿಂಗ್ ಶೇಖಾವತ್ಗೆ ರಾತ್ರಿ ಕನಸಿನಲ್ಲಿ ಪಾರ್ವತಿ ದೇವಿಯು ಕಾಣಿಸಿಕೊಂಡು ರಣರಂಗದಿಂದ ಹಿಂದೆ ಸರಿದಿದ್ದಕ್ಕಾಗಿ ಹಳಿದಳು. ಭಾರತದಲ್ಲಿ ರಾಜರಾಗಲಿ ಸಾಮಾನ್ಯ ಜನರಾಗಲಿ ಈ ಹೇಡಿತನಕ್ಕಾಗಿ ಎಂದೂ ನಿಮ್ಮನ್ನು ಕ್ಷಮಿಸರು ಎಂಬುದನ್ನು ನೆನಪಿಸಿದಳು. ತಾನು ಕಂಡ ಕನಸನ್ನು ದಳಪತ್ ಸಿಂಗ್ ತನ್ನ ಸೇನೆಯೊಂದಿಗೆ ಹಂಚಿಕೊಂಡಾಗ ಸೈನಿಕರು ಯುದ್ಧದಿಂದ ಹಿಮ್ಮೆಟ್ಟಿ ಅಪಮಾನ ಎದುರಿಸುವ ಬದಲು ವೀರರಂತೆ ಹೋರಾಡಿ ಸಾಯುವುದೇ ಮೇಲು ಎಂದು ತಮ್ಮ ದಳಪತಿಗೆ ತಿಳಿಸಿದರು. ಈ ಸಂಗತಿಯನ್ನು ಬ್ರಿಟಿಷ್ ಸೇನಾಧಿಕಾರಿಗಳಿಗೆ ತಿಳಿಸಲಾಯ್ತು. ಬ್ರಿಟಿಷ್ ಅಧಿಕಾರಿಗಳು ಶತ್ರು ಸೇನೆ ಬಲಿಷ್ಠವಾಗಿದೆ, ಸುರಕ್ಷಿತ ಹಾಗೂ ಆಯಕಟ್ಟಿನ ಜಾಗದಲ್ಲಿದೆ ಎಂದು ವಿವರಿಸಿದರು. ಆದರೆ ಭಾರತೀಯ ಸೇನೆಯ ಆತ್ಮವಿಶ್ವಾಸವನ್ನು ಕಂಡು ತುರ್ಕಿ ಸೇನೆಯ ಮೇಲೆ ದಾಳಿ ಮಾಡಲು ಅನುಮತಿ ಕೊಟ್ಟರು.
ಜೋಧಪುರ ಮತ್ತು ಮೈಸೂರು ಮಹಾರಾಜರ ಸೇನೆಯು ಅಶ್ವಾರೋಹಿಯಾಗಿ ಕೈಯಲ್ಲಿ ಈಟಿ ಮತ್ತು ಖಡ್ಗವನ್ನು ಹಿಡಿದು ಸೆಪ್ಟೆಂಬರ್ 23, 1918 ರ ನಸುಕಿನಲ್ಲಿ (ಬೆಳಿಗ್ಗೆ 5.30) ಹೈಫಾದ ಕಡೆಗೆ ಮುನ್ನಡಿಯಿಟ್ಟಿತು. ಅವರ ದಾರಿಯು ಮೌಂಟ್ ಕಾರ್ಮೆಲ್ ಪರ್ವತ ಶ್ರೇಣಿಗೆ ಆತುಕೊಂಡು ಕಿಶೋನ್ ನದಿ ಮತ್ತು ಅದರ ಉಪನದಿ, ಝರಿ, ತೊರೆಯಿಂದ ತೇವಗೊಂಡು ಜೌಗು ನೆಲವಾಗಿದ್ದ ಕಡಿದಾದ ಹಾದಿಯಾಗಿತ್ತು. ಅಶ್ವದಳದವರು ಇಷ್ಟು ಕಡಿದಾದ ಮಾರ್ಗದಲ್ಲಿ ಯುದ್ಧ ಮಾಡುವುದು ಅಸಾಧ್ಯವಾಗಿತ್ತು. 15ನೇ ಅಶ್ವದಳ ತುಕಡಿಯು ಬೆಳಿಗ್ಗೆ 10.15 ಕ್ಕೆ ಹೈಫಾ ನಗರವನ್ನು ತಲುಪಿದಾಗ ಮೌಂಟ್ ಕಾರ್ಮೆಲ್ ಮೇಲೆ ಸನ್ನದ್ಧವಾಗಿದ್ದ ತುರ್ಕಿ ಸೇನೆಯು 77mm ಬಂದೂಕುಗಳಿಂದ ಗುಂಡಿನ ಸುರಿಮಳೆಗರೆಯಿತು. ಜರ್ಮನಿ ಮತ್ತು ಆಸ್ಟ್ರಿಯಾದ ಸಹಕಾರದೊಂದಿಗೆ ತುರ್ಕಿ ಸೇನೆಯು ಮೌಂಟ್ ಕಾರ್ಮೆಲ್ ಮೇಲೆ ಆಧುನಿಕ ತೋಪುಗಳೊಂದಿಗೆ ತಯಾರಾಗಿತ್ತು. ತುರ್ಕಿ ಸೇನೆಯು ಹೈಫಾವನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿತ್ತು.
ಮೈಸೂರು ಲ್ಯಾನ್ಸರ್ಸ್ನ ಕಾಳಗಪಡೆಯು ಶೆರ್ವುಡ್ ರೇಂಜರ್ಸ್ ಕಾಳಗಪಡೆಯ ಸಹಾಯದೊಂದಿಗೆ ದಕ್ಷಿಣ ಭಾಗದಿಂದ ಮೌಂಟ್ ಕಾರ್ಮೆಲ್ ಶಿಖರವನ್ನೇರಿತು. ಕಾರ್ಮೆಲ್ ಪರ್ವತಶ್ರೇಣಿಯಲ್ಲಿ ಶತ್ರುಗಳನ್ನು ಚಕಿತಗೊಳಿಸಿದ ಮೈಸೂರು ಸ್ಯನಿಕರು ನೌಕಾದಳದ 2 ತೋಪುಗಳನ್ನು ವಶಪಡಿಸಿಕೊಂಡು ವೈರಿಗಳ ಗುಂಡಿನ ಸುರಿಮಳೆಗೆ ಹೆದರದೆ ಧೀರರಂತೆ ಮುನ್ನುಗ್ಗಿದರು.
ಮಧ್ಯಾಹ್ನ 2.00 ಗಂಟೆಗೆ ’ಬಿ’ ಬ್ಯಾಟರಿ HAC ಸಹಾಯದಿಂದ ಜೋಧಪುರ ಲ್ಯಾನ್ಸರ್ಸ್ ಪಡೆಯು ಹೈಫಾದ ಮೇಲೆ ಮುಗಿಬಿದ್ದಿತು. ಕಠಿಣ ಪ್ರತಿರೋಧವನ್ನು ಲೆಕ್ಕಿಸದೆ ವೈರಿಗಳ ಮಶೀನ್ ಗನ್ಗಳ ಗುಂಡಿನ ಸುರಿಮಳೆಯನ್ನೂ ಲೆಕ್ಕಿಸದೆ ಅವರತ್ತ ಭಾರತೀಯ ಸೈನಿಕರು ಮುನ್ನುಗ್ಗಿದರು. ಸತತ ಯುದ್ಧದ ನಂತರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರತೀಯ ಅಶ್ವದಳವು ಒಟ್ಟೋಮನ್ ತುರ್ಕರಿಂದ ಹೈಫಾವನ್ನು ವಶಪಡಿಸಿಕೊಂಡಿತು. ಯುದ್ಧದಲ್ಲಿ 1352 ಯುದ್ಧ ಕೈದಿಗಳ ಜೊತೆಗೆ 17 ಬಂದೂಕು, 11 ಮಶೀನ್ ಗನ್ಗಳು ವಶವಾದವು.
ಭಾರತೀಯ ಸೈನಿಕರ ಈ ಸಾಹಸವನ್ನು ಅಧಿಕೃತವಾದ ಯುದ್ಧೇತಿಹಾಸದಲ್ಲಿ ದಾಖಲಿಸಲಾಗಿದೆ. Military operation Egypt and palestine (Vol-2), ಅಭಿಯಾನದುದ್ದಕ್ಕೂ ಈ ಪ್ರಮಾಣದ ಅಶ್ವದಳದ ಕಾರ್ಯಾಚರಣೆಗೆ ಹೋಲಿಸುವಂತಹ ಇನ್ನೊಂದು ದೃಷ್ಟಾಂತವಿಲ್ಲ ಮೇಲಿಂದ ಮೇಲೆ ತೂರಿ ಬರುತ್ತಿದ್ದ ಮಶೀನ್ಗನ್ನಿನ ಗುಂಡುಗಳು ಸಹ ನಾಗಾಲೋಟದಿಂದ ನುಗ್ಗಿ ಬರುತ್ತಿದ್ದ ಕುದುರೆಗಳನ್ನು ತಡೆಯಲಾಗಲಿಲ್ಲ. ಅಂದು ಗಾಯಗೊಂಡ ಕುದುರೆಗಳಲ್ಲಿ ಹಲವು ಕುದುರೆಗಳು ಮುಂದಿನ ದಿನಗಳಲ್ಲಿ ಅಸುನೀಗಿದವು. ಅಶ್ವದಳವೊಂದು ನಾಗಾಲೋಟದಿಂದ ಧಾವಿಸಿ ಸುಭದ್ರವಾಗಿ ಸಂರಕ್ಷಿಸಿದ್ದ ನಗರವನ್ನು ಜಯಿಸಿದ ಏಕೈಕ ಉದಾಹರಣೆ ಇತಿಹಾಸಕ್ಕೆ ತಿಳಿದಿರುವುದು ಇದೊಂದೇ ಇರಬಹುದು.
ಬ್ರಿಟಿಷ್ ಭಾರತದಲ್ಲಿ 1942 ರಿಂದ ಸೇನೆಯ ದಂಡನಾಯಕನಾಗಿದ್ದ ಫೀಲ್ಡ್ ಮಾರ್ಷಲ್ ಸರ್ ಕ್ಲಾಡ್ ಆಶ್ಲೆಕ್ನ ಪ್ರಕಾರ -ಭಾರತೀಯ ಸೇನೆಯ ಸಹಕಾರವಿಲ್ಲದೆ, ವಿಶ್ವದ ಎರಡು ಜಾಗತಿಕ ಮಹಾಯುದ್ಧಗಳಲ್ಲಿ ಬ್ರಿಟನ್ ಜಯಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮಾತುಗಳನ್ನು ಮೊದಲನೇ ಮತ್ತು ಎರಡನೇ ಮಹಾಯುದ್ಧಗಳ ಸೈನಿಕ ದಾಖಲೆಗಳು (Military records) ಮತ್ತು ರಣಭೂಮಿಯ ಯುದ್ಧವರದಿ (War dispatches)ಗಳು ಸಾಬೀತು ಪಡಿಸುತ್ತವೆ.
ಹೈಫಾದ ಈ ಯುದ್ಧದಲ್ಲಿ ಭಾರತೀಯ ಸ್ಯನಿಕರಿಗೆ ಮೂರು ಪ್ರಮುಖ ಅಡಚಣೆಗಳು ಎದುರಾದವು. 1. ಮೈಸೂರು ಹಾಗೂ ಜೋಧಪುರದ ಸೇನೆಯು ಅಲ್ಲಿಗೆ ತಲಪುವ ಮುನ್ನವೇ ಜರ್ಮನ್, ಆಸ್ಟ್ರಿಯಾ ಹಾಗೂ ತುರ್ಕಿಯ ಸಂಯುಕ್ತ ಸೇನೆಯು ಬೀಡುಬಿಟ್ಟಾಗಿತ್ತು. ತಡವಾಗಿ ರಣರಂಗವನ್ನು ಪ್ರವೇಶಿಸುವ ಸೇನೆಯು ರಕ್ಷಣಾತ್ಮಕವಾಗಿ ವ್ಯವಹರಿಸುವ ಸಂದರ್ಭ ಬರುತ್ತದೆ. (ಸೈನಿಕೀಯ ಭಾಷೆಯಲ್ಲಿ ಇದು Second to arrive). 2. ಅಪರಿಚಿತ ಯುದ್ಧಭೂಮಿ (Unfamiliar terrain). 3. ಸ್ಯನಿಕರ ಕೈಲಿದಿದ್ದು ಆಧುನಿಕವಲ್ಲ ಬದಲಾಗಿ ಪ್ರಾಚೀನ ಆಯುಧಗಳಾದ ಈಟಿ, ಕತ್ತಿ ಮತ್ತು ಭರ್ಜಿ (Traditional weapons).
ಸ್ವತಂತ್ರಕಂಡ ನಂತರ ಇಸ್ರೇಲ್ ತನಗಾಗಿ ಮಡಿದ ಭಾರತೀಯ ಸೈನಿಕರ ಸ್ಮಾರಕಗಳನ್ನು ನಿರ್ಮಿಸಿದೆ. ಅಲ್ಲಿನ ಪಠ್ಯಪುಸ್ತಕಗಳಲ್ಲಿ ಭಾರತೀಯ ಸೈನಿಕರ ವೀರಗಾಥೆಯನ್ನು ಉಲ್ಲೇಖಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಹೈಫಾ ದಿನವನ್ನು ಆಚರಿಸುತ್ತದೆ.
ಕರ್ನಲ್ ಹಾರ್ವಿಯವರು ಮೇ. ದಳಪತ್ ಸಿಂಗ್ರ ಬಲಿದಾನವನ್ನು ಗೌರವಿಸುತ್ತ ಹೀಗೆ ನುಡಿದಿದ್ದಾರೆ. ಅವರ ಸಾವು ಕೇವಲ ಜೋಧಪುರದವರಿಗಷ್ಟೇ ಅಲ್ಲ, ಸಂಪೂರ್ಣ ಭಾರತ ಮತ್ತು ಬ್ರಿಟಿಷ್ ಸಾಮ್ರಾಜ್ಯಕ್ಕೆ ತುಂಬಲಾರದ ನಷ್ಟ ಬ್ರಿಟಿಷ್ ಸರ್ಕಾರವು ದಳಪತ್ ಸಿಂಗ್ರ ಶೌರ್ಯವನ್ನು ಕೊಂಡಾಡುತ್ತ ಅವರಿಗೆ Hero of Haifa ಎಂಬ ಬಿರುದಿನಿಂದ ಸಮ್ಮಾನಿಸಿತು.
ಮಾರವಾಡದ ಸರ್ಕಾರವು ಪ್ರತಾಪ ಶಾಲೆಯ ಆವರಣದಲ್ಲಿ ದಳಪತ್ ಮೆಮೋರಿಯಲ್ ಹಾಲ್ ನಿರ್ಮಿಸಿದೆ. ಮಹಾರಾಜ ಉಮೇದ್ ಸಿಂಗ್ರವರು ಮೇ.ದಳಪತ್ ಸಿಂಗ್ರ ಬೆಳ್ಳಿ ಮೂರ್ತಿಯನ್ನು ಸಿದ್ಧಪಡಿಸಿ ಜಯಪುರದ 61ನೇ ಅಶ್ವದಳದ ಗೌರವದ ಪ್ರತೀಕವಾಗಿ ಸ್ಥಾಪಿಸಿದ್ದಾರೆ.
ಮೇ.ದಳಪತ್ ಸಿಂಗ್ರ ಶೌರ್ಯಗಾಥೆಯು ರಾಜಸ್ಥಾನದ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ರಾಜಸ್ಥಾನದ ಶ್ರೇಷ್ಠ ಕವಿ ಶ್ರೀ ಕಿಶೋರ ದಾನ್ ಬಾರಾಥ್ ಅವರು ವೀರ ವಿಲಾಸ ಮತ್ತು ದಳಪತ್ ರಾಸೋ ಎಂಬ ಕವಿತೆಗಳನ್ನು ರಾಜಸ್ಥಾನಿ ಭಾಷೆಯಲ್ಲಿ ರಚಿಸಿದ್ದಾರೆ. ಬ್ರಿಟಿಷ್ ಸರ್ಕಾರವು ದಳಪತ್ ಸಿಂಗ್ರ ಶ್ರೇಷ್ಠ ಬಲಿದಾನವನ್ನು ಪ್ರಶಂಸಿಸಿದ್ದಷ್ಟೇ ಅಲ್ಲದೇ ಲಂಡನ್ನ ಓರ್ವ ಮೂರ್ತಿಕಾರ ಲಿಯೋನಾರ್ಡ್ ಬೆನ್ನಿಂಗ್ಸ್ನಿಂದ 1652 ರಲ್ಲಿ ಮೊದಲ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಇನ್ನಿಬ್ಬರು ವೀರರ ಮೂರ್ತಿಯನ್ನು ಸಿದ್ಧಪಡಿಸಿತು. ಮೂರು ಮೂರ್ತಿಗಳನ್ನು ಒಂದರ ಪಕ್ಕ ಒಂದರಂತೆ ಏಕಶಿಲೆಯ ಮೇಲೆ ದೆಹಲಿಯಲ್ಲಿ ಸ್ಥಾಪಿಸಲಾಗಿದೆ. ಈ ಸ್ಥಳವನ್ನೇ ತೀನ್-ಮೂರ್ತಿ ಚೌಕ್ ಎಂದು ಕರೆಯುವುದು.
ಇಸ್ರೇಲ್ ಸ್ವಾತಂತ್ರ್ಯದ ಹೆಬ್ಬಾಗಿಲನ್ನು ತೆರೆದು ಜಗತ್ತಿಗೆ ಭಾರತದ ಪರಾಕ್ರಮದ ಪರಿಚಯ ಮಾಡಿಸಿದ ಆ ಎಲ್ಲ ವೀರ ಯೋಧರ ಸ್ಮೃತಿಗಿಂದು ಪುಷ್ಪಾಂಜಲಿ ಸಲ್ಲಿಸುವಾಗ ಎದೆಯುಬ್ಬಿದೆ, ತಲೆ ಎತ್ತಿದೆ ಆದರೆ ಕಣ್ಣಾಲಿಗಳು ಮಾತ್ರ ತೇವವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.