ಬಾಗಲಕೋಟೆ: ಮುಂಬರುವ ಚುನಾವಣೆಯಲ್ಲಿ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿಯಲು ಈಗಲೇ ಪ್ರಮುಖ ರಾಜಕಿಯ ಪಕ್ಷಗಳು ಪೈಪೋಟಿಗೆ ಇಳಿದಿವೆ. ಪ್ರಮುಖ ರಾಜಕಿಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಹೇಗಾದರೂ ಮಾಡಿ ಉತ್ತರ ಕರ್ನಾಟಕವನ್ನು ಗೆಲ್ಲಲು ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿವೆ.
ಶತಾಯಗತಾಯ ಉತ್ತರ ಕರ್ನಾಟದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಏನೆಲ್ಲ ರಣತಂತ್ರಗಳಿಗೆ ಮೊರೆ ಹೋಗಿರುವ ಪಕ್ಷಗಳು ಇದೀಗ ಹಾಲಿ, ಮಾಜಿ ಮುಖ್ಯಮಂತ್ರಿಗಳನ್ನು ಉತ್ತರ ಕರ್ನಾಟಕದಲ್ಲಿ ವಿಧಾನ ಸಭೆ ಕ್ಷೇತ್ರಗಳಿಂದ ಕಣಕ್ಕಿಳಿಸಲು ಹಾತೊರೆಯಲಾರಂಭಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇನ್ನೋರ್ವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉತ್ತರ ಕರ್ನಾಟಕದ ಅದರಲ್ಲೂ ಅಖಂಡ ವಿಜಯಪುರ ಜಿಲ್ಲೆಯ ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.
ಅಖಂಡ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ದಿ. ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಮತ್ತು ರಾಮಕೃಷ್ಣ ಹೆಗಡೆ ಸ್ಪರ್ಧಿಸಿದ್ದರು ಎನ್ನುವುದು ಇತಿಹಾಸ. ಸ್ಪರ್ಧಿಸಿದ ಮೂವರಲ್ಲಿ ಅಖಂಡ ವಿಜಯಪುರ ಜಿಲ್ಲೆಯ ಜನತೆ ದಿ. ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಆದರೆ ರಾಮಕೃಷ್ಣ ಹೆಗಡೆ ಅವರಿಗೆ ಸೋಲಿನ ರುಚಿ ತೋರಿಸಿದ್ದರು.
ಹೀಗೆ ರಾಜ್ಯ ಹಾಗೂ ರಾಷ್ಟ್ರನಾಯಕರಿಗೆ ಸೋಲು ಗೆಲುವಿನ ರುಚಿ ತೋರಿಸಿರುವ ಅಖಂಡ ವಿಜಯಪುರ ಜಿಲ್ಲೆಯಿಂದ 2018ರ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಕಾರ್ಯಕರ್ತರು ಒತ್ತಡ ಹಾಕಲಾರಂಭಿಸಿದ್ದಾರೆ. ಹಾಗೆ ಸುರಕ್ಷಿತ ಕ್ಷೇತ್ರಗಳ ಹುಡುಕಾಟ ನಡೆಸಿದ್ದು, ಕೆಲ ಕ್ಷೇತ್ರಗಳ ಹೆಸರನ್ನೂ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕುರುಬ ಸಮಾಜದ ಪ್ರಬಲ ಓಟ್ಬ್ಯಾಂಕ್ ಆಗಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದರೆ, ಜತೆಗೆ ಬೀಳಗಿ ಕ್ಷೇತ್ರವನ್ನೂ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಿಲ್ಲೆಯ ಬಿಜೆಪಿ ಮುಖಂಡರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಬಿ.ಎಸ್. ಯಡಿಯೂರಪ್ಪನವರಿಗೆ ಜಿಲ್ಲೆಯ ತೇರದಾಳ ಕ್ಷೇತ್ರ ಹೆಚ್ಚು ಸುರಕ್ಷಿತ ಎನ್ನುವುದು ಬಿಜೆಪಿಗರ ವಾದವಾಗಿದೆ. ಇಲ್ಲಿ ಲಿಂಗಾಯತರ ಮತಗಳು ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಿಸಲು ಮನೆಯನ್ನೇ ಮಾಡಿ ಪಕ್ಷ ಸಂಘಟನೆ ಆರಂಭಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪರಗಿಯಿಂದ ಸ್ಪರ್ಧಿಸಲು ಎಚ್ಡಿಕೆ ಅವರಿಗೆ ಒತ್ತಡ ಹೆಚ್ಚಿದೆ. ಈ ಕ್ಷೇತ್ರವನ್ನು ಹಾಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರ ಬಿಟ್ಟುಕೊಟ್ಟು, ತಾವು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಜತೆಗೆ ಎಚ್ಡಿಕೆ ಅವರನ್ನು ಗೆಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ.
ಹೀಗೆ ಆಯಾ ಪಕ್ಷಗಳ ಸಿಎಂ ಹುದ್ದೆ ಆಕಾಂಕ್ಷಿಗಳೆಲ್ಲ ಉತ್ತರ ಕರ್ನಾಟಕದತ್ತ ಅದರಲ್ಲೂ ಅಖಂಡ ಜಿಲ್ಲೆಯತ್ತ ಸ್ಪರ್ಧೆಗೆ ಇಳಿಯಬೇಕು ಎನ್ನುವುದು ಮುಖಂಡರ ಒತ್ತಾಸೆಯಾಗಿದೆ. ಸ್ಪರ್ಧೆಯ ಬಗ್ಗೆ ಯಾರೂ ಸ್ಪಷ್ಟನೆ ನೀಡಿಲ್ಲವಾದರೂ ಇವರೆಲ್ಲ ಇಲ್ಲಿಂದಲೇ ಸ್ಪರ್ಧಿಸಬೇಕು ಎನ್ನುವುದು ಮುಖಂಡರ ಆಶಯವಾಗಿದೆ. ಸಿಎಂ ಅಭ್ಯರ್ಥಿಗಳು ಈ ಭಾಗದಲ್ಲಿ ಸ್ಪರ್ಧಿಸುವುದರಿಂದ ಉಳಿದವರ ಆಯ್ಕೆ ಅನುಕೂಲವಾಗಲಿದೆ ಎನ್ನುವುದು ಬಹುತೇಕರ ಲೆಕ್ಕಾಚಾರವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಎಸ್ವೈ ಮತ್ತು ಎಚ್ಡಿಕೆ ಸ್ಪರ್ಧೆ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆ ಆರಂಭಗೊಂಡಿದೆ. ಅಂತಿಮವಾಗಿ ಅವರು ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ಸ್ಪಷ್ಟವಾಗಲೂ ಸಾಕಷ್ಟು ಸಮಯ ಇದೆಯಾದರೂ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಬೇಕು ಎನ್ನುವ ಒತ್ತಡ ಮಾತ್ರ ಹೆಚ್ಚಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.