Sunday, May 24th, 2015
News13
ಪೆರ್ಲ : ಇದು ಎರಡು ಬಾಹುಗಳು, ಎರಡು ತೋಳುಗಳಿಂದ ಮಾಡಬಹುದಾದ ಕೆಲಸವಲ್ಲ. ಇದಕ್ಕೆ ಸಹಸ್ರ ಬಾಹುಗಳು, ಸಾವಿರ ಹೃದಯಗಳು, ಸಾವಿರ ಶಿರಗಳು ಅಗತ್ಯವಿದೆ. ಆದ್ದರಿಂದಲೇ ‘ಸಹಸ್ರಾಕ್ಷ ಸಹಸ್ರಪಾತ್’ ಎನ್ನುತ್ತೇವೆ. ಗೋಸಾಮ್ರಾಜ್ಯದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ.
ಸದ್ಯ ಸಮಾಜದಲ್ಲಿ ನೂರಾರು, ಸಾವಿರಾರು ಗೋಜ್ಯೋತಿಗಳು ಬೆಳಗುತ್ತಾ ಇವೆ. ವೇದಿಕೆಯ ಸುತ್ತ ಮುತ್ತ, ಮೇಲೆ ಕೆಳಗೆ ನಿಂತಿರುವ ನೀವೆಲ್ಲ ಗೋಜ್ಯೋತಿಗಳು. ನೀವೆಲ್ಲ ಬೆಳಗಿದರೆ ಕತ್ತಲೆ ಇನ್ನೆಲ್ಲಿ ಇರಲು ಸಾಧ್ಯ. ಹೊಸ ತಲೆಮಾರು ಸಿದ್ಧವಾಗುತ್ತಿದೆ, ಜವಾಬ್ದಾರಿಯಿಂದ ಹಿಮ್ಮೆಟ್ಟದ ಯುವಕರು ಸಿದ್ಧರಾಗುತ್ತಿದ್ದಾರೆ. ಅವರು ಈ ಸಮಾಜ ಕ್ಷೇಮದ ಭಾರವನ್ನು ಹೊತ್ತುಕೊಳ್ಳಲು ಸಿದ್ಧರಾಗುತ್ತಿದ್ದಾರೆ. ದೀಪಕ್ಕೆ ಸಹಾಯಕವಾಗುವ ಹಣತೆಗಳಂತೆ ನಾವು ನೀವೆಲ್ಲ ಸೇರಿ ಗೋಸಂಪತ್ತನ್ನು ಉಳಿಸಿಕೊಳ್ಳೋಣ. ಎಲ್ಲೇ ಇದ್ದರೂ, ಹೇಗೇ ಇದ್ದರೂ ಗೋಪ್ರೇಮಿಯಾಗಿ ಇರಬಹುದು. ಗೋ ಸೇವೆ ಮಾಡುವುದು ಸ್ವರ್ಗಕ್ಕೆ ದಾರಿ. ಮನೆಗಳಲ್ಲಿ, ಮನಸ್ಸಿನಲ್ಲಿ ಗೋ ಸಾಕಣೆಯನ್ನು ಆರಂಭಿಸಿ, ಸಾಧ್ಯವಾಗದಿದ್ದರೆ ಇಲ್ಲಿ ಗೋಸಾಕಣೆಗೆ ಸಹಕಾರ ನೀಡಿ. ಬಜಕೂಡ್ಲು ಗೋಶಾಲೆ ನಮ್ಮ ಹೆಮ್ಮೆಯ ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿ ಅಮೃತಧಾರೆ ಹರಿಯಲಿ.
ಗೋ ಸಂರಕ್ಷಣೆ, ಗೋ ಸಂವರ್ಧನೆ, ಗೋ ಸಂಶೋಧನೆ, ಗೋ ಸಂಬೋಧನೆಯ ಮಹತ್ತರವಾದ ಕಾಮದುಘಾ ಯೋಜನೆ ವಿಶ್ವವ್ಯಾಪಿಯಾಗಿ ಬೆಳೆಯಲಿ, ಇದಕ್ಕೆ ಬಜಕೂಡ್ಲು ಹೆಮ್ಮೆಯ ಕೇಂದ್ರವಾಗಿ ಪರಿಣಮಿಸಲಿ. ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮೀಜಿಗಳು ಆಶೀರ್ವದಿಸಿದರು. ಅವರು ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಅಂಗವಾಗಿ ಕಾಸರಗೋಡು ಗಿಡ್ಡ ತಳಿಯ ಹಸುಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಂಬೋಧನೆಯ ಉದ್ದೇಶದಿಂದ ಕಾಸರಗೋಡು ಬ್ರೀಡ್ ಕನ್ಸರ್ವೇಶನ್ ಚಾರಿಟೇಬಲ್ ಟ್ರಸ್ಟ್ ಕೈಗೆತ್ತಿಕೊಂಡಿರುವ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ‘ಸುರಭಿ ಸಮರ್ಪಣಮ್’ ನೆರವೇರಿಸಿ ಆಶೀರ್ವದಿಸಿದರು.
“ಅಂತರ್ಗತವಾದ ಭಕ್ತಿ ಇದ್ದರೆ ಗುರುಗಳನ್ನು ಹತ್ತಿರದಿಂದ ಕಾಣಬಹುದು. ಮಾರ್ಗದರ್ಶಕನಾದ ಗುರುವಿನ ಆರಾಧನೆ ಅತ್ಯಂತ ಅಗತ್ಯ. ಬರಡು ಭೂಮಿಯಲ್ಲಿ ಹುಲ್ಲು ಬೆಳೆಸಿ ಗೋ ಸಂರಕ್ಷಣೆಗೆ ನಮ್ಮನ್ನು ತೊಡಗಿಸಿಕೊಳ್ಳೋಣ. ಆಮೂಲಕ ಜೀವನವನ್ನು ಪಾವನಗೊಳಿಸೋಣ ಎಂದು ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವದಿಸಿದರು.
ಜಿಲ್ಲಾ ಪಂಚಾಯತು ಸದಸ್ಯ ಶಂಕರ ರೈ, ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯ ಶಂಕರ ಎಂ ಎಸ್, ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ ಎಸ್, ಉದ್ಯಮಿ ವಸಂತ ಪೈ ಬದಿಯಡ್ಕ, ಕರ್ನಾಟಕ ಬ್ಯಾಂಕ್ ಹಿರಿಯ ಪ್ರಬಂಧಕ ಜಯರಾಮ ಹಂದೆ, ಮಾಧ್ಯಮ ಸಲಹೆಗಾರ ವಿಜಯಕೃಷ್ಣ, ‘ಆತ್ಮಾ’ ದ ಸಹಾಯಕ ಯೋಜನಾ ನಿರ್ದೇಶಕರಾದ ಡಾ. ಜಯಪ್ರಕಾಶ್ ಲಾಡ, ಎಣ್ಮಕಜೆ ಕೃಷಿ ಅಧಿಕಾರಿ ಮೀರಾ, ಪಶುವೈದ್ಯಾಧಿಕಾರಿ ಡಾ. ವೈಖರಿ, ಮಂಗಳೂರಿನ ಉದ್ಯಮಿ ಕಮಲಾಕಾಂತ ಶರ್ಮ, ಕ್ಯಾಂಪ್ಕೋ ಸಂಸ್ಥೆಯ ಮಾಜಿ ಆಡಳಿತ ನಿರ್ದೇಶಕ ಎ. ಎಸ್. ಭಟ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಸಂಯೋಜಕರಾದ ಶ್ರೀಮತಿ ಸಂಧ್ಯಾ ವಿ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಕೋಂಕೋಡಿ ಪದ್ಮನಾಭ ಭಟ್ ಮತ್ತು ಹುಬ್ಬಳ್ಳಿ ಅನನ್ಯ ಫೀಡ್ಸ್ ಸಂಸ್ಥೆಯ ಡಿ. ಗೋವಿಂದ ಭಟ್, ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಾಧಿಕಾರಿ ಟಿ. ಮಡಿಯಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜನನೀ ಜನಾರ್ದನ ಗೋಸೇವಾ ಸಮಿತಿಯ ಅಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ದಿಕ್ಸೂಚಿ ಭಾಷಣ ಮಾಡಿದರು. ಗಣರಾಜ ಕಡಪ್ಪು ದಂಪತಿಗಳು ಫಲ ಸಮರ್ಪಣೆಯನ್ನು ಮಾಡಿದರು. ಚಿತ್ರಕಲಾ ಶಿಕ್ಷಕ ಕೃಷ್ಣಪ್ರಸಾದ ಬನಾರಿ ದಂಪತಿಗಳು ಸಭಾಪೂಜೆ ನೆರವೇರಿಸಿದರು. ಎಣ್ಮಕಜೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷೆ ಪುಷ್ಪಾ ಅಮೆಕ್ಕಳ ಕಾರ್ಯಕ್ರಮದ ಅವಲೋಕನ ನಡೆಸಿದರು. ಶಿಕ್ಷಕ ಉಮೇಶ್ ಪೆರ್ಲ ಮತ್ತು ನಿವೃತ್ತ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಗೋಪೂಜೆ, ಗೋದಾನ, ಕೃಷ್ಣಾರ್ಪಣ, ನವಗ್ರಹರಿಗೆ ನವಧಾನ್ಯ ಸಮರ್ಪಣೆ, ನವಗ್ರಹ ಶಾಂತಿ ಪ್ರಾರಂಭ, ಗೋಪಾಲಕೃಷ್ಣ ಹವನ ಪ್ರಾರಂಭ, ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀಗುರುಪಾದುಕಾ ಪೂಜೆ, ಶ್ರೀಗುರುಭಿಕ್ಷಾ ಸೇವೆ ನಡೆದವು. ಇದೇ ಸಂದರ್ಭದಲ್ಲಿ ಮಾ ಗೌ ಪ್ರೊಡಕ್ಟ್ಸ್ ಹೊರತಂದಿರುವ ಧೂಪವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.