ಮೂಡುಬಿದಿರೆ: ಬಾಲ್ಯದಲ್ಲಿ ಸಮಾರ್ಪಕವಾದ ಮಾರ್ಗದರ್ಶನ, ಪೂರಕವಾದ ವಾತಾವರಣ ಹಾಗೂ ವಿದ್ಯಾರ್ಥಿಯ ಕಠಿಣ ಪರಿಶ್ರಮ ಸಮ್ಮಿಲನಗೊಂಡಾಗ ಯಶಸ್ಸು ಸಾದ್ಯ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಹರೀಶ್ ಭಟ್ ತಿಳಿಸಿದರು.
ಪುತ್ತಿಗೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ‘ಆಳ್ವಾಸ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಫೇರ್ 2017-18’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಸ್ತು ಬದ್ದ ಕಲಿಕೆ, ಸಂಶೋಧನಾ ಪ್ರವೃತ್ತಿ ಹಾಗೂ ವೈಜ್ಞಾನಿಕ ಮನೋಭಾವ ವಿದ್ಯಾರ್ಥಿಗಳು ಬಾಲ್ಯದಲ್ಲಿಯೆ ಮೈಗೂಡಿಸಿಕೊಳ್ಳಬೇಕಾದ ಅಂಶಗಳು. ಆಳ್ವಾಸ್ ವಿದ್ಯಾರ್ಥಿಗಳು ತಯಾರಿಸಿರುವ ವಿಜ್ಞಾನ ಮಾದರಿಗಳು ಅವರ ವೈಜ್ಞಾನಿಕ ಮನೋಭಾವ ಹಾಗೂ ಸೃಜನಾಶೀಲತೆಗೆ ಹಿಡಿದ ಕೈಗನ್ನಡಿ. ಇಂತಹ ವಿದ್ಯಾರ್ಥಿಗಳು ಮುಂದೊಂದು ದಿನ ನೊಬೆಲ್ ಪ್ರಶಸ್ತಿಯನ್ನು ಪಡೆಯಲು ಅರ್ಹರಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ, ಇಂದು ನಾವು ಯುವ ಮನಸ್ಸುಗಳಲ್ಲಿ ವಿಜ್ಞಾನದ ಬೀಜವನ್ನು ಬಿತ್ತಿದ್ದೇವೆ. ಅದು ಬೆಳೆದು ಹೆಮ್ಮರವಾಗಿ ಫಲ ನೀಡುವಂತಾಗಬೇಕು. ಆ ಮೂಲಕ ವಿಜ್ಞಾನ ದೇಶಕ್ಕೆ ಒಂದು ಕೊಡುಗೆಯಾಗಬೇಕು ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಕೇವಲ ಪಠ್ಯಪುಸ್ತಕದ ಕಲಿಕೆಗೆ ಮಾತ್ರವಲ್ಲದೆ ಸಹ-ಪಠ್ಯ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಾ ಬಂದಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಪೆÇ್ರೀತ್ಸಾಹ ಮತ್ತು ಸಹಾಯ ನೀಡುವುದಾಗಿ ತಿಳಿಸಿದರು.
ವಿಜ್ಞಾನ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ, ಮಕ್ಕಳಲ್ಲಿ ಸದಾ ಕುತೂಹಲವಿರಬೇಕು. ಪ್ರತಿಕ್ಷಣವೂ ವಿದ್ಯಾರ್ಥಿಗಳು ಏನು? ಏಕೆ? ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಆ ಮೂಲಕ ವಿಜ್ಞಾನದಲ್ಲಿ ಹೊಸ ಸಂಶೋಧನೆಗೆ ನಾಂದಿ ಹಾಡಬೇಕು ಎಂದು ತಿಳಿಸಿದರು.
ವಿಜ್ಞಾನ ಮೇಳದಲ್ಲಿ ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ಹಾಗೂ ಗಣಿತಶಾಸ್ತ್ರ ವಿಷಯಗಳಿಗೆ ಸಂಬಂದಿಸಿದಂತೆ ಒಟ್ಟು 96 ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡವು. ಕೊನೆಯಲ್ಲಿ 6 ಅತ್ಯುತ್ತಮ ಮಾದರಿಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಯಿತು. ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿವೇಕಾನಂದ ಪ್ರಥಮ, ಯತೀಶ್ ಹಾಗೂ ವರ್ಶಿತ್ ದ್ವಿತೀಯ, ಪ್ರತೀಕ್ ಹಾಗೂ ಅಮಿತ್ ತೃತೀಯ ಬಹುಮಾನ ಪಡೆದರು. ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಗಾಯತ್ರಿ ಎಚ್ ಪ್ರಥಮ, ಸಾಯಿ ಆದಿತ್ಯ ದ್ವಿತೀಯ, ಹರ್ಷ ಎ.ಎನ್ ಹಾಗೂ ವಿಶಾಲ್ ಎಂ ಸಪಾಟೆ ತೃತೀಯ ಬಹುಮಾನ ಪಡೆದರು. ವಿಜೇತರನ್ನು ಪದಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಗೌರವಿಸಲಾಯಿತು.
ಆಳ್ವಾಸ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಫೇರ್ನ ಸಹಸಂಚಾಲಕಿ ಶಿಕ್ಷಕಿ ಗಗನಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೌಮ್ಯ ನಿರೂಪಿಸಿದರು. ಅನುಷ್ಕಾ, ಸ್ನೇಹಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿಜಯಶ್ರೀ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.