ಬಾಗಲಕೋಟೆ: ಬಸವೇಶ್ವರ ಬ್ಯಾಂಕ್ ಶತಮಾನೋತ್ಸವ ಅಂಗವಾಗಿ ಡಿಸೆಂಬರ್ 1, 2 ಮತ್ತು 3 ರಂದು ಸಾಮೂಹಿಕ ವಿವಾಹ, ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನಗರದ ಬಸವೇಶ್ವರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಈಗಾಗಲೇ ಶತಮಾನೋತ್ಸವ ಕಾರ್ಯಕ್ರಮ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬಸವೇಶ್ವರ ಬ್ಯಾಂಕ್ ಆರ್ಥಿಕ ಅಭಿವೃದ್ಧಿಗೆ ಸಿಮೀತಗೊಳ್ಳದೆ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.
ಶತಮಾನೋತ್ಸವ ಹಿನ್ನೆಯಲ್ಲಿ ಅನೇಕ ವಿಧಾಯಕ ಸಮಾಜಮುಖಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕರು, ಸಂಸದರು, ಮಾಜಿ ಶಾಸಕರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿ. 2 ರಂದು ನಾಡಿನ ನಾನಾ ಮಠಗಳ ಮಠಾಧೀಶರು ಸಾನ್ನಿಧ್ಯದಲ್ಲಿ 100 ಜೋಡಿಗಳ ಉಚಿತವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಮುಂಡರಗಿ ಬೈಲೂರ ಮಠದ ನಿಜಗುಣಾನಂದ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಸಾಮೂಹಿಕ ವಿವಾಹದಲ್ಲಿ ವಿವಾಹವಾಗ ಬಯಸುವವರು ವಧುವಿಗೆ 18 ವರ್ಷ ಹಾಗೂ ವರನಿಗೆ 21 ಪೂರ್ಣವಾಗಿರಬೇಕು. ಆಧಾರ ಕಾರ್ಡ್ ಮತ್ತು ಜಾರಿ ಪ್ರಮಾಣ ಪತ್ರ ಸಲ್ಲಿಸಬೇಕು. ವಯಸ್ಸಿನ ಪ್ರಮಾಣ ಪತ್ರ, ಶಾಲಾ ಲಿವಿಂಗ್ ಸರ್ಟಿಫಿಕೆಟ್, ಜನನ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸೇರಿದಂತೆ ವಿವಿಧ ದಾಖಲೆ ನೀಡಿ ಹೆಸರು ನೋಂದಾಯಿಸಬೇಕು ಎಂದರು.
ಡಿ. 3 ರಂದು ನಡೆಯುವ ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ಸಂಗೀತ ಕ್ಷೇತ್ರದ ಮಾಂತ್ರಿಕ ರಾಜೇಶ ಕೃಷ್ಣನ್ ಹಾಗೂ ತಂಡದವರಿಂದ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಅಲ್ಲದೇ ಶತಮಾನೋತ್ಸವ ಅಂಗವಾಗಿ ನೂರು ಕಾರ್ಯಕ್ರಮಗಳು ನಿರ್ಧರಿಸಲಾಗಿದ್ದು, ಈಗಾಗಲೇ 35 ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಶತಮಾನೋತ್ಸವ ಅಂಗವಾಗಿ ನಾಡಿನ ಖ್ಯಾತ ಸಾಹಿತಿಗಳ ಲೇಖನಗಳನ್ನೊಳಗಂಡ ಬಸವ ಸಂಪದ ಸ್ಮರಣ ಸಂಚಿಕೆ ಹೊರತರಲಾಗುವುದು ಎಂದು ವಿವರಿಸಿದರು.
ಶತಮಾನೋತ್ಸವ ಸವಿನೆನಪಿಗಾಗಿ ಶತಮಾನೋತ್ಸವ ಭವನ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಉದ್ಘಾಟನೆ ನಡೆಯಲಿದೆ. ರಂಗ ಸಂಭ್ರಮ ಬಸವೇಶ್ವರ ಬ್ಯಾಂಕ್ ರೂಪಕ ಪ್ರದರ್ಶನ ಜರುಗಲಿದೆ ನವೆಂಬರ್ 19 ರಂದು ಜಾನಪದ ಗಾರುಡಿಗ ಗುರುರಾಜ ಹೊಸಕೋಟಿ ಅವರಿಂದ ರಸ ಸಂಜೆ, ನವೆಂಬರ್ 26 ರಂದು ಗಂಗಾವತಿ ಪ್ರಾಣೇಶ ಅವರ ತಂಡದಿಂದ ನಗೆ ಹಬ್ಬ, ಚಿತ್ರಕಲಾ ಪ್ರದರ್ಶನ, 200 ಕಿವುಡ ಮೂಕ ಹಾಗೂ ಮಂದ ಬುದ್ಧಿಯ ಮಕ್ಕಳಿಗೆ 3 ದಿವಸದ ತರಬೇತಿ, ಬಸ್ ತಂಗುದಾಣ ನಿರ್ಮಾಣ ಹಾಗೂ ಬಸವ ಜಲಭಾಗ್ಯ ಶುದ್ಧ ಕುಡಿಯುವ ನೀರಿನ ಘಟಕ ಲೋಕರ್ಪಾಣೆ ನಡೆಯಲಿದೆ ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ಸಿ.ಟಿ.ಪಾಟೀಲ, ಎಂ.ಎಸ್.ಏಳಮ್ಮಿ, ಎಸ್.ಎಸ್.ಕಂಕಣಮೇಲಿ, ಎಸ್.ಸಿ.ಆರಬ್ಬಿ, ಆರ್.ಎಸ್.ದಂಡನ್ನವರ, ಎಚ್.ಎಸ್.ರಾಠೋಡ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.