Case No 1 : ಲಾಲ್ ಬಿಹಾರಿ ಎಂಬ ಬಿಹಾರ್ ಮೂಲದ ರೈತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲೆಗಳನ್ನು ನೀಡಿದಾಗ ಆತನು ಸತ್ತುಹೋಗಿರುವುದಾಗಿ ಆತನಿಗೆ ತಿಳಿಸುತ್ತಾರೆ. ಈ ವಿಷಯವನ್ನು ಕೋರ್ಟಿಗೆ ಕೊಂಡುಹೋಗಿ ತಾನು ಸತ್ತಿಲ್ಲ ಬದುಕಿದ್ದೇನೆಂದು ನಿರೂಪಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಾನೆ. ಸಂಬಂಧಿಕರ ಮನೆಯ ಹುಡುಗನನ್ನು ಅಪಹರಿಸಿ ತನ್ನ ಮೇಲೆ ಕೇಸ್ ಹಾಕಿಸಿಕೊಳ್ಳಲು ಯತ್ನಿಸುತ್ತಾನೆ, ತನ್ನ ಹೆಂಡತಿಗೆ ವಿಧವಾ ಮಾಸಾಶನಕ್ಕೆ ಅರ್ಜಿ ಸಲ್ಲಿಸುತ್ತಾನೆ (ಹಾಗಾದರೂ ಸರ್ಕಾರ ತಾನು ಇರುವಿಕೆಯನ್ನು ಗುರುತಿಸುವುದೆಂದು) ಕೊನೆಗೆ ಈ ದೇಶದ ಮಾಜಿ ಪ್ರಧಾನಿಗಳಾದ ವಿ.ಪಿ.ಸಿಂಗ್ ಮತ್ತು ರಾಜೀವ್ ಗಾಂಧಿಯವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ. ಲಾಲ್ ಬಿಹಾರಿಯ ಸತತ ಪ್ರಯತ್ನಗಳ ಫಲವಾಗಿ 18 ವರ್ಷ ಕೋರ್ಟಿನಲ್ಲಿ ವಿಚಾರಣೆ ನಡೆದ ಈ ಕೇಸು ಅವನು ಬದುಕಿದ್ದಾನೆಂಬ ತೀರ್ಪನ್ನು ಹೊರಡಿಸುತ್ತದೆ.
Case No 2 : 2009ರಲ್ಲಿ ಬಾಲ್ ಗೋವಿಂದ್ ಪ್ರಸಾದ್ ಎಂಬ ಡಾಕ್ಟರ್ ವೃತ್ತಿಯ ವ್ಯಕ್ತಿಗೆ 3 ತಿಂಗಳ ಸಜೆಯಾಗುತ್ತದೆ, ಕಾರಣ : ಆತನು 24 ವರ್ಷಗಳ ಹಿಂದೆ ನಕಲಿ ಪ್ರಮಾಣಪತ್ರ ನೀಡಲು ಪಡೆದಿದ್ದ 50 ಪೈಸೆಯ ಲಂಚ.
Case No 3 : ದೇವಸ್ಥಾನ ಒಂದಕ್ಕೆ ಸೇರಿದ ಆನೆಗೆ V ಆಕಾರದ ನಾಮವಿಡಬೇಕೋ..? U ಆಕಾರದ ನಾಮವಿಡಬೇಕೋ..? ಎಂಬ ಬಗ್ಗೆ ಗೊಂದಲವುಂಟಾಗಿ ಕೊನೆಗೆ ವಿಷಯ ಕೋರ್ಟಿಗೆ. ಕೋರ್ಟಿನಲ್ಲಿ ಈ ವಿಷಯದ ಬಗ್ಗೆ ವಿಚಾರಣೆ ನಡೆದು ಪೀಠ ಕೂಲಂಕುಶವಾಗಿ ಪರಿಶೀಲಿಸಿ ತೀರ್ಪು ನೀಡುವ ಮೊದಲು ಆನೆಯೇ ತೀರಿಹೋಗಿತ್ತು.
ಈ ರೀತಿಯ Caseಗಳ ಪಟ್ಟಿ ಮಾಡಿದರೆ, ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಕಪಾಳಕ್ಕೆ ಒಡೆದ ಘಟನೆ ಕೋರ್ಟಿನಲ್ಲಿ ವ್ಯಾಜ್ಯವಾಗಿ ಕೊನೆಗೆ ಪ್ರಕರಣ ಇತ್ಯರ್ಥವಾಗಲೂ 7 ವರ್ಷವಾದಂತ ಉದಾಹರಣೆಗಳು ಉಂಟು.
ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ಈ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಮೂರು ಸಹ ಜನರ ಕ್ಷೇಮಾಭಿವೃದ್ಧಿಗಾಗಿರುವ ವ್ಯವಸ್ಥೆ. ಈ ಮೂರರಲ್ಲಿ ಸರ್ವೋಚ್ಚ ಸ್ಥಾನ ನ್ಯಾಯಾಂಗಕ್ಕೆ, ಜನರು ತಮಗಾಗುವ ಕಷ್ಟ-ನಷ್ಟ-ನೋವುಗಳ ನ್ಯಾಯಯುತವಾದ ಪರಿಹಾರಕ್ಕಾಗಿ ನ್ಯಾಯಾಂಗದ ವ್ಯವಸ್ಥೆಯಡಿ ಇರುವ ನ್ಯಾಯಾಲಯಗಳ ಮೋರೆ ಹೋಗುವರು. ಭಾರತದ ನ್ಯಾಯಾಂಗ ವ್ಯವಸ್ಥೆ ಪ್ರಪಂಚದ ದೊಡ್ಡ ನ್ಯಾಯಾಧಿಕಾರದ ವ್ಯವಸ್ಥೆಯು ಹೌದು ಹಾಗೆ ನಿಧಾನವಾದದ್ದು ಹೌದು. ಜನರು ಮೊದಲು ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬರಲೆಂದು ಪ್ರಕರಣಗಳ ಕೊಂಡುಹೋಗಿ ಕೊನೆಗೆ ಏನಾದರಾಗಲಿ ಅದು ಇತ್ಯರ್ಥವಾದರೆ ಸಾಕು ಎಂದು ಕಾಯುತ್ತಾ ಕೂರುವ ಪರಿಸ್ಥಿತಿ ಬಂದಿದೆ. ಒಂದು ಸಮೀಕ್ಷೆಯ ಪ್ರಕಾರ ಭಾರತದ ನ್ಯಾಯಾಲಯಗಳಲ್ಲಿ ಉಳಿಕೆ ಇರುವ ವ್ಯಾಜ್ಯಗಳ ಸಂಖ್ಯೆ ತುಂಬಾ ದೊಡ್ಡದಾಗಿದೆ.
ಜಿಲ್ಲಾ ಹಾಗೂ ಇನ್ನಿತರೆ ನ್ಯಾಯಾಲಯಗಳಲ್ಲಿ ಸುಮಾರು – 2.81ಕೋಟಿ
ಉಚ್ಚನ್ಯಾಯಾಲಯಗಳಲ್ಲಿ ಸುಮಾರು – 40 ಲಕ್ಷ
ಸರ್ವೋಚ್ಛ ನ್ಯಾಯಾಲಯದಲ್ಲಿ ಸುಮಾರು – 60 ಸಾವಿರ
ಇಷ್ಟೊಂದು ಉಳಿಕೆಗಳು ಬಾಕಿ ಇರುವುದೇಕೆ ಎಂದು ನೋಡಿದರೆ ವಿಭಿನ್ನ ಕಾರಣಗಳು ನಮಗೆ ಸಿಗುತ್ತದೆ. ಮುಖ್ಯವಾಗಿ ಕೋರ್ಟುಗಳಲ್ಲಿ ಭರ್ತಿಯಾಗಬೇಕಾಗಿರುವ ಹುದ್ದೆಗಳು
ಜಿಲ್ಲಾ ಹಾಗೂ ಇನ್ನಿತರೆ ನ್ಯಾಯಾಲಯಗಳಲ್ಲಿ ಸುಮಾರು – 24.75%
ಉಚ್ಚನ್ಯಾಯಾಲಯಗಳಲ್ಲಿ ಸುಮಾರು – 44.03%
ಸರ್ವೋಚ್ಛ ನ್ಯಾಯಾಲಯದಲ್ಲಿ ಸುಮಾರು – 19.4%
ಕೋರ್ಟಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಮತ್ತು ಇನ್ನಿತರ ಸ್ಥಾನಗಳು ಪೂರ್ತಿಯಾದರೆ ವ್ಯಾಜ್ಯಗಳು ಶೀಘ್ರ ಬಗೆಹರಿಯುವುದೆಂದು ಭಾವಿಸುವಂತಿಲ್ಲ, ನಮಗೇ ತಿಳಿದಿರುವ ಹಾಗೆ ಕೋರ್ಟನ ವ್ಯವಹಾರಗಳು ಅಷ್ಟು ಸುಲಭವಲ್ಲ ಒಂದು ಕೇಸ್ ಇತ್ಯಾರ್ಥವಾಗಬೇಕಾದರೆ ಕಕ್ಷಿದಾರ, ವಕೀಲರ ಸಾಕ್ಷಿಗಳ ಹಾಗೂ ನ್ಯಾಯಾಧೀಶರುಗಳ ಹಾಜರಾತಿ, ಸೂಕ್ತ ದಾಖಲೆಗಳ ಪರಿಶೋಧನೆ, ಇತರ ಇಲಾಖೆಗಳ ನೆರವು ಹೀಗೆ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ದೇಶದ ಕಾನೂನು ಇಲಾಖೆಯು ಕೂಡ ಈ ನಿಟ್ಟಿನಲ್ಲಿ ಯೋಚಿಸಿ ವಿಷಯಾನುಗುಣವಾಗಿ ನ್ಯಾಯಾಲಯಗಳ ವಿಂಗಡಣೆ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಗಳ ವ್ಯಾಜ್ಯಗಳಿಗಾಗಿ “Ombudsman”ಗಳ ನೇಮಕ ಹಾಗೂ ‘Fast Track Court’ಗಳನ್ನು ಮಾಡಿದೆ.
ಇಷ್ಟಾದರೂ ಕೋರ್ಟುಗಳಲ್ಲಿನ ಕೇಸ್ಗಳು ಮುಗಿಯದಾಗಿದೆ. ಒಟ್ಟಾರೆ ಹೇಳುವುದಾದರೆ ಈ ಕಾಲದಲ್ಲಿ ಕೋರ್ಟ್ ಮೆಟ್ಟಿಲೇರುವುದು ಸುಲಭ ಆದರೆ ತೀರ್ಪಿನೊಂದಿಗೆ ಹಿಂದಿರುಗುವುದು ಕಷ್ಟ, ಜಿಲ್ಲಾ ನ್ಯಾಯಾಲಯದಲ್ಲಿ ಇತ್ಯರ್ಥವಾದ ಕೇಸ್ಗಳ ತೀರ್ಪನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯದ ಮೊರೆಹೋಗುವುದು, ಒಂದೊಂದು ನ್ಯಾಯಾಲಯವು ಒಂದೊಂದು ತೀರ್ಪು ನೀಡುವುದು, ಕೊನೆಗೆ ಸರ್ವೋಚ್ಚ ನ್ಯಾಯಾಲಯದ ನಿರ್ಣಯ ಅಂತಿಮವಾಗುವುದು. ಈಗ ಜನರಲ್ಲಿ ನ್ಯಾಯಾಲಯದಲ್ಲಿ ನ್ಯಾಯ ಸಿಗುವುದೇ..? ಸಿಕ್ಕಿದರೂ ಅದು ಯಾವಾಗ ಸಿಗಲಿದೆ..? ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಹೆಚ್ಚಿನ ಜನಸಂಖ್ಯೆಯುಳ್ಳ ನಮ್ಮ ದೇಶದಲ್ಲಿ ಈ ರೀತಿಯ ಸಮಸ್ಯೆಗೆ ಪರಿಹಾರ ಹುಡುಕುವುದು ಸುಲಭವಲ್ಲ. ಈ ದಿಶೆಯಲ್ಲಿ ಜನರ ಚಿಂತನೆಯೂ ಅರಳಬೇಕು. ಸಣ್ಣಪುಟ್ಟ ವ್ಯಾಜ್ಯಗಳ ತೀರ್ಮಾನ ಕೆಳಮಟ್ಟದಲ್ಲೇ ಆಗಬೇಕು. ಹಿಂದಿನ ಕಾಲದ ಪಂಚಾಯಿತಿಗಳು, ದೇವಸ್ಥಾನಗಳ ಧರ್ಮಾಧಿಕಾರಿಗಳು, ಮನೆತನದ ಹಿರಿಯರು ನಡೆಸುತ್ತಿದ್ದ ವಿಚಾರಣೆ ಹಾಗೂ ವ್ಯಾಜ್ಯಗಳ ಬಗೆಹರಿಸುತ್ತಿದ್ದುದನ್ನು ಕೇಳಿದ ನೆನಪಾಗುತ್ತದೆ. ಈಗೀಗ ಕೋರ್ಟುಗಳು ಎಷ್ಟೋ ಕೇಸ್ಗಳಲ್ಲಿ Counselling Centreಗಳನ್ನು ಮತ್ತು ಕಕ್ಷಿದಾರರ ನಡುವಿನ ಸಂಧಾನ ಮಾರ್ಗಗಳನ್ನು ಪುರಸ್ಕರಿಸುತ್ತಿವೆ.
ನ್ಯಾಯಾಲಯಗಳಲ್ಲಿ ವೈಯುಕ್ತಿಕ ದಾವೆಗಳ ಕಥೆಗಳದ್ದು ಒಂದು ಭಾಗವಾದರೆ ಇನ್ನೂ ಸಾರ್ವಜನಿಕ ಹಿತಾಸಕ್ತಿಗಳ, ರಾಜ್ಯಗಳ, ಜಾತಿ-ಪಂಥಗಳ, ರಾಷ್ಟ್ರಮಟ್ಟದ ವಿಚಾರಗಳ ವ್ಯಾಜ್ಯಗಳ ಕಥೆಗಳ ಗತಿಯೇನು…?
ಎಷ್ಟೋ ವಿಚಾರಗಳಲ್ಲಿ ಕೋರ್ಟು ಸಾಧ್ಯವಾದರೆ ಕೋರ್ಟಿನ ಹೊರಗೆ ಮಾತುಕತೆ ನಡೆಸಿ ಒಮ್ಮತಕ್ಕೆ ಬರಲು ಪ್ರಯತ್ನಿಸುವಂತೆ ಸೂಚಿಸಿರುವುದು ಇದೆ.
ವ್ಯಕ್ತಿ-ವ್ಯಕ್ತಿ ಸೇರಿದರೆ ಸಮಾಜ ಆ ಸಮಾಜದ ಸುಧಾರಣೆಯ ಹೊಣೆ ಕೇವಲ ಮೇಲಿರುವ ಸರ್ಕಾರವೋ, ವ್ಯವಸ್ಥೆಯೋ ಅಥವಾ ಇನ್ಯಾರೋ ಮಾಡಬೇಕೆಂಬ ಭಾವನೆ ನಮ್ಮಲ್ಲಿ ದೂರಾದರೇ ಇಂತಹ ಅದೆಷ್ಟೋ ತೊಂದರೆಗಳ ಅಂಧಕಾರವ ತೊಡೆದು ಹಾಕಲು ನಾವುಗಳು ಒಂದು ಪುಟ್ಟ ಹಣತೆಯಾಗಬಹುದಲ್ಲವೇ ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.