ಇತ್ತೀಚೆಗೆ ‘ಶೀಲವಂತ’ರ ಕಾಲ ಮುಗಿಯುತ್ತ ಬಂದಂತೆ ಕಾಣುತ್ತಿದೆ. ಬಹುತೇಕ ಎಲ್ಲವೂ ಸಹ್ಯ ಈಗ. ಅಸಹ್ಯವೂ.. ಅಶ್ಲೀಲವೂ..!
ಶಾಲೆ, ಕಾಲೇಜುಗಳಿರುವ ರಸ್ತೆಗಳಲ್ಲೂ ಈಗ ಕೆಲ ಚಲನಚಿತ್ರಗಳ ಚಂದ್ರ-ತಾರೆಯರ ಅಶ್ಲೀಲ ಭಾವ-ಭಂಗಿಯ ಪೋಸ್ಟರ್ಗಳು ರಾರಾಜಿಸತೊಡಗಿವೆ. ತೀರ ಮುಜುಗರ ಹುಟ್ಟಿಸುವ, ಕಾಮನೆ ಕೆರಳಿಸಬಲ್ಲ ಸ್ಥಿರ ಚಿತ್ರಗಳವು. ದುರ್ದೈವಕ್ಕೆ, ಇವೇ ಪೋಸ್ಟರ್, ಚಿತ್ರದ ಟ್ರೇಲರ್ (ದಂಡೂ ಪಾಳ್ಯ -2 ಚಿತ್ರದಲ್ಲಿ ನಟಿಯೋರ್ವರು ಸಂಪೂರ್ಣ ನಗ್ನರಾಗಿರುವಂತೆ ಚಿತ್ರೀಕರಿಸಿದ ದೃಶ್ಯ ಸಾಮಾಜಿಕ ಜಾಲ ತಾಣಗಳಿಗೆ ಸೋರಿಕೆಯಾದದ್ದನ್ನು ನೆನಪಿಸಿಕೊಳ್ಳಿ) ಅಂತರ್ಜಾಲ ವ್ಯವಸ್ಥೆಯುಳ್ಳ ಸ್ಮಾರ್ಟ್ ಫೋನ್ಗಳಲ್ಲಿ ಸದಾ ಹಸಿ-ಬಿಸಿಯಾಗಿ ಇಣುಕುತ್ತಿವೆ.
ಧಾರವಾಡದಲ್ಲಿ ಬಹುತೇಕ ಹೈಸ್ಕೂಲ್ ಮಟ್ಟದ ವಯಸ್ಸಿನ ಮಕ್ಕಳ ಕೈಯಲ್ಲಿ ಈಗ ಸ್ಮಾರ್ಟ್ ಫೋನ್ಗಳಿವೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ, ಮನೆಯ ಪ್ರತಿಯೊಬ್ಬ ಸದಸ್ಯನ ಬಳಿ ಮೊಬೈಲ್ ಇದ್ದರೆ, ಕಿರಿಯರ ಬಳಿ ಹೈ-ಎಂಡ್ ಕಾನ್ಫಿಗರೇಶನ್ ಜಂಗಮವಾಣಿಗಳಿವೆ. ಮನೆಗೊಂದು ಶೌಚಾಲಯ ಮಾತ್ರ ಇನ್ನೂ ಇಲ್ಲ! ನಂತರ ತಾನೇ ಬಯಲನ್ನು ಶೌಚಾಲಯವಾಗಿ ಬಳಸುವುದನ್ನು ನಿಲ್ಲಿಸುವ ಪ್ರಶ್ನೆ?
ಇಂತಿರ್ಪ ಪರಿಸ್ಥಿತಿಯಲ್ಲಿ, ಶಾಲೆ-ಕಾಲೇಜುಗಳಲ್ಲಿ ಮಕ್ಕಳ ಕಲಿಕೆಗೆಂದು ವ್ಯವಸ್ಥೆಗೊಳಿಸಲಾದ ಕಂಪ್ಯೂಟರ್ ಲ್ಯಾಬ್ಗಳಲ್ಲಿ, ಫಿಲ್ಟರ್ ಬಳಸಿ ರಿಸ್ಟ್ರಿಕ್ಟೆಡ್ ಎಕ್ಸೆಸ್ ಒದಗಿಸಿದಾಗ್ಯೂ, ಅವರು ಅಡ್ಡ ಹ್ಯಾಕಿಂಗ್ ಜಾಣ್ಮೆ ತೋರಿ, ಅಂತರ್ಜಾಲದ ಮೂಲಕ ಡೌನ್ಲೋಡ್ ಆಗುವ ಸರಕೂ ಅದೇ.. ‘ಪೋರ್ನೋ ಕಂಟೆಂಟ್’. ಎಲ್ಲವೂ ಸರ್ವರ್ನಲ್ಲಿ ದಾಖಲೆಯಾಗಿ ಉಳಿದುಕೊಳ್ಳುತ್ತದೆ ಆ ಮಾತು ಬೇರೆ. ಆದರೆ ಪ್ರಶ್ನೆ, ನಮ್ಮ ‘ನಡವಳಿಕೆ’ಯದ್ದು. ನಮ್ಮ ಮಕ್ಕಳ ‘ನೈತಿಕತೆ’ಯದ್ದು.
ಅಸೈನ್ಮೆಂಟ್ – ಗೃಹ ಒಪ್ಪಿತ ಕಾರ್ಯದ ಹೆಸರಿನಲ್ಲಿ, ಆಕರ ಸಂಗ್ರಹಿಸಲು, ಸೈಬರ್ ಕೆಫೆಗೆ ಭೇಟಿ ನೀಡುವ ಮಕ್ಕಳ ‘ನೆಟ್ ಸರ್ಫಿಂಗ್ ಹ್ಯಾಬಿಟ್’ ಕೂಡ ಕಳವಳಕಾರಿಯಾಗಿದೆ. ವಿಶೇಷವೆಂದರೆ, ಬ್ಲೂ ಫಿಲ್ಮ್ ನೀಲಿ ಚಿತ್ರ, ನೀಲಿ ಚಿತ್ರಗಳ ಜಾಲತಾಣ ಬ್ಲಾಕ್ ಮಾಡಿದ, ‘ರೆಸ್ಪಾನ್ಸಿಬಲ್ ಸರ್ಫಿಂಗ್’ ಪ್ರತಿಪಾದಿಸುವ ಕೆಫೆಗಳಲ್ಲಿ ವ್ಯಾಪಾರವೇ ಇಲ್ಲ! ಪ್ರತ್ಯೇಕ ಕ್ಯಾಬಿನ್, ಕರ್ಟನ್ ಮತ್ತು ‘ಬ್ರೌಸಿಂಗ್ ಪ್ರೈವೆಸಿ’ ಇರುವ ಮತ್ತು ಫಿಷಿಂಗ್/ ಬ್ಲಾಕಿಂಗ್ ನೆಟ್ ಇಲ್ಲದ ಇಂಟರ್ನೆಟ್ ಕೆಫೆಗಳಲ್ಲಿ ದುಪ್ಪಟ್ಟು ಹಣ ತೆತ್ತಾದರೂ, ಕ್ಯೂ ಹಚ್ಚಿ ನಿಲ್ಲುವ ‘ಗ್ರಾಹಕರಿದ್ದಾರೆ’!
ಒಂದು ಗಂಟೆಯ ಅವಧಿಯಲ್ಲಿ, ಮೊದಲ 20 ನಿಮಿಷ ವಿಷಯನಿಷ್ಠ ಅಸೈನ್ಮೆಂಟ್ ಬ್ರೌಸಿಂಗ್ಗೆ ಮೀಸಲು. ನಂತರ 15 ನಿಮಿಷ ವಿಡಿಯೋ ಗೇಮ್ಗೆ. 5-10 ನಿಮಿಷ ಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್, ಟ್ವಿಟ್ಟರ್, ಮೆಸೆಂಜರ್, ಇನ್ಸ್ಟಾಗ್ರಾಮ್ ಇತ್ಯಾದಿ ಸರ್ಫಿಂಗ್. ಕೊನೆಯ 10 ರಿಂದ 15 ನಿಮಿಷ ನೀಲಿ ಚಿತ್ರಗಳ ವೀಕ್ಷಣೆ ಮತ್ತು ಡೌನ್ಲೋಡ್ಗೆ ಯುವ ಮನಸ್ಸುಗಳು ತಮ್ಮನ್ನು ಒಡ್ಡಿಕೊಂಡಿವೆ. ಪೆನ್ ಡ್ರೈವ್, ಸ್ಮಾರ್ಟ್ ಫೋನ್ಗಳಿಗೆ ವರ್ಗಾವಣೆ. ಅದಕ್ಕೆ ಪಾಸ್ವರ್ಡ್ ಸುರಕ್ಷೆ! ಕೇವಲ ತಾಸಿಗೆ 15 ರಿಂದ 20 ರೂಪಾಯಿಗೆ ಈ ವ್ಯವಸ್ಥೆ ಹೀಗೆ ದುರ್ಬಳಕೆಯಾಗುತ್ತಿದೆ. ಸುಮಾರು 13 ರಿಂದ 38 ರ ವಯೋಮಾನದವರು ಈ ವೃಂದದಲ್ಲಿದ್ದಾರೆ.
ಹೆಚ್ಚು ಹಣ ನೀಡಿದಲ್ಲಿ, 2 ಜಿಬಿ ಪೆನ್ಡ್ರೈವ್ನಲ್ಲಿ ಅಥವಾ ಡಿವಿಡಿ, ಸಿ.ಡಿ. ರೂಪದಲ್ಲಿ ಕಳ್ಳ ಮಾರ್ಗದಿಂದ ಶೇ. 70 ರಷ್ಟು ನೆಟ್ ಕೆಫೆ ಅಂಗಡಿಕಾರರೂ ಮಾರುತ್ತಾರೆ. ವಿಶ್ವಾಸಿಕ ಖರೀದಿದಾರ ಮಾತ್ರ ಇಲ್ಲಿ ಮಧ್ಯವರ್ತಿಯಾಗಿ ವ್ಯವಹಾರ ಕುದುರಿಸಿ, ‘ಥರ್ಡ್ ಪಾರ್ಟಿ ಕನ್ಸೈನ್ಮೆಂಟ್’ ಪೂರೈಸುತ್ತಾನೆ.
ಭಾರತೀಯ ದಂಡ ಸಂಹಿತೆ – ಐಪಿಸಿ ಕಲಂ 292 ರ ಅಡಿ, ಇಂತಹ ಸೌಲಭ್ಯ ನೀಡುವ ಅಂಗಡಿಕಾರ ಮತ್ತು ಪಡೆದುಕೊಳ್ಳುವ ಗ್ರಾಹಕ, ಇಬ್ಬರಿಗೂ ಆರೋಪ ಸಾಬೀತಾದಲ್ಲಿ 2 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಸಾಧ್ಯವಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ -2008 ರ ಪ್ರಕಾರ, ಅಶ್ಲೀಲ ಚಿತ್ರ, ವಿಡಿಯೋ, ಪೋಸ್ಟರ್ ಸಂಗ್ರಹ ಮತ್ತು ಯಾವುದೇ ಮಾಧ್ಯಮದ ಮೂಲಕ ಬಿತ್ತರಣೆಗೆ 5 ವರ್ಷಗಳ ಜೈಲು ಶಿಕ್ಷೆ ನಿಶ್ಚಿತ. ಪೊಲೀಸ್ ಬಳಿ ದೂರು ನೀಡಿ, ಸಾಕ್ಷ್ಯಾಧಾರ ಒದಗಿಸಿ ಎಫ್ಐಆರ್ ಪಡೆದರೆ, 25 ಸಾವಿರ ರೂಪಾಯಿಗಳ ವರೆಗೆ ಮೊದಲ ತಪ್ಪಿಗೆ ದಂಡ ವಿಧಿಸುವ ಪ್ರಾವಧಾನವಿದೆ.
2000 ಇಸ್ವಿಯ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು 2008 ರಲ್ಲಿ ತಿದ್ದುಪಡಿ ಮಾಡಿ, ಅಂತರ್ಜಾಲದಲ್ಲಿ ತುಂಬಿರುವ ನೀಲಿ ಜಗತ್ತನ್ನು ಸ್ವಚ್ಛ ಗೊಳಿಸಲು ಮತ್ತು ಸೂಕ್ತವಾಗಿ ರಾಡಿಯನ್ನು ನಿಯಂತ್ರಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಅಶ್ಲೀಲವೆನಿಸುವ ಯಾವುದೇ ಹೂರಣದ ಸರಕನ್ನು, ಯಾವುದೇ ಮಾಧ್ಯಮದ ಸಹಾಯದಿಂದ ಖಾಸಗಿ ಅಥವಾ ಸಾರ್ವಜನಿಕವಾಗಿ ಪ್ರಚುರ ಪಡಿಸಿದ್ದೇ ಆದರೆ, ಕಾನೂನು ಕ್ರಮ ಎದುರಿಸುವ ಜೊತೆಗೆ, ಆರೋಪ ಸಾಬೀತಾದಲ್ಲಿ 3 ವರ್ಷ ಜೈಲು ಶಿಕ್ಷೆ 5 ಲಕ್ಷ ರೂಪಾಯಿಗಳ ವರೆಗೆ ದಂಡ ಪಾವತಿಸಬೇಕು.
2008 ರ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಆಕ್ಟ್) ಕಲಂ 67 ಮತ್ತು 67A ಪ್ರಕಾರ, ‘ಮಜಾಕ್’ ಅಥವಾ ‘ನಗೆ ಚಾಟಿಕೆ’ಗೆ ಬ್ಲೂ ಟೂತ್ ಮೂಲಕ ಗೆಳೆಯ ಅಥವಾ ಗೆಳತಿಗೆ, ಯಾವುದೋ ಅಶ್ಲೀಲ ನಗ್ನ ಚಿತ್ರ ರವಾನಿಸಿ, ಸಿಕ್ಕುಬಿದ್ದಲ್ಲಿ 3 ವರ್ಷ ಜೈಲು ವಾಸ ಖಚಿತ. ಹಾಗೆಯೇ, ಅಶ್ಲೀಲ ಚಿತ್ರ, ಕ್ಲಿಪ್, ಪ್ರೋಮೋ, ಬ್ಲೂ ಫಿಲ್ಮ್ ರವಾನಿಸಿ, ಸಿಕ್ಕುಬಿದ್ದಲ್ಲಿ 5 ವರ್ಷಗಳ ಸೆರೆವಾಸ ಹಾಗೂ 10 ಲಕ್ಷ ರೂಪಾಯಿಗಳ ವರೆಗೆ ದಂಡ ಭರಿಸಬೇಕಾಗುತ್ತದೆ,
ನೆಟ್ ಕೆಫೆ ನಡೆಸುವ ಯಾವುದೇ ಅಂಗಡಿಕಾರ, ಇಂತಹ ಅಶ್ಲೀಲ ಜಾಲತಾಣ ವೀಕ್ಷಣೆಗೆ ಅನುವು, 2 ಜಿಬಿ ಪೆನ್ಡ್ರೈವ್ ಅಥವಾ ಡಿವಿಡಿ ಮತ್ತು ಸಿಡಿಯಲ್ಲಿ ಡೌನ್ಲೋಡ್ ಮಾಡಿಕೊಡಲು ಸಹಕರಿಸಿದಲ್ಲಿ, ಮಾರಿದಲ್ಲಿ, ಆರೋಪ ಸಾಬೀತಾದಲ್ಲಿ ಕನಿಷ್ಟ 3 ವರ್ಷ ಜೈಲು ಮತ್ತು ನ್ಯಾಯಾಲಯ ನಿರ್ಧರಿಸುವ ದಂಡ ಪಾವತಿಸಬೇಕು.
ಜಾಣ-ಜಾಣೆಯರು ಇನ್ನೊಂದು ಹೆಜ್ಜೆ ಈ ಅಭಿಯಾನದಲ್ಲಿ ಮುಂದಿಡಬಹುದು. ಸಾಮಾನ್ಯವಾಗಿ ತಾವು ಹೋಗುವ ನೆಟ್ ಕೆಫೆ ಮತ್ತು ನೆಟ್ ಸರ್ಫಿಂಗ್ ಮಾಡುವಾಗ, ಸಾಮಾಜಿಕ ಜಾಲತಾಣಗಳಲ್ಲಿ ‘ಬೇಡವಾದ ಹೂರಣ’ಹೊಂದಿದ ಅಶ್ಲೀಲ ಚಿತ್ರ, ವಿಡಿಯೋ ಅನಗತ್ಯವಾಗಿ ‘ಪಾಪ್ ಅಪ್’ ಆದರೆ, ಅಂಗಡಿಕಾರನ ಗಮನಕ್ಕೆ ತನ್ನಿ. ಜೊತೆಗೆ, ನಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ, ಅಂತಹ ವೆಬ್ಸೈಟ್ಗಳ ‘ಯೂಆರ್ಎಲ್’ ವಿಳಾಸವನ್ನು, www.cybercrimeps@ksp.gov.in ಜಾಲತಾಣಕ್ಕೆ ಕಳುಹಿಸಿ, ಪೂರ್ಣಕಾಲಿಕವಾಗಿ ಸ್ಥಗಿತಗೊಳಿಸಿ, ಕಪ್ಪು ಪಟ್ಟಿಗೆ ಸೇರಿಸುವಂತೆ ದೂರು ದಾಖಲಿಸಬಹುದು.
ಮೈಸೂರಿನ ‘ರೆಸ್ಕ್ಯೂ’ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಸಿಇಓ ಅಭಿಷೇಕ್ ಕ್ಲಿಫೋರ್ಡ್ ಹಾಗೂ ತಂಡ ಕರ್ನಾಟಕದಾದ್ಯಂತ ಕೈಗೊಂಡ ಕ್ಷೇತ್ರ ಕಾರ್ಯ ಹಾಗೂ ಸಂಶೋಧನಾ ವರದಿ ಉಲ್ಲೇಖಿಸಿ, ಹೇಳುವುದಾದರೆ.. ಅಶ್ಲೀಲ ಚಿತ್ರ ವೀಕ್ಷಣೆ ಗೀಳು ಅರ್ಥಾತ್, ಸಾಮಾಜಿಕ ಜಾಲತಾಣ ವ್ಯಭಿಚಾರಕ್ಕೂ ಹೆಣ್ಣು ಭ್ರೂಣ ಹತ್ಯೆಗೂ ನೇರ ಸಂಬಂಧವಿರುವುದು, ಯುವ ದಂಪತಿಗಳ ಸುಮಧುರ ಬಾಂಧವ್ಯ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತಿರುವುದಕ್ಕೂ, ಕಾನೂನು ಬಾಹಿರ ಗರ್ಭಪಾತಗಳಿಗೂ, ‘ಯುಥ್ಫುಲ್ ಇನ್ಫ್ಯಾಚ್ಯುಏಷನ್ ಸಿಂಡ್ರೋಮ್’ ಯುವಜನತೆಯಲ್ಲಿ ಹೆಚ್ಚುತ್ತಿರುವ ಬಗ್ಗೆ ಗಂಭೀರ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ಹೀಗೆ, ಪ್ರತಿ ವರ್ಷ ಅರ್ಧ ಮಿಲಿಯನ್ ಕೂಸುಗಳು ಕರ್ನಾಟಕದಲ್ಲಿ ಕಣ್ಣು ತೆರೆಯುವ ಮುನ್ನವೇ ಕೊಲ್ಲಲ್ಪಡುತ್ತಿವೆ. ಅರ್ಥಾತ್, ಗರ್ಭಪಾತದ ಮೂಲಕ. ಅಂದರೆ, ಅಂದಾಜು ದಿನವೊಂದಕ್ಕೆ 1,500 ಗರ್ಭಪಾತಗಳು! ನಾಲ್ಕು ಕಾಲೇಜುಗಳ ಒಟ್ಟು ಹಾಜರಾತಿಯ ಸರಾಸರಿ ಮಕ್ಕಳನ್ನು ಕೊಂದಷ್ಟು! ಭಯೋತ್ಪಾದಕ ದಾಳಿಯ ಬಗ್ಗೆ ಹೆಚ್ಚು ಆತಂಕಿತರಾಗಿ ಸ್ಪಂದಿಸುವ, ವಿಚಾರ ಮಂಡಿಸುವ ಅಥವಾ ಪ್ರತಿಕ್ರಿಯಿಸುವ ನಾವು ‘ಬೇಬಿ ಜಿನೋಸೈಡ್’ ಬಗ್ಗೆ ಈಗಲೂ ಮೌನ ವಹಿಸಿರುವುದೇಕೆ?
ಪ್ರತಿ ಮೂವರು ಗರ್ಭಿಣಿ ತಾಯಂದಿರ ಪೈಕಿ, ಓರ್ವ ತಾಯಿ ಆರೋಗ್ಯವಂತ ಭ್ರೂಣದ ಗರ್ಭಪಾತಕ್ಕೆ ಸದ್ಯ ಮುಂದಾಗುತ್ತಿರುವುದು ದೃಢ ಪಟ್ಟಿದೆ. ಅಂದರೆ, ಭಾರತದ 1/3 ಮಕ್ಕಳನ್ನು ಮೌನವಾಗಿ ಯಾರ ಗಮನಕ್ಕೂ ಬಾರದಂತೆ ಕೊಲ್ಲುತ್ತಿದ್ದೇವೆ. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ -ಎಂಟಿಪಿಯನ್ನು ಬದಲಿಸಿ ಮೆಡಿಕಲ್ ಟರ್ಮಿನೇಶನ್ ಆಫ್ ಬೇಬೀಸ್ -ಎಂಟಿಬಿ ಎಂದು ಮರುನಾಮಕರಣ ಮಾಡಬಹುದೇನೋ ?
ವ್ಯಕ್ತಿತ್ವ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಹಿರಿಯರ ಮಾತು ನೆನಪಿಸಿಕೊಳ್ಳಲು ಇದು ಸಕಾಲ. ಕಾರಣ, ಭವ್ಯ ಭಾರತದ ಭವಿಷ್ಯ ನಿಂತಿರುವುದು ಯುವ ಜನತೆಯ ವ್ಯಕ್ತಿತ್ವ ಮತ್ತು ಕೃತಿತ್ವ ಶಕ್ತಿಯ ಮೇಲೆ.
ಅಂಕಿ–ಅಂಶ |
ಹುಟ್ಟು/ ವಾರ್ಷಿಕ | ಜನಸಂಖ್ಯೆ | ಗರ್ಭಪಾತ/
ವಾರ್ಷಿಕ |
ಗರ್ಭಪಾತ/
ಮಾಸಿಕ |
ಗರ್ಭಪಾತ/
ದಿನವೊಂದಕ್ಕೆ |
1000 ಪುರುಷರಿಗೆ / ಮಹಿಳೆ ಅನುಪಾತ |
ಭಾರತ | 25 ಮಿಲಿಯನ್ | 1.4 ಬಿಲಿಯನ್ | 11 ಮಿಲಿಯನ್ | 9 ಲಕ್ಷ | – | 940 |
ಕರ್ನಾಟಕ | – | 80 ಮಿಲಿಯನ್ | 5 ಲಕ್ಷ | – | 1,500 | – |
ಬೆಂಗಳೂರು ನಗರ | – | ಅಂದಾಜು 1 ಕೋಟಿ 20 ಲಕ್ಷ | – | 7000 | 240 | 900 |
ಮೈಸೂರು ಜಿಲ್ಲೆ | – | 33 ಲಕ್ಷ | – | 2,100 | 70 | – |
13 ಜಿಲ್ಲೆಗಳಲ್ಲಿ ಲಿಂಗಾನುಪಾತ ಕುಸಿತ; ಕಾರಣಗಳು ಹತ್ತು ಹಲವು.
ಹೆಣ್ಣು ಮಕ್ಕಳ ಜನನ ಪ್ರಮಾಣ ಇಳಿಕೆಯಾಗಿರುವ ಜಿಲ್ಲೆಗಳು (ಸಾವಿರ ಗಂಡು ಮಕ್ಕಳಿಗೆ)
ಆಧಾರ: ಆರೋಗ್ಯ ಮಾಹಿತಿ ನಿರ್ವಹಣಾ ವ್ಯವಸ್ಥೆ, ಕರ್ನಾಟಕ ಸರ್ಕಾರ.
ಜಿಲ್ಲೆಗಳು | 2015-16 | 2016-17 (ಮಾರ್ಚ್ ವರೆಗೆ) |
ಉಡುಪಿ | 1,067 | 929 |
ಗದಗ | 958 | 938 |
ಹಾವೇರಿ | 945 | 928 |
ಚಿಕ್ಕಮಗಳೂರು | 960 | 944 |
ಮೈಸೂರು | 952 | 938 |
ತುಮಕೂರು | 946 | 933 |
ಬಳ್ಳಾರಿ | 936 | 925 |
ದಾವಣಗೆರೆ | 974 | 964 |
ಮಂಡ್ಯ | 922 | 914 |
ಚಿತ್ರದುರ್ಗ | 955 | 948 |
ಚಿಕ್ಕಬಳ್ಳಾಪುರ | 952 | 947 |
ಶಿವಮೊಗ್ಗ | 964 | 959 |
ಧಾರವಾಡ | 943 | 942 |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.