ಲೋಕಮಾನ್ಯ ಎಂದು ಹೇಳಿದ ತಕ್ಷಣ ಮನಸ್ಸಿಗೆ ಬರುವುದು ತಿಲಕರ ಭಾವಚಿತ್ರ. ಅಪ್ರತಿಮ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ಹಿಂದೂ ರಾಷ್ಟ್ರೀಯತಾವಾದದ ಪಿತಾಮಹ ಎಂದೂ ಹೆಸರಾಗಿದ್ದಾರೆ. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ ಎಂಬ ಇವರ ಘರ್ಜನೆ ಅಂದು ಜನಪ್ರಿಯವಾದದ್ದಷ್ಟೇ ಅಲ್ಲ. ಇಂದಿಗೂ ಜನ ಸಾಮಾನ್ಯರ ನೆನಪಿನಲ್ಲಿ ಹಸುರಾಗಿದೆ.
‘ಲೋಕಮಾನ್ಯ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ತಿಲಕರು ಭಾರತದ ಇತಿಹಾಸ, ಸಂಸ್ಕೃತ, ಹಿಂದೂ ಧರ್ಮ, ಗಣಿತ ಹಾಗೂ ಖಗೋಳ ಶಾಸ್ತ್ರಗಳ ಆಳವಾದ ಅಭ್ಯಾಸ ಮಾಡಿದ್ದರು.
ತಿಲಕರು ಹುಟ್ಟಿದ್ದು 1856 ರ ಜುಲೈ 23 ರಂದು ಮಹಾರಾಷ್ಟ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಚತುರ ವಿದ್ಯಾರ್ಥಿಯಾಗಿದ್ದ ತಿಲಕನಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು, ನಂತರ ಅದನ್ನು ಬಿಟ್ಟು ಪತ್ರಕರ್ತರಾದರು.
ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪದ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.
ನಂತರ ತಿಲಕರು ಸ್ಥಾಪಿಸಿದ “ಕೇಸರಿ” ಎಂಬ ಮರಾಠಿ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, 1905 ರ ಬಂಗಾಳದ ವಿಭಜನೆಯ ವಿರೋಧವನ್ನು ಹತ್ತಿಕ್ಕಿದ; ಭಾರತದ ನಾಗರೀಕರನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸತ್ತೆಯ ತೀವ್ರ ಟೀಕೆಯನ್ನು ಅವರು ‘ಕೇಸರಿ’ಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು.
ತಿಲಕರು ಕೇಸರಿ ಪತ್ರಿಕೆ ಮಾತ್ರವಲ್ಲದೇ, ಅನೇಕ ಕೃತಿಗಳನ್ನೂ ಬರೆದರು. ತಿಲಕರು Arctic Home in the Vedas ಎಂಬ ಗ್ರಂಥವನ್ನು ಬರೆದು, ಅದರಲ್ಲಿ ಖಗೋಳಶಾಸ್ತ್ರದ ಆಧಾರದ ಮೇಲೆ, ವೇದಗಳನ್ನು ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಸೃಷ್ಟಿಸಿರಲು ಸಾಧ್ಯ ಎಂದು ವಾದಿಸುತ್ತಾರೆ. ನಂತರ ಗೀತಾ ರಹಸ್ಯ ಎಂಬ ಪುಸ್ತಕದಲ್ಲಿ ಭಗವದ್ಗೀತೆಯ ಬಗ್ಗೆ ಅತ್ಯಂತ ಸುಂದರವಾಗಿ ಬರೆಯುತ್ತಾ ಭಗವದ್ಗೀತೆಯನ್ನು ಜೀವನದ ಅಂಗವನ್ನಾಗಿಸಿದರು.
ತಿಲಕರು ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಉದಾರೀ-ಸೌಮ್ಯವಾದೀ ಧೋರಣೆಯ ವಿರೋಧಕರಾದರು.
ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತದ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆಯೆ ಅವರಿಗೆ ಒಲವಿತ್ತು. ಅಷ್ಟೇ ಅಲ್ಲ ಬ್ರಿಟಿಷ್ ಸಾಮ್ರಾಜ್ಯದಿಂದ ಹೊರಬರುವುದಕ್ಕೆ ಅವರ ಬೆಂಬಲವಿರಲಿಲ್ಲ. ಆದರೂ, ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ.
ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಞೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು.
ತಿಲಕರು ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ “ಜ್ಙಾನವೊಂದರಿಂದಲೇ ಮುಕ್ತಿ” ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು. ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು. ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ಟ್ರಭಾಷೆಯಾಗಬೇಕು ಎಂದು ಮೊದಲು ಸೂಚಿಸಿದವರು ತಿಲಕರು. ಗಾಂಧೀಜಿ ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ ಇಂಗ್ಲೀಷ್ ಭಾಷೆ ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ. ಆದರೂ ಹಿಂದಿ (ಮತ್ತು ಇತರ ಭಾರತೀಯ ಭಾಷೆಗಳ) ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ.
ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ 11 ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ, ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ.
ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.
ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಞೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು. ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ.
1920 ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 2,00,000 ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು “ಆಧುನಿಕ ಭಾರತದ ಜನಕ” ಎಂದು ಬಣ್ಣಿಸಿದರು. ಇಂದು ತಿಲಕರನ್ನು ಹಿಂದೂ ರಾಷ್ಟ್ರೀಯವಾದವನ್ನು ಹುಟ್ಟುಹಾಕಿದವರೆಂದು ನಂಬಲಾಗುತ್ತದೆ. ಹಿಂದುತ್ವದ ರಾಜಕೀಯ ಪ್ರಣಾಲಿಯನ್ನು ರಚಿಸಿದ ವಿನಾಯಕ ಧಾಮೋದರ ಸಾವರ್ಕರ್ ಅವರಿಗೆ ತಿಲಕರು ಆರಾಧ್ಯ ದೈವವಾಗಿದ್ದರು.
ಹೀಗೆ ಶ್ರೇಷ್ಠ ಚಿಂತಕರಾಗಿ ಅಪ್ರತಿಮ ಸ್ವಾತಂತ್ರ್ಯವೀರರಾಗಿ ಪ್ರತೀ ಭಾರತೀಯನ ಹೃದಯದಲ್ಲಿ ‘ಲೋಕಮಾನ್ಯ’ರಾಗಿ ಬದುಕಿದ ಮಹಾಪುರುಷ ಬಾಲ ಗಂಗಾಧರ ತಿಲಕರ ಸ್ಮೃತಿ ದಿವಸವಿಂದು. ಬನ್ನಿ ಅವರ ತ್ಯಾಗ ಬಲಿದಾನವ ಸ್ಮರಿಸುತ್ತಾ ಅವರು ತೋರಿಸಿಕೊಟ್ಟ ಹಾದಿಯಲ್ಲಿ ಸಾಗೋಣ. ಸ್ವದೇಶಿ ವಸ್ತುಗಳನ್ನೇ ಉಪಯೋಗಿಸೋಣ, ಭಾರತವನ್ನು ಮತ್ತೆ ವಿಶ್ವಮಾತೆ ಜಗದ್ಗುರುವನ್ನಾಗಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.