ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಮಹಾ ಮೇಧಾವಿ. ಅವರು ಈ ದೇಶ ಕಂಡ ಅತ್ಯುತ್ತಮ ವಿಜ್ಞಾನಿಗಳಲ್ಲೊಬ್ಬರು. ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ, ಸರಳತೆ, ಸಜ್ಜನಿಕೆಗೆ ಅತ್ಯುತ್ತಮ ಉದಾಹರಣೆ. ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಕೋಟ್ಯಾಂತರ ಯುವಕರಿಗೆ ಕನಸುಗಳನ್ನು ಕಟ್ಟಿಕೊಟ್ಟ, ದೇಶಕ್ಕಾಗಿ ದುಡಿಯಲು ಅವರಿಗೆ ಸದಾ ಪ್ರೇರಣೆ ನೀಡುತ್ತಿದ್ದ ಒಬ್ಬ ಮಹಾನ್ ನಾಯಕ. ಅವರೇ ಭಾರತದ ಮಿಸ್ಸೈಲ್ ಮ್ಯಾನ್, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ.
ಅವರ ಜೀವನ ಅವರ ಸಾಧನೆ ಇಂದಿಗೂ ಎಲ್ಲರಿಗೂ ಆದರ್ಶ ಹಾಗು ಸ್ಪೂರ್ತಿದಾಯಕ. 83 ವರ್ಷ ತಮ್ಮ ಜೀವನವನ್ನು ಅತ್ಯಂತ ಸರಳವಾಗಿ ನಡೆಸಿ ಎಂದೂ ಮರೆಯದ ಮಾಸ್ಟರ್ ಆಗಿ ನಮ್ಮನೆಲ್ಲ ಬಿಟ್ಟು ಹೋದರು. ಇಂದಿಗೆ ಅವರು ನಮನ್ನು ಅಗಲಿ 2 ವರ್ಷಗಳಾಯಿತು ಬನ್ನಿ ಒಮ್ಮೆ ಅವರ ಜೀವನ ಮತ್ತು ಸಾಧನೆಯ ಮೆಲಕು ಹಾಕೋಣ ತನ್ಮೂಲಕ ಈ ಮಹಾ ಚೇತನವ ಸ್ಮರಿಸೋಣ.
ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ, 15 ಅಕ್ಟೋಬರ್ 1931 ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಜೈನುಲಬ್ದೀನ್, ತಾಯಿ ಅಶಿಮಾ. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಟಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಕಲಾಂ ಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯರಾಗಿದ್ದರು. ಅವರು ಬಡ ಹಿನ್ನೆಲೆಯಿಂದ ಬಂದವರು ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ತಮ್ಮ ತಂದೆಗೆ ಸಹಾಯ ಮಾಡಲು, ಅವರು ಶಾಲೆಯ ನಂತರ ತಮ್ಮನ ಜೊತೆಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು. ಚುರುಕಾದ ಮತ್ತು ಕಠಿಣ ಪರಿಶ್ರಮ ಪಡುವ ವಿದ್ಯಾರ್ಥಿಯಾಗಿದ್ದ ಇವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ರಾಮನಾಥಪುರಂ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. 1954 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನಂತರ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ಗೆ ತೆರಳಿದರು.
ಇವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಅಧ್ಯಯನದ ನಂತರ ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ದಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು. ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕ್ಷಿಪಣಿ ಮತ್ತು ಉಡಾವಣಾ ತಂತ್ರಜ್ಞಾನದ ಅಭಿವೃದ್ಧಿಯ ಅಧ್ಯಯನದಿಂದ, ಇವರು ಭಾರತದ ಕ್ಷಿಪಣಿ ಮಾನವ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು.
1998 ರಲ್ಲಿ ನೆಡೆದ ಭಾರತದ ಪೋಖ್ರಾನ್-2 ಪರಮಾಣು ಪರೀಕ್ಷೆಯಲ್ಲಿ ಸಾಂಸ್ಥಿಕವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಒಂದು ಪ್ರಮುಖ ಪಾತ್ರ ವಹಿಸಿದರು. ಇದು 1974 ರಲ್ಲಿ ನಡೆದ ಮೂಲ ಪರಮಾಣು ಪರೀಕ್ಷೆಯ ನಂತರ ನೆಡೆದ ಮೊದಲ ಪರಮಾಣು ಪರೀಕ್ಷೆಯಾಗಿದೆ.
ಕಲಾಂ ಅವರು 2002 ರಲ್ಲಿ, ಆಡಳಿತ ಪಕ್ಷ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎರಡು ಪಕ್ಷಗಳ ಬೆಂಬಲದೊಂದಿಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. 25 ಜುಲೈ 2002 ರಿಂದ 25 ಜುಲೈ 2007 ರ ವರೆಗೆ ರಾಷ್ಟಪತಿಯಾಗಿ ಸೇವೆ ಸಲ್ಲಿಸಿದರು. ಐದು ವರುಷಗಳ ಅವಧಿ ಪೂರೈಸಿದ ನಂತರ, ಅವರು ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ಜೀವನಕ್ಕೆ ಮರಳಿದರು.
ಅವರು ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅ ಸರಳತೆ, ಪ್ರಾಮಾಣಿಕತೆ, ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ಪ್ರಿಯ ಹವ್ಯಾಸ.
ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿದ ಅನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸುತ್ತಿದ್ದ ಅವರು ಅನೇಕ ಪ್ರೇರಣಾದಾಯಿ ಕೃತಿಗಳನ್ನು ಬರೆಯುವ ಮೂಲಕ ಯುವಕರಿಗೆ ಪ್ರೇರಣೆ ನೀಡುತ್ತಿದ್ದರು. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ದೇಶ ವಿದೇಶಗಳಲ್ಲಿ ಸಂಚರಿಸಿ ಜ್ಞಾನ-ವಿಜ್ಞಾನ ಪ್ರಸಾರದಲ್ಲಿ ತಮ್ಮ ಸಹಾಯಹಸ್ತ ನೀಡುತ್ತಿದ್ದರು.
ಡಾ.ಅಬ್ದುಲ್ ಕಲಾಂರವರು, ಜುಲೈ 27, 2015 ರಂದು ಶಿಲ್ಲಾಂಗ್ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯ ವ್ಯಕ್ತಿತ್ವ.
ಬನ್ನಿ ಈ ಮಹಾನ್ ಚೇತನ ಭಾರತ ರತ್ನ ಅಬ್ದುಲ್ ಕಲಾಂರನ್ನು ಸ್ಮರಿಸುತ್ತಾ ಅವರು ಕಂಡ ಸದೃಢ ಸಶಕ್ತ ಭಾರತದ ಕನಸನ್ನು ನನಸಾಗಿಸೋಣ. ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗೋಣ. ಭಾರತವನ್ನು ವಿಶ್ವಮಾತೆ ಜಗದ್ಗುರುವನ್ನಾಗಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.