ವ್ಹೀಲ್ ಚೇರ್ ಮೂಲಕ ಆಗಮಿಸಿ ಈ ಬಾರಿ ಪದ್ಮಶ್ರೀ ಪುರಸ್ಕಾರ ಪಡೆದ ಜೆನಾಭಾಯ್ ದರ್ಗಾಭಾಯ್ ಪಟೇಲ್ ಬಗ್ಗೆ ತಿಳಿದಿರುವವರು ಅತೀ ವಿರಳ. ಗುಜರಾತಿನ ಬನಸ್ಕಾಂತ ಜಿಲ್ಲೆಯ ಗೊಲಿಯ ಗ್ರಾಮದ ರೈತನಾದ ಇವರ ಕಥೆ ಎಲ್ಲರಿಗೂ ಸ್ಫೂರ್ತಿದಾಯಕ.
‘ಸವಾಲುಗಳಿಲ್ಲದೆ ಬದುಕಿಲ್ಲ ಮತ್ತು ಸವಾಲುಗಳಿಲ್ಲದೆ ಮೋಜು ಕೂಡ ಇಲ್ಲ. ಎಲ್ಲಿ ಜನ ಅಂತ್ಯಗೊಳಿಸುತ್ತಾರೋ ಅಲ್ಲಿಂದ ನಾನು ಆರಂಭಿಸಿದೆ. ನನ್ನಿಂದ ಏನೂ ಮಾಡಲಾಗದು ಎಂದು ನನಗೆ ಅನಿಸಿಯೇ ಇಲ್ಲ. ಅಸಾಧ್ಯ ಎಂಬ ಪದ ನನ್ನ ಡಿಕ್ಷನರಿಯಲ್ಲಿಯೇ ಇಲ್ಲ’ ಎನ್ನುತ್ತಾ ನಗುತ್ತಾರೆ ಜೆನಾಭಾಯ್.
12ನೇ ತರಗತಿಯವರೆಗೆ ತಮ್ಮ ತ್ರಿಚಕ್ರ ವಾಹನದ ಮೂಲಕ ಶಾಲೆಗೆ ಹೋದ ಇವರು ಬಳಿಕ ತಂದೆಯಂತೆ ಕೃಷಿಯಲ್ಲಿಯೇ ತೊಡಗಿಕೊಂಡರು. ಅಂಗವೈಕಲ್ಯವನ್ನು ಮೀರಿ ನಿಂತು ತಮ್ಮ ಗ್ರಾಮದ ಅತ್ಯುತ್ತಮ ಟ್ರ್ಯಾಕ್ಟರ್ ಡ್ರೈವರ್ ಎಂದೆನಿಸಿಕೊಂಡರು. ಆದರೆ ತಂದೆಯಂತೆ ಸಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳದೆ ತಂತ್ರಜ್ಞಾನವನ್ನು ಅಳವಡಿಸಿಕೊಂಡರು.
ಅಂಗವೈಕಲ್ಯತೆಯ ಹೊರತಾಗಿಯೂ ತಾನು ದುಡಿದು ಬೆಳೆಸಬಹುದಾದ ಬೆಳೆ ಯಾವುದು ಎಂಬ ಬಗ್ಗೆ ಸಂಶೋಧನೆ ಆರಂಭಿಸಿದರು. ಇದಕ್ಕಾಗಿ ಕೃಷಿ ವಿಶ್ವವಿದ್ಯಾಲಯ, ವಿವಿಧ ರಾಜ್ಯಗಳನ್ನು, ಕೃಷಿ ಮೇಳಗಳನ್ನು ಸುತ್ತಿದರು. ಬಳಿಕ ಉತ್ತರ ಕಂಡುಕೊಂಡ ಇವರ ಮಹಾರಾಷ್ಟ್ರದ ರೈತರಂತೆ ದಾಳಿಂಬೆ ಬೆಳೆಯನ್ನು ಆರಂಭಿಸಿದರು.
೨೦೦೪ರಲ್ಲಿ ಮಹಾರಾಷ್ಟ್ರದಿಂದ 18 ಸಾವಿರ ದಾಳಿಂಬೆ ಗಿಡಗಳನ್ನು ತರಿಸಿಕೊಂಡು ಇವರು ತಮ್ಮ ಗದ್ದೆಯಲ್ಲಿ ಸಹೋದರರ ಸಹಾಯದಿಂದ ನೆಟ್ಟರು. 2 ವರ್ಷದಲ್ಲೇ ಅದು ಫಲ ನೀಡಿ ಆದಾಯ ಕೈ ಸೇರಿತು. ಮತ್ತೆ ೫ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾರಂಭಿಸಿದರು. ೫೬ ಸಾವಿರ ಕೆಜಿ ದಾಳಿಂಬೆಯನ್ನು ಮಾರಾಟ ಮಾಡಲಾರಂಭಿಸಿದರು. 10 ಲಕ್ಷ ಆದಾಯಗಳು ಕೈಸೇರುತ್ತಿದ್ದವು.
ಇವರನ್ನು ನೋಡಿ ಇತರ ರೈತರೂ ದಾಳಿಂಬೆ ಬೆಳೆ ಆರಂಭಿಸಿದ್ದಾರೆ. ಗ್ರಾಮದಲ್ಲಿ ನೀರಿನ ಮಟ್ಟ ಕುಸಿತವಾದ ಹಿನ್ನಲೆಯಲ್ಲಿ ಸರ್ಕಾರದ ಸಬ್ಸಿಡಿಯೊಂದಿಗೆ ಎಲ್ಲಾ ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವಂತೆ ಮಾಡಿದ್ದಾರೆ.
ಇದು ಜೆನಾಭಾಯ್ ಅವರ ದಾಳಿಂಬೆ ದುಬೈ, ಶ್ರೀಲಂಕಾ, ಬಾಂಗ್ಲಾದೇಶಗಳಿಗೆ ರಫ್ತಾಗುತ್ತಿದೆ. ಕೈ ತುಂಬಾ ಆದಾಯ ಸಿಗುತ್ತಿದೆ. ಇವರ ಸಾಧನೆಯನ್ನು ಗಮನಿಸಿ 18 ರಾಜ್ಯಗಳು ಇವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿವೆ.
ಎಲ್ಲಕ್ಕಿಂತಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಇವರನ್ನು ಉಲ್ಲೇಖಿಸಿ ಇವರ ಸಾಧನೆಯನ್ನು ಕೊಂಡಾಡಿದ್ದಾರೆ. ರೈತರಿಗೆ ಮಾದರಿ ಎಂದಿದ್ದಾರೆ. ಒರ್ವ ಅಂಗವಿಕಲನಾದರೂ ಅತ್ಯುತ್ತಮ ಕೃಷಿಕ ಎನಿಸಿಕೊಂಡಿರುವ ಇವರಿಂದ ರೈತಾಪಿ ವರ್ಗ ಕಲಿಯಬೇಕಾದುದು ಬಹಳಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.