ಶ್ರೀ ಸೀತಾರಾಮ ಕೆದಿಲಾಯ ಅವರಿಂದ ಗ್ರಾಮ ವಿಕಾಸಕ್ಕಾಗಿ ಧ್ಯೇಯ ನಡಿಗೆ
ಯಾರೂ ಮಾಡದ, ಯಾರಿಂದಲೂ ಮಾಡಲಾಗದ ಸಾಧನೆ ಆಗಿರಬೇಕೆಂದೋ, ಪ್ರಚಾರ ಗಿಟ್ಟಿಸಬೇಕೆಂದೋ, ಗಿನ್ನೆಸ್ ದಾಖಲೆಯಾಗಬೇಕೆಂದೋ ಸಾಧನೆ ಮಾಡುವವರಿದ್ದಾರೆ. ಆದರೆ ಇವರು ಸಾಧನೆಗಾಗಿಯೋ, ಶ್ಲಾಘನೆಗಾಗಿಯೋ ಮಾಡಿದ್ದಲ್ಲ. ಆದರೆ ಈ ಒಂದು ಸಾಧನೆ ಬಹುದೊಡ್ಡ ಸಾಹಸ ಎಂಬುದರಲ್ಲಿ ಸಂಶಯವಿಲ್ಲ. ಪ್ರಚಾರವಿಲ್ಲ, ಅದರ ಅಪೇಕ್ಷೆಯೂ ಇಲ್ಲ.
ಪ್ರತಿದಿನ ಹತ್ತರಿಂದ ಇಪ್ಪತ್ತು ಕಿಲೋಮೀಟರ್ ನಡಿಗೆ. ಭಾರತೀಯರಲ್ಲಿ ಜೀವನ ಮೌಲ್ಯಗಳನ್ನು ತುಂಬುವ ಹಂಬಲ. ಮನಸ್ಸಿನಲ್ಲಿ ಸ್ಪಷ್ಟ ಉದ್ದೇಶ. ಆದರೆ ಆಯ್ಕೆ ಮಾಡಿದ ದಾರಿ ಅತ್ಯಂತ ಕಠಿಣ. ನಿವಾಸ ಮಾಡಿದ ಮನೆಯಲ್ಲಿ ನಿತ್ಯ ಬೆಳಿಗ್ಗೆ ಗೋಪೂಜೆ ಮುಗಿಸಿ ಆ ಗ್ರಾಮದವರನ್ನೆಲ್ಲಾ ಕರೆದುಕೊಂಡು ಮುಂದಿನ ಗ್ರಾಮಕ್ಕೆ ಕಾಲ್ನಡಿಗೆ. ಸಾಗುವ ದಾರಿಯಲ್ಲಿ ದೇಶಭಕ್ತಿ, ದೈವಭಕ್ತಿಯನ್ನು ಜಾಗೃತಗೊಳಿಸುವ ಉದ್ಘೋಷಗಳು. ಯಾತ್ರೆ ಬಂದು ಸೇರಿದ ತಕ್ಷಣ ಸಸಿ ನೆಡುವ ಕಾರ್ಯಕ್ರಮ. ಮನೆಯಲ್ಲಿ ಗ್ರಾಮದ ಜನರನ್ನೆಲ್ಲಾ ಸೇರಿಸಿ ಯಾತ್ರೆಯ ಉದ್ದೇಶವನ್ನು ಆ ಊರಿನ ಜನರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ವಿವರಣೆ. ಇದು ಮಾನ್ಯ ಶ್ರೀ ಸೀತಾರಾಮ ಕೆದಿಲಾಯರು ಈ ಐದು ವರ್ಷಗಳ ಕಾಲ ದಿನಚರಿಯನ್ನು ಆರಂಭಿಸುತ್ತಿದ್ದ ಪರಿ.
ಗ್ರಾಮೀಣ ಪ್ರದೇಶದಲ್ಲಿ ನಡೆದ ಈ ಯಾತ್ರೆ ಜನರಿಗೆ ಹಾಗೂ ಸರಕಾರಕ್ಕೆ ಉತ್ತಮ ಸಂದೇಶ ನೀಡಿದೆ. ಆಯಾಯ ಪ್ರದೇಶದ ಜನರ ಹಾಗೂ ಪರಿಸರದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಸೂಚಿಸುವಲ್ಲಿ ಯಶಸ್ವಿಯಾಗಿದೆ. ಗೋ ಆಧಾರಿತ ಹಾಗೂ ಸಾವಯವ ಕೃಷಿಯಿಂದ ಈ ದೇಶದ ಮಣ್ಣಿನ ಗುಣಮಟ್ಟ ಹೆಚ್ಚಿ ಕೃಷಿಕರು ಸ್ವಾವಲಂಬಿಗಳಾಗುವರು. ಈ ದೇಶದ ಜನರಿಗೆ ಉತ್ತಮ ಪೌಷ್ಟಿಕ ಆಹಾರ ದೊರೆತ ಪರಿಣಾಮವಾಗಿ ಅವರೆಲ್ಲ ಈ ದೇಶದ ಮಾನವ ಸಂಪನ್ಮೂಲ ಆಗುವರು. ಇದನ್ನು ಜನತೆಗೆ ಅರ್ಥೈಸಿ ದನದ ಬಗ್ಗೆ ಶ್ರದ್ಧೆ ಮೂಡಿಸಲು ಗೋಪೂಜೆ.
ಗ್ರಾಮೀಣ ಕಲೆಗಳನ್ನು ಪೋಷಿಸಿದವರು, ಮನೆಮದ್ದು ಚಿಕಿತ್ಸೆ ಮಾಡುವವರು, ಗುಡಿಕೈಗಾರಿಕೆಗಳನ್ನು ನಡೆಸುತ್ತಾ ಸ್ವಾವಲಂಬಿ ಜೀವನವನ್ನು ನಡೆಸುವವರು ಹಾಗೂ ಇನ್ನಿತರ ಊರಿನ ಪ್ರತಿಭೆಗಳನ್ನು ಗುರುತಿಸಿ ಸಭೆಯಲ್ಲಿ ಗೌರವಿಸಿ ಸನ್ಮಾನಿಸಿರುವುದು ಇವರ ಯತ್ರೆಯ ಇನ್ನೊಂದು ವಿಶೇಷತೆ.
ಸಭೆಯ ಕೊನೆಯಲ್ಲಿ ಈ ದೇಶವು ಸಮೃದ್ಧವೂ ಅಖಂಡವೂ ಆಗಬೇಕು ಎಂಬ ದೃಷ್ಟಿಯಿಂದ ಎಲ್ಲರಲ್ಲಿ ಸಂಕಲ್ಪ ಮಾಡಿಸಿ ಸಮಾಜದ ಕೆಲಸಕ್ಕೆ ಸಮಯ ಕೊಡಬೇಕೆಂಬ ಪ್ರೇರಣೆ ನೀಡಿ ಲಕ್ಷಾಂತರ ಜನರು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.
ಜನ, ಜಲ, ವಾಯು, ಅರಣ್ಯ, ಪ್ರಾಣಿಗಳು, ಮಣ್ಣು, ಸಂಸ್ಕೃತಿ, ಕಲೆ, ಪರಂಪರೆ, ಗೋವು , ಕ್ರಿಮಿಕೀಟ ಮೊದಲಾದ ಎಲ್ಲವೂ ಉಳಿಯಬೇಕು, ಎಲ್ಲರೂ ಸೇರಿ ಉಳಿಸಿ ಬೆಳೆಸಬೇಕೆಂಬ ಶ್ರೇಷ್ಠ ವಿಚಾರವನ್ನು ದೇಶದ ಜನರ ಮುಂದಿಡಲು ಐದು ವರ್ಷಗಳ ಕಾಲ ನಡೆದ ಭಾರತ ಪರಿಕ್ರಮ ಯಾತ್ರೆ ಗುರುಪೂಜೆಯ ದಿವಸ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತಿದೆ. ಈ ಯಾತ್ರೆ ಹಾದುಹೋದ ಗ್ರಾಮಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡು ಅವರ ಮಾರ್ಗದರ್ಶನವನ್ನು ಪಡೆದ ನಾವೆಲ್ಲರೂ ಧನ್ಯರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.