ತಲಸ್ಸೇಮಿಯಾ ಮೇಜರ್ ಪೀಡಿತ ವ್ಯಕ್ತಿ 270ಕ್ಕಿಂತಲೂ ಅಧಿಕ ದಿನಗಳ ಕಾಲ ರಕ್ತ ಪೂರಣವಿಲ್ಲದೆ ಇರುವುದನ್ನು ಊಹಿಸಲು ಸಾಧ್ಯವೇ? ಆದರೆ ಈ ಹುಡುಗಿ ಮತ್ತು ಇವಳಂತ ಹಲವು ಮಕ್ಕಳು ಇದೀಗ ಅದು ಸಾಧ್ಯವಾಗಿದೆ.
ಪುಟ್ಟ ಹುಡುಗಿ ಶರಣ್ಯ ಹಾಗೂ ದೇಶದ ಉದ್ದಗಲಗಳ ಹಲವಾರು ಮಕ್ಕಳು ಪ್ರತಿ ತಿಂಗಳು ಅಥವಾ ತಿಂಗಳಿಗೆ ಎರಡು ಬಾರಿ ಸೂಜಿ ಚುಚ್ಚಿಸಿಕೊಂಡು ರಕ್ತಪಡೆಯುವ ಬಾಧೆಯಿಂದ ಮುಕ್ತಿ ಹೊಂದಿದ್ದಾರೆ. ಕೆಲವು ಗೊತ್ತಿರುವ ಔಷಧಗಳ ಹೊಸ ಪ್ರಯೋಗವು ಇವರನ್ನು ನರಕ ಯಾತನೆಯಿಂದ ಮುಕ್ತಿಗೊಳಿಸಿದೆ.
ಆನುವಂಶಿಕ ನ್ಯೂನತೆಯ ಪರಿಣಾಮವಾಗಿ ಕೆಲವು ಮಕ್ಕಳಲ್ಲಿ ತಲಸ್ಸೇಮಿಯಾ ಖಾಯಿಲೆ ಕಂಡುಬರುತ್ತದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದಿಸುವ ಗ್ಲೋಬಿನ್ ಸರಪಳಿಗಳ ಬೆರೆಯುವಿಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತವೆ.ಇದರಿಂದಾಗಿ ಅಸಹಜ ಹಿಮೋಗ್ಲೋಬಿನ್ ಕಣಗಳು ಉತ್ಪತ್ತಿಯಾಗುತ್ತದೆ.
ಹಿಮೋಗ್ಲೋಬಿನ್ ಕೆಂಪು ರಕ್ತಕಣಗಳು ಆಕ್ಸಿಜನ್ ಅನ್ನು ದೇಹಾದ್ಯಂತ ಪಸರಿಸಲು ಸಹಾಯ ಮಾಡುತ್ತವೆ. ಕಡಿಮೆ ಹಿಮೋಗ್ಲೋಬಿನ್ ಮಟ್ಟವು ರಕ್ತಹೀನತೆಗೆ (ಅನಿಮೀಯಾ) ಕಾರಣವಾಗುತ್ತದೆ. ತೀವ್ರವಾದ ರಕ್ತಹೀನತೆಯು ಮಾರಣಾಂತಿಕ. ಇದು ಅಂಗಾಂಗಳ ಹಾನಿ ಅಥವಾ ಸಾವಿನಲ್ಲಿ ಕೊನೆಗೊಳ್ಳುತ್ತದೆ.
ಅತಿಹೆಚ್ಚಿನ ಗ್ಲೋಬಿನ್ ಸಂಯೋಜನೆಯಿಂದಾಗುವ ಸಮಸ್ಯೆ ತಲಸ್ಸೇಮಿಯಾ ರೋಗಕ್ಕೆ ಕಾರಣವಾಗುತ್ತದೆ. ಹಿಮೊಗ್ಲೋಬಿನ್ ಶರೀರದ ಕೆಂಪು ರಕ್ತಕಣಗಳಲ್ಲಿ ಇರುವ ಒಂದು ಅಂಶ. ಇದು ಶರೀರಕ್ಕೆ ಆಮ್ಲಜನಕವನ್ನು ಸರಬರಾಜು ಮಾಡಿ, ಇಂಗಾಲದ ಡೈ ಆಕ್ಸೆ„ಡ್ಅನ್ನು (ತ್ಯಾಜ್ಯ ಉತ್ಪನ್ನ) ದೇಹದಿಂದ ಹೊರಗೆ ತೆಗೆದು ಹಾಕುತ್ತದೆ.
ಪ್ರಮುಖವಾಗಿ ಎರಡು ರೀತಿಯ ತಲಸ್ಸೇಮಿಯಾ ಇರುತ್ತದೆ. ಆಲ್ಫಾ ಮತ್ತು ಬೀಟಾ. ಬೀಟಾ ತಲಸ್ಸೇಮಿಯಾ ಸಾಮಾನ್ಯ.
ಹಿಮೋಗ್ಲೋಬಿನ್ ಉತ್ಪಾದನೆಗೆ ಆಲ್ಫಾ ಮತ್ತು ಬೀಟಾ ಗ್ಲೋಬಿನ್ಗಳ ಅಗತ್ಯವಿರುತ್ತದೆ. ಬೀಟಾ ಗ್ಲೋಬಿನ್ ಉತ್ಪತ್ತಿಯಾಗುವ ಒಂದು ಅಥವಾ ಎರಡು ವಂಶವಾಹಿಗಳು ಕಾರ್ಯ ನಿರ್ವಹಿಸದಿದ್ದಲ್ಲಿ ಅಥವಾ ಆಂಶಿಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಬೀಟಾ ಪ್ರಕರಣಗಳು ಕಂಡು ಬರುತ್ತವೆ.
ಹಾನಿಗೊಂಡಿರುವ ಒಂದು ವಂಶವಾಹಿ (ಜೀನ್) ಇದ್ದಲ್ಲಿ ಅಷ್ಟೇನು ಗಂಭೀರವಲ್ಲದ ಮೈಲ್ಡ್ ಅನಿಮಿಯಾ ಇರಬಹುದು. ಇದು ಮೈನರ್ ತಲಸ್ಸೇಮಿಯಾ. ಹೆತ್ತವರಲ್ಲಿ ಒಬ್ಬರಿಂದ ಸಹಜ ವಂಶವಾಹಿ ಹಾಗೂ ಇನ್ನೊಬ್ಬರಿಂದ ಥಲಸೆಮ್ಯಾ ಜೀನ್ ಪಡೆದಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಆದರೆ ಅಪ್ಪ ಅಮ್ಮ ಇಬ್ಬರಿಂದರೂ ಹಾನಿಗೊಂಡ, ಅಂದರೆ, ತಲಸ್ಸೇಮಿಯಾ ಇರುವ ವಂಶವಾಹಿಗಳನ್ನು ಪಡೆದಾಗ ಮಧ್ಯಮಗತಿಯ ಅಥವಾ ತೀವ್ರವಾದ ರಕ್ತಹೀನತೆಯ ಸಮಸ್ಯೆ ಉದ್ಭವಿಸುತ್ತದೆ. ಮಧ್ಯಮಗತಿಯ ಅನಿಮಿಯಾ (ಬೀಟಾ ಥಲಸೆಮ್ಯಾ ಇಂಟರ್ಮೀಡಿಯಾ) ಇದ್ದಾಗ ನಿಮಗೆ ರಕ್ತ ನೀಡಬೇಕಾಗಬಹುದು. ಆದರೆ ತೀವ್ರ ಅನಿಮಿಯಾ ಇರುವ ರೋಗಿಗಳಿಗೆ ಜೀವನಪರ್ಯಂತ ರಕ್ತ ನೀಡುತ್ತಲೇ ಇರಬೇಕಾಗುತ್ತಿದ್ದು, ಇದನ್ನು ಬೀಟಾ ತಲಸ್ಸೇಮಿಯಾ ಮೇಜರ್ ಅಥವಾ ಕೂಲೀಸ್ ಅನಿಮಿಯಾ ಎನ್ನಲಾಗುತ್ತಿದೆ.
ದೇಹವು ಬೀಟಾ ಅಥವಾ ಅಲ್ಫಾ ಪ್ರೋಟೀನುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿ ಮಾಡದಿದ್ದರೆ, ಕೆಂಪು ರಕ್ತಕಣಗಳು ಸರಿಯಾಗಿ ರೂಪುಗೊಳ್ಳುವುದಿಲ್ಲ ಮತ್ತು ಅವುಗಳು ಸಾಕಷ್ಟು ಆಕ್ಸಿಜನ್ ಸರಬರಾಜು ಮಾಡುವುದಿಲ್ಲ. ಇದು ಶೈಶಾವಸ್ಥೆಯಲ್ಲೇ ಕಂಡು ಬರುತ್ತದೆ ಮತ್ತು ಜೀವನ ಪರ್ಯಂತ ಇರುತ್ತದೆ.
ಇಂತಹ ಮೇಜರ್ ತಲಸ್ಸೇಮಿಯಾ ಇರುವ ಮಕ್ಕಳಲ್ಲಿ ತೀವ್ರತಮನಾದ ಹಿಮೋಗ್ಲೋಬಿನ್ ಕೊರತೆಯುಂಟಾಗುತ್ತಿದ್ದು ಅವರು ಅನಿವಾರ್ಯವಾಗಿ 15 ಅಥವಾ 21 ದಿವಸಕ್ಕೊಮ್ಮೆ ಬಾಹ್ಯವಾಗಿ ರಕ್ತಪಡೆಯಲೇ ಬೇಕಾಗುತ್ತದೆ. ಇದಕ್ಕೆ ಪರ್ಯಾಯವೆಂದರೆ ಅಸ್ಥಿಮಜ್ಜೆ ಕಸಿ. ಆದರೆ ಇದು ದುಬಾರಿ ಪ್ರಕ್ರಿಯೆಯಾಗಿದೆ. ಅಸ್ಥಿಮಜ್ಜೆ ಕಸಿಯಲ್ಲೂ ಎಲ್ಲಾ ಪ್ರಕರಣಗಳೂ ಸರ್ಜರಿಯೋತ್ತರದಲ್ಲಿ ಸಂಪೂರ್ಣವಾಗಿ ಸಮಸ್ಯೆ ಮುಕ್ತವಲ್ಲ.
ಇಂತಹ ಮಕ್ಕಳಲ್ಲಿ ಹೊಸಬೆಳಕು ಮೂಡಿಸುತ್ತಿರುವವರು ಡಾ. ವಿಜಯರಮಣನ್.
ಹೈಡ್ರಾಕ್ಸೂರಿಯಾ (HU) ಔಷಧಿಯನ್ನು ತಲಸ್ಸೇಮಿಯಾ ಇಂಟರ್ಮೀಡಿಯಾ ಪ್ರಕರಣಗಳಲ್ಲಿ ಭ್ರೂಣದ ಹಿಮೋಗ್ಲೋಬಿನ್ ಹೆಚ್ಚಿಸಲು ಬಳಸಲಾಗುತ್ತದೆ. ನಾನು ಇದನ್ನು ತಲಸ್ಸೇಮಿಯಾ ಮೇಜರ್ ಪ್ರಕರಣಗಳಿಗೂ ಬಳಸಲು ನಿರ್ಧರಿಸಿದೆ. ಈ ಔಷಧವನ್ನು ಗೋಧಿಸಸಿಯ ಪುಡಿ ಮತ್ತು ಫೋಲಿಕ್ ಆಸಿಡ್ ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ರೋಗಿಗೆ ಅಗತ್ಯವಿರುವ ಇತರ ಸಪ್ಲಿಮೆಂಟ್ಗಳ ಸಂಯೋಜನೆಯಲ್ಲಿ ಪ್ರಯೋಗಿಸಲಾರಂಭಿಸಿದ್ದು ಇದು ಫಲ ನೀಡುತ್ತಿದೆ” ಎನ್ನುತ್ತಾರೆ ಡಾ. ವಿಜಯರಮಣನ್.
“ನನ್ನ ಪತ್ನಿ ಹೇಳಿದಳು ನಿನಗೆ ಹುಚ್ಚು. ಇದು ಸಾಧ್ಯವೇ ಎಂಬುದು ಅವಳ ಪ್ರಶ್ನೆಯಾಗಿತ್ತು” ಎನ್ನುತ್ತಾ ಮಾತಿಗೆ ಅಡಿ ಇಟ್ಟರು ಡಾ| ವಿಜಯ ರಮಣನ್!”
ದೇಶದ ಅದೆಷ್ಟೋ ತಲಸ್ಸೇಮಿಯಾ ಕಾಯಿಲೆ ಮಕ್ಕಳ ಪಾಲಿನ ದೇವರಾಗಿ ಬಿಟ್ಟಿದ್ದಾರೆ ಇವರೀಗ. ತಲಸ್ಸೇಮಿಯಾ ಮೇಜರ್ ರೋಗಕ್ಕೆ ಮದ್ದಿಲ್ಲ, ನಿಯಮಿತ ಕಾಲಕ್ಕೆ ರಕ್ತ ನಿಡೋದೊಂದೇ ದಾರಿ ಎಂಬಂತಿದ್ದಾಗ ಪರ್ಯಾಯ ದಾರಿ ಹುಡುಕಿ ಕೊಟ್ಟವರು ಇವರು. “ವೈದ್ಯೋ ನಾರಾಯಣೋ ಹರಿ” ಎಂದು ಹೇಳುತ್ತಿರುತ್ತಾರೆ ಅಂದರೆ, ವೈದ್ಯನು ಸಾಕ್ಷಾತ್ ನಾರಾಯಣವೆಂದೂ, ರಕ್ಷಕನೆಂದೂ, ದೇವರ ಸಮಾನನೆಂದೂ ಅರ್ಥ. ತಲಸ್ಸೇಮಿಯಾ ಪೀಡಿತರ ಪಾಲಿಗೆ ಈ ವೈದ್ಯರು ನಿಜವಾಗಿಯೂ ನಾರಾಯಣನೂ ಹರಿಯೂ ಎಲ್ಲವೂ…..
ಕೇರಳದ ಮಲಪ್ಪುರಂನ ಎಂಟರ ಹರೆಯದ ಎಳೆವಯಸ್ಸಿನ ಅವರ ಸೋದರ ಸಂಬಂಧಿ ಮಗು ಒಂದು ಈ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಪೋಷಕರು ನಿಯಮಿತವಾಗಿ ಆ ಮಗುವಿಕೆ ರಕ್ತ ನೀಡುತ್ತಿದ್ದರು. ಪ್ರತೀ ತಿಂಗಳು ರಕ್ತಕೊಡಿಸುವುದು ಸುಲಭದ ವಿಚಾರವಲ್ಲ. ನಿಯಮಿತ ದಿನಗಳಿಗೊಮ್ಮೆ ಅದೆಷ್ಟೋ ದೂರ ಮೈಲಿಗಟ್ಟಲೆ ಪ್ರಯಾಣಿಸಿ, ಆಸ್ಪತ್ರೆಯಲ್ಲಿ ಇದ್ದು ರಕ್ತ ಕೊಡಿಸಿ ಕಂಗಾಲಾದ ಪೋಷಕರು ಕೊನೆಗೆ ಕೈ ಚೆಲ್ಲಿದರು. ಎಷ್ಟೇ ಪ್ರಯತ್ನ ಪಟ್ಟರು ಆ ಮಗುವನ್ನು ಉಳಿಸಲಾಗಿಲ್ಲ. ಇದನ್ನು ಹತ್ತಿರದಿಂದ ಕಂಡ ಮನಕಲಕಿದ ಡಾ| ವಿಜಯ ರಮಣನ್ ಅವರಿಗೆ ಈ ರೋಗಕ್ಕೆ ಏನಾದರೂ ಉತ್ತರ ಕಂಡುಕೊಳ್ಳಬೇಕೆಂಬ ತುಡಿತ ಉಂಟಾಗಿತ್ತು.
ತಲಸ್ಸೇಮಿಯಾ ರೋಗಕ್ಕೆ ಏನಾದರೂ ಮಾಡಲೇಬೇಕೆಂಬ ಇವರ ಮನೋಭಿಲಾಷೆಗೆ ಇನ್ನೋರ್ವ ತಲಸ್ಸೇಮಿಯಾ ಪೀಡಿತವ್ಯಕ್ತಿಯೂ ಕಾರಣ. ಇವರು ವೆಲ್ಲೂರು ವೈದ್ಯಕೀಯ ಕಾಲೆಜಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ಅಲ್ಲಿನ ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ನರಳುವಿಕೆಯನ್ನು ಹತ್ತಿರದಿಂದ ಕಂಡಿದ್ದರು. “ಈತನ ಆಯುಷ್ಯವೀಗ ನಾಲ್ಕು ದಶಕಗಳನ್ನು ದಾಟಿದ್ದು, ಯಶಸ್ವಿಯಾಗಿ ವೈವಾಹಿಕ ಜೀವನವನ್ನು ನಡೆಸುತ್ತಿದ್ದಾನೆ” ಎಂದು ಸಂತಸದಿಂದ ನುಡಿವ ಡಾಕ್ಟರ್ ಮುಖದಲ್ಲಿ ಈ ವಿಚಾರ ತಿಳಿಸುವಾಗ ಸಂತಸದ ನಗೆ ಚಿಮ್ಮುತ್ತದೆ.
ಇಂದು ದೇಶಾದ್ಯಂತ ಸಾವಿರಗಟ್ಟಲೆ ಮಕ್ಕಳು ಇವರ ಬಳಿ ತಲಸ್ಸೇಮಿಯಾಗೆ ಚಿಕೆತ್ಸೆ ಪಡೆಯುತ್ತಿದ್ದು ಪ್ರತಿ ಹದಿನೈದು ದಿನಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ರಕ್ತಪಡೆಯುವ ಬೇನೆಯಿಂದ ಮುಕ್ತಿ ಹೊಂದಿದ್ದಾರೆ. ಪೂನಾದ ತಿಲಕ್ ರಸ್ತೆಯ, ಹರಿಬಾಗ್ ಚೌಕದ, ಮಂಗಳಮೂರ್ತಿ ಕ್ಲಿನಿಕ್ನಲ್ಲಿ ಇವರು ಲಭ್ಯವಿರುವ ದಿನದಂದು ದೇಶದೆಲ್ಲೆಡೆಯಿಂದ ಚಿಕಿತ್ಸೆಗಾಗಿ ಮಕ್ಕಳು ಬರುತ್ತಿದ್ದಾರೆ. ಇವರನ್ನು ಮಾತನಾಡಿಸಿದಾಗ, ಚಿಕಿತ್ಸೆ ಪಡೆದವರಲ್ಲಿ ಕೆಲವರು ಆರು ತಿಂಗಳಿಂದ, ಇನ್ನೂ ಕೆಲವರು ಒಂದು ವರ್ಷದಿಂದ, ಮತ್ತೂ ಕೆಲವರು ಒಂದೂವರೆ ವರ್ಷದಿಂದ ಹೀಗೆ…. ರಕ್ತಪಡೆದಿಲ್ಲ ಎನ್ನುವ ಖುಷಿ ವ್ಯಕ್ತಪಡಿಸುತ್ತಾರೆ. ಅಲ್ಲದೆ ಈ ಮಕ್ಕಳ ಹಿಮೋಗ್ಲೋಬಿನ್ ಮಟ್ಟವೂ ಏರಿರುವುದಾಗಿಯೂ ಹೇಳುತ್ತಾರೆ.
ಪ್ರಮುಖವಾಗಿ ಗೋಧಿಪೈರಿನ ಪುಡಿಯ ಔಷಧಿ ಮತ್ತು ಇದಕ್ಕೆ ಬೆಂಬಲಿತವಾಗಿ ರೋಗಿಯ ಅವಶ್ಯಕತೆಗೆ ಅನುಸಾರ ಔಷಧಗಳನ್ನು ಪ್ರಯೋಗಿಸಿ ಚಿಕಿತ್ಸೆ ನೀಡುತ್ತಾರಿವರು.
“ನಾನು ಮೂಲತಃ ಅಸ್ಥಿಮಜ್ಜೆ ಕಸಿ ತಜ್ಞ” ಎನ್ನವ ವಿಜಯ ರಮಣನ್ ತಲಸ್ಸೇಮಿಯಾವನ್ನು ಒಂದು ಸವಾಲಾಗಿ ಸ್ವೀಕರಿಸಿದ್ದಾರೆ. ಇವರು ನೂರಾರು ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೋ ಟ್ರಾನ್ಸ್ಫ್ಯೂಶನ್) ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಆರಂಭದಲ್ಲಿ ಪೆಥಾಲಜಿಸ್ಟ್ ಆಗಿರುವ ಅವರ ಪತ್ನಿಯೇ ಅವರನ್ನು ಛೇಡಿಸಿದ್ದರೂ ಈಗ ರೋಗ ಪೀಡಿತ ಮಕ್ಕಳಲ್ಲಿನ ಧನಾತ್ಮಕ ಫಲಿತಾಂಶಗಳು ಅವರಿಗೆ ಎದುರಾಗುವ ಟೀಕೆ-ಟಿಪ್ಪಣಿಗಳಿಗೆಲ್ಲ ಕೆಪ್ಪಾಗುವಂತೆ ಮಾಡಿದೆ.
ಡಾ| ವಿಜಯರಮಣನ್ ಅವರು 2012ರಲ್ಲಿ ಐದು ವರ್ಷದ ಗಂಡು ಮಗು ಒಂದಕ್ಕೆ ಅಸ್ಥಿಮಜ್ಜೆ ಕಸಿಯ ಚಿಕಿತ್ಸೆ ನಡೆಸಿದ್ದರು. ಈ ಚಿಕಿತ್ಸೆಯ ವಿಶೇಷತೆ ಏನೆಂದರೆ ಇದರಲ್ಲಿ ಅಸ್ಥಿಮಜ್ಜೆ ಕಸಿಮಾಡಿರುವುದು ಒಡಹುಟ್ಟು ಅಥವಾ ರಕ್ತಸಂಬಂಧಿಯದ್ದು ಅಲ್ಲ. ಸಂಬಂಧಿಯಲ್ಲದ ಡೋನರ್ನೊಂದಿಗೆ ಮಗುವಿನ ಹ್ಯೂಮನ್ ಲ್ಯೂಕೋಸೈಟ್ ಆಂಟಿಜೆನ್ (ಎಚ್ಎಲ್ಎ) ಸರಿಹೊಂದಿಸಿ ಈ ಚಿಕಿತ್ಸೆ ಮಾಡಿರುವುದು ಅತಿದೊಡ್ಡ ಯಶಸ್ಸು.
ದೇಶದಲ್ಲಿ ಸಾವಿರಾರು ಮಕ್ಕಳು ಈ ರೋಗದಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ಸುಮಾರು ಹತ್ತು ಸಾವಿರ ತಲಸ್ಸೇಮಿಯಾ ಮೇಜರ್ (ಗಂಭೀರ) ಮಕ್ಕಳು ಜನಿಸುತ್ತಿದ್ದು ಇವರಿಗೆ ಪ್ರತಿ ತಿಂಗಳು ಅಥವಾ ಪ್ರತಿ 15 ದಿಗಳಿಗೊಮ್ಮೆ ರಕ್ತ ನೀಡುವ ಅವಶ್ಯಕತೆ ಇರುತ್ತದೆ. ಪದೇಪದೇ ರಕ್ತಪಡೆಯುವ ಕಾರಣ ಇಂಥವರಲ್ಲಿ ಕಬ್ಬಿಣಾಂಶ ಹೆಚ್ಚಿ ಅದು ಕ್ರಮೇಣ ದೇಹದ ಅಂಗಾಂಗಗಳ ಕ್ಷಮತೆಯನ್ನು ಕುಗ್ಗಿಸಿ ಇಂಥಹ ಮಕ್ಕಳ ಆಯಸ್ಸು ಕ್ಷೀಣಿಸುತ್ತದೆ.
ನಾವೆಲ್ ಥೆರಪಿ ಮೂಲಕ ಇಂತಹ ಮಕ್ಕಳಿಗೆ ಚಿಕಿತ್ಸೆ ಆರಂಭಿಸಿರುವ ವಿಜಯರಮಣನ್ ಇಂಥಹ ಮಕ್ಕಳಲ್ಲಿ ಆಶಾಭಾವನೆ ಮೂಡಿಸಿದ್ದಾರೆ. ಇದರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಟಿವಿ ಚಾನೆಲ್ಗಳ ಕಾರ್ಯಕ್ರಮದಲ್ಲಿಯೂ ಭಾಗವಹಿಸಿ, ರೋಗಿಗಳ ಹೆತ್ತವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಮಕ್ಕಳನ್ನು ಅತ್ಯಂತ ಆಪ್ತತೆಯಿಂದ ನಡೆಸಿಕೊಳ್ಳುತ್ತಾ ಅವರ ಮಟ್ಟಕ್ಕೆ ಅರಿವಾಗುವಂತೆ ರಾಮಾಯಣ ಮಹಾಭಾರತ ಸನ್ನಿವೇಶಗಳ ಕಥೆ ಹೇಳುತ್ತಾ ಮಕ್ಕಳಿಗೆ ಸರಳವಾಗಿ, ಆಪ್ತವಾಗಿ, ಪ್ರೀತಿಯಿಂದ ಮನವರಿಕೆ ಮಾಡುತ್ತಾರೆ. ‘ಶೂಟ್ ಮೀ ಕ್ವೆಶ್ಚನ್ಸ್’ (ಪ್ರಶ್ನೆ ಕೇಳಿ) ಅನ್ನುತ್ತಾ ಯಾವುದೇ ಪ್ರಶ್ನೆ ಕೇಳಿದರೆ, ಸಂದೇಹ ವ್ಯಕ್ತಪಡಿಸಿದರೂ ತಾಳ್ಮೆಯಿಂದ, ಸಮಾಧಾನದಿಂದ ಉತ್ತರಿಸುತ್ತಾರೆ.
“ದೇಶಾದ್ಯಂತ ಎಲ್ಲರಿಗೂ ಚಿಕಿತ್ಸೆ ನೀಡುವುದು ನನಗೆ ಕಷ್ಟಸಾಧ್ಯ. ಹಾಗಾಗಿ ಅಲ್ಲಲ್ಲಿ ಇಂತಹ ಚಿಕಿತ್ಸೆ ನೀಡುಗರನ್ನು ತಯ್ಯಾರಿ ಮಾಡಬೇಕು” ಎಂಬ ಹಂಬಲ ಇವರದ್ದು. ಹಾಗಾಗಿ ಮಕ್ಕಳಿಗೆ ಅವರಿರುವ ಕಡೆಯಲ್ಲಿ ಅಥವಾ ಸಮೀಪದಲ್ಲಿ ಚಿಕಿತ್ಸೆ ಲಭಿಸಿದರೆ ಹೆಚ್ಚು ಅನುಕೂಲಕರವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ ಅವರು. ಅವರ ಈ ಕೈಂಕರ್ಯಕ್ಕೆ ಶುಭವಾಗಲಿ.
ಹಾಗಂತ ವಿಜಯರಮಣನ್ ಟೀಕಾ ಮುಕ್ತರೇನಲ್ಲ. ಇನ್ಯಾವುದೋ ಕಾರಣದಿಂದ ಅಥವಾ ತಮ್ಮ ಅಸಡ್ಡೆಯಿಂದಾಗಿರುವ ಅಚಾತುರ್ಯಕ್ಕೆ ತಮ್ಮ ಮೇಲೆ ಗೂಬೆ ಕೂರಿಸಿದವರು ಇದ್ದಾರೆಂದೂ ಹೇಳಿಕೊಳ್ಳುವ ಅವರು 99.99% ಉತ್ತಮ ಫಲಿತಾಂಶವಿರುವಾಗ, ಹಲವಾರು ಜನರು ಪ್ರಯೋಜನ ಪಡೆದಿರುವಾಗ ಇಂತಹ ಟೀಕೆಗಳಿಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂಬ ಪ್ರಶ್ನೆ ಎಸೆದು ಸುಮ್ಮನಾಗುತ್ತಾರೆ.
ಹೆಚ್ಚಿನ ಮಾಹಿತಿ ಬೇಕಿರುವವರು +91 9555585203 ಅಥವಾ info@hematologyclinic.com ಮೂಲಕ ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.