ಯಹೂದಿಗಳು ಕ್ರಿ.ಶ. 70 ನೇ ಇಸವಿಯಲ್ಲಿ ರೋಮನ್ ಆಕ್ರಮಣದಿಂದ ತತ್ತರಿಸಿ ದೇಶ ಭ್ರಷ್ಟರಾಗಿ ಭೂಪಟದೆಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಚದುರಿ ಹೋದರು. ಆದರೆ ತಮ್ಮ ಭೂಮಿಗೆ ಮರಳುವ ಇಚ್ಚೆಯನ್ನು ಮಣ್ಣಾಗ ಬಿಡಲಿಲ್ಲ. ಯಹೂದಿಗಳ ಸಾಂಪ್ರದಾಯಿಕ ಸಾಪ್ತಾಹಿಕ ಹಬ್ಬ “ಸಬ್ಬತ್” ನ ದಿನ ಅವರೊಂದು ವಾಕ್ಯವನ್ನು ಉಚ್ಚರಿಸುತ್ತಿದ್ದರು. “ಮುಂದಿನ ಬಾರಿ ಜೆರುಸಲೇಮ್ ನಲ್ಲಿ”(Next time in Jerusalem) ಆ ವಾಕ್ಯವು ಜ್ಯೂಗಳ ಜೀವನ ಮಂತ್ರವಾಯಿತು. 19 ಶತಮಾನಗಳ ನಂತರ ಅವರು ತಮ್ಮ ಮೊದಲ ” ಸಬ್ಬತ್ “ನ್ನು ಜೆರುಸಲೇಮ್ ನಲ್ಲಿ ಆಚರಿಸಿದರು. 1948, ಮೇ 15 ರಂದು. ಅವರು ಆ ಮಂತ್ರವನ್ನು ವ್ಯರ್ಥವಾಗ ಬಿಡಲಿಲ್ಲ. ಅದಾದ ನಂತರ ಯಹೂದಿಗಳು ತಮ್ಮ ದೇಶವನ್ನು ಕಟ್ಟಿದ ಪರಿ ಅನುಪಮವಾದದ್ದು. ಅನುಕರಣೀಯವಾದದ್ದು. ವಿಸ್ಥಾಪಿತ ಯಹೂದಿ ಜನಾಂಗವು ಆಶ್ರಯಕ್ಕಾಗಿ ನೂರಾರು ದೇಶಗಳ ಕದ ಬಡಿಯಿತು. ಅಮೆರಿಕ, ಯೂರೋಪ್, ಆಫ್ರಿಕಾ ಖಂಡಗಳಲ್ಲಿ, ಹಾಗೆಯೇ ಇನ್ನಿತರ ದೇಶಗಳಲ್ಲಿ ಯಹೂದಿಗಳು ನೆಲೆ ಕಂಡುಕೊಂಡರು. ಅಂತೆಯೇ ಭಾರತಕ್ಕೂ ಬಂದರು. ಕೊಚ್ಚಿ, ಮುಂಬೈ, ಕೊಲ್ಕತ್ತಾ ಮೊದಲಾದ ಸ್ಥಳಗಳಲ್ಲಿ ವಾಸಿಸಿದರು. 1948 ರಲ್ಲಿ ತಮ್ಮ ದೇಶ ಇಸ್ರೇಲ್ ಸ್ವತಂತ್ರಗೊಂಡಾಗ ಅಲ್ಲಿಗೆ ಮರಳಿ ಹೋದರು. ಇಸ್ರೇಲ್ ನಲ್ಲಿ ಇಂದು ಅವರನ್ನು ಭಾರತೀಯ ಜ್ಯೂಗಳು (Indian Jews) ಎಂದು ಕರೆಯುತ್ತಾರೆ.
ಇಷ್ಟೆಲ್ಲಾ ಆಲಾಪನೆ ಏಕೆಂದರೆ ಬರುವ ಜುಲೈ 5 ರಂದು ಭಾರತದ ಪ್ರಧಾನಿ ಇಸ್ರೇಲ್ ಗೆ ಪ್ರವಾಸ ಮಾಡಲಿದ್ದಾರೆ. ಎರಡೂ ದೇಶಗಳ ಸಂಬಂಧಗಳ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯು ಮಹತ್ವದ ವಿದ್ಯಮಾನವಾಗಲಿದೆ. ದ್ವಿಪಕ್ಷೀಯ, ಬಹುಪಕ್ಷೀಯ, ಭೂ ರಾಜಕಾರಣ, ಅರಬ್ ರಾಷ್ಟ್ರಗಳ ಜೊತೆಗಿನ ಸಂಬಂಧಗಳ ಸಮೀಕರಣದ ಸೂಕ್ಷ್ಮಗಳನ್ನು ಗಮನಿಸಲಾಗುವುದು.
ಸಂಬಂಧಗಳು ಇಂದು ನಿನ್ನೆಯದ್ದಲ್ಲ
ಭಾರತಕ್ಕೆ ಆಗಮಿಸಿದ ಮೊದಲ ವಿದೇಶಿ ಮತವೇ – ಯಹೂದಿ ಮತ. Indian Jews in Israel ಎಂಬ ಗ್ರಂಥದ ಸಂಕಲನಕಾರ Reuven Dafai ಭಾರತದಲ್ಲಿ ಯಹೂದಿಗಳ ಅನುಭವವನ್ನು ಹೀಗೆ ಚಿತ್ರಿಸಿದ್ದಾರೆ “…. ಇನ್ನಿತರ ಯಹೂದಿಗಳು ವಿವಿಧೆಡೆಗಳಿಂದ ಉತ್ಪೀಡಿತರಾಗಿ, ಅಪಮಾನಿತರಾಗಿ, ಜನಾಂಗೀಯ ದ್ವೇಷದ ಕಾರಣದಿಂದ ನಡೆದ ನರಮೇಧದಿಂದ ಬದುಕುಳಿದು ಬಂದವರಾದರೆ, ಭಾರತದಿಂದ ಬಂದ ಯಹೂದಿಗಳು ತೃತೀಯ ಯಹೂದಿ ರಾಷ್ಟ್ರ ಮಂಡಲವನ್ನು ಕಟ್ಟುವ ಇಚ್ಛೆಯಿಂದ ಬಂದವರಾಗಿದ್ದರು. ನಮ್ಮ ಜನಾಂಗವು ಭಾರತದಲ್ಲಿ ಸೆಮಿಟಿಕ್ ವಿರೋಧಿ ವಾತಾವರಣದಲ್ಲಿ ಬದುಕಬೇಕಾಗಿರಲಿಲ್ಲ.
ಕೇವಲ ಪಡೆಯಲಿಲ್ಲ, ಕೊಟ್ಟಿದ್ದೂ ಇದೆ
ಯಹೂದಿ ಸಮುದಾಯವು ಭಾರತದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ. ಬ್ಯಾಂಕ್ ಆಫ್ ಇಂಡಿಯಾ, ಮುಂಬೈ ವಿಶ್ವವಿದ್ಯಾಲಯದ ಗ್ರಂಥಾಲಯ, ಮುಂಬೈ ಸಸ್ಸೂನ್ ಡಾಕ್, ಗೇಟ್ ವೇ ಆಫ್ ಇಂಡಿಯಾ, ಮುಂಬೈ ಆಲ್ಬರ್ಟ್ ಸಂಗ್ರಹಾಲಯ, ಶ್ರವಣ ಹೀನರ ಶಾಲೆ ಇವು ಕೆಲವು ಉದಾಹರಣೆಗಳು.
ಯಹೂದಿಗಳು ಭಾರತದಲ್ಲಿ ನಿರ್ಮಿಸಿರುವ ನೂರಾರು ಸಿನಗಾಗ್ (ಯಹೂದಿ ಪ್ರಾರ್ಥನಾ ಮಂದಿರ) ಗಳು ಅವರ ಕಲಾತ್ಮಕ ಶ್ರೇಷ್ಠತೆಯ ಸಾಕ್ಷಿಗಳಾಗಿವೆ.
ಲೆ.ಜ. JFR ಜೇಕಬ್, ವೈಸ್ ಅಡ್ಮಿರಲ್ ಬೆಂಜಮಿನ್ ಸ್ಯಾಮ್ಸನ್ ಕಿಲ್ಲೇಕರ್, ಸಮಾಜ ಸೇವಕರಾದ ಡೇವಿಡ್ ಸಸ್ಸೂನ್, ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪಿ ಪದ್ಮಭೂಷಣ ಶ್ರೀ ಅನೀಷ್ ಕಪೂರ್, ಕವಿ ಮತ್ತು ಲೇಖಕ ಪದ್ಮಶ್ರೀ ನಿಸ್ಸಿಮ್ ಎಜೆಕಿಯಲ್, ಸಂಸ್ಕೃತ ವಿದುಷಿ ಪದ್ಮಶ್ರೀ ಲೀಲಾ ಸ್ಯಾಮ್ಸನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎಸ್ತರ್ ಡೇವಿಡ್ ಮತ್ತು ಸಿನಿಮಾ ಕಲಾವಿದರಾದ ಸುಲೋಚನ, ನಾದಿರಾ ಮತ್ತು ಡೇವಿಡ್ ಅವರುಗಳು ತಮ್ಮ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ.
ದಿಮೋನಾ – ಮಿನಿ ಇಂಡಿಯಾ
ಇಸ್ರೇಲ್ ನಲ್ಲಿ ಸುಮಾರು 80 ಸಾವಿರ ಭಾರತೀಯ ಯಹೂದ್ಯರಿದ್ದಾರೆ. ಇಸ್ರೇಲ್ ಸ್ವತಂತ್ರಗೊಂಡ ತರುವಾಯ ಭಾರತದಿಂದ ವಲಸೆಹೋದ ಯಹೂದಿಗಳು ಮಹಾರಾಷ್ಟ್ರ, ಕೊಚ್ಚಿ, ಬಗ್ದಾದಿ ಮತ್ತು ಮಿಜೋರಾಮ್ ಈ ನಾಲ್ಕು ಪಂಗಡಕ್ಕೆ ಸೇರಿದವರು. ಇಸ್ರೇಲ್ ದೇಶದ ಪುಟ್ಟ ನಗರ ದಿಮೋನಾ. ಈ ನಗರವು ನೆಗೇವ್ ಮರುಭೂಮಿಯಲ್ಲಿ ಮೃತಸಾಗರ (Dead Sea) ದಿಂದ 35 ಕಿ.ಮೀ. ದೂರಕ್ಕೆ ಇಸ್ರೇಲ್ ದೇಶದ ದಕ್ಷಿಣ ಭಾಗದಲ್ಲಿದೆ. ದಿಮೋನಾವು 7500 ಸಾವಿರ ಭಾರತೀಯ ಯಹೂದಿಗಳ ಮನೆಯಾಗಿದೆ.
ದಿಮೋನಾದ ಭಾರತೀಯ ಯಹೂದಿಗಳು ರಾಸಾಯನಿಕ ಕಾರ್ಖಾನೆಗಳಲ್ಲಿ, ಉನ್ನತ ತಂತ್ರಜ್ಞಾನದ ಕಂಪನಿಗಳಲ್ಲಿ ಮತ್ತು ವಸ್ತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಮಹಾರಾಷ್ಟ್ರ ಮಾದರಿಯ ಉಡುಪು ಧರಿಸಿ ಮಹಿಳೆಯರು ಭಾರತದ ಸಾಂಭಾರ ಪದಾರ್ಥಗಳು, ತರಕಾರಿ, ವಿಡಿಯೋ ಕ್ಯಾಸೆಟ್, ಹಿಂದಿ ಚಲನಚಿತ್ರ ಪತ್ರಿಕೆಗಳನ್ನು ಮಾರಾಟ ಮಾಡುತ್ತಾ ಕಂಡುಬಂದರೆ, ಬಟ್ಟೆ ಅಂಗಡಿಯ ಗೊಂಬೆಗಳು ಸಲ್ವಾರ್ ಕಮೀಜ್ ತೊಟ್ಟು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣುತ್ತವೆ. ಮರಾಠಿ ಭಾಷೆಯನ್ನು ನಗರದ ಎಲ್ಲೆಡೆ ಕೇಳಬಹುದಾದರೆ, ಯುವ ಜನಾಂಗದಲ್ಲಿ “ಸೊನ್ ಪಾಪಡಿ”, ” ಗುಲಾಬ್ ಜಾಮೂನು”, “ಪಾಪಡಿ ಚಾಟ್” ಮತ್ತು “ಬೇಲ್ ಪುರಿ” ಪದಗಳು ಸರ್ವೇಸಾಮಾನ್ಯವಾಗಿ ಕೇಳಸಿಗುತ್ತವೆ. ಈ ಎಲ್ಲ ತಿನಿಸುಗಳನ್ನು ಮಾರಾಟ ಮಾಡುವ ಅನೇಕ ಅಂಗಡಿಗಳೂ ಇವೆ. ಯುವಕರನ್ನು ಭಾರತೀಯ ಪರಂಪರೆಯೊಂದಿಗೆ ಜೋಡಿಸಲು ಯಹೂದಿ ಸಮುದಾಯದ ಪ್ರಮುಖರು ಅಲ್ಲಿನ ಕೇಂದ್ರೀಯ ಮುನಿಸಿಪಲ್ ಗ್ರಂಥಾಲಯದಲ್ಲಿ ಒಂದು ವಿಶೇಷ ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದಾರೆ. ಭಾರತದ ಪ್ರವಾಸದಿಂದ ಬಂದ ಯಹೂದಿ ಯುವಕರು ಪುಸ್ತಕಗಳನ್ನು ಇಲ್ಲಿ ಜೋಡಿಸಿಡುತ್ತಾರೆ. ದಿಮೋನಾ ನಗರದ ಸಾಂಸ್ಕೃತಿಕ ಕೇಂದ್ರವು ಹಿಂದಿ ಸಿನಿಮಾ ಆಧಾರಿತ ನಾಟಕ ಪ್ರದರ್ಶನವನ್ನು ಆಯೋಜಿಸುತ್ತದೆ.
ಇಸ್ರೇಲ್ ಗೆ ಭಾರತ ಎರಡನೆಯ ತವರು
ಪ್ರತಿ ವರ್ಷ 40 ಸಾವಿರಕ್ಕೂ ಅಧಿಕ ಇಸ್ರೇಲ್ ಯುವಕ ಯುವತಿಯರು ತಮ್ಮ ಮಿಲಿಟರಿ ಸೇವೆಯನ್ನು ಪೂರೈಸಿದ ನಂತರ ಭಾರತದ ಪ್ರವಾಸ ಕೈಗೊಳ್ಳುತ್ತಾರೆ. ಅನೇಕರು ಹಿಮಾಲಯ, ಪ್ರಾಚೀನ ಮನಾಲಿ ಮತ್ತು ಧರ್ಮಶಾಲಾದ ಆಸುಪಾಸಿನ ಹಳ್ಳಿಗಳಿಗೆ ಭೇಟಿ ನೀಡುತ್ತಾರೆ. ಕುಲು ಕಣಿವೆಯ ಅನೇಕ ಅಂಗಡಿ ಮುಂಗಟ್ಟುಗಳ ಮೇಲೆ, ಸಾರ್ವಜನಿಕ ಸಂಚಾರಿ ವಾಹನಗಳ ಮೇಲಿನ ಫಲಕಗಳು ಹೀಬ್ರೂ ಭಾಷೆಯದ್ದಾಗಿದೆ. ಭಾರತದಿಂದ ಇಸ್ರೇಲ್ ಪ್ರವಾಸ ಮಾಡುವವರ ಸಂಖ್ಯೆಯಲ್ಲಿ ವೃದ್ಧಿ ಕಂಡಿದ್ದು ಈಗ 20 ಸಾವಿರ ದಾಟಿದೆ.
ಇತಿಹಾಸದ ತಪ್ಪುಗಳು ಸರಿಯಾಗಬೇಕು
ವಿದೇಶಾಂಗ ನೀತಿಯ ಮುಖ್ಯ ಲಕ್ಷಣವೇ ಸಾತತ್ಯ ಮತ್ತು ಸಮತೋಲನ. 1949 ರಿಂದ 2016ರವರೆಗೆ ವಿಶ್ವ ಸಂಸ್ಥೆಯಲ್ಲಿ ಇಸ್ರೇಲ್ ಕುರಿತಾದ ಚರ್ಚೆ ನಡೆದು ಮತ ಚಲಾಯಿಸುವ ಸಂದರ್ಭದಲ್ಲಿ ಭಾರತ ಎಡವಿದೆ. ಮುಗ್ಗರಿಸುವುದಕ್ಕೆ ಕಾರಣ ಅಸ್ಪಷ್ಟ ದೃಷ್ಟಿ ಮತ್ತು ಅಸಮಂಜಸ ಮನಸ್ಸು. ಇಸ್ರೇಲ್ ಕುರಿತಾದ ನಿರ್ಣಯ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಅಡ್ಡ ಬರುವುದು ಪ್ಯಾಲೆಸ್ಟೈನ್ ಜೊತೆಗಿನ ನಮ್ಮ ಸಂಬಂಧ ಹಾಗೂ ಅದರಿಂದುಟಾಗಬಹುದಾದ ಭಾರತೀಯ ಮುಸ್ಲಿಮರ ವೋಟ್ ಬ್ಯಾಂಕ್ ನ ಮೇಲಿನ ಅಡ್ಡ ಪರಿಣಾಮಗಳು. 1919ರ ಖಿಲಾಫತ್ ಆಂದೋಲನದಿಂದ ಈ ಗೊಂದಲ ಆರಂಭವಾಗಿದೆ. ಅತ್ತ ಯಹೂದಿಗಳು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ ಇಲ್ಲಿ ಗಾಂಧೀಜಿಯವರು ತಮ್ಮ ಸಾಪ್ತಾಹಿಕ ಪತ್ರಿಕೆ “ಹರಿಜನ್” ನಲ್ಲಿ 1939, ನವೆಂಬರ್ ನ ಸಂಚಿಕೆಯಲ್ಲಿ ಹೀಗೆ ಬರೆದರು
“My sympathies are with the Jews… but my sympathy does not blind me to the requirements of justice. The cry for the national home for the Jews does not make much appeal to me… Why should they not, like other peoples of the earth, make that country their home where they are born and where they earn their livelihood? Surely it would be a crime against humanity to reduce the proud Arabs so that Palestine can be restored to the Jews partly or wholly as their national home”.
ಸುಖಾಸುಮ್ಮನೆ ನನ್ನದೂ ಒಂದು ಅಭಿಪ್ರಾಯ ಇರಲಿ ಎಂಬ ಮಾನಸಿಕತೆ ತಂದಿಟ್ಟ ಗೊಂದಲವಿದು.
ಭಾರತವು 1950 ರವರೆಗೆ ಇಸ್ರೇಲ್ ನ್ನು ಒಂದು ದೇಶ ಎಂದು ಪರಿಗಣಿಸಿರಲಿಲ್ಲ. ದೂರದೃಷ್ಟಿಯ ಕೊರತೆ ಮತ್ತು ಅಪಕ್ವ ರಾಜಕಾರಣಕ್ಕೆ ಇದಕ್ಕಿಂತ ಮಿಗಿಲಾದ ಉದಾಹರಣೆ ಬೇರೊಂದಿಲ್ಲ. ಮತ್ತೊಮ್ಮೆ 2016 ರಲ್ಲಿ ವಿಶ್ವ ಸಂಸ್ಥೆಯಲ್ಲಿ ಇಸ್ರೇಲ್, ಪ್ಯಾಲೆಸ್ಟೈನ್, ಗಾಜಾ ಪಟ್ಟಿ ಮತ್ತು ಮಾನವ ಹಕ್ಕುಗಳ ಕುರಿತಾಗಿ ಮತ ಚಲಾಯಿಸುವ ಸಂದರ್ಭದಲ್ಲಿ ಭಾರತವು ಇಸ್ರೇಲ್ ನ ವಿರುದ್ಧ ಕೆಲವು ಠರಾವುಗಳಿಗೆ ಮತ ಚಲಾಯಿಸಿ, ಇನ್ನಿತರ ಠರಾವುಗಳಿಗೆ ಮತ ಚಲಾಯಿಸದೆ ತಟಸ್ಥ ನೀತಿಯನ್ನು ಅನುಸರಿಸಿ ತನ್ನ ರಾಜತಾಂತ್ರಿಕ ಅಸ್ಪಷ್ಟತೆಯನ್ನು ಜಗಜ್ಜಾಹೀರು ಗೊಳಿಸಿತು.
ಇಸ್ರೇಲ್ ಭಾರತದ ನಂಬಿಕಸ್ಥ ಗೆಳೆಯ
ಭಾರತದ ಬಹುತೇಕ ಜನ ಇಸ್ರೇಲ್ ದೇಶದ ಸಮರ್ಥಕರೇ ಆಗಿದ್ದಾರೆ ಎಂಬುದು ಅಚ್ಚರಿಯ ಸಂಗತಿಯೇನಲ್ಲ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಮೆರಿಕ ಮತ್ತು ಅಂತಾರಾಷ್ಟ್ರೀಯ ಸಮುದಾಯವು ಭಾರತಕ್ಕೆ ಸಹಾಯ ಮಾಡಬಾರದೆಂದು ಇಸ್ರೇಲ್ ಮೇಲೆ ಒತ್ತಡ ಹೇರಿತು. ಆದರೂ ಇಸ್ರೇಲ್ ಈ ಎಲ್ಲಾ ಒತ್ತಡಗಳನ್ನು ಬದಿಗೆ ಸರಿಸಿ ಭಾರತದ ಯುದ್ಧ ವಿಮಾನಗಳಿಗೆ ಲೇಸರ್ ನಿರ್ದೇಶಿತ ಕ್ಷಿಪಣಿಗಳನ್ನು ಹಾಗೂ ಮೋರ್ಟರ್ ಗಳನ್ನು ನೀಡಿ ತಾನೊಬ್ಬ ಮಹತ್ವಪೂರ್ಣ ಮತ್ತು ವಿಶ್ವಾಸಾರ್ಹ ಸ್ನೇಹಿತ ಎಂಬುದನ್ನು ಸಾಬೀತು ಪಡಿಸಿತು.
ವರ್ತಮಾನದ ಅಗತ್ಯ
ಇಂದು ಭಾರತ ಏಷ್ಯಾದಲ್ಲೇ ಇಸ್ರೇಲ್ ನ ಎರಡನೇ ಅತಿದೊಡ್ಡ ಆರ್ಥಿಕ ಸಹಕಾರಿ. ಕೃಷಿ, ವ್ಯಾಪಾರ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಬಂಧಗಳ ಮುಂದಿನ ಮಜಲನ್ನು ಒಟ್ಟಾಗಿ ಕ್ರಮಿಸಬೇಕಾಗಿದೆ. ರಷ್ಯಾ ಮೊದಲ ಸ್ಥಾನದಲ್ಲಿದ್ದು, ಭಾರತವು ಸಾಮರಿಕ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ದೇಶದಿಂದ ಖರೀದಿಸುವ ಎರಡನೇ ಅತಿದೊಡ್ಡ ದೇಶವಾಗಿದೆ.
ಇಷ್ಟೆಲ್ಲಾ ಇದ್ದಾಗಲೂ ಇಸ್ರೇಲ್ ಭೇಟಿಗೆ ಅದೇನೋ ಬಿಂಕ ಬಿಗುಮಾನ ಅಡ್ಡ ಬರುತ್ತಿತ್ತು. ಅತ್ತಣಿಂದ 1997 ರಲ್ಲಿ ಇಸ್ರೇಲ್ ಅಧ್ಯಕ್ಷ ಇಸ್ಸರ್ ವೇಯಿಜ್ಮನ್ , 2003 ರಲ್ಲಿ ಅಲ್ಲಿನ ಪ್ರಧಾನಿ ಏರಿಯಲ್ ಶರೋನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಈಗ ಲೆಕ್ಕಾಚಾರ ಸಮಗೊಳಿಸಬೇಕಾದ ಹೊಣೆಗಾರಿಕೆ ಭಾರತದ ಮೇಲಿದೆ. ಮುಹೂರ್ತ ಕೂಡಿಬಂದಿದೆ.
ನಿಮ್ಮ ವಿದೇಶಾಂಗ ನೀತಿಯ ಸೂತ್ರವೇನು ಎಂದು ಮೋದಿಯವರನ್ನು ಕೇಳಿದಾಗ 2016 ರ ನವೆಂಬರ್ ನ ಸಿಂಗಾಪುರ್ ಪ್ರವಾಸದಲ್ಲಿ ಅವರು ಹೇಳಿದ್ದು “We will not lower our eyes, neither we will show eyes to anyone. We will meet everybody eye to eye”
ದುರುಗುಟ್ಟಿ ನೋಡದೆ, ಕಣ್ಣು ಕದಿಯದೆ, ಕಣ್ಣು ತಗ್ಗಿಸದೆ, ಕಣ್ಣಿಗೆ ಕಣ್ಣು ಸೇರಿಸಿ ಮಾತನಾಡುವ ಸಂದರ್ಭ ಬಂದಿದೆ.
ಏಕೆಂದರೆ ಅವರು ಎಲ್ಲರಂತಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.