ಹೆಚ್ಚಿನವರು ಅತ್ಯಂತ ಕಳಪೆ ಮಟ್ಟದಲ್ಲಿರುವ ತಮ್ಮ ಹಳೆ ಬಟ್ಟೆಗಳನ್ನು ಹಿಂದು ಮುಂದು ನೋಡದೆ ಬಡಬಗ್ಗರಿಗೆ ಕೊಟ್ಟು ಬಿಡುತ್ತಾರೆ. ಅವುಗಳು ಹರಿದಿದ್ದರೂ, ಉಡಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ ದಾನ ಎಂದು ಅದನ್ನು ಕೊಟ್ಟುಬಿಡುತ್ತಾರೆ.
ಜನರ ಈ ವರ್ತನೆಯಿಂದ ಬೇಸರಗೊಂಡಿದ್ದ ಆಂಚಲ್ ಸೆವಾನಿ ಎಂಬ 19 ವರ್ಷದ ದೆಹಲಿಯ ಯುವತಿ ಹಳೆ ಬಟ್ಟೆಗಳಿಗೆ ಹೊಸ ರೂಪವನ್ನು ನೀಡಿ ಅವುಗಳನ್ನು ಸುಂದರವಾಗಿಸಿ ಅಗತ್ಯವಿರುವ ಜನರಿಗೆ ನೀಡುತ್ತಾಳೆ.
ತನ್ನ ಬಾಲ್ಯದಲ್ಲಿ ಬಡವರ ಮಕ್ಕಳು ಅತ್ಯಂತ ಕಳಾಹೀನ ಬಟ್ಟೆಗಳನ್ನು ತೊಡುವುದನ್ನು ಕಂಡು ಮರುಕಪಟ್ಟಿದ್ದ ಈಕೆ ಯಾಕೆ ಇಂತಹ ಬಟ್ಟೆಗಳನ್ನು ಶ್ರೀಮಂತರು ಬಡವರಿಗೆ ದಾನ ಮಾಡುತ್ತಿದ್ದಾರೆ ಎಂದು ಕೋಪಗೊಳ್ಳುತ್ತಿದ್ದಳು. ಅವರಿಗೂ ನಮ್ಮಂತೆ ಸುಂದರ ಬಟ್ಟೆಗಳನ್ನು ತೊಡುವ ಎಲ್ಲಾ ಹಕ್ಕುಗಳಿವೆ ಎಂದು ಆಕೆ ಪ್ರತಿಪಾದಿಸುತ್ತಿದ್ದಳು.
ಇದೀಗ ಆಂಚಲ್ ಸೆವಾನಿ ನೊಯ್ಡಾದ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಅರ್ಥಶಾಸ್ತ್ರ ವಿದ್ಯಾರ್ಥಿನಿಯಾಗಿದ್ದು, ಬಟ್ಟೆಗಳನ್ನು ದಾನ ಮಾಡುವ ಜನರ ಮನಸ್ಥಿತಿ ಬದಲಾಯಿಸುವ ಕಾರ್ಯ ಮಾಡುತ್ತಿದ್ದಾಳೆ.
ಹಳೆ ಬಟ್ಟೆಗಳನ್ನು ಪಡೆಯುವ ಈಕೆ ಅವುಗಳನ್ನು ಸ್ವಚ್ಛ ಮಾಡಿ, ಇಸ್ತ್ರಿ ಹಾಕಿ, ಅವುಗಳ ಮೇಲೆ ಸುಂದರ ಪೇಯಿಂಟ್ ಚಿತ್ರಗಳನ್ನು ಬಿಡಿಸಿ ಬಳಿಕ ಅದನ್ನು ದಾನ ಮಾಡುತ್ತಾಳೆ.
ಪೇಯಿಂಟ್ ಮಾಡುವುದಕ್ಕೂ ಮುನ್ನ ಆಕೆ ಮಕ್ಕಳಲ್ಲಿ ಅವರ ನೆಚ್ಚಿನ ಕಾರ್ಟೂನ್ಗಳ ಬಗ್ಗೆ ಕೇಳುತ್ತಾಳೆ. ಬಳಿಕ ಅವರಿಷ್ಟದಂತೆಯೇ ಮಿಕ್ಕಿ ಮೌಸ್, ಡೊನಾಲ್ಡ್ ಡಕ್ನಂತಹ ಕಾರ್ಟೂನ್ಗಳನ್ನು ಬಟ್ಟೆಗಳ ಮೇಲೆ ಮೂಡಿಸುತ್ತಾಳೆ. ಈ ಬಟ್ಟೆಗಳನ್ನು ಬಡ ಮಕ್ಕಳು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಇದು ಆಂಚಲ್ ಸೆವಾನಿಗೆ ಸಂತೋಷ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.